ಬೆಂಗಳೂರು: ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ ಅನ್​ಲಾಕ್-4 ಮಾರ್ಗಸೂಚಿಯನ್ನು ರಾಜ್ಯಸರ್ಕಾರ ಹೊರಡಿಸಿದ್ದು, ಕಂಟೇನ್ಮೆಂಟ್ ವಲಯ ಹೊರತುಪಡಿಸಿದ ಪ್ರದೇಶಗಳಲ್ಲಿ ಅನುಮತಿಸಲಾದ ಚಟುವಟಿಕೆಗಳ ಬಗ್ಗೆ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಪ್ರಮುಖವಾಗಿ ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್​ಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.
ಅನ್​ಲಾಕ್-5ರಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಅನುಮತಿಸುವ ಪೂರ್ವತಯಾರಿ ಎಂಬಂತೆ ಅನ್​ಲಾಕ್-4ರಲ್ಲಿ ಸಣ್ಣ ರಿಯಾಯಿತಿ ನೀಡಲಾಗಿದೆ. ಶಾಲೆ, ಕಾಲೇಜು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸೆ.30ರವರೆಗೆ ತರಗತಿ ಮುಚ್ಚಿರಬೇಕಾಗುತ್ತದೆ, ಆದರೂ ಆನ್​ಲೈನ್ ಕಲಿಕೆ ಮುಂದುವರಿಸಬೇಕೆಂದು ಹೇಳಲಾಗಿದೆಯಾದರೂ, 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ (ಕಂಟೇನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ) ಸ್ವ-ಇಚ್ಛೆಯ ಆಧಾರದ ಮೇಲೆ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಲಾಗಿದೆ. ಇದು ಅವರ ತಂದೆ-ತಾಯಿ ಮತ್ತು ಪಾಲಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ. ಇದಕ್ಕೆ ಸೆ.21ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ ಮಾದರಿ ಕಾರ್ಯವಿಧಾನ ಹೊರಡಿಸಲಿದೆ.
ಆನ್​ಲೈನ್ ಬೋಧನೆ, ಟೆಲಿ ಸಮಾಲೋಚನೆ ಹಾಗೂ ತತ್ಸಂಬಂಧಿ ಕಾರ್ಯಕ್ಕಾಗಿ ಒಮ್ಮೆಗೆ ಶಾಲೆಗಳಿಗೆ ಶೇ.50ರವರೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕರೆಯಲು ಅವಕಾಶ ನೀಡಲಾಗಿದೆ. ಕರೊನಾ ಸನ್ನಿವೇಶ ಗಮನದಲ್ಲಿ ಇಟ್ಟುಕೊಂಡು ಉನ್ನತ ಶಿಕ್ಷಣ ಇಲಾಖೆಯು ಗೃಹ ವ್ಯವಹಾರ ಮಂತ್ರಾಲಯದೊಂದಿಗೆ ಸಮಾಲೋಚಿಸಿ, ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚುಟವಟಿಕೆಗಳಿಗೆ ಅಗತ್ಯವಿರುವ ತಾಂತ್ರಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮಾತ್ರ ಉನ್ನತ ಶಿಕ್ಷಣ ಸಂಸ್ಥೆ ತೆರೆಯಲು ಅನುಮತಿ ನೀಡಲಾಗುತ್ತದೆ.
ಇನ್ನು ತರಬೇತಿ ವಿಚಾರದಲ್ಲಿ ಕೆಲವು ರಿಯಾಯಿತಿ ನೀಡಲಾಗಿದೆ. ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು, ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಕೌಶಲ ಅಭಿವೃದ್ಧಿ ಮಿಷನ್​ನಲ್ಲಿ ನೋಂದಾಯಿಸಿಕೊಂಡ ಅಲ್ಪಾವಧಿ ತರಬೇತಿ ಕೇಂದ್ರಗಳಲ್ಲಿ ಕೌಶಲ ಅಥವಾ ಉದ್ಯಮಶೀಲತೆ ತರಬೇತಿ ಪಡೆಯಲು ಸೆ.21ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುತ್ತದೆ.
ಆಹಾರ ಜತೆ ಮದ್ಯ ಸೇವನೆಗೆ ಅನುಮತಿ:ಮದ್ಯದಂಗಡಿಗಳಲ್ಲಿ ಆಹಾರ ಜತೆ ಮದ್ಯ ಸೇವಿಸಲು ಕೊನೆಗೂ ಅನುಮತಿ ಸಿಕ್ಕಿದೆ. ಈ ಸಂಬಂಧ ರಾಜ್ಯ ಸರ್ಕಾರವು ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಆನ್​ಲಾಕ್ 4.0 ಜಾರಿ ಬೆನ್ನಲ್ಲೇ ಆರ್​ವಿಬಿ(ಪಬ್), ಕ್ಲಬ್(ಸಿಎಲ್4), ಸ್ಟಾರ್ ಹೋಟೆಲ್ (ಸಿಎಲ್6ಎ), ಹೋಟೆಲ್-ಗೃಹ (ಸಿಎಲ್7), ವೈನ್ ಟ್ಯಾವರಿನ್, ವೈನ್ ಬೋಟಿಕ್ ಹಾಗೂ ಮೈಕ್ರೋಬ್ರಿವರಿ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಶೇ.50 ಗ್ರಾಹಕರು ಆಹಾರದೊಂದಿಗೆ ಮದ್ಯ, ಬಿಯರ್ ಹಾಗೂ ವೈನ್ ಸೇವಿಸಬಹುದು ಎಂದು ಅಬಕಾರಿ ಇಲಾಖೆ ತಿಳಿಸಿದೆ.
50ರಿಂದ 100 ಜನಕ್ಕೆ ಅವಕಾಶ:ಗರಿಷ್ಠ 100 ಜನರ ಪರಿಮಿತಿಗೆ ಒಳಪಟ್ಟು ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಕಾರ್ಯಗಳು, ಇತರ ಬೃಹತ್ ಸಭೆಗಳಿಗೆ ಸೆ.21ರಿಂದ ಜಾರಿಗೆ ಬರುವಂತೆ ಅವಕಾಶ ನೀಡಲಾಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಥರ್ಮಲ್ ಸ್ಕಾ್ಯನಿಂಗ್ ಮತ್ತು ಕೈ ತೊಳೆಯುವಿಕೆ, ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯಗೊಳಿಸಿ ಅನುಮತಿ ನೀಡಲಾಗುತ್ತದೆ. ವಿವಾಹ ಸಂಬಂಧಿತ ಸಮಾರಂಭಗಳಿಗೆ ಅತಿಥಿಗಳ ಸಂಖ್ಯೆ 50 ಮೀರದಂತೆ ಮತ್ತು ಅಂತ್ಯಸಂಸ್ಕಾರ ಸಂಬಂಧಿತ ಕಾರ್ಯಗಳಿಗೆ 20 ಜನರು ಮೀರದಂತೆ 20ನೇ ಸೆಪ್ಟೆಂಬರ್​ವರೆಗೆ ಅವಕಾಶವಿದ್ದು, ಆಬಳಿಕ 100 ಜನರ ಗರಿಷ್ಠ ಮಿತಿ ಅನ್ವಯವಾಗಲಿದೆ.
ಯಾವುದಕ್ಕಿಲ್ಲ ಅವಕಾಶ?
ಅನಗತ್ಯ ಲಾಕ್​ಡೌನ್​ಗಿಲ್ಲ ಅವಕಾಶ:ಕಂಟೇನ್ಮೆಂಟ್ ವಲಯಗಳಿಗೆ ಸೀಮಿತವಾದ ಲಾಕ್​ಡೌನ್ ಸೆ.30ರವರೆಗೆ ಮುಂದುವರಿಯಲಿದೆ. ಸಾಂಕ್ರಾಮಿಕ ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯುವ ಉದ್ದೇಶದಿಂದ ಬಿಬಿಎಂಪಿ ಮತ್ತು ಜಿಲ್ಲಾ ಪ್ರಾಧಿಕಾರಗಳು ತಳಮಟ್ಟದಲ್ಲಿ ಕಂಟೇನ್ಮೆಂಟ್ ವಲಯ ಗುರುತಿಸುವುದು, ಅಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಕ್ರಮ ಜಾರಿಗೊಳಿಸಿ ಅತ್ಯವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸುವುದು. ವೈದ್ಯಕೀಯ ಮತ್ತು ಅತ್ಯವಶ್ಯಕ ಚಟುವಟಿಕೆ ಹೊರತುಪಡಿಸಿ ಈ ವಲಯದಲ್ಲಿ ಜನರ ಓಡಾಟ ಇರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಹಾಗೇ ಸರ್ಕಾರದ ಜತೆ ಸಮಾಲೋಚನೆ ನಡೆಸದೆ ಕಂಟೇನ್ಮೆಂಟ್ ವಲಯದ ಹೊರಗೆ ಯಾವುದೇ ಸ್ಥಳೀಯ ಲಾಕ್​ಡೌನ್ ವಿಧಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಓಡಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಯಾವುದೇ ಪಾಸ್ ಅಥವಾ ಅನುಮತಿ ಅಗತ್ಯ ಇರುವುದಿಲ್ಲ. ಆದರೆ, ರಾಜ್ಯಕ್ಕೆ ಆಗಮಿಸುವ ಜನರು ಚಾಲ್ತಿಯಲ್ಲಿರುವ ಮಾರ್ಗಸೂಚಿ (ಎಸ್​ಒಪಿ) ಕಟ್ಟುನಿಟ್ಟಾಗಿ ಪಾಲಿಸಬೇಕು.
9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
