ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ದೂರದ ಊರುಗಳ ಜನರಿಂದ ಬಂದ ಪ್ರಶ್ನೆಗಳಿಗೆ ಉತ್ತರ ಮಾತ್ರವಲ್ಲದೆ, ತಕ್ಷಣವೇ ಸಮಸ್ಯೆಗಳಿಗೆ ಪರಿಹಾರ ಸೂಚನೆ. ಇದು ಆಹಾರ ಸಚಿವ ಕೆ.ಗೋಪಾಲಯ್ಯ ಕಾರ್ಯಶೈಲಿ. ಬೆಂಗಳೂರಿನ ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು, ಜನರ ಪ್ರಶ್ನೆಗಳಿಗೆ ಶಾಂತಚಿತ್ತವಾಗಿ ಉತ್ತರಿಸಿದರು. ಅಲ್ಲದೆ, ಕೆಲ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸ್ಪಂದಿಸುವಂತೆ ಸೂಚಿಸುತ್ತಿದ್ದರು. ಹಾಗಾದರೆ, ಹೇಗಿತ್ತು ಆ ಪ್ರಶ್ನೆಗಳು? ಅದಕ್ಕೆಬಂದ ಉತ್ತರಗಳೇನು? ಎಂಬ ಸಂಪೂರ್ಣ ವಿವರ ಇಲ್ಲಿದೆ.
ಸಮಸ್ಯೆಗಳ ಅರಿವಿದೆ
ಅಂಗವಿಕಲರು, ವೃದ್ಧರು ಅಥವಾ ಆರೋಗ್ಯ ಸಮಸ್ಯೆ ಎದುರಿಸುತ್ತಿರುವರಿಗೆ ಚಿಕಿತ್ಸೆಗೆ ಕರೆದೊಯ್ಯಲು ಹಳೆಯ ಕಾರು ಇಟ್ಟುಕೊಂಡ ಕುಟುಂಬಗಳು ಪಡಿತರ ಪಡೆಯಲು ಅರ್ಹರಿದ್ದರೂ ಅವಕಾಶ ವಂಚಿತರಾಗುತ್ತಿರುವ ಸಮಸ್ಯೆಯ ಬಗ್ಗೆ ಅರಿವಿದೆ. ಆದರೆ, ಅವರಿಗೆ ನೆರವಾಗಲು ನಿಯಮಗಳು ಅಡ್ಡಿಯಾಗುತ್ತಿವೆ. ಇದನ್ನು ಪರಿಹರಿಸುವುದು ನಮ್ಮ ಆದ್ಯತೆಯಲ್ಲೊಂದು. ಪಡಿತರ ವಿತರಕರ ಅನೇಕ ಬೇಡಿಕಗಳ ಬಗ್ಗೆ ಅರಿವಿದೆ, ಕರೊನಾ ತಗ್ಗಿದ ನಂತರ ಅದನ್ನು ಬಗೆಹರಿಸಲು ಆದ್ಯತೆ ಮೇಲೆ ಕ್ರಮಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಶೇ.50 ಖಾಲಿ ಹುದ್ದೆಗಳಿದ್ದು ಅವುಗಳನ್ನು ಹಂತಹಂತವಾಗಿ ತುಂಬಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇನ್ನೂ ಮೂರು ತಿಂಗಳು ಉಚಿತ ಪಡಿತರ ಕೊಡಿ
ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪಡಿತರ ಕಾರ್ಡದಾರರಿಗೆ ಹೆಚ್ಚುವರಿಯಾಗಿ ಪಡಿತರ ನೀಡಿದ್ದು, ಅದನ್ನು ಇನ್ನೂ ಮೂರು ತಿಂಗಳು ಮುಂದುವರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಸಚಿವ ಗೋಪಾಲಯ್ಯ ಹೇಳಿದರು. ಕೇಂದ್ರದ ಆಹಾರ ಸಚಿವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಈ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ ಗೋಪಾಲಯ್ಯ, ಕಷ್ಟದಲ್ಲಿರುವವರಿಗೆ ಈ ತೀರ್ವನದಿಂದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಾನು ಗೋಪಾಲಯ್ಯ ಮಾತನಾಡುತ್ತಿದ್ದೇನೆ…
ಪೋನ್ ಕರೆ ಸ್ವೀಕರಿಸುತ್ತಲೇ ಜನರ ಅಹವಾಲಿಗೆ ಧ್ವನಿಯಾಗುತ್ತಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ಕೂಡಲೆ ಅಧಿಕಾರಿಗಳಿಗೆ ಸೂಚನೆ ನೀಡಿ, ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡುತ್ತಿದ್ದರು. ಕರೆ ಮಾಡಿದವರ ಪೋನ್ ನಂಬರ್ ಪಡೆದು ಅವರಿಗೆ ಮಾಹಿತಿ ನೀಡುವುದಾಗಿ ತಿಳಿಸುತ್ತಿದ್ದರು. ಇದು ಗೋಪಾಲಯ್ಯ ಕಾರ್ಯವೈಖರಿಯ ಸ್ಟೈಲ್. ಬೆಂಗಳೂರಿನ ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪೋನ್-ಇನ್ ಕಾರ್ಯಕ್ರಮದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಾಡಿನ ಮೂಲೆ ಮೂಲೆಗಳಿಂದ ಬಂದ ಕರೆಗಳಿಗೆ ಬಿಡುವಿಲ್ಲದೆ ಉತ್ತರಿಸಿದ ಸಚಿವರು, ಮಾಹಿತಿಗಳಿಗಾಗಿ ಒಂದು ಕ್ಷಣವೂ ತಡಕಾಡಲಿಲ್ಲ. ಅಧಿಕಾರಿಗಳನ್ನು ಅವಲಂಬಿಸಲಿಲ್ಲ. ಗ್ರಾಹಕರಿಗೆ, ಬಡಜನರಿಗೆ ಪ್ರತಿ ತಿಂಗಳ ಪಡಿತರ ಸರಿಯಾಗಿ ತಲುಪಬೇಕು ಎನ್ನುವ ಕಾಳಜಿ ವ್ಯಕ್ತಪಡಿಸುತ್ತಿದ್ದ ಅವರಲ್ಲಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದೇನೆಂಬ ಆತ್ಮವಿಶ್ವಾಸ ತುಂಬಿತ್ತು.
ಇದನ್ನೂ ಓದಿಟೆನಿಸ್ ತಾರೆ ಒಸಾಕಾ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು
ಸ್ಥಳದಲ್ಲಿಯೇ ಪರಿಹಾರ
ವರ್ಷದಿಂದ ಪಡಿತರ ನೀಡುತ್ತಿಲ್ಲ ಎಂದು ಮೈಸೂರಿನಿಂದ ಕರೆ ಮಾಡಿದ್ದ ಶ್ರೀಕಂಠಪ್ಪ, ಸೀಮೆಎಣ್ಣೆ ಕೊಟ್ಟಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆ ಬಿದರೆಯ ದೇವೇಂದ್ರ, ಯಾವಾಗ ಬಂದರೂ ನ್ಯಾಯಬೆಲೆ ಅಂಗಡಿಯವರು ಸಿಗುವುದಿಲ್ಲ, ಕಾರ್ಡಿನ ಅಕ್ಕಿಯನ್ನು ಕೊಟ್ಟಿಲ್ಲ ಎಂದು ಬೇಲೂರು ತಾಲೂಕು ನಾಗೇನಹಳ್ಳಿಯಿಂದ ಕರೆ ಮಾಡಿದ್ದ ರಾಮೇಗೌಡ ಅವರ ದೂರು ಮತ್ತು ಸಮಸ್ಯೆಗಳನ್ನು ಆಲಿಸಿದ ಸಚಿವರು, ಕೂಡಲೇ ಜಿಲ್ಲಾ ಆಹಾರ ಉಪನಿರ್ದೇಶಕರಿಗೆ ವರದಿ ನೀಡುವಂತೆ ಆದೇಶಿಸಿದರು. ಅಜ್ಜಿಗೆ ಅಂತ್ಯೋದಯ ಕಾರ್ಡಿದ್ದರೂ ಅದನ್ನು ಬಿಪಿಎಲ್ ಕಾರ್ಡ್​ಗೆ ಬದಲಿಸಲಾಗಿದೆ ಎಂಬ ದೂರು ಹಿನ್ನೆಲೆ ಕೂಡಲೆ ಅವರ ಕುಟುಂಬಕ್ಕೆ ಅಕ್ಕಿ ವಿತರಣೆ ಮಾಡಿ, ಕಾರ್ಡ್ ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಜಿಲ್ಲಾ ಆಹಾರ ಉಪನಿರ್ದೇಶಕರಿಗೆ ತಿಳಿಸಿದರು. ಈ ರೀತಿಯ ಕರೆಗಳು ಒಂದೆರಡಲ್ಲ. ಅತ್ತಲಿಂದ ಬಂದ ಸಮಸ್ಯೆಗಳಿಗೆಲ್ಲ ಇತ್ತಲಿಂದ ಪರಿಹಾರ ಕ್ರಮಗಳನ್ನು ಸ್ಥಳದಲ್ಲಿಯೇ ತೆಗೆದುಕೊಂಡ ಸಚಿವರು, ಯಾವುದೇ ಸಮಸ್ಯೆಗಳಿದ್ದರೆ, ನನ್ನ ಮೊಬೈಲ್​ಗೆ ಕರೆ ಮಾಡಿ ಎಂದು ಅವರದ್ದೇ ನಂಬರ್ ನೀಡಿದರು.
4.37 ಕೋಟಿ ಜನರಿಗೆ ಪಡಿತರ
ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡಿಗೆ ಅರ್ಜಿ ಸಲ್ಲಿಸಿದ 1.88 ಲಕ್ಷ ಜನರು ಸೇರಿ ಒಟ್ಟು ಲಾಕ್​ಡೌನ್ ಸಂದರ್ಭದಲ್ಲಿ 4.37 ಕೋಟಿ ಜನರಿಗೆ ಪಡಿತರ ವಿತರಣೆಯಾಗಿದೆ. ಈ ಹಿಂದೆ ಶೇ.85.86 ಕಾರ್ಡದಾರರು ಪಡಿತರ ಪಡೆದುಕೊಳ್ಳುತ್ತಿದ್ದರು. ಲಾಕ್​ಡೌನ್ ಸಂದರ್ಭದಲ್ಲಿ ಶೇ.94 ಮಂದಿ ಆಹಾರ ಧಾನ್ಯ ಪಡೆದುಕೊಂಡಿದ್ದಾರೆ ಎಂದು ಸಚಿವರು ವಿವರಿಸಿದರು.
ಮೋದಿ, ಬಿಎಸ್​ವೈ ಆಶಯದಂತೆ ಜನಸೇವೆ
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಶಯದಂತೆ ಒಂದು ದೇಶ ಒಂದು ಕಾರ್ಡ್ ವ್ಯವಸ್ಥೆ ಜಾರಿಗೂ ಅಗತ್ಯ ಕ್ರಮವಹಿಸಲಾಗುತ್ತಿದ್ದು, ಇದರಿಂದ ಬೇಡಿಕೆ, ಪೂರೈಕೆ ಹಾಗೂ ಹಂಚಿಕೆಯು ಪಾರದರ್ಶಕವಾಗಿ ಪ್ರತಿಯೊಬ್ಬ ಅರ್ಹರಿಗೂ ನ್ಯಾಯಯುತ ಪಾಲು ದಕ್ಕಲಿದೆ. ದೇಶದ ಯಾವುದೇ ಮೂಲೆಯಲ್ಲಿ ಪಡಿತರ ಪಡೆದರೂ ತಕ್ಷಣ ಗೊತ್ತಾಗಲಿದ್ದು, ದುರ್ಬಳಕೆಗೆ ಅವಕಾಶವಿರುವುದಿಲ್ಲ. ಪಡಿತರ ಚೀಟಿ ಉಳ್ಳವರ ಕೋರಿಕೆಯಂತೆ ಪೊರ್ಟೆಬಿಲಿಟಿ ಸವಲತ್ತು ಒದಗಿಸಿದ್ದು, ರಾಜ್ಯದಲ್ಲಿ 7 ಲಕ್ಷ ಪಡಿತರ ಚೀಟಿದಾರರು ಈ ಸವಲತ್ತು ಉಪಯೋಗಿಸಿಕೊಂಡಿದ್ದಾರೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಪಡೆದು ಪಡಿತರ ವಿತರಿಸಲಾಗುತ್ತಿದೆ.
ಭೀಮನಗೌಡ ಬೆಳಗಾವಿ
ನ್ಯಾಯಬೆಲೆ ಅಂಗಡಿಯಲ್ಲಿ ನಿಯಮ ಬಾಹಿರವಾಗಿ ಹಣ ಪಡೆಯುತ್ತಿದ್ದರೆ, ಜನರು ಮೊದಲು ಅದನ್ನು ಪ್ರಶ್ನಿಸಬೇಕು. ಅವರಿಗೆ ಹಣ ನೀಡಿ ಅಭ್ಯಾಸ ಮಾಡಿಸಿದ್ದರೆ, ಮತ್ತೆ ಮತ್ತೆ ಪಡೆಯುತ್ತಾರೆ. ನ್ಯಾಯಬೆಲೆ ಅಂಗಡಿಯವರು ಹಣ ಪಡೆದಿದ್ದು ದೃಢಪಟ್ಟರೆ ಕ್ರಮ ಕೈಗೊಳ್ಳಲಾಗುವುದು.
ಬೈಲಹೊಂಗಲದಿಂದ ಹುಬ್ಬಳ್ಳಿಗೆ ಮನೆ ಸ್ಥಳಾಂತರಿಸಲಾಗಿದೆ. 1 ವರ್ಷದಿಂದ ಪಡಿತರ ಪಡೆದಿಲ್ಲ. ಈಗ ಕೇಳಿದರೆ ಪಡಿತರ ಚೀಟಿ ಮಾನ್ಯವಿಲ್ಲ ಎನ್ನುತ್ತಿದ್ದಾರೆ…
ವಿಜಯಲಕ್ಷ್ಮೀ ಹಿರೇಮಠ ಹುಬ್ಬಳ್ಳಿ
1 ವರ್ಷದಿಂದ ಪಡಿತರ ಪಡೆದಿಲ್ಲ ಎಂದಾದರೆ ಪಡಿತರ ಚೀಟಿಯನ್ನು ರದ್ದು ಮಾಡಲಾಗಿರುತ್ತದೆ. ಮತ್ತೆ ಅರ್ಜಿ ಸಲ್ಲಿಸಿ, ಪಡಿತರ ಚೀಟಿ ಪಡೆಯಿರಿ.
ಈ ಹಿಂದೆ ಅನ್ನಪೂರ್ಣ ಆಹಾರ ಭಂಡಾರ ಹೆಸರಿನ ನ್ಯಾಯಬೆಲೆ ಅಂಗಡಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಪಡಿತರ ವಿತರಿಸಲಾಗುತ್ತಿತ್ತು. ಆದರೀಗ, ರದ್ದು ಮಾಡಲಾಗಿದೆ. ಅಲ್ಲದೆ, ಪಡಿತರ ಪಡೆಯಲು ಹಣ ನೀಡಬೇಕಾಗುತ್ತಿದೆ.
ಅಪ್ಪಣ್ಣ ತುಮಕೂರು
ನ್ಯಾಯಬೆಲೆ ಅಂಗಡಿಯವರು ಬಿಪಿಎಲ್ ಪಡಿತರ ಚೀಟಿದಾರ ರಿಂದ ಹಣ ಪಡೆಯುವಂತಿಲ್ಲ. ಹಾಗೆ ಪಡೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಜನಪ್ರತಿನಿಧಿಗಳ ಹಿಂಬಾಲಕರು ನ್ಯಾಯಬೆಲೆ ಅಂಗಡಿಗೆ ಬರುವ ಮತ್ತು ಗೋದಾಮಿನ ಪಡಿತರವನ್ನು ರಾಜಾರೋಷವಾಗಿ ಮಾರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
| ಸಿದ್ದರಾಮಗೌಡ ಗದಗ
ಇದು ನಿಜಕ್ಕೂ ಗಂಭೀರವಾದ ವಿಷಯ. ನ್ಯಾಯಬೆಲೆ ಅಂಗಡಿಯ ಪಡಿತರವನ್ನು ಪಡಿತರ ಚೀಟಿದಾರರಿಗೆ ಬಿಟ್ಟು, ಬೇರೆಯವರಿಗೆ ನೀಡುವಂತಿಲ್ಲ. ಈ ಬಗ್ಗೆ ಸೂಕ್ತ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ.
ಹಿಂದಿನ ಸಚಿವರು ಅಂಗವಿಕಲರು, ಹಿರಿಯ ನಾಗರಿಕರಿರುವ ಪಡಿತರ ಚೀಟಿದಾರರು ಕಾರು ಹೊಂದಿದ್ದರೂ, ಅವರಿಗೆ ಎಪಿಎಲ್ ಕಾರ್ಡ್ ನೀಡಲಾಗುತ್ತದೆಂದು ತಿಳಿಸಿದ್ದರು. ಇನ್ನೂ ಅನುಷ್ಠಾನಗೊಂಡಿಲ್ಲ.
| ಪ್ರಸಾದ್ ಉಡುಪಿ
ಕಾರಿದ್ದವರಿಗೆ ಎಪಿಎಲ್ ಪಡಿತರ ಚೀಟಿ ನೀಡಬಾರದು ಎಂಬುದು ಹಿಂದಿನ ಸರ್ಕಾರದ ನಿರ್ಧಾರ. ಅದನ್ನು ಬದಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ತಾಯಿ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿಯಿದೆ. ಕೇವಲ 180 ಚೀಟಿದಾರರಿಗೆ ಪಡಿತರ ನೀಡಲಷ್ಟೇ ಅವಕಾಶ ನೀಡಲಾಗಿದೆ. ಹೀಗಾಗಿ ಪಡಿತರ ಚೀಟಿದಾರರ ಸಂಖ್ಯೆ ಹೆಚ್ಚಿಸಿ.
| ವಿಜಯಕುಮಾರ್ ಮೊಳಕಾಲ್ಮೂರು
ಈ ಬಗ್ಗೆ ಅಧಿಕಾರಿಗಳ ಜತೆ ರ್ಚಚಿಸುತ್ತೇನೆ. ಪಕ್ಕದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿನ ಪಡಿತರ ಚೀಟಿದಾರರಲ್ಲಿ ಕೆಲವರನ್ನು ನಿಮ್ಮ ಅಂಗಡಿಗೆ ವರ್ಗಾಯಿಸಲು ಸೂಚಿಸುತ್ತೇನೆ.
ಅಕ್ಕಿ ಜತೆಗೆ ತೊಗರಿ ಬೇಳೆ ಕೊಡಲಾಗುತ್ತಿದೆ. ಅದರ ಬದಲು ಬೇರೆ ಕಾಳುಗಳನ್ನು ನೀಡಲು ಕ್ರಮ ಕೈಗೊಳ್ಳಿ.
| ಸಂಜೀವ್ ಪಾಟೀಲ್ ಚಿಕ್ಕೋಡಿ
ರೈತರು ಬೆಳೆಯುವ ಬೆಳೆಯನ್ನು ಖರೀದಿಸಿ ಅದನ್ನು ಜನರಿಗೆ ವಿತರಿಸಲಾಗುವುದು. ಆಯಾ ಪ್ರದೇಶದಲ್ಲಿ ಜನರು ಸೇವಿಸುವ ಆಹಾರ ಧಾನ್ಯ ನೀಡಲಾಗುವುದು.
ಮಾರ್ಚ್ ಮೊದಲ ವಾರ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೇನೆ. ಈವರೆಗೆ ಬಂದಿಲ್ಲ. ಆದರೂ, ಅರ್ಜಿ ಸಲ್ಲಿಸಿದ ರಶೀದಿಯನ್ನಾಧರಿಸಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಉಳಿದ ಪಡಿತರ ಕೊಡುತ್ತಿಲ್ಲ.| ಬದರಿನಾಥ್, ರಾಣೆಬೆನ್ನೂರು
ನಿಯಮದಂತೆ ಅಕ್ಕಿ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿ ಬೇರೆ ಪಡಿತರ ಕೊಡಲು ಬರುವುದಿಲ್ಲ. ಆದರೂ, ಬೇರೆ ಪಡಿತರ ವಿತರಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸುತ್ತೇನೆ.
ನಮ್ಮ ಅಜ್ಜಿಯ ಹೆಸರಿನಲ್ಲಿದ್ದ ಅಂತ್ಯೋದ್ಯಯ ಪಡಿತರ ಚೀಟಿಯನ್ನು ಬಿಪಿಎಲ್ ಆಗಿ ಪರಿವರ್ತಿಸಲಾಗಿದೆ. ಅವರಿಗೆ ಅದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ.| ಶಿವಕುಮಾರ್, ಚಾಮರಾಜನಗರ
ಆ ರೀತಿ ಆಗಲು ಸಾಧ್ಯವಿಲ್ಲ. ಆ ಬಗ್ಗೆ ಪರಿಶೀಲಿಸಲಾಗುವುದು. ಒಂದು ವೇಳೆ ಪಡಿತರ ಚೀಟಿ ಬದಲಾಗಿದ್ದರೆ, ಸರಿಪಡಿಸುತ್ತೇವೆ.
ಎಪಿಎಲ್ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ನೀಡಬೇಕು. ಆದರೆ, ನ್ಯಾಯಬೆಲೆ ಅಂಗಡಿಯಲ್ಲಿ ನೀಡದೆ ಅನ್ಯಾಯ ಮಾಡಲಾಗಿದೆ.| ರಾಘವೇಂದ್ರ, ಬೇಲೂರು
ಎಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಕೆಜಿ ಅಕ್ಕಿಗೆ 15 ರೂ. ಪಡೆದು 10 ಕೆಜಿ ನೀಡಬೇಕು. ಆ ರೀತಿ ಅಕ್ಕಿ ನೀಡದ ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಬಿಪಿಎಲ್ ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗಿಲ್ಲ ಎಂಬ ಕಾರಣಕ್ಕಾಗಿ ರದ್ದು ಮಾಡಲಾಗಿದೆ.| ದಿವ್ಯಾ, ಚಳ್ಳಕೆರೆಪಡಿತರ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯ. ಒಂದು ವೇಳೆ ರದ್ದಾಗಿದ್ದರೆ, ಮತ್ತೆ ಅರ್ಜಿ ಸಲ್ಲಿಸಿ ಪಡೆಯಿರಿ.
ಉತ್ತರ ಪ್ರದೇಶದ ಮೂವರು ಆಹಾರವಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಅವರಿಗೆ ಪಡಿತರ ನೀಡಲು ಅಧಿಕಾರಿಗಳಿಗೆ ಸೂಚಿಸಿ.| ಕೃಷ್ಣಮೂರ್ತಿ, ನಂಜನಗೂಡು
ಅಗತ್ಯವಿರುವವರಿಗೆ ಪಡಿತರ ಕಿಟ್ ನೀಡಲು ಸೂಚಿಸಲಾಗುತ್ತದೆ. ಮೇ 26ರ ನಂತರ ನ್ಯಾಯಬೆಲೆ ಅಂಗಡಿಗೆ ಆಧಾರ್​ಕಾರ್ಡ್ ತೆಗೆದುಕೊಂಡು ಹೋದರೆ, ಅದರ ಆಧಾರದಲ್ಲಿ ಪಡಿತರ ನೀಡಲಾಗುವುದು.
ಪ್ ಕಳೆದ ತಿಂಗಳೂ ಪಡಿತರ ಪಡೆದಿಲ್ಲ. ಈ ತಿಂಗಳು ಪಡೆಯಲು ಹೋದರೆ, ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ.| ಸಂತೋಷ್, ಬಂಟ್ವಾಳ
ಯಾವುದೇ ನ್ಯಾಯಬೆಲೆ ಅಂಗಡಿಗಳು ಆ ರೀತಿ ಹೇಳುವಂತಿಲ್ಲ. ಕೂಡಲೆ ಪಡಿತರ ವಿತರಿಸುವಂತೆ ನ್ಯಾಯಬೆಲೆ ಅಂಗಡಿಗೆ ಸೂಚಿಸಲಾಗುವುದು.
2017ರಲ್ಲಿ ಒಮ್ಮೆ ಮತ್ತು 2019ರ ಡಿಸೆಂಬರ್​ನಲ್ಲಿ ಒಂದು ಬಾರಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಯಾವ ಅರ್ಜಿಗೂ ಇಲಾಖೆಯಿಂದ ಉತ್ತರ ಬಂದಿಲ್ಲ.| ಗಂಗಾಧರ್, ಜ್ಞಾನಭಾರತಿ
ಮಾರ್ಚ್ 10ರಿಂದ ಯಾರಿಗೂ ಪಡಿತರ ಚೀಟಿ ವಿತರಿಸಿಲ್ಲ. ಕರೊನಾ ಭೀತಿ ಕಡಿಮೆಯಾದ ನಂತರ ವಿತರಿಸಲಾಗುವುದು. ಆಗ ಮತ್ತೊಮ್ಮೆ ಅರ್ಜಿ ಸಲ್ಲಿಸಿ, ಪಡಿತರ ಚೀಟಿ ಪಡೆಯಿರಿ.
ಮನೆಯಲ್ಲಿ ಕಾರಿದೆ ಎಂಬ ಕಾರಣಕ್ಕಾಗಿ ಬಿಪಿಎಲ್ ಚೀಟಿಯನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ನಮ್ಮಲ್ಲಿ ಕಾರಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ.| ರಾಮಕೃಷ್ಣ, ಕುಂದಾಪುರ
ಈ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಇನ್ನೊಂದು ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಾಗುವುದು.
2013ರಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಈವರೆಗೆ ಪಡಿತರ ಚೀಟಿ ಬಂದಿಲ್ಲ.| ಶಂಕರ ಪಾಟೀಲ್, ಜಾಲಹಳ್ಳಿ
ಈಗ ಅದು ಮಾನ್ಯವಾಗಿರುವುದಿಲ್ಲ. 15 ದಿನಗಳ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಪಡೆಯಿರಿ.
ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು ಪಡೆಯಲಾಗುತ್ತಿದೆ. ಕರೊನಾ ಭೀತಿ ಇದ್ದರೂ ಈ ರೀತಿ ಮಾಡಲಾಗುತ್ತಿದೆ.| ದೇವೇಂದ್ರ, ಚಿಕ್ಕಮಗಳೂರುಬೆರಳಚ್ಚು ಇಲ್ಲದೆ, ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಆಧರಿಸಿ ಪಡಿತರ ನೀಡುವಂತೆ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ. ಆದರೂ, ಬೆರಳಚ್ಚು ಪಡೆಯುತ್ತಿರುವ ಕುರಿತು ಪರಿಶೀಲಿಸಿ ಅದನ್ನು ರದ್ದು ಮಾಡಲು ಸೂಚಿಸಲಾಗುವುದು.
ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಒಂದು ವರ್ಷವಾಗುತ್ತಿದೆ. ಈವರೆಗೆ ಬಂದಿಲ್ಲ.| ಶಾಂತಾರಾಮ್ ಗಾಂಧಿನಗರ, ಬೆಂಗಳೂರು
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಬಹಳ ಸಮಯವಾಗಿದೆ. ಹೀಗಾಗಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿ.
ಪಡಿತರ ಚೀಟಿ ಹೊಂದಿದ್ದರೂ. 1 ವರ್ಷದಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ನಿಮಗೆ ನೀಡಲು ಬರುವುದಿಲ್ಲ ಎಂದುತ್ತರಿಸುತ್ತಾರೆ.| ಶ್ರೀಕಂಠಪ್ಪ, ಮೈಸೂರುಯಾವುದೇ ನ್ಯಾಯಬೆಲೆ ಅಂಗಡಿ ಪಡಿತರ ನೀಡುವುದಿಲ್ಲ ಎಂದು ಹೇಳುವಂತಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.
ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ರೈಲ್ವೆ ಟಾನಿಕ್​, ಊರಿಗೆ ಹೊರಟ ಕಾರ್ಮಿಕರ ಮಕ್ಕಳಿಗೆ ಗಿಫ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 13 =
Remember me
