ಬೆಂಗಳೂರು: ಕರೊನಾ ಸಂಕಷ್ಟದ ಸಂದರ್ಭದಲ್ಲೂ ಶಾಸಕರ ಅಸಮಾಧಾನ, ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಒಪ್ಪಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ನೌಕರರಲ್ಲಿ ಬಿ ಮತ್ತು ಸಿ ವೃಂದದ ಅಧಿಕಾರಿ ಹಾಗೂ ನೌಕರರ ಪೈಕಿ ಶೇ.6ರಷ್ಟು ಜನರನ್ನು ಜು. 10ರೊಳಗೆ ವರ್ಗಾವಣೆ ಮಾಡುವಂತೆ ಶುಕ್ರವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಆಯಾ ಇಲಾಖೆಗಳ ಸಚಿವರಿಗೇ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಧಿಕಾರ ನೀಡಲಾಗಿದೆ.
7.40 ಲಕ್ಷ, ರಾಜ್ಯದಲ್ಲಿ ಮಂಜೂರಾದ ಹುದ್ದೆಗಳು5.20 ಲಕ್ಷ,2018ರಲ್ಲಿದ್ದ ನೌಕರರ ಅಂದಾಜು ಸಂಖ್ಯೆ4.60 ಲಕ್ಷ,ಸದ್ಯ ಇರುವ ನೌಕರರ ಅಂದಾಜು ಸಂಖ್ಯೆ
ಬೇಡ ಎಂದಿದ್ದ ಸಿಎಂ:ಕರೊನಾ ಸೋಂಕು ರಾಜ್ಯದಲ್ಲಿ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಸಾರ್ವತ್ರಿಕ ವರ್ಗಾವಣೆ ನಡೆಸದಿರುವ ತೀರ್ಮಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂದಿದ್ದರು. ಈ ಸಂಬಂಧ ಕಳೆದ ವಾರವಷ್ಟೇ ಸುತ್ತೋಲೆ ಹೊರಬಿದ್ದಿತ್ತು. ಅನಿವಾರ್ಯ ಸಂದರ್ಭದಲ್ಲಿ ಕರೊನಾ ಕೆಲಸಕ್ಕೆ ತೊಂದರೆಯಾಗದಂತೆ ಮುಖ್ಯಮಂತ್ರಿ ಅನುಮತಿ ಪಡೆದು ವರ್ಗಾವಣೆ ಮಾಡಬಹುದೆಂದೆಂದು ತಿಳಿಸಲಾಗಿತ್ತು.
ಶಾಸಕರ ಆಕ್ರೋಶ:ಸರ್ಕಾರ ಯಾವಾಗ ವರ್ಗಾವಣೆ ಬೇಡವೆಂದು ನಿರ್ಧರಿಸಿತೋ ಆಗ ಆಡಳಿತ ಪಕ್ಷದ ಶಾಸಕರೇ ತಿರುಗಿಬಿದ್ದರು. ಕಳೆದ ಕೆಲ ದಿನಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಅವರಿಗೆ ಸಲ್ಲಿಸಿದ ದೂರಿನಲ್ಲಿ ನೌಕರರ ಹಾಗೂ ಅಧಿಕಾರಿಗಳ ವರ್ಗಾವಣೆ ವಿಚಾರವೂ ಪ್ರಸ್ತಾಪವಾಗಿತ್ತು. ‘ನಮ್ಮ ಕ್ಷೇತ್ರಗಳಲ್ಲಿ ನಮಗೆ ಬೇಕಾದ ಅಧಿಕಾರಿ ಹಾಗೂ ನೌಕರರು ಇಲ್ಲದಿದ್ದರೆ ಕೆಲಸ ಮಾಡುವುದು ಹೇಗೆ’ ಎಂದು ನೇರವಾಗಿ ಅಸಮಾಧಾನ ತೋಡಿಕೊಂಡಿದ್ದರು. ಶಾಸಕರ ಈ ಆಕ್ರೋಶ ತಣಿಸುವ ಮೂಲಕ ಆಡಳಿತವನ್ನು ಸುಗಮವಾಗಿ ನಡೆಸಬೇಕೆಂಬ ಉದ್ದೇಶದಿಂದಲೆ ಯಡಿಯೂರಪ್ಪ ತಮ್ಮ ನಿಲುವಿನಿಂದ ಹಿಂದೆ ಸರಿದು ಒಂದು ಅವಧಿಗೆ ವರ್ಗಾವಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ವರ್ಗಾವಣೆ ಅವಧಿ ಜು.10ಕ್ಕೆ ಮುಕ್ತಾಯವಾಗಲಿದೆ. ಆ ನಂತರ ಎಂದಿನಂತೆ ಮುಖ್ಯಮಂತ್ರಿ ಅನುಮತಿ ಪಡೆದು ಮಾಡಬಹುದಾಗಿದೆ.
ಸಂಪುಟದಲ್ಲೂ ಚರ್ಚೆ
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ಸಚಿವರು ನೌಕರರ ಹಾಗೂ ಅಧಿಕಾರಿಗಳ ವರ್ಗಾವಣೆ ವಿಚಾರ ಮುಂದಿಟ್ಟು ಒತ್ತಡ ಹಾಕಿದ್ದರೆಂದು ಮೂಲಗಳು ಖಚಿತಪಡಿಸಿವೆ.
2013ರ ಮಾರ್ಗಸೂಚಿ:ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ 2013ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಗಳನ್ವಯ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗಿದೆ. ಖಾಲಿ ಇರುವ ಹಾಗೂ ಆಡಳಿತಾತ್ಮಕವಾಗಿ ತ್ವರಿತವಾಗಿ ತುಂಬಲೇಬೇಕಾದ ಹುದ್ದೆಗಳಿಗೆ ಹಾಗೂ ಪತಿ-ಪತ್ನಿ ಪ್ರಕರಣಗಳಿಗೆ ಆದ್ಯತೆ, ಪರಸ್ಪರ ವರ್ಗಾವಣೆ, ಅನಾರೋಗ್ಯದಿಂದ ಬಳಲುವ ನೌಕರರಿಗೆ ಅವಕಾಶ ನೀಡುವುದು, ನೌಕರರ ಅವಲಂಬಿತರು ಅನಾರೋಗ್ಯಕ್ಕೆ ಒಳಗಾಗಿದ್ದರೆ, ಸಾರ್ವಜನಿಕವಾಗಿ ದೂರು ಬಂದಿರುವವರು, ಎರಡು ವರ್ಷದಲ್ಲಿ ನಿವೃತ್ತರಾಗು ವವರಿಗೆ ವರ್ಗಾವಣೆಯಲ್ಲಿ ಆದ್ಯತೆ ನೀಡಬೇಕೆಂದು ಮಾರ್ಗಸೂಚಿ ಇದೆ. ಜ್ಯೇಷ್ಠತಾ ಘಟಕದ ಕಾರ್ಯನಿರತ ವೃಂದಬಲದಲ್ಲಿ ಶೇ. 6 ಅಧಿಕಾರಿಗಳು, ನೌಕರರನ್ನು ವರ್ಗಾವಣೆ ಮಾಡಲು ತಿಳಿಸಲಾಗಿದೆ.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಕೋರಿಕೆ ವರ್ಗಾವಣೆಯನ್ನು ಖಾಲಿ ಹುದ್ದೆಗಳಿಗಷ್ಟೇ ಪರಿಗಣಿಸಬೇಕು. ಅನವಶ್ಯಕವಾಗಿ ಯಾವುದೇ ನೌಕರರಿಗೆ ತೊಂದರೆಯಾಗಬಾರದು.| ಷಡಾಕ್ಷರಿಅಧ್ಯಕ್ಷ, ಸರ್ಕಾರಿ ನೌಕರರ ಸಂಘ
ಸರ್ಕಾರ ನಿಗದಿ ಮಾಡಿರುವ ಪ್ರಮಾಣ ಒಪ್ಪಿಗೆಯಾಗಿದ್ದರೂ ಸಹ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಣಿಯಬಾರದು. ನಿಜಕ್ಕೂ ಅರ್ಹರಾದವರಿಗೆ ವರ್ಗಾವಣೆ ಅವಕಾಶ ಸಿಗಬೇಕು.| ಶಾಂತರಾಮಅಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ
ಪ್ರಮಾಣ ಹೆಚ್ಚಳ?
ಸರ್ಕಾರ ಪ್ರಮಾಣ ಪ್ರತಿ ವರ್ಷ ಕನಿಷ್ಠ ಶೇ.4 ರಿಂದ ಶೇ.7ರ ತನಕ ಪ್ರಮಾಣ ನಿಗದಿಯಾಗುತ್ತಿತ್ತು. ಈ ವರ್ಷ ಸರ್ಕಾರ ಶೇ. 6ಕ್ಕೆ ನಿಗದಿಗೊಳಿಸಿದೆ. ಆದರೆ ಯಾವುದೇ ವರ್ಷ ಇಷ್ಟೇ ಸಂಖ್ಯೆಯಲ್ಲಿ ಹಾಗೂ ನಿಗದಿತ ಗಡುವಿನಲ್ಲಿ ವರ್ಗಾವಣೆ ಪ್ರಕ್ರಿಯೆ ಮುಗಿದ ಉದಾಹರಣೆ ಇಲ್ಲ. ಈ ಬಾರಿಯೂ ಜುಲೈ ತಿಂಗಳ ಅಂತ್ಯದವರೆಗೆ ಎಳೆದರೂ ಅಚ್ಚರಿಯೇನಿಲ್ಲ.
ಶಿಕ್ಷಣ ಇಲಾಖೆಯಲ್ಲಿ ಗೊಂದಲಶಿಕ್ಷಣ ಹಾಗೂ ಆರೋಗ್ಯ ಇಲಾಖೆ ನೌಕರರ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಇದೆ. ಉಳಿದ ಇಲಾಖೆಗಳಲ್ಲೂ ಕೌನ್ಸೆಲಿಂಗ್ ತರಬೇಕೆಂಬ ಉದ್ದೇಶ ಈಡೇರಿಲ್ಲ. ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಇದೀಗ ಹೊಸ ಕಾನೂನು ತರಲು ಸರ್ಕಾರ ಮುಂದಾಗಿದೆ. ಇದಕ್ಕೆ ಆಕ್ಷೇಪಣೆಗಳನ್ನು ಸಹ ಕರೆಯಲಾಗಿದೆ. ಆದರೆ ಗೊಂದಲ ಮುಂದುವರಿದಿದೆ.
ಕರೊನಾ ಕೆಲಸಕ್ಕೆ ಅಡ್ಡಿ:ಈ ನಿರ್ಧಾರದಿಂದಾಗಿ ಸರ್ಕಾರದಲ್ಲಿ 15 ದಿನ ವರ್ಗಾವಣೆ ಹೊರತು ಬೇರೆ ಕೆಲಸಗಳೇ ನಡೆಯುವುದಿಲ್ಲ. ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ಅಬ್ಬರ ಇದ್ದೇ ಇರುತ್ತದೆ. ಕರೊನಾ ನಿಯಂತ್ರಣದಲ್ಲಿ ದುಡಿಯುತ್ತಿರುವ ಇಲಾಖೆ ಗಳಲ್ಲೂ ವರ್ಗಾವಣೆ ಸದ್ದು ಮಾಡುವುದರಿಂದ ಕೋವಿಡ್ ನಿಯಂತ್ರಣದ ಕೆಲಸಕ್ಕೆ ಅಡ್ಡಿಯಾಗ ಬಹುದೆಂಬ ಆತಂಕ ಮೂಡಿದೆ.
ಒಳಚರಂಡಿಯಲ್ಲೂ ಕರೊನಾ ವೈರಸ್ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
