ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ದೂರುಗಳ ಬುಟ್ಟಿಯನ್ನೇ ಹೊತ್ತು ಅತೃಪ್ತರಿಬ್ಬರು ಹೊಸದಿಲ್ಲಿಗೆ ತೆರಳಿದ್ದರು. ಆದರೆ, ವರಿಷ್ಠರನ್ನು ಭೇಟಿಯಾಗುವ ಇವರಿಬ್ಬರ ಪ್ರಯತ್ನ ವಿಫಲವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ದೂರು ನೀಡಲೆಂದು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಬಿಎಸ್​ವೈ ಮಾಜಿ ಆಪ್ತ
ಸಹಾಯಕ ಸಂತೋಷ್ ತೆರಳಿದ್ದರು. ವರಿಷ್ಠರ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲವಾದರೂ, ರಾಜ್ಯ ನಾಯಕರ ಜತೆ ರ್ಚಚಿಸಿ ಅಗತ್ಯಬಿದ್ದರೆ ಕರೆಯಿಸಿಕೊಳ್ಳುತ್ತೇವೆ ಎಂಬ ಸಮಾಧಾನಕರ ಸಂದೇಶ ಪಡೆದಿದ್ದಾರೆ ಎಂದು ಪಕ್ಷದ ಕೆಲವರು ಹೇಳುತ್ತಿದ್ದಾರೆ. ಉನ್ನತ ಮೂಲಗಳ ಪ್ರಕಾರ, ಪಕ್ಷ ಇಂತಹ ಭಿನ್ನಮತಕ್ಕೆ ಸೊಪ್ಪು ಹಾಕಿಲ್ಲ ಎಂದೇ ಹೇಳಲಾಗುತ್ತಿದೆ. ಮಂತ್ರಿ ಸ್ಥಾನ ವಂಚಿತರಾಗಿದ್ದಕ್ಕೆ ಸಿ.ಪಿ.ಯೋಗೇಶ್ವರ್ ಬೇಗುದಿ ಹೆಚ್ಚಿಸಿದ್ದರೆ, ಬಿಎಸ್​ವೈ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲವೆಂದು ಸಂತೋಷ್ ಅಸಮಾಧಾನಿತರಾಗಿದ್ದಾರೆ. ಪಕ್ಷಕ್ಕಿಂತಲೂ ಸರ್ಕಾರಕ್ಕೆ ನಿಕಟವಾಗಬೇಕೆಂದು ವರಿಷ್ಠರ ಮೂಲಕ ಒತ್ತಡ ಹೇರುವ ಉದ್ದೇಶ ಈಡೇರಿಲ್ಲ.
ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಬಜೆಟ್​ನಲ್ಲಿ ಬೇಡಿಕೆಗಳನ್ನು ಈಡೇರಿಸದ ಕಾರಣ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಎಸ್​ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಿರುವುದು ಶಾಸಕರ ಮುನಿಸಿಗೆ ಕಾರಣ. ವರ್ಗಾವಣೆಯಿಂದ ಹಿಡಿದು ಇಲಾಖೆಗಳ ಪ್ರತಿಯೊಂದು ಕೆಲಸ, ಕಾರ್ಯದಲ್ಲೂ ಬಿಎಸ್​ವೈ ಪುತ್ರನದೇ ಕಾರುಬಾರು ಎಂದು ಬೇಸತ್ತ ಕೆಲವು ಶಾಸಕರು ಜೆಡಿಎಸ್-ಕಾಂಗ್ರೆಸ್ ಜತೆ ಸಂಪರ್ಕದಲ್ಲಿದ್ದಾರೆ.
ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತರುತ್ತಿದ್ದು, ಈ ಬೆಳವಣಿಗೆಯಿಂದ ಆಡಳಿತದ ಮೇಲೆ ಸಿಎಂ ನಿಯಂತ್ರಣವಿಲ್ಲದಂತೆ ಮಾಡಿದೆ ಎಂಬಿತ್ಯಾದಿ ದೂರುಗಳನ್ನು ವರಿಷ್ಠರ ಮುಂದಿಡಲು ಅಸಮಾಧಾನಿತ ಇಬ್ಬರು ಪ್ರಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಯೋಗೇಶ್ವರ್ ಅತೃಪ್ತಿ ಕುರಿತು ‘ಬಿಎಸ್​ವೈ ಸರ್ಕಾರ ಅಸ್ಥಿರಗೊಳಿಸಲು ಸಿಪಿವೈ ಅಡ್ಡದಾರಿ’ ಶೀರ್ಷಿಕೆಯಲ್ಲಿ ವಿಜಯವಾಣಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಭಿನ್ನಮತ ಒಪ್ಪದ ಹೈಕಮಾಂಡ್: ಬಿಜೆಪಿ ವರಿಷ್ಠರು ಸದ್ಯ ಭಿನ್ನಮತಕ್ಕೆ ಮಣೆ ಹಾಕುವ ಸ್ಥಿತಿಯಲ್ಲಿ ಇಲ್ಲ. ಸುಭದ್ರವಾಗಿರುವ ಸರ್ಕಾರ ಕಳೆದುಕೊಳ್ಳಲು ಹೈಕಮಾಂಡ್ ಮುಖಂಡರು ಸಿದ್ಧರಿಲ್ಲ. ಭಿನ್ನಮತಕ್ಕೆ ಪ್ರೋತ್ಸಾಹ ನೀಡಿದರೆ, ಸರ್ಕಾರದ ಭದ್ರತೆಗೆ ಧಕ್ಕೆ ಬರುತ್ತದೆ ಎಂಬುದನ್ನು ಷಾ, ಜೆ.ಪಿ.ನಡ್ಡಾ ಅರಿತಿದ್ದಾರೆ. ಆದ್ದರಿಂದಲೇ ರಾಜ್ಯದಲ್ಲಿ ಬೇರೆ ಯಾವುದೇ ಮುಖಂಡರು ಭಿನ್ನಮತ ಮಾಡುತ್ತಿರುವವರಿಗೆ ಬೆಂಬಲ ನೀಡಲೂ ಹಿಂದೇಟು ಹಾಕುತ್ತಿದ್ದಾರೆ. ಮುಂದಿನ 3 ವರ್ಷ ಸರ್ಕಾರ ಸುಭದ್ರವಾಗಿರಬೇಕು, ಆನಂತರ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ವರಿಷ್ಠರ ಉದ್ದೇಶವಾಗಿದೆ ಎಂದು ಮೂಲಗಳು ಹೇಳುತ್ತವೆ.
ನಿಕಟವರ್ತಿಗಳೇ ದೂರ
ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಬಿಎಸ್​ವೈಗೆ ಸಂತೋಷ್ ಮತ್ತು ಸಿಪಿವೈ ನಿಕಟವರ್ತಿಗಳಾಗಿದ್ದು, ಬಿಎಸ್​ವೈ ಸಿಎಂ ಆಗಿ 6 ತಿಂಗಳು ಕಳೆಯುವಷ್ಟರಲ್ಲಿ ಬದಲಾವಣೆಗಳಾಗಿವೆ. ಸಿಪಿವೈಗೆ ಸಚಿವಪಟ್ಟ ಕಟ್ಟಲು ಸಿಎಂ ಅಪೇಕ್ಷೆಯಿದ್ದರೂ ವರಿಷ್ಠರು ಒಪ್ಪಿಗೆ ಕೊಡದ ಕಾರಣ ಕೈಬಿಟ್ಟಿದ್ದರು. ಆದರೆ, ಆಪ್ತ ಸಹಾಯಕ
ಸಂತೋಷ್​ರನ್ನು ಬಿಎಸ್​ವೈ ದೂರವಿಟ್ಟ ಕಾರಣ ನಿಗೂಢ. ಯೋಗೇಶ್ವರ್ ಸಂಪುಟ ಸೇರ್ಪಡೆಯನ್ನು ಮುರುಗೇಶ ನಿರಾಣಿ, ರಾಜೂಗೌಡ, ರೇಣುಕಾಚಾರ್ಯ ಇನ್ನಿತರರು ಬಹಿರಂಗವಾಗಿ ವಿರೋಧಿಸಿದ್ದರು. ಜತೆಗೆ ಪ್ರತ್ಯೇಕ ಸಭೆ ಮಾಡಿದ್ದರಿಂದ ಬಿಎಸ್​ವೈ ಹಿಂದೇಟು ಹಾಕುವಂತೆ ಮಾಡಿತು.
ಅಲ್ಲದೆ ಹೊಸ ಶಾಸಕರನ್ನು ಬಿಟ್ಟು ಬೇರೆ ಯಾರನ್ನೂ ಸಂಪುಟಕ್ಕೆ ತೆಗೆದುಕೊಳ್ಳದಂತೆ ವರಿಷ್ಠರು ಸೂಚಿಸಿದ್ದರು. ಹೀಗಾಗಿ ಇತ್ತೀಚಿನ ಸಂಪುಟ ವಿಸ್ತರಣೆಯಲ್ಲಿ ಸಿಪಿವೈ ಮಂತ್ರಿ ಪದವಿ ವಂಚಿತರಾದರು. ಸಮ್ಮಿಶ್ರ ಸರ್ಕಾರ ಪತನದಲ್ಲಿ ಸಿಪಿವೈ, ಸಂತೋಷ್ ಪ್ರಮುಖಪಾತ್ರ ವಹಿಸಿದ್ದರು. ಬಂಡೆದ್ದ ಶಾಸಕರು ರಾಜೀನಾಮೆ ಕೊಟ್ಟ ನಂತರ ಕರೆತರುವುದು, ವಿಮಾನ ಹತ್ತಿಸುವುದು, ವರಿಷ್ಠರ ಜತೆ ಸಂಪರ್ಕ ಬೆಸೆಯುವುದರಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದರು.
ಅನಾಮಧೇಯ ಪತ್ರ
ಯಡಿಯೂರಪ್ಪ ಹಾಗೂ ವಿಜಯೇಂದ್ರ ಕುರಿತಂತೆ ಕೆಲ ದಿನಗಳ ಹಿಂದೆ ಅನಾಮಧೇಯ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಪತ್ರದ ರೂವಾರಿಗಳು ಇವರಿಬ್ಬರು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದವು. ಮತ್ತೊಂದು ಪತ್ರ ಸಹ ಹೊರಬೀಳಲಿದೆ ಎಂದೇ ಹೇಳಲಾಗುತ್ತಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + sixteen =
Remember me
