ಉಡುಪಿ/ಮಂಗಳೂರು:ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಶನಿವಾರ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಉಗ್ರ ಮೊಹಮ್ಮದ್ ಶಾರೀಕ್ ಕೃಷ್ಣ ಮಠ ಹಾಗೂ ರಥಬೀದಿ ಪರಿಸರಕ್ಕೆ ಬಂದಿರುವ ಮಾಹಿತಿ ಲಭಿಸಿದ್ದು, ಕೃಷ್ಣ ಮಠ ಹಿಟ್ ಲಿಸ್ಟ್​ನಲ್ಲಿತ್ತೇ ಎಂಬ ಅನುಮಾನ ತನಿಖಾಧಿಕಾರಿಗಳಲ್ಲಿ ಮೂಡಿದೆ.
ಶಾರೀಕ್ ತಿರುಗಾಡಿದ ಮೊಬೈಲ್ ಲೋಕೇಶನ್ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಅ.11ರಂದು ರಥಬೀದಿಯಿಂದ ಆತ ಕರೆ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಮಂಗಳೂರು ಪೊಲೀಸರು ಶನಿವಾರ ರಥಬೀದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣ ಮಠದೊಳಕ್ಕೂ ಶಾರೀಕ್ ಪ್ರವೇಶಿಸಿರುವ ಅನುಮಾನವಿದೆ. ತಿಂಗಳ ಹಿಂದಿನ ಘಟನೆಯಾದ್ದರಿಂದ, ಪೊಲೀಸರಿಗೆ ಹಳೆಯ ಸಿಸಿ ಕ್ಯಾಮರಾ ಫೂಟೇಜ್ ಸಿಕ್ಕಿಲ್ಲ. ಹೀಗಾಗಿ ರಥಬೀದಿ ಸುತ್ತಮುತ್ತಲಿನ ಹೊಟೇಲ್, ಲಾಡ್ಜ್, ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಫೂಟೇಜ್​ಗಳನ್ನು ಕಲೆ ಹಾಕಿದ್ದಾರೆ.
ಶಾರೀಕ್ ಫೋನ್ ಬಳಿಸಿದ ಮಹಿಳೆ:ರಥಬೀದಿ ಪರಿಸರದಲ್ಲಿ ಪ್ರತಿದಿನ ಚೀಲ ಹಿಡಿದುಕೊಂಡು ತಿರುಗಾಡುವ ಅರೆ ಮಾನಸಿಕ ಅಸ್ವಸ್ಥೆಯೊಬ್ಬಳು ಒತ್ತಾಯಪೂರ್ವಕವಾಗಿ ಶಾರೀಕ್​ನಿಂದ ಮೊಬೈಲ್ ಪಡೆದು ಮೊಮ್ಮಗನಿಗೆ ಕರೆ ಮಾಡಿ ನಂತರ ವಾಪಸ್ ನೀಡಿದ್ದಾಳೆ. ಶಾರೀಕ್ ಮೊಬೈಲ್ ಬಳಕೆ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಈ ಮಾಹಿತಿ ಲಭಿಸಿದೆ. ಹೀಗಾಗಿ ತನಿಖೆಯನ್ನು ಉಡುಪಿಗೂ ವಿಸ್ತರಿಸಿದ್ದಾರೆ.
ದೇಗುಲ ಟಾರ್ಗೆಟ್:ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ದೇಗುಲಗಳೇ ಟಾರ್ಗೆಟ್ ಎಂಬ ಸಂದೇಶ ಹರಿಯಬಿಡಲಾಗಿತ್ತು. ಇದರ ಬೆನ್ನಲ್ಲೇ ಶಾರೀಕ್ ರಥಬೀದಿಯಲ್ಲಿ ಓಡಾಡಿರುವುದು ಆತಂಕಕ್ಕೆ ಕಾರಣವಾಗಿದೆ.
ಫೋನ್ ಜಾಲ ಪರಿಶೀಲನೆ:ಶಾರೀಕ್ ಬಳಿ ಪತ್ತೆಯಾದ ಮೊಬೈಲ್ ಫೋನ್​ನಲ್ಲಿದ್ದ ಸಂಪರ್ಕ ಸಂಖ್ಯೆಗಳು ಬಹುತೇಕ ಸ್ವಿಚ್ಡ್ ಆಫ್ ಆಗಿವೆ. ಇನ್ನೂ ಕೆಲವು ನಂಬರ್​ಗಳು ತಮಿಳುನಾಡು ಮತ್ತು ಕೇರಳದಲ್ಲಿ ಸಕ್ರಿಯವಾಗಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಶಾರೀಕ್ ಬಳಿಯಿದ್ದ ಮೊಬೈಲ್​ನಲ್ಲಿ 189 ಸಂಪರ್ಕ ಸಂಖ್ಯೆಗಳು ಸೇವ್ ಆಗಿದ್ದವು. ಮೊಬೈಲ್ ಕರೆ ಪಟ್ಟಿ ಸಂಗ್ರಹಿಸಿ ತನಿಖೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ. ಇನ್ನು ಕೆಲವರು ಮೊಬೈಲ್​ಗಳನ್ನು ಮನೆಯಲ್ಲೇ ಇಟ್ಟು, ಊರನ್ನೇ ತೊರೆದಿದ್ದಾರೆ. ಪೊಲೀಸರು ಕರೆ ಮಾಡಿ ವಿಚಾರಿಸಿದಾಗ ಪತ್ತೆಯಾದವರು ಆತನ ಮನೆಗೆ ಆಹಾರ ಪೂರೈಸುತ್ತಿದ್ದ ಸ್ವಿಗ್ಗಿ, ಝೋಮ್ಯಾಟೊ ಡೆಲಿವರಿ ಹುಡುಗರು. ಮತ್ತೊಂದಷ್ಟು ಸ್ಥಳೀಯ ಅಂಗಡಿ ಮಾಲೀಕರ ನಂಬರ್​ಗಳು.
ಕೇರಳ, ತಮಿಳುನಾಡಿನಲ್ಲಿ ಸಕ್ರಿಯವಾಗಿರುವ ನಂಬರ್​ಗಳು ಯಾರ ಬಳಿ ಇದೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ತಮಿಳುನಾಡು ಪೊಲೀಸರು ಕೂಡ ಈ ನಿಟ್ಟಿನಲ್ಲಿ ತನಿಖೆ ಮಾಡುತ್ತಿದ್ದಾರೆ. ಈಗಾಗಲೆ ಮಂಗಳೂರಿಗೆ ಭೇಟಿ ನೀಡಿ, ಇಲ್ಲಿನ ಸಂಪೂರ್ಣ ಮಾಹಿತಿ ಸಂಗ್ರಹಿಸಿ ತೆರಳಿದ್ದಾರೆ.
ತನಿಖೆ ಚುರುಕು:ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಅಧಿಕಾರಿಗಳು ಸ್ಫೋಟ ಪ್ರಕರಣದ ತನಿಖೆಯಲ್ಲಿ ಆರಂಭದಿಂದಲೂ ಪೊಲೀಸರ ಜತೆಗಿದ್ದು, ಎನ್​ಐಎ ಎಫ್​ಐಆರ್ ದಾಖಲಿಸಿಕೊಂಡ ಬಳಿಕ ಎಸ್ಪಿ, ಡಿವೈಎಸ್ಪಿ ದರ್ಜೆಯ ಅಧಿಕಾರಿಗಳು ಮಂಗಳೂರಿಗೆ ಬಂದು ತನಿಖೆ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮಂಗಳೂರಿನಲ್ಲೇ ಬೀಡುಬಿಟ್ಟಿರುವ ಎನ್​ಐಎ ಒಂದು ತಂಡ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದೆ. ಇನ್ನೊಂದು ತಂಡ ಶಾರೀಕ್ ವಾಸವಿದ್ದ ಮೈಸೂರು ಹಾಗೂ ಆತ ತಿರುಗಾಡಿದ್ದ ಸ್ಥಳಗಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ. ಆರೋಪಿಗೆ ಶಿಕ್ಷೆಯಾಗಬೇಕಾದರೆ ಗರಿಷ್ಠ ಸಂಖ್ಯೆಯಲ್ಲಿ ಪೂರಕ ಸಾಕ್ಷ್ಯ ಸಂಗ್ರಹ ಅವಶ್ಯ. ಈ ನಿಟ್ಟಿನಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲಾಗುತ್ತಿದೆ. ವಿಳಂಬವಾದರೆ ಸಾಕ್ಷ್ಯ ನಾಶ ಸಾಧ್ಯತೆ ಇರುವುದರಿಂದ ತನಿಖೆ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ.
ಇನ್ನೂ ಶುರುವಾಗಿಲ್ಲ ವಿಚಾರಣೆ :ಶಂಕಿತ ಉಗ್ರ ಶಾರೀಕ್​ಗೆ ಬೇರೆ ಬೇರೆ ಟಾರ್ಗೆಟ್ ಇತ್ತು ಎನ್ನುವುದು ಊಹಾಪೋಹ ಅಷ್ಟೇ. ಈ ಬಗ್ಗೆ ಯಾವುದೇ ಮಾಹಿತಿ ನಮಗೆ ಸಿಕ್ಕಿಲ್ಲ. ಆರೋಪಿಯನ್ನು ಭೇಟಿ ಮಾಡಲು ವೈದ್ಯರು ನಮಗೆ ಅನುಮತಿ ನೀಡಿಲ್ಲ. ಹಾಗಾಗಿ ಆರೋಪಿಯ ವಿಚಾರಣೆ ಈವರೆಗೆ ಸಾಧ್ಯವಾಗಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಆಸ್ಪತ್ರೆ ಸುತ್ತ ಭದ್ರತೆ ಹೆಚ್ಚಿಸಲಾಗಿದ್ದು, ಸಿಬ್ಬಂದಿ ಶಿಫ್ಟ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಬಂದಾಗಲೂ ಶಾರೀಕ್ ಭೇಟಿಗೆ ಅವಕಾಶ ನೀಡಿಲ್ಲ. ಸುಟ್ಟ ಗಾಯವಾದ ಕಾರಣ ಇನ್​ಫೆಕ್ಷನ್ ಸಾಧ್ಯತೆ ಇರುವುದಾಗಿ ವೈದ್ಯರು ಸೂಚಿಸಿದ್ದರು ಎಂದರು. ಇನ್ನೊಂದೆಡೆ, ಕುಕ್ಕರ್ ಸ್ಪೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಷಾ ಚಾಲಕ ಪುರುಷೋತ್ತಮ ಚೇತರಿಸಿಕೊಳ್ಳುತ್ತಿರುವುದಾಗಿ ಶಶಿಕುಮಾರ್ ಹೇಳಿದ್ದಾರೆ.
ಶಾರೀಕ್ ಕೊಲೆಗೆ ಸ್ಲೀಪರ್ ಸೆಲ್ ಬಳಕೆ?
ಆರೋಪಿ ಶಾರೀಕ್​ನನ್ನು ಹ್ಯಾಂಡ್ಲರ್​ಗಳ ಅಣತಿಯಂತೆ ಆಸ್ಪತ್ರೆ ಯಲ್ಲೇ ಮುಗಿಸಲು ಯತ್ನ ನಡೆಯುವ ಶಂಕೆ ಪೊಲೀಸರಿಗಿದೆ. ಇದಕ್ಕಾಗಿ ಕರಾವಳಿಯಲ್ಲಿರುವ ಉಗ್ರರ ಸ್ಲೀಪರ್ ಸೆಲ್​ಗಳನ್ನು ಸಕ್ರಿಯಗೊಳಿಸಿ, ದಾಳಿ ನಡೆಸುವ ಆತಂಕ ವ್ಯಕ್ತವಾಗಿದೆ. ಆಸ್ಪತ್ರೆಯ 5ನೇ ಮಹಡಿಯಲ್ಲಿ ಶಾರೀಕ್​ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲ ಮಹಡಿಗಳಲ್ಲೂ ಬಿಗು ಭದ್ರತೆ ಹಾಕಲಾಗಿದೆ. 8 ತಜ್ಞ ವೈದ್ಯರ ತಂಡದಿಂದ ಶಾರೀಕ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಾರೀಕ್ ಕೊಠಡಿ ಬಳಿ ಒಬ್ಬ ಇನ್​ಸ್ಪೆಕ್ಟರ್, ಓರ್ವ ಪಿಎಸ್​ಐ ಹಾಗೂ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಸ್ಪತ್ರೆಯ ಹೊರಗೂ ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದು, ಬಂದುಹೋಗುವರರ ಮೇಲೆ ನಿಗಾ ಇರಿಸಲಾಗಿದೆ.
ಉಡುಪಿಯಲ್ಲೂ ಸ್ಯಾಟಲೈಟ್ ಫೋನ್ ಕರೆ!
ಉಡುಪಿ ಜಿಲ್ಲೆಯಲ್ಲಿ ಸ್ಯಾಟಲೈಟ್ ಫೋನ್ ಕರೆ ಬಂದಿರುವ ಬಗ್ಗೆ ರಾಜ್ಯ ಆಂತರಿಕ ಭದ್ರತಾ ವಿಭಾಗ, ಉಡುಪಿ ಜಿಲ್ಲಾ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ನೀಡಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಉಡುಪಿ ಜಿಲ್ಲೆಯ ಮಂದಾರ್ತಿ ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಗೋಡಂಬಿ ಫ್ಯಾಕ್ಟರಿಯ ಬಳಿ ತುರಾಯ ಸ್ಯಾಟಲೈಟ್ ಫೋನ್ ಕರೆಯೂ ಆಪರೇಟ್ ಆಗಿರುವ ಬಗ್ಗೆ ನ.9ರಂದು ಮಾಹಿತಿ ಲಭಿಸಿತ್ತು ಎಂದು ಹೇಳಲಾಗಿದೆ. ಇನ್ನು, ಸ್ಪೋಟಕ್ಕೂ ಮುನ್ನಾ ದಿನ ದ.ಕ.ಜಿಲ್ಲೆಯ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಸತತ 2 ದಿನಗಳಿಂದ ಸ್ಥಳ ಪರಿಶೀಲನೆ ಹಾಗೂ ಹೆಚ್ಚಿನ ತನಿಖೆ ನಡೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − twelve =
Remember me
