ಬೆಂಗಳೂರು:ಸಹಕಾರ ರಂಗಕ್ಕೆ ಹೊಸ ಆಯಾಮ ಕಲ್ಪಿಸುವ ಹಿನ್ನೆಲೆಯಲ್ಲಿ ಸಹಕಾರ ವಿಶ್ವವಿದ್ಯಾಲಯ ಆರಂಭಿಸುವ ಯೋಚನೆ ಸರ್ಕಾರದ ಮುಂದಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಹೇಳಿದರು.
ಸಹಕಾರ ಇಲಾಖೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಹಕಾರ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನೂತನ ಸಹಕಾರ ನೀತಿ ಜಾರಿಗೆ ತರುವ ದೃಷ್ಟಿಯಿಂದ ಈಗಾಗಲೆ ರೈಲ್ವೆ ಖಾತೆ ಮಾಜಿ ಸಚಿವ ಸುರೇಶ್ ಪ್ರಭು ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ವರದಿ ಕೊಟ್ಟ ಕೂಡಲೇ ಅದನ್ನು ಅಂಗೀಕರಿಸಿ ನೀತಿ ಜಾರಿಗೊಳಿಸುವುದಾಗಿ ತಿಳಿಸಿದರು. ದೇಶದ ಸಹಕಾರ ಕ್ಷೇತ್ರದ ಸಂಪೂರ್ಣ ಮಾಹಿತಿ ಡೇಟಾ ಬೇಸ್ ಮಾಡುವ ಆಲೋಚನೆ ಮಾಡಲಾಗುವುದು ಎಂದರು. 2 ಲಕ್ಷ ಸಹಕಾರ ಸಮಿತಿಗಳನ್ನು ಮೂರು ವರ್ಷದ ಒಳಗಾಗಿ ಸ್ಥಾಪಿಸಲಾಗುವುದು. ಪ್ರಧಾನಿ ಮೋದಿ ಸಹಕಾರ ಕ್ಷೇತ್ರಕ್ಕೆ ಒಂದು ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ, ರೈತ ಕೇಂದ್ರಿತ ಆರ್ಥಿಕತೆ ಬಲವರ್ಧನೆಗೆ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಸಹಕಾರ ಕ್ಷೇತ್ರ ಕರ್ನಾಟಕದಲ್ಲಿ ಮೊದಲನೆ ಸ್ಥಾನದಲ್ಲಿದೆ. ಗದಗ ಜಿಲ್ಲೆ ದೇಶದಲ್ಲಿ ಮೊದಲ ಸಹಕಾರ ಸಂಘ ಸ್ಥಾಪಿಸಲಾಗಿತ್ತು. ಇದು ರಾಜ್ಯದ ಹೆಗ್ಗಳಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಂಎಫ್ ನಂದಿನಿ ಹಾಲು ಉತ್ಪಾದಿಸುವ 33 ಲಕ್ಷ ರೈತರಿಗೆ ಪ್ರತಿದಿನ 28 ಕೋಟಿ ರೂ. ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತದೆ. ಸಹಕಾರ ಕ್ಷೇತ್ರವಾಗಿದ್ದರಿಂದಲೇ ಇಷ್ಟು ದೊಡ್ಡ ಸಾಧನೆ ಸಾಧ್ಯವಾಗಿದೆ ಎಂದರು. ವಿಶ್ವಾದ್ಯಂತ 30 ಲಕ್ಷ ಸಹಕಾರ ಸಂಸ್ಥೆಗಳಿದ್ದು, ಈ ಪೈಕಿ ದೇಶದಲ್ಲಿ 9 ಲಕ್ಷ ಸಂಸ್ಥೆಗಳಿವೆ. ಶೇ.51 ಜನಸಂಖ್ಯೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರ ರಂಗದ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪ್ಯಾಕ್ಸ್ ಮೂಲಕ ಶೇ.70 ರೈತರಿಗೆ ಸಹಕಾರ ಬ್ಯಾಂಕ್​ಗಳ ಸಾಲ ತಲುಪುತ್ತಿದೆ. ಶೇ.30 ರಸಗೊಬ್ಬರ, ಶೇ.19 ಕೃಷಿ ಆರ್ಥಿಕತೆ, ಶೇ.4 ರಷ್ಟು ಸಹಕ್ಕರೆ, ಶೇ.13 ಗೋಧಿ, ಶೇ.20 ಅಕ್ಕಿ ಹಾಗೂ ಶೇ.21 ಮತ್ಸ್ಯ ವ್ಯವಹಾರ ಸಹಕಾರದ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಪಾರದರ್ಶಕತೆಗೆ ಕಾಯ್ದೆ
ಸಹಕಾರಿ ಸಮಿತಿಗಳೇ ಕೃಷಿ ಉತ್ಪಾದನೆಯಿಂದ ಹಿಡಿದು ಗ್ಯಾಸ್ ವಿತರಣೆವರೆಗೆ ನಿರ್ವಹಣೆ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಪಾರದರ್ಶಕತೆ ತರಲು ಸೊಸೈಟಿ ಅಧಿನಿಯಮ ತರುತ್ತಿದ್ದೇವೆ ಎಂದು ತಿಳಿಸಿದರು. ಸಹಕಾರಿ ಸೊಸೈಟಿಗಳನ್ನು ಕಂಪನಿ ಕಾಯ್ದೆಯಿಂದ ಹೊರತಂದು ಪ್ರತ್ಯೇಕಗೊಳಿಸಲಾಗಿದೆ. ಇದರಿಂದ ಸಹಕಾರ ಕ್ಷೇತ್ರ ವೇಗವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದರು.
ದೇಶಕ್ಕೇ ಮಾದರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದ ಆರ್ಥಿಕ ಪ್ರಗತಿಗೆ ಸಹಕಾರ ರಂಗ ದೊಡ್ಡ ಕೊಡುಗೆಯನ್ನು ನೀಡಲು ಸಾಧ್ಯವಿದ್ದು, ಕರ್ನಾಟಕದಲ್ಲಿ ಸಹಕಾರ ಸಾಮರ್ಥ್ಯ ಪೂರ್ಣಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು ತಿಳಿಸಿದರು. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್​ಗಳಲ್ಲಿ ಸಹಕಾರ ಅತ್ಯಂತ ಯಶಸ್ವಿಯಾಗಿ ಬೆಳೆದಿದೆ. ಹಾಲು ಉತ್ಪಾದನೆ, ಕೃಷಿ ಸೇರಿ ಹಲವು ಕ್ಷೇತ್ರಗಳು ಸಹಕಾರ ರಂಗದಲ್ಲಿ ಬೆಳೆಯುತ್ತಿದೆ. ಕರ್ನಾಟಕ ಸಹಕಾರ ಇತಿಹಾಸದಲ್ಲಿ ಹಲವಾರು ಮೈಲಿಗಲ್ಲುಗಳಿವೆ. ಈ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸಹಕಾರಿ ಬ್ಯಾಂಕ್​ಗಳು, ಕೆಎಂಎಫ್ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಸಹಕಾರ-ಸರ್ಕಾರ ಸಂಬಂಧ ಅವಶ್ಯ
ಸಹಕಾರ ಮತ್ತು ಸರ್ಕಾರಗಳ ನಡುವೆ ಅನ್ಯೋನ್ಯ ಸಂಬಂಧದ ಅವಶ್ಯಕತೆ ಇದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಮುಖಾಂತರ ಸಹಕಾರಿ ರಂಗವನ್ನು ಅರ್ಥಪೂರ್ಣಗೊಳಿಸಬಹುದು. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಸಹಕಾರ ರಂಗ ನಿಯಂತ್ರಿಸಲು ಸಾಧ್ಯವಿದ್ದು ಈ ಬಗ್ಗೆ ಚಿಂತನೆಯಾಗಬೇಕು ಎಂದು ಬೊಮ್ಮಾಯಿ ಹೇಳಿದರು.
ಸಚಿವ ಎಸ್.ಟಿ. ಸೋಮಶೇಖರ ಮಾತನಾಡಿ, ರೈತರ ಆರೋಗ್ಯ ಸುರಕ್ಷತೆಗಾಗಿ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ. ಇದಕ್ಕೆ ಸರ್ಕಾರ 300 ಕೋಟಿ ರೂ. ಮೀಸಲಿಟ್ಟಿದೆ. ಈ ಯೋಜನೆಯಡಿ 30 ಲಕ್ಷ ರೈತ ಸಹಕಾರಿಗಳ ನೋಂದಣಿ ಉದ್ದೇಶವಿದೆ. ಈಗಾಗಲೆ 21 ಲಕ್ಷ ನೋಂದಣಿಯಾಗಿದೆ ಎಂದರು. 2022-23ನೇ ಸಾಲಿನಲ್ಲಿ ರಾಜ್ಯದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ. ಈವರೆಗೆ 18.11 ಲಕ್ಷ ರೈತರಿಗೆ 13,480 ಕೋಟಿ ವಿತರಿಸಲಾಗಿದೆ ಎಂದು ಹೇಳಿದರು. ರಾಜ್ಯದ 6040 ಪ್ಯಾಕ್ಸ್​ಗಳನ್ನು ಕೇಂದ್ರ ಸರ್ಕಾರದ ಯೋಜನೆಯಡಿ 235.56 ಕೋಟಿ ರೂ.ವೆಚ್ಚದಲ್ಲಿ ಗಣಕೀಕರಣಗೊಳಿಸಲಾಗುತ್ತದೆ ಎಂದು ತಿಳಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಸಚಿವರಾದ ಅಶ್ವತ್ಥನಾರಾಯಣ, ಆರ್.ಅಶೋಕ್, ಆರಗ ಜ್ಞಾನೇಂದ್ರ, ಎಂ.ಟಿ.ಬಿ.ನಾಗರಾಜ, ಸಂಸದ ಪಿ.ಸಿ.ಮೋಹನ್, ಶಾಸಕ ಕೃಷ್ಣಪ್ಪ, ಅ.ದೇವೇಗೌಡ ಉಪಸ್ಥಿತರಿದ್ದರು.
ಸಚಿವರಿಗೆ ಶಹಬ್ಬಾಶ್​ಗಿರಿ
ಸಹಕಾರಿ ರಂಗಕ್ಕೆ ಕ್ರಿಯಾಶೀಲ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಸಹಕಾರ ರಂಗದ ಭವಿಷ್ಯ ಉಜ್ವಲವಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 17 =
Remember me
