2020ರಲ್ಲಿ ನಿಧನರಾದ ಪ್ರಮುಖರಲ್ಲಿ ದೇಶದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಒಬ್ಬರು. ಆ. 31ರಂದು ಪ್ರಣಬ್ ದಾ 84ನೇ ವಯಸ್ಸಿನಲ್ಲಿ ನಿಧನರಾದರು. ಪ್ರಾಧ್ಯಾಪಕ, ಪತ್ರಕರ್ತ, ರಾಜಕೀಯ ನಾಯಕ, ಕೇಂದ್ರ ಸಚಿವ, ರಾಷ್ಟ್ರಪತಿ ಜವಾಬ್ದಾರಿ ನಿರ್ವಹಿಸಿದ ಅವರು ಕೇಂದ್ರ ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್ ಮಂಡಿಸಿದವರು. ಅವರಿಗೆ 2008ರಲ್ಲಿ ಪದ್ಮ ವಿಭೂಷಣ ಹಾಗೂ 2019ರಲ್ಲಿ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ದೇಶದ ಪ್ರಮುಖ ವಿದ್ವಾಂಸ, ಅಧ್ಯಾತ್ಮ ಪ್ರವಚನಕಾರ, ಸಾಹಿತಿ, ಚಿಂತಕ ಹಾಗೂ ಹಿರಿಯ ಪತ್ರಕರ್ತ ಬನ್ನಂಜೆ ಗೋವಿಂದಾಚಾರ್ಯ ಡಿ. 13ರಂದು ಇಹಲೋಕ ತ್ಯಜಿಸಿದರು. ಕನ್ನಡ, ಸಂಸ್ಕೃತ, ತುಳು ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.
ಸ್ವಾತಂತ್ರ್ಯ ಹೋರಾಟಗಾರ, ವೇದ ವಿದ್ವಾಂಸ, ಶತಾಯುಷಿ ಸುಧಾಕರ ಚತುರ್ವೆದಿ ಫೆ. 27ರಂದು ವಿಧಿವಶ ರಾದರು. 1897ರಲ್ಲಿ ಜನಿಸಿದ ವರೆಂದು ಹೇಳಲಾಗಿದ್ದ ಚತುರ್ವೆದಿ 123 ವರ್ಷಗಳ ಕಾಲ ಬದುಕಿದ್ದರು.
ಕನ್ನಡನಾಡು ಕಂಡ ಅಪ್ಪಟ ವಿದ್ವಾಂಸ, ಸಂಶೋಧಕರ ಸಂಶೋಧಕ ಎಂದೇ ಖ್ಯಾತರಾಗಿದ್ದವರು ಡಾ. ಎಂ. ಚಿದಾನಂದ ಮೂರ್ತಿ. ಇತಿಹಾಸಕಾರರಾಗಿ, ಕನ್ನಡ ಬರಹಗಾರರಾಗಿ, ಕನ್ನಡಪ್ರೇಮಿಯಾಗಿ ಚಿ.ಮೂ. ಮಾಡಿದ ಕಾರ್ಯಗಳು ಅಚ್ಚಳಿಯದಂಥವು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಗುವಲ್ಲಿ ಅವರ ಪಾತ್ರ ತುಂಬ ಮಹತ್ವದ್ದು. ಈ ಕನ್ನಡ ಗರುಡ ಜ. 11ರಂದು ಅಸ್ತಂಗತರಾದರು.
ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ ಡಾ. ಗುರುರಾಜ ಶ್ಯಾಮಾಚಾರ್ಯ ಆಮೂರ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಆಳವಾದ ಅಧ್ಯಯನ, ನೇರ ಬರವಣಿಗೆಗಳಿಂದ ಅಗ್ರಮಾನ್ಯ ವಿಮರ್ಶಕರಲ್ಲೊಬ್ಬರಾಗಿದ್ದ ಆಮೂರರು ಸೆ. 28ರಂದು ನಿಧನರಾದರು.
ಸಂಗೀತಶಾಸ್ತ್ರಜ್ಞ, ಬಹುಶ್ರುತ ವಿದ್ವಾಂಸರಾಗಿದ್ದವರು ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ. ಸಂಗೀತ, ಯೋಗ, ವ್ಯಾಕರಣ, ಮಂತ್ರತಂತ್ರ, ಮೀಮಾಂಸೆ – ಹೀಗೆ ಹಲವು ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿದ್ದ ಅವರು ಜ. 17ರಂದು ನಿಧನರಾದರು.
ಭಾರತೀಯ ವೈಮಾಂತರಿಕ್ಷ ಕ್ಷೇತಕ್ಕೆ ಅಮೂಲ್ಯ ಕೊಡುಗೆ ನೀಡಿದವರು ಕನ್ನಡಿಗ, ಪದ್ಮಭೂಷಣ ಪ್ರೊ. ರೊದ್ದಂ ನರಸಿಂಹ. ದ್ರವಚಲನಶಾಸ್ತ್ರಜ್ಞರೂ ಆಗಿದ್ದ ಈ ಹಿರಿಯ ವಿಜ್ಞಾನಿ ಡಿ. 14ರಂದು ವಿಧಿವಶರಾದರು.
ನಿತ್ಯೋತ್ಸವ ಕವಿ, ಪದ್ಮಶ್ರೀ ಕೆ. ಎಸ್. ನಿಸಾರ್ ಅಹಮದ್ ಮೇ 4ರಂದು ವಿಧಿವಶರಾದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದ್ದ ಅವರು ನಾಡಿನ ಪ್ರಮುಖ ಸಾಹಿತಿಗಳಲ್ಲೊಬ್ಬರು.
ಧಾರ್ವಿುಕವಾಗಿ, ಸಾಂಸ್ಕೃತಿಕವಾಗಿ ಸಕ್ರಿಯರಾಗಿದ್ದ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸೆ. 6ರಂದು ಇಹಲೋಕ ತ್ಯಜಿಸಿದರು. ಸ್ವತಃ ಭಾಗವತರಾಗಿದ್ದ ಅವರು ಯಕ್ಷಗಾನ ಮೇಳವನ್ನೂ ಮುನ್ನಡೆಸಿದ್ದರು. ಶ್ರೀಗಳು ಕೇರಳ ಸರ್ಕಾರದ ವಿರುದ್ಧ ಹೂಡಿದ ದಾವೆಯೇ ಸಂವಿಧಾನದ ಮೂಲರಚನೆಯನ್ನು ಸಂಸತ್ತು ಬದಲಿಸಲು ಸಾಧ್ಯವಿಲ್ಲ ಎಂಬ ಐತಿಹಾಸಿಕ ತೀರ್ಪಿಗೆ ಕಾರಣವಾಗಿತ್ತು.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಂಗೀತಮಾರ್ತಾಂಡ ಎಂದೇ ಖ್ಯಾತರಾಗಿದ್ದ ಪಂಡಿತ್ ಜಸ್​ರಾಜ್ ಆ. 17ರಂದು ನಿಧನರಾದರು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಸಂಗೀತಕ್ಕೆ ಅಧ್ಯಾತ್ಮದ ಸ್ಪರ್ಶ ನೀಡಿದ್ದರು.
ಉಭಯಗಾನವಿದುಷಿ ಶ್ಯಾಮಲಾ ಜಿ. ಭಾವೆ ಮೇ 22ರಂದು ನಿಧನರಾದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ ಎರಡೂ ಪದ್ಧತಿಗಳಲ್ಲೂ ಸಾಧನೆ ಮಾಡಿದ್ದರು.
ಖ್ಯಾತ ವಯೊಲಿನ್ ವಾದಕ, ಪದ್ಮಭೂಷಣ ಪುರಸ್ಕೃತ ವಿದ್ವಾನ್ ಪ್ರೊ. ಟಿ. ಎನ್. ಕೃಷ್ಣನ್ ನ. 2ರಂದು ನಿಧನರಾದರು.
ಹಿರಿಯ ಯಕ್ಷ ಗಾನ ಕಲಾವಿದ, ಅರ್ಥಧಾರಿ, ಸಂಘಟಕ, ಸಂಯಮಂ ತಾಳಮದ್ದಲೆ ಕೂಟದ ರೂವಾರಿ ಮಲ್ಪೆ ವಾಸುದೇವ ಸಾಮಗ (71), ಮದ್ದಳೆಯ ಮಾಂತ್ರಿಕರೆಂದೇ ಖ್ಯಾತರಾದ ಹಿರಿಯಡ್ಕ ಗೋಪಾಲ ರಾವ್ (101), ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದರಲ್ಲೊಬ್ಬರಾದ ಶ್ರೀಪಾದ ಹೆಗಡೆ ಹಡಿನಬಾಳ (66) ಅವರನ್ನು ಯಕ್ಷಗಾನ ಲೋಕ ಈ ವರ್ಷ ಕಳೆದುಕೊಂಡಿತು.
ಜವಾರಿ ಭಾಷೆ ಮತ್ತು ಬದುಕನ್ನು ದುಡಿಸಿಕೊಂಡ ಸಾಹಿತಿ ಡಾ. ಗೀತಾ ನಾಗಭೂಷಣ. ಶ್ರಮ ಜೀವಿಗಳ ನೋವು- ನಲಿವನ್ನು ಕೆಂಡದಂಥ ಭಾಷೆಯಲ್ಲಿ ಹಿಡಿದಿಟ್ಟು ಸಾಹಿತ್ಯದ ಗ್ರಹಿಕೆಯ ಕ್ರಮವನ್ನೇ ಬದಲಿಸಿದ ಖ್ಯಾತಿ ಅವರದು. ಅವರು ಜೂ. 28ರಂದು ನಿಧನರಾದರು.
ಸುಮಾರು ಐದು ದಶಕಗಳ ಕಾಲ ವೃತ್ತಿ ರಂಗಭೂಮಿಯಲ್ಲಿ ಮಿಂಚಿದ ಹಿರಿಯ ಕಲಾವಿದೆ, ಗಾಯಕಿ ನಾಡೋಜ ಸುಭದ್ರಮ್ಮ ಮನ್ಸೂರ್ ಜು. 16ರಂದು ನಿಧನರಾದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೆ. 23ರಂದು ನವದೆಹಲಿಯಲ್ಲಿ ಕರೊನಾ ವೈರಸ್​ನಿಂದ ವಿಧಿವಶರಾದರು.
ತಮ್ಮ ಆಕರ್ಷಕ ಶೈಲಿಯ ಬರವಣಿಗೆಯಿಂದ ಅಕ್ಷರ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ನ. 12ರಂದು ನಿಧನರಾದರು. ಅರವತ್ತಕ್ಕೂ ಹೆಚ್ಚು ಕೃತಿಗಳಿಂದ, ಹಾಯ್ ಬೆಂಗಳೂರು ವಾರಪತ್ರಿಕೆಯಿಂದ ಚಿರಪರಿಚಿತರಾಗಿದ್ದ ಅವರು ಅನುವಾದಕ, ನಟ, ನಿರೂಪಕ, ವಾಗ್ಮಿಯಾಗಿ ಹೆಸರುವಾಸಿಯಾಗಿದ್ದರು.
ಪ್ರಸಿದ್ಧ ಉದ್ಯಮಿ, ಮುರ್ಡೆಶ್ವರ ಕ್ಷೇತ್ರದ ರೂವಾರಿ, ಶಿಕ್ಷಣಸಂಸ್ಥೆಗಳ ಸ್ಥಾಪಕ ಡಾ. ಆರ್. ಎನ್. ಶೆಟ್ಟಿ ಡಿ. 16ರಂದು ವಿಧಿವಶರಾದರು. ಸಮಾಜಮುಖಿ ಚಿಂತನೆಗಳಿಂದ, ಕೊಡುಗೈ ದಾನ ಗಳಿಂದ ಅವರು ಜನಾನುರಾಗಿಯಾಗಿದ್ದರು.
80-90ರ ದಶಕದಲ್ಲಿ ದಮನಿತರು, ಶೋಷಿತರಿಗೆ ಮೇಲ್ವರ್ಗದ ಮೇಲಿದ್ದ ಸಿಟ್ಟು, ಆಕ್ರೋಶಕ್ಕೆ ದನಿಯಾಗಿ ದಲಿತ ನಾಯಕ ಎನಿಸಿಕೊಂಡಿದ್ದವರು ರಾಮ್ ವಿಲಾಸ್ ಪಾಸ್ವಾನ್. ಅವರು ಅ. 8ರಂದು ವಿಧಿವಶರಾದರು.
ಅ. 29ರಂದು ಗುಜರಾತ್​ನ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಕೇಶುಭಾಯ್ ಪಟೇಲ್ ನಿಧನರಾದರು. ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.
ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಸೆ. 27ರಂದು ಇಹಲೋಕ ತ್ಯಜಿಸಿದರು. ಕೇಂದ್ರ ಹಣಕಾಸು, ವಿದೇಶಾಂಗ, ರಕ್ಷಣಾ ಖಾತೆಗಳಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು.
ಅಸ್ಸಾಂನಲ್ಲಿ ಅತಿ ಹೆಚ್ಚು ಕಾಲ ಮುಖ್ಯ ಮಂತ್ರಿ ಯಾಗಿದ್ದ ತರುಣ್ ಗೊಗೋಯ್ ನ. 23ರಂದು ನಿಧನರಾದರು. ಕೇಂದ್ರ ಸಚಿವರಾಗಿದ್ದಲ್ಲದೆ ಮೂರು ಬಾರಿ ಅಸ್ಸಾಂ ಮುಖ್ಯಮಂತ್ರಿಯಾಗಿದ್ದರು.
ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ನ. 25ರಂದು ವಿಧಿವಶರಾದರು.
ಫುಟ್​ಬಾಲ್ ದಂತಕಥೆಯಂತಿದ್ದ ಅರ್ಜೆಂಟಿನಾದ ಡೀಗೊ ಮರಡೊನಾ ನ. 25ರಂದು ವಿಧಿವಶರಾದರು. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮಾಜಿ ಸಂಸದ ಚೇತನ್ ಚವ್ಹಾಣ್ ಕರೊನಾದಿಂದಾಗಿ ಆ. 16ರಂದು ನಿಧನರಾದರು. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಕಾರ ಡೀನ್ ಜೋನ್ಸ್ (ಸೆ. 26), ಭಾರತದ ಹಾಕಿ ದಂತಕಥೆ ಬಲಬೀರ್ ಸಿಂಗ್ (ಮೇ 20), ಐದು ಬಾರಿಯ ಗ್ರ್ಯಾನ್ ಸ್ಲಾಮ್ ಡಬಲ್ಸ್ ವಿಜೇತ ಅಮೆರಿಕದ ಟೆನ್ನಿಸಿಗ ರಾಲ್ ಸ್ಟನ್ (ಡಿ. 6) ಸೇರಿದಂತೆ ಕೆಲವು ಪ್ರಮುಖರನ್ನು ಕ್ರೀಡಾಕ್ಷೇತ್ರ ಈ ವರ್ಷ ಕಳೆದುಕೊಂಡಿತು.
ಕನ್ನಡದ ಪ್ರಸಿದ್ಧ ಸಿನಿಮಾ ಸಂಗೀತ ನಿರ್ದೇಶಕ ರಾಜನ್ ಅ. 11ರಂದು ನಿಧನರಾದರು. 70-90ರ ದಶಕದಲ್ಲಿ ರಾಜನ್ ಅವರು ಸಹೋದರ ನಾಗೇಂದ್ರ ಜತೆಗೂಡಿ ಕನ್ನಡ, ತಮಿಳು, ತುಳು, ಸಿಂಹಳಿ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದರು.
ಸಿನಿಮಾದಲ್ಲಿ ಧೋನಿ ಪಾತ್ರ ನಿರ್ವಹಿಸಿ ಪ್ರಸಿದ್ಧರಾಗಿದ್ದ ಬಾಲಿವುಡ್​ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಈ ವರ್ಷ ಭಾರಿ ಸುದ್ದಿ ಮಾಡಿತು. ಜೂ. 14ರಂದು ಮುಂಬೈನ ತಮ್ಮ ಮನೆಯಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು.
ಬಾಲಿವುಡ್ ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಗಳಿಂದ ಖ್ಯಾತಿ ಗಳಿಸಿದ್ದ ನಟ ಇರ್ಫಾನ್ ಖಾನ್ ಏ. 29ರಂದು ನಿಧನರಾದರು. ಸಲಾಂ ಬಾಂಬೆ, ಸ್ಲಮ್ ಡಾಗ್ ಮಿಲಿಯನೇರ್, ಲೈಫ್ ಆಫ್ ಪೈ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ನ್ಯೂರೊಎಂಡೊಕ್ರೖೆನ್ ಟೂಮರ್ ಇರುವುದಾಗಿ 2018ರಲ್ಲಿ ಬಹಿರಂಗಪಡಿಸಿದ್ದ ಇರ್ಫಾನ್ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ಇವರಲ್ಲದೆ ರಿಷಿ ಕಪೂರ್, ಸರೋಜ್ ಖಾನ್ ಮೊದಲಾದವರು ಈ ವರ್ಷ ಅಗಲಿದರು.
ವಿವಿಧ ಕ್ಷೇತ್ರಗಳ ಗಣ್ಯಮಾನ್ಯರಾದ ಎ. ಪಂಕಜಾ, ಶಾಂತಾ ದೇವಿ ಕಣವಿ, ಹೀ. ಚಿ. ಶಾಂತವೀರಯ್ಯ, ಟಿ. ಬಿ.ಸೊಲಬಕ್ಕನವರ್, ಚಂದ್ರಕಾಂತ ಕುಸನೂರ, ಬಿ. ಬಿ.ರಾಜಪುರೋಹಿತ, ಯು.ಪಿ.ಉಪಾಧ್ಯಾಯ, ಶ್ರೀನಿವಾಸ ಉಡುಪ, ಉದ್ಯಾವರ ಮಾಧವ ಆಚಾರ್ಯ, ವಿ.ಸಿ.ಐರಸಂಗ, ನಾ. ಸು. ಭರತನಹಳ್ಳಿ, ಹಾ. ಮೈ. ಸೂರಿ, ಬೇಲೂರು ಕೃಷ್ಣಮೂರ್ತಿ, ಕಪಿಲಾ ವಾತ್ಸ್ಯಾಯನ, ವಿಡಂಬಾರಿ, ಅಶೋಕ ಗಸ್ತಿ, ಮೋಹನ ಸೋನ, ಸುನೀಲ್ ಕೊಠಾರಿ, ಜಯದೇವಪ್ಪ ಜೈನಕೇರಿ, ಎನ್.ನಾರಾಯಣ ಶೆಟ್ಟಿ, ಬಿಳುಮನೆ ರಾಮದಾಸ್, ಪಾಟೀಲ ಪುಟ್ಟಪ್ಪ, ಅಚ್ಯುತನ್ ನಂಬೂದಿರಿ, ಸುಗತಕುಮಾರಿ ಟೀಚರ್, ಸೀತಾಲಕ್ಷ್ಮಿ ಕರ್ಕಿಕೋಡಿ, ಜಯಾ ಯಾಜಿ ಶಿರಾಲಿ, ಅಮರ್ ಸಿಂಗ್, ಸ್ವಾಮಿ ಅಗ್ನಿವೇಶ್, ಮೋತಿಲಾಲ್ ವೋರಾ ಲಾಲ್ ಜಿ ಟಂಡನ್ ಮೊದಲಾದವರನ್ನು ನಾಡು ಈ ವರ್ಷ ಕಳೆದುಕೊಂಡಿತು.
ಬರಹ:ರಾಜಶೇಖರ ಜೋಗಿನ್ಮನೆ, ರವೀಂದ್ರ ಮಾವಖಂಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
