ಬೆಂಗಳೂರು:ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದರ ಜತೆಗೆ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ನಡೆದ ಬೂತ್ ಮಟ್ಟದ ಬಿಜೆಪಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಅದು ಸುಳ್ಳು. ಬಿಜೆಪಿ ಏಕಾಂಗಿಯಾಗಿಯೇ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಏಳು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ 5 ರಾಜ್ಯಗಳಲ್ಲಿ ಗೆದ್ದಿದೆ. ಆದರೆ ಆರು ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ ಎಂದು ಹರಿಹಾಯ್ದರು. ಇಂದಿರಾ ಗಾಂಧಿ ಗರೀಬಿ ಹಠಾವೋ ಯೋಜನೆ ತಂದರು. ಆದರೆ ಅವರು ಬಡತನ ನಿಮೂಲನೆ ಮಾಡಿಲ್ಲ, ಬಡವರನ್ನೇ ನಿಮೂಲನೆ ಮಾಡಿದರು ಎಂದು ವ್ಯಂಗ್ಯವಾಡಿದರು. ದೇವೇಗೌಡ, ಸಿದ್ದರಾಮಯ್ಯ ಬಡವರ ಬಗ್ಗೆ ಮಾತನಾಡುತ್ತಾರೆ. ಅವರು ಬಡತನ ನಿಮೂಲನೆ ಮಾಡಿದರಾ? ಬಹಿರಂಗ ಚರ್ಚೆಗೆ ಬರಲಿ, ನಾನು ಸವಾಲು ಹಾಕುತ್ತೇನೆ ಎಂದರು.
ಪಿಎಫ್​ಐ ಕೇಸ್ ವಾಪಸ್: ಪಿಎಫ್​ಐ ಸಂಘಟನೆಯನ್ನು ನರೇಂದ್ರ ಮೋದಿ ಬ್ಯಾನ್ ಮಾಡಿದರು. ಸಿದ್ದರಾಮಯ್ಯ- ಕುಮಾರಸ್ವಾಮಿ ಪಿಎಫ್​ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದರು. ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಜೆಡಿಎಸ್​ನವರು ನಮಗೆ ಲೆಕ್ಕಕ್ಕಿಲ್ಲ. ಈ ಸಲ ನೇರಾನೇರ ತ್ರಿಕೋನ ಹೋರಾಟ ಇರಲಿದೆ. ನಾವು ನೇರವಾಗಿ ಸ್ಪರ್ಧೆ ಮಾಡಿ ವಿಜಯ ಪಡೆಯುತ್ತೇವೆ. ಯಾರು ಬೇಕು ಎಂದು ಜನರು ತೀರ್ಮಾನ ಮಾಡಲಿ ಎಂದು ಷಾ ಹೇಳಿದರು.
ಕುಟುಂಬ ರಾಜಕಾರಣ ಮೂಲೆಗೆ ತಳ್ಳಿ: ಒಂದು ಬಾರಿ ಬಿಜೆಪಿಗೆ ಬಹುಮತ ನೀಡಿ, ಕುಟುಂಬ ರಾಜಕಾರಣ, ಜಾತಿವಾದ, ಭ್ರಷ್ಟಾಚಾರದ ಪಕ್ಷವನ್ನು ಮೂಲೆಗೆ ತಳ್ಳಿ ಎಂದು ಕರೆ ನೀಡಿದರು.
ಕಾಂಗ್ರೆಸ್, ಜೆಡಿಎಸ್ ಭಯೋತ್ಪಾದನೆಗೆ ಬೆಂಬಲ
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಮತಬ್ಯಾಂಕ್​ಗಾಗಿ ಪಿಎಫ್​ಐ, ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ. ಆದರೆ, ನಾವು ಹಾಗಲ್ಲ. ದೇಶದ ಸುರಕ್ಷತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಅಮಿತ್ ಷಾ ತಿಳಿಸಿದರು. ಕಾಂಗ್ರೆಸ್​ನ ಆಡಳಿತವು ಭ್ರಷ್ಟಾಚಾರಕ್ಕೆ ಸಾಧನ. ಗೆದ್ದರೆ ರಾಜ್ಯವನ್ನು ಎಟಿಎಂ ಮಾಡಿಕೊಳ್ಳುತ್ತಾರೆ. ಜೆಡಿಎಸ್- ಕಾಂಗ್ರೆಸ್ ಚುನಾವಣೆಯಲ್ಲಿ ಎದುರಾಳಿ ಆಗಿದ್ದರೂ ಬಳಿಕ ಬಿಜೆಪಿ ಎದುರು ಬಂದಾಗ ಜತೆಗೂಡುತ್ತವೆ. 2018ರಲ್ಲೂ ಹೀಗೇ ಆಗಿತ್ತು. ಬಳಿಕ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರ್ಕಾರ ಕುಸಿದು ಬಿತ್ತು. ಬಳಿಕ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಟಿಪ್ಪು ಹೀರೋ ಮಾಡುವವರನ್ನು ದೂರವಿಡಿ:ದೇಶಭಕ್ತರ ಜತೆ ನಿಲ್ಲಬೇಕೇ ಅಥವಾ ದೇಶವನ್ನು ಭಾಗಗಳನ್ನಾಗಿ ಮಾಡುವವರ ಜತೆ ನಿಲ್ಲಬೇಕೆ ಎಂದು ಜನರು ನಿರ್ಧಾರ ಮಾಡಬೇಕು. ಪಿಎಫ್​ಐ ಬೆಂಬಲಿಗರ ಜತೆ ಇರಬೇಕೆ ಅಥವಾ ದೇಶವನ್ನು ಕಾಪಾಡುವ, ರಾಮಮಂದಿರ ನಿರ್ವಿುಸುವ ಪಕ್ಷದ ಜತೆ ನಿಲ್ಲಬೇಕೆ ಎಂದು ಜನರು ತೀರ್ಮಾನ ಮಾಡಬೇಕು. ಟಿಪ್ಪು ಸುಲ್ತಾನನನ್ನು ಹೀರೋ ಮಾಡುವವರನ್ನು ದೂರವಿಡಿ ಎಂದು ಅಮಿತ್ ಷಾ ಮನವಿ ಮಾಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಶಾಸಕ ಸಿ.ಟಿ. ರವಿ, ಸಂಸದ ಡಿ.ವಿ.ಸದಾನಂದಗೌಡ ಮತ್ತಿತರರು ಹಾಜರಿದ್ದರು.
ತಮ್ಮ ಹಗರಣ ಹೊರಬರುತ್ತವೆ ಎಂದು ಕಾಂಗ್ರೆಸ್ ಲೋಕಾಯುಕ್ತ ಮುಚ್ಚಿತ್ತು. ಎಸಿಬಿ ರಚಿಸಿ 59 ಪ್ರಕರಣಗಳಿಗೆ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ನಾವು ಆ ಎಲ್ಲ ಪ್ರಕರಣಗಳನ್ನು ಮತ್ತೆ ಲೋಕಾಯುಕ್ತಕ್ಕೆ ವಹಿಸುತ್ತೇವೆ. ಇವರ ಹಗರಣಗಳು ಒಂದೊಂದೊಂದಾಗಿ ಹೊರ ಬರುತ್ತವೆ. ಕಾಂಗ್ರೆಸ್​ನಿಂದ ರಾಜ್ಯದ ಅಭಿವೃದ್ಧಿ ಹಿಂದಕ್ಕೆ ಹೋಯಿತು. ಭ್ರಷ್ಟಾಚಾರ, ಹಗರಣಗಳ ಸರಮಾಲೆಯೇ ನಡೆಯಿತು. ಸಿದ್ದರಾಮಯ್ಯ 2 ಲಕ್ಷ ಕೋಟಿ ರೂ. ಸಾಲ ಮಾಡಿದರು. ಅವರಿಗಿಂತ ಮೊದಲು 1 ಲಕ್ಷ ಕೋಟಿ ರೂ. ಸಾಲವಿತ್ತು. ನಾವು ಕೋವಿಡ್ ನಿರ್ವಹಣೆ ಜತೆಗೆ ಅಭಿವೃಧಿ್ಧುನ್ನೂ ಮಾಡಿದ್ದೇವೆ. 71 ಸಾವಿರ ಕೋಟಿ ರೂ. ಸಾಲ ಪಡೆಯಲು ಅವಕಾಶವಿದ್ದರೂ 61 ಸಾವಿರ ಕೋಟಿ ರೂ. ತೆಗೆದುಕೊಂಡಿದ್ದೇನೆ.| ಬಸವರಾಜ ಬೊಮ್ಮಾಯಿ ಸಿಎಂ
ರಾಜ್ಯದ ರಾಜಕಾರಣ ಬದಲಾವಣೆ ಆಗುತ್ತಿದೆ. ಹಾಸನದಲ್ಲೂ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಸಿಎಂ ಆಗಲು ಶರ್ಟ್, ಪ್ಯಾಂಟ್ ಹೊಲಿಸಿಕೊಂಡವರಿಗೆ ನಡುಕ ಶುರುವಾಗಿದೆ. ನಾವು ಶೇ.60 ಮತ ಪಡೆದು 150 ಸ್ಥಾನ ಗೆಲ್ಲುತ್ತೇವೆ.| ಬಿಜೆಪಿ ರಾಜ್ಯಾಧ್ಯಕ್ಷ.
ಪ್ರಧಾನಿ ಮೋದಿ, ಅಮಿತ್ ಷಾ ಬೆಂಕಿ-ಬಿರುಗಾಳಿ ಇದ್ದ ಹಾಗೆ. ಇವರನ್ನು ತಡೆಯುವ ಶಕ್ತಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ಗಿಲ್ಲ. ಕೆಲವರು ಆ ರತ್ನ, ಈ ರತ್ನ ಎಂದು ಹೊರಟಿದ್ದಾರೆ. ಹಳೇ ಮೈಸೂರು ಭಾಗ ನಮ್ಮದೇ ಅಂದುಕೊಂಡಿದ್ದಾರೆ. ಬೆಂಗಳೂರಿನಲ್ಲಿ 4 ಪ್ರಮುಖ ಕಾಂಗ್ರೆಸ್ ಶಾಸಕರು ಸೋಲುತ್ತಾರೆ.| ಆರ್.ಅಶೋಕ್ ಕಂದಾಯ ಸಚಿವ
ಮಾಜಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ಕಾಂಗ್ರೆಸ್​ನವರು ಮಹದಾಯಿ ಡಿಪಿಆರ್ ಡೇಟ್ ಬಗ್ಗೆ ಏಕೆ ತಲೆ ಕೆಡಿಸಿಕೊಂಡಿದ್ದಾರೆಯೋ ಗೊತ್ತಿಲ್ಲ. ಅವರ ಪೊಲಿಟಿಕಲ್ ಡೇಟ್ ಎಕ್ಸ್​ಪೈರ್ ಆಗಿದೆ. ಕಳಸಾ- ಬಂಡೂರಿ ಯೋಜನೆಯ ಡಿಪಿಆರ್​ನಲ್ಲಿ ದಿನಾಂಕ ನಮೂದಾಗಿದೆ. ನಾನು ತೋರಿಸುತ್ತೇನೆ.| ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಅಮಿತ್ ಷಾ ಹೇಳಿದ ಸುಳ್ಳು
ಬೆಂಗಳೂರು:ಕಾಂಗ್ರೆಸ್ ಸರ್ಕಾರ ಇದ್ದಾಗ ಪಿಎಫ್​ಐ ಮೇಲಿನ ಕೇಸ್​ಗಳನ್ನು ವಾಪಸ್ ತೆಗೆದುಕೊಂಡರು ಎಂದು ಸುಳ್ಳು ಹೇಳುತ್ತಿದ್ದಾರೆ. ಸರ್ಕಾರವೇ ನೀಡಿರುವ ಉತ್ತರದಲ್ಲಿ ಪಿಎಫ್​ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ತೆಗೆದುಕೊಂಡ ಒಂದೆ ಒಂದು ದಾಖಲೆಯನ್ನೂ ನೀಡಿಲ್ಲ. ಮತ್ತೊಮ್ಮೆ ಪತ್ರ ಬರೆದು ಪಿಎಫ್​ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ವಿರೋಧ ಪಕ್ಷದ ನಾಯಕನಾಗಿ ಕೇಳಿದ್ದೇನೆ. ಕಳೆದ 6 ತಿಂಗಳಿಂದ ಮಾಹಿತಿ ಕೊಡದೆ ಕಡತವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಟ್ಟುಕೊಂಡು ಕೂತಿದ್ದಾರೆ. ಆದರೂ ನಾಚಿಕೆಯೇ ಇಲ್ಲದ ಕೇಂದ್ರದ ಗೃಹ ಸಚಿವ ಶಾ ನಿರ್ಲಜ್ಜ ಸುಳ್ಳು ಹೇಳಿಕೊಂಡು ಓಡಾಡುತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರದು ಬರೀ ಮೋಸ. ಎಲ್ಲ ಸಮಾಜಕ್ಕೂ ಬ್ರಹ್ಮಾಂಡ ಮೋಸ ಮಾಡಿದ್ದಾರೆ. ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ನಮ್ಮನ್ನು ಶಾಲೆ ಮಕ್ಕಳೆಂದು ಭಾವಿಸಿದೆ. ಶೇ.10 ಮೀಸಲಾತಿ ತೆಗೆದರೆ ಅವರ ಭವಿಷ್ಯ ಏನಾಗಬೇಕು? ಯಾವುದೇ ಕ್ರಮವನ್ನು ಸಂವಿಧಾನ ಬದ್ಧ, ಕಾನೂನು ಬದ್ಧವಾಗಿ ತೆಗೆದುಕೊಳ್ಳ ಬೇಕು. ಈ ಕ್ರಮದಿಂದ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನ್ಯಾಯ ಸಿಗುತ್ತದೆ ಎಂದು ಬಿಜೆಪಿ ನಾಯಕರನ್ನು ಬಿಟ್ಟು ಆಯಾ ಸಮುದಾಯದ ಮುಖಂಡರಿಂದ ಹೇಳಿಕೆ ಕೊಡಿಸಲಿ ನೋಡೋಣ.| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eight =
Remember me
