ಬೆಂಗಳೂರು:ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಅಸ್ಪೃಶ್ಯತೆ ‘ಇದೆ- ಇಲ್ಲ’ಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ಶಾಸಕರ ನಡುವೆ ವಾಗ್ಯುದ್ಧಗಳೂ ನಡೆದುಹೋದವು.
ವಿಧಾನಸಭೆಯಲ್ಲಿ ಶುಕ್ರವಾರ ಬಿಎಸ್​ಪಿಯ ಎನ್.ಮಹೇಶ್, ಸಮಾಜದಲ್ಲಿ ಬದಲಾದ ಸ್ವರೂಪದ ಅಸ್ಪೃ್ಯತೆ ಇರುವಿಕೆ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಹಲವು ಶಾಸಕರು ತಂತಮ್ಮ ಅಭಿಪ್ರಾಯ ಹೇಳಿಕೊಂಡರು. ಕಾಂಗ್ರೆಸ್​ನ ಡಾ.ರಂಗನಾಥ್ ಮಾತನಾಡಿ, ಕಾಲ ಬದಲಾಗಿದೆ, ಈಗಿನ ಪೀಳಿಗೆಯಲ್ಲಿ ಆ ರೀತಿ ಭಾವನೆ ಕಡಿಮೆ ಇದೆ ಎಂದು ವೈದ್ಯಕೀಯ ಕ್ಷೇತ್ರದ ಉದಾಹರಣೆ ಸಹಿತ ವಿವರಿಸಿದರು.
ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್​ನ ಜೆ.ಎನ್.ಗಣೇಶ್, ಈಗಲೂ ಹೋಟೆಲ್​ಗಳಲ್ಲಿ ಪ್ರತ್ಯೇಕ ಲೋಟದ ವ್ಯವಸ್ಥೆ ಇರುವುದರ ಗಮನ ಸೆಳೆದರು. ಆದರೆ, ಇವರ ಮಾತಿಗೆ ಜೆಡಿಎಸ್​ನ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ಅಂಥದ್ದೆಲ್ಲ ಇಲ್ಲ. ಸುಮ್ಮನೆ ಏನೇನೋ ಹೇಳಬೇಡಿ ಎಂದರು.
ಅಲ್ಲಿಂದ ಮಾತಿನ ಸಮರ ಶುರುವಾಯಿತು. ಒಬ್ಬರು ಪುತ್ರನಿಗೆ ಮೆಡಿಕಲ್ ಕಾಲೇಜಿನಲ್ಲಿ ಸಹಪಾಠಿಯಿಂದಾದ ಸಂಕಟ ವಿವರಿಸಿದರೆ, ಮತ್ತೊಬ್ಬರು ತಮ್ಮ ಕ್ಷೇತ್ರದ ದೇವಸ್ಥಾನದ ಉದಾಹರಣೆ ನೀಡಿದರು. ಎನ್.ಮಹೇಶ್ ಮಾತು ಮುಂದುವರಿಸಿ, ಪರಿಸ್ಥಿತಿ ಮುಂಚಿನಂತೆ ಇಲ್ಲ. ಹಿಂದೆ ನನ್ನನ್ನು ಏನ್ಲಾ ಎಂದು ಮಾತನಾಡಿಸುತ್ತಿದ್ದವರು, ಇಂದು ಏನು ಸ್ವಾಮಿ ಎಂದು ಮಾತನಾಡಿಸುತ್ತಾರೆ. ಅಷ್ಟಂತೂ ಬದಲಾವಣೆ ಆಗಿದೆ.
ಅಸ್ಪೃ್ಯತೆ ಸ್ವರೂಪ ಬದಲಾಗಿದೆ ಎಂದು ಹೇಳಿದರು. ಇಂದಿಗೂ ದೇಶದ ಶೇ.70 ಹಳ್ಳಿಗಳಲ್ಲಿ ಅಸ್ಪೃ್ಯತೆಯು ಪರೋಕ್ಷ ಮತ್ತು ಅಪರೋಕ್ಷವಾಗಿ ಜಾರಿಯಲ್ಲಿದೆ ಎಂದ ಅವರು, ಸಂವಿಧಾನದ ಪರಿಚ್ಛೇದ 17 ಅಸ್ಪೃ್ಯತೆ ಆಚರಣೆ ಕಾನೂನು ಬಾಹಿರ ಅಂತ ಉಲ್ಲೇಖವಿದೆ. ಆದರೆ ಅಸ್ಪೃ್ಯತೆ ಆಚರಣೆ ನಮ್ಮ ದೇಶದಲ್ಲಿ ಇನ್ನೂ ಆಚರಣೆಯಲ್ಲಿದೆ. ಈ ಪರಿಚ್ಛೇದದಲ್ಲಿ ಅಸ್ಪೃ್ಯತೆ ಆಚರಣೆ ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ನಾವು ಪ್ರಯತ್ನವನ್ನೇ ಮಾಡಿಲ್ಲ ಎಂದು ವಿಷಾದಿಸಿದರು.
ಮರಳು ನೀತಿ ಶೀಘ್ರ
ಹೊಸ ಮರಳು ನೀತಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಹೊಸ ಮರಳು ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಸಣ್ಣಪುಟ್ಟ ಮನೆ ಕಟ್ಟಿಕೊಳ್ಳುವವರು ಮರಳು ಸಾಗಣೆ ಮಾಡುವುದನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ, ಅಂತಹ ಸಂದರ್ಭದಲ್ಲಿ ಸೌಜನ್ಯದಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಎಲ್ಲ ಪತ್ರಕರ್ತರಿಗೂ ಮಾಸಾಶನ, ಪರಿಶೀಲಿಸಿ ಕ್ರಮ
ರಾಜ್ಯದಲ್ಲಿ ಪ್ರಸ್ತುತ ಪತ್ರಿಕೋದ್ಯಮದಲ್ಲಿ 25 ವರ್ಷ ಸೇವೆ ಸಲ್ಲಿಸಿರುವ, 60 ವರ್ಷ ವಯಸ್ಸಿನ ಪತ್ರಕರ್ತರಿಗೆ ಸರ್ಕಾರದಿಂದ 10 ಸಾವಿರ ರೂ. ಮಾಸಾಶನ ನೀಡಲಾಗುತ್ತಿದ್ದು, ಅದನ್ನು ಎಲ್ಲ ಪತ್ರಕರ್ತರಿಗೂ ವಿಸ್ತರಿಸುವ ಕುರಿತು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಪರಿಷತ್​ನಲ್ಲಿ ಕಾಂಗ್ರೆಸ್​ನ ಯು.ಬಿ.ವೆಂಕಟೇಶ್ ಶೂನ್ಯವೇಳೆ ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಸಿಎಂ, ಪತ್ರಿಕೋದ್ಯಮದಲ್ಲಿ 25 ವರ್ಷ ಸೇವೆ ಪೂರ್ಣಗೊಳಿಸಿ ವಾರ್ಷಿಕ 1.2 ಲಕ್ಷ ರೂ. ಆದಾಯ ಮತ್ತು 2 ಲಕ್ಷ ರೂ.ಗಿಂತ ಕಡಿಮೆ ಉಪದಾನವಿರುವ ಹಿರಿಯ ಪತ್ರಕರ್ತರಿಗೆ ಮಾಸಾಶನ ನೀಡಲಾಗುತ್ತಿದೆ.
ಅದೇ ರೀತಿ ಪತ್ರಕರ್ತರು ಮೃತರಾದಲ್ಲಿ, ಅವರ ಅವಲಂಬಿತ ಪತ್ನಿ ಅಥವಾ ಪತಿಗೆ 3 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಸದ್ಯ ಸಂಕಷ್ಟದಲ್ಲಿರುವ 230 ಪತ್ರಕರ್ತರು ಮತ್ತು 16 ಮಂದಿ ಕುಟುಂಬದವರಿಗೆ ಮಾಸಾಶನ ನೀಡಲಾಗುತ್ತಿದೆ. ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುವ ಎಲ್ಲ ಪತ್ರಕರ್ತರಿಗೂ ಈ ಸವಲತ್ತು ವಿಸ್ತರಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಮಹಿಳಾ ಪ್ರಾತಿನಿಧ್ಯ ಬೇಕು
ಪುರುಷರಿಗೆ ಸರಿಸಮನಾಗಿ ಮಹಿಳಾ ಜನಸಂಖ್ಯೆ ಇದ್ದರೂ ಬೆರಳೆಣಿಕೆ ಜನಪ್ರತಿನಿಧಿಗಳು ಆಯ್ಕೆಯಾಗಿ ಬರೋದು ಸಾಲುವುದಿಲ್ಲ. ಇನ್ನಷ್ಟು ಮಹಿಳೆಯರು ಚುನಾವಣೆಯಲ್ಲಿ ಗೆದ್ದು ಬರುವಂತೆ ಆಗಬೇಕು. ಇಂದಿಗೂ ಮಹಿಳೆಯರ ಮೇಲಿನ ಶೋಷಣೆ ಕಡಿಮೆಯಾಗಿಲ್ಲ ಎಂದು ಕಾಂಗ್ರೆಸ್​ನ ಲಕ್ಷಿ್ಮೕ ಹೆಬ್ಬಾಳ್ಕರ್ ಹೇಳಿದರು. ರಾಜ್ಯದ ಜನಸಂಖ್ಯೆ 7 ಕೋಟಿ ಇದೆ. 3.5 ಕೋಟಿಯಷ್ಟು ಮಹಿಳೆಯರಿದ್ದೇವೆ. ಆದರಿಲ್ಲಿ, ಎಷ್ಟು ಶಾಸಕಿಯರಿದ್ದೇವೆ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಪ್ರಧಾನಿಯಾಗಬೇಕಿತ್ತು?
ದೇಶದಲ್ಲಿ ಇಬ್ಬರು ಗಾಂಧಿಗಳಿಗೆ ಮಾತ್ರ ಮಹತ್ವ ನೀಡಲಾಗಿದೆ. ಒಂದು ಮಹಾತ್ಮ ಗಾಂಧಿ, ಇನ್ನೊಂದು ಈಗಿನ ಗಾಂಧಿ ಪರಿವಾರ. ಉಳಿದೆಲ್ಲ ಹೋರಾಟಗಾರರ ಸ್ಮರಣೆಯೇ ಇಲ್ಲ ಎಂದು ಬಸನಗೌಡ ಯತ್ನಾಳ್ ಕುಟುಕಿದರು. ವಿಧಾನಸಭೆಯಲ್ಲಿ ಸಂವಿಧಾನ ಚರ್ಚೆಯಲ್ಲಿ ಮಾತನಾಡಿ, ಅಂಬೇಡ್ಕರ್ ಜಗತ್ತಿನ ಅತ್ಯುತ್ತಮ ಅರ್ಥಶಾಸ್ತ್ರಜ್ಞ, ಇದನ್ನು ನೆಹರೂ ಮನಗಾಣಲಿಲ್ಲ. ಬಳಿಕ ಅಂಬೇಡ್ಕರ್​ರನ್ನು ಚುನಾವಣೆಯಲ್ಲೂ ಸೋಲಿಸಿ ಸಂಚು ಮಾಡಲಾಯಿತು. ಅವರ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ.
ಬಹಳ ವರ್ಷ ಸಂಸತ್​ನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿರಲಿಲ್ಲ, ಇಂಥ ಉದಾತ್ತ ನಾಯಕನಿಗೆ ಮಾಡಿದ ಅಪಮಾನಗಳಿವು ಎಂದು ಬೇಸರಿಸಿದರು. ಅಂಬೇಡ್ಕರ್ ದೇಶದ ಪ್ರಧಾನಿಯಾಗಬೇಕಿತ್ತು. ಬೌದ್ಧ ಧರ್ಮ ಸ್ವೀಕರಿಸಿದ ಹಿನ್ನೆಲೆ ಅವರಿಗೆ ಈ ಅವಕಾಶ ಸಿಗಲಿಲ್ಲ ಎಂದು ಅಭಿಪ್ರಾಯಪಟ್ಟರಲ್ಲದೆ, ನಾನು ಹಿಂದು ಆಗಿ ಸಾಯುವುದಿಲ್ಲ ಎಂದು ಅವರು ಹೇಳಬೇಕಾದರೆ ಮನಸ್ಸಿಗೆ ಎಷ್ಟು ನೋವಾಗಿರಬೇಡ, ಎಷ್ಟು ಕಿರುಕುಳ ನೀಡಿರಬಹುದು.
ಒಂದು ವೇಳೆ ಅಂಬೇಡ್ಕರ್ ಬೌದ್ಧ ಧರ್ಮದ ಬದಲು ಇಸ್ಲಾಂ ಸ್ವೀಕರಿಸಿದ್ದರೆ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಯತ್ನಾಳ್ ಪ್ರಶ್ನಿಸಿದರು. 1954 ಅ.3ರಂದು ಆಕಾಶವಾಣಿಯಲ್ಲಿ ಅಂಬೇಡ್ಕರ್ ಮಾತನಾಡಿದ್ದು, ಹಿಂದೂಗಳಿಗೆ ವೇದಗಳು ಬೇಕಾಗಿತ್ತು, ಅದನ್ನು ವ್ಯಾಸರಿಂದ ಬರೆಸಿದರು, ಮಹಾಭಾರತವನ್ನು ಕೆಳಜಾತಿಯವರಾದ ವಾಲ್ಮೀಕಿ ಬರೆದರು. ಇವರಿಗೆ ಸಂವಿಧಾನ ಬೇಕಿತ್ತು. ಅದಕ್ಕಾಗಿ ನನ್ನನ್ನು ಕರೆದರೆಂದು ಹೇಳಿದ್ದರು ಎಂದು ಯತ್ನಾಳ್ ತಿಳಿಸಿದಾಗ, ಮಹಾಭಾರತ ಬರೆದಿದ್ದು ವಾಲ್ಮೀಕಿ ಅಲ್ಲ ಎಂದು ಕೆಲ ಸದಸ್ಯರು ಆರೋಪಿಸಿದರು, ಬೇರೆಯವರೂ ಎಚ್ಚರಿಸಿದಾಗ, ಯತ್ನಾಳ್​ಗೆ ತಪ್ಪಿನ ಅರಿವಾಗಿ ವಾಲ್ಮೀಕಿ ರಾಮಾಯಣ ರಚಿಸಿದ್ದೆಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
