ಬೆಂಗಳೂರು:ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳ ಸಚಿವಾಲಯ ಮಟ್ಟದ, ಉನ್ನತ ಹಾಗೂ ಹಿರಿಯ ಶ್ರೇಣಿಯ ಎರಡು ಸಾವಿರ ಹುದ್ದೆಗಳನ್ನು ರದ್ದುಪಡಿಸಲು ಸಚಿವ ಸಂಪುಟದ ಉಪಸಮಿತಿ ಮಂಗಳವಾರ ಶಿಫಾರಸು ಮಾಡಿದೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಸಂಪುಟದ ಉಪಸಮಿತಿಯು ಈ ಪ್ರಮುಖ ನಿರ್ಣಯ ತೆಗೆದು ಕೊಂಡು, ಆಡಳಿತ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.
ಆಧುನಿಕ ತಂತ್ರಜ್ಞಾನ ಬಳಕೆ, ಗಣಕೀಕರಣ, ಆನ್​ಲೈನ್ ಸೇವೆ, ಹೊಸ ಆವಿಷ್ಕಾರಗಳಿಂದ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ಕ್ಕೆ ಒತ್ತು ನೀಡಲಾಗುತ್ತಿದೆ. ಜತೆಗೆ ಎಲ್ಲ ಆಯಾಮದಿಂದಲೂ ‘ಜನೋಪಯೋಗಿ’ಯಾಗುವ ನಿಟ್ಟಿನಲ್ಲಿ ಮುಂದುವರಿಯಲಿದೆ. ಕೆಲಸದ ಅಗತ್ಯಕ್ಕಿಂತಲೂ ಅಧಿಕಾರಿಗಳ ಅವಶ್ಯಕತೆಗೆ ತಕ್ಕಂತೆ ಉನ್ನತ, ಹಿರಿಯ ಅಧಿಕಾರಿಗಳ ಹುದ್ದೆಗಳು ಸೃಜನೆಯಾಗಿವೆ. ಆಡಳಿತ ಇಲಾಖೆಗಳ ಕಚೇರಿಗಳಲ್ಲಿ ಕಾಲಾಳುಗಿಂತ ಮೇಲಾಳು ಜಾಸ್ತಿಯಾಗಿದೆ ಎನ್ನುವ ಸ್ಥಿತಿ ನಿರ್ವಣವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಪಸಮಿತಿ ಶಿಫಾರಸುಗಳನ್ನು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿನ ಸಚಿವಾಲಯ ಮಟ್ಟದ, ಉನ್ನತ ಅಧಿಕಾರಿಗಳ ಹುದ್ದೆಗಳನ್ನು ತೆಗೆದುಹಾಕಿ, ಕೆಲಸಕ್ಕೆ ಅನುಗುಣವಾಗಿ ಕೆಳಹಂತದ ಸಿಬ್ಬಂದಿ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸುಧಾರಣೆ, ವೆಚ್ಚಕ್ಕೆ ಕಡಿವಾಣ:ಆದೇಶ ಪಾಲಿಸುವ ಸಿಬ್ಬಂದಿ ಬದಲಿಗೆ ಆದೇಶ ಹೊರಡಿಸುವ ಅಧಿಕಾರಿಗಳ ಹುದ್ದೆಗಳ ರದ್ಧತಿಯಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ಉಳಿತಾಯವಾಗಲಿದೆ. ಅಲ್ಲದೆ, ಈ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ. ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗ ಮತ್ತು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ಭಾಸ್ಕರ್ ಅವರ ಆಡಳಿತ ಸುಧಾರಣೆ ವರದಿ-2ರ ಶಿಫಾರಸುಗಳು ಅನಗತ್ಯ ವಿಳಂಬ ತಪ್ಪಿಸಲು ಏನೆಲ್ಲ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಹುದ್ದೆಗಳ ರದ್ದು, ಇಲಾಖೆಗಳ ವಿಲೀನ ಪ್ರಕ್ರಿಯೆ ಮುಂದುವರಿಕೆ ಭಾಗವಾಗಿ ಪ್ರಮುಖ ತೀರ್ವನಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆಲ್ಲ ಒಪ್ಪಿಗೆ ಕೋರಿ ಸಚಿವ ಸಂಪುಟ ಸಭೆಗೆ ಉಪಸಮಿತಿ ಶಿಫಾರಸು ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಾರ್ಯಾಂಗದಲ್ಲಿ ದಕ್ಷತೆ, ಪರಿಣಾಮಕಾರಿ ಅಭಿವೃದ್ಧಿ, ಅನಗತ್ಯ ವೆಚ್ಚಕ್ಕೆ ಕಡಿವಾಣ, ಕಾರ್ಯಭಾರ ಇಲ್ಲದಿದ್ದರೂ ಸೃಜಿಸಿದ ಉನ್ನತ ಹುದ್ದೆಗಳ ರದ್ದು ಇವೆಲ್ಲ ಆಡಳಿತ ಸುಧಾರಣೆ ಭಾಗವಾಗಿವೆ. ಈ ನಿಟ್ಟಿನಲ್ಲಿ ಕೈಗೊಂಡ ತೀರ್ವನಗಳ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆ ಮುಂದಿಡಲಾಗುವುದು.
|ಆರ್. ಅಶೋಕ್ಆಡಳಿತ ಸುಧಾರಣೆ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷ
ವರದಿ ಸಲ್ಲಿಕೆಗೆ ಸೂಚನೆ:ಅರಣ್ಯ ಸಂರಕ್ಷಣೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವಿಲೀನದ ಬಗ್ಗೆ ಗಂಭೀರ ಚರ್ಚೆಯಾಗಿದ್ದು, ಒಮ್ಮತ ಮೂಡದ ಕಾರಣ ಸಾಧಕ-ಬಾಧಕ ಪರಾಮಶಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಚಿವ ಸಂಪುಟದ ಉಪಸಮಿತಿ ಸೂಚಿಸಿದೆ. ಮಲೆನಾಡು, ಕರಾವಳಿ ಮುಂತಾದ ದಟ್ಟ ಅರಣ್ಯವಿರುವ ಜಿಲ್ಲೆಗಳಲ್ಲಿ ಅರಣ್ಯ ಸಂರಕ್ಷಣಾ ಇಲಾಖೆ ಮುಂದುವರಿಸಿ, ಸಾಮಾಜಿಕ ಅರಣ್ಯ ತೆಗೆದುಹಾಕುವುದು. ಉಳಿದ ಜಿಲ್ಲೆಗಳಲ್ಲಿ ಜಿಲ್ಲಾ, ತಾಲೂಕು ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕೈಬಿಟ್ಟು ಸಾಮಾಜಿಕ ಅರಣ್ಯ ಇಲಾಖೆ ಮುಂದುವರಿಸುವುದು ಈ ಚರ್ಚೆಯ ಮುಖ್ಯಾಂಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆರ್​ಸಿ, ಐಎಫ್​ಎಸ್ ಸಂಖ್ಯೆ ಕಡಿತ?:ರಾಜ್ಯದಲ್ಲಿ 150 ಭಾರತೀಯ ಅರಣ್ಯ ಸೇವೆ (ಐಎಫ್​ಎಸ್) ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದು, ಈ ಸಂಖ್ಯೆಯನ್ನು ಕಡಿತಗೊಳಿಸಲು ಸಮಿತಿ ಸಭೆ ಗಂಭೀರ ಚಿಂತನೆ ನಡೆಸಿದೆ. ಹೆಚ್ಚುವರಿ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಮರಳಿಸುವ ವಿಚಾರವನ್ನು ಮತ್ತೊಂದು ಸುತ್ತಿನ ಸಭೆಯಲ್ಲಿ ಅಂತಿಮಗೊಳಿಸಲು ನಿರ್ಧರಿಸಿದೆ. ವರ್ಷಕ್ಕೆ ಐದಾರು ಮೇಲ್ಮನವಿಗಳ ವಿಚಾರಣೆಗಾಗಿ 4 ಕಂದಾಯ ವಿಭಾಗಗಳಲ್ಲಿನ ಪ್ರಾದೇಶಿಕ ಆಯುಕ್ತರ (ಆರ್​ಸಿ) ಕಚೇರಿ ಮುಂದುವರಿಸುವ ಔಚಿತ್ಯವೂ ಮತ್ತೆ ಪ್ರಸ್ತಾಪವಾಗಿದೆ. 4 ಪ್ರಾದೇಶಿಕ ಅಯುಕ್ತರ ಕಚೇರಿಗಳನ್ನು ಮುಚ್ಚಿದರೆ ಒಟ್ಟು ಮಂಜೂರಾದ 549 ಅಧಿಕಾರಿ, ಸಿಬ್ಬಂದಿ ಹುದ್ದೆಗಳು ಕಂದಾಯ ಇಲಾಖೆಯಲ್ಲಿ ವಿಲೀನವಾಗಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
