ಬೆಂಗಳೂರು:ಕರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಸರ್ಕಾರಕ್ಕೆ ಹೊಸ ತಂತ್ರಜ್ಞಾನ ಬಳಸಿ ಯಾವ ರೀತಿ ಜನರನ್ನು ಕಾಪಾಡಿಕೊಳ್ಳಬೇಕು ಹಾಗೂ ಹೆಲ್ತ್ ವಾರಿಯರ್​ಗಳನ್ನು ರಕ್ಷಿಸಿಕೊಳ್ಳಬಹುದು ಎಂಬ ಕುರಿತಂತೆ ಬೆಂಗಳೂರಿನ ತಂತ್ರಜ್ಞರು ಪ್ರಧಾನಿ ಹಾಗೂ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿ ಗಮನ ಸೆಳೆದಿದ್ದಾರೆ. ಮುಂದುವರಿದ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಮತ್ತು ನಮ್ಮ ಸರ್ಕಾರಿ ಸೇವೆಯಲ್ಲಿ ಬಳಕೆಯಲ್ಲಿರದ ಆಧುನಿಕ ತಂತ್ರಜ್ಞಾನವನ್ನು ಈ ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳುವುದು ಅನಿವಾರ್ಯ. ಆ ಸಾಮಗ್ರಿಗಳನ್ನು ಕೊರಿಯಾ, ಸಿಂಗಾಪುರದಿಂದ ತರಿಸಿಕೊಳ್ಳಬಹುದು. ಸರ್ಕಾರ ಇನ್ನೂ ಮುತುವರ್ಜಿ ವಹಿಸಿದರೆ ಇಲ್ಲೇ ತಕ್ಷಣಕ್ಕೇ ಉತ್ಪಾದಿಸಬಹುದು ಎಂದು ಐಟಿಐಇ ನಾಲೆಜ್ ಸಂಸ್ಥೆ ಸಂಸ್ಥಾಪಕ ಡಾ. ಸಂಜೀವ್ ಕುಬಕಡ್ಡಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಮುಂದಿರುವ ಮುಂದುವರಿದ ರಾಷ್ಟ್ರಗಳಲ್ಲಿ, ಅಡ್ವಾನ್ಸ್ ತರಬೇತಿ ಪಡೆದಿರುವ ವೈದ್ಯರು ಇದ್ದರೂ ಕರೊನಾ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಅಂಥದ್ದರಲ್ಲಿ ಭಾರತದಲ್ಲಿ ಜನ ಸಮುದಾಯಕ್ಕೆ ಸೋಂಕು ಹರಡಿದರೆ ನಿಯಂತ್ರಣ ಬಹಳ ಕಷ್ಟ. ಜನತೆ ಇನ್ನೂ ನಮಗೆ ಕರೊನಾ ಬರಲ್ಲ ಎಂದೇ ತಿರುಗುತ್ತಿದ್ದಾರೆ. ಇಂಥ ವೇಳೆ ಸರ್ಕಾರ ಈ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಮಾಡಿದ್ದಾರೆ. ಸ್ವತಃ ಪ್ರಧಾನಿಗೂ ವಿಷಯ ಮುಟ್ಟಿಸಿದ್ದಾರೆ.
ಹೊಸತು ಅವಕಾಶ: ಇಂಟರ್​ನೆಟ್ ಆಫ್ ಥಿಂಗ್ಸ್(ಐಒಟಿ) ಎಂಬುದು ನಮ್ಮ ನಿತ್ಯ ಜೀವನದಲ್ಲಿ ಈಗಾಗಲೇ ಬಳಕೆಯಲ್ಲಿದೆ. ಫಿಟ್​ಬಿಟ್ ವಾಚ್ ಒಂದು ಉದಾಹರಣೆ. ಅಂಥ ಒಂದಷ್ಟು ಉತ್ಪನ್ನಗಳು ಆರೋಗ್ಯ ಕ್ಷೇತ್ರದಲ್ಲಿ ಬಳಕೆಯಲ್ಲಿವೆ. ಕರೊನಾ ಸೋಂಕು ತಗುಲಿದವರನ್ನು ಆಗಿಂದಾಗ್ಯೆ ವಿವಿಧ ಪರೀಕ್ಷೆಗೊಳಪಡಿಸಬೇಕು. ಆಗ ವೈದ್ಯರು ಅಥವಾ ನರ್ಸ್ ರೋಗಿಗಳ ಸಮೀಪ ಹೋಗಬೇಕಾಗುತ್ತದೆ, ಇದು ಅಪಾಯಕಾರಿ. ನಮ್ಮಲ್ಲಿ ವೈದ್ಯರ ಕೊರತೆ ಇರುವಾಗ ಒಬ್ಬನೇ ಒಬ್ಬ ವೈದ್ಯರನ್ನೂ ಕಳೆದುಕೊಳ್ಳುವ ಸನ್ನಿವೇಶವಿಲ್ಲ. ಹೀಗಾಗಿ ಐಒಟಿ ತಂತ್ರಜ್ಞಾನ ಬಳಸಿ ವಿವಿಧ ಪ್ಯಾರಾಮೀಟರ್​ನ ರಿಮೋಟ್ ಮಾನಿಟರಿಂಗ್ ಮಾಡಲು ಅವಕಾಶವಿದೆ ಎಂಬುದು ಸಂಜೀವ್ ಅವರ ವಿವರಣೆ.
ಇಟಲಿಯಲ್ಲಿ ಈ ವರೆಗೆ 40 ಮಂದಿ ಫ್ರಂಟ್​ಲೈನ್ ವೈದ್ಯರೇ ಕರೊನಾಗೆ ಬಲಿಯಾಗಿದ್ದಾರೆ. ಸಹಜವಾಗಿ ವೈದ್ಯರು ಸೋಂಕಿತರ ಮುಂದೆ ಎಕ್ಸ್​ಪೋಸ್ ಆಗಬೇಕಾಗುತ್ತದೆ. ಇದನ್ನುತಪ್ಪಿಸಲು ಟೆಕ್ನಾಲಜಿ ಬಳಸಿ ರೋಗಿಗಳನ್ನು ರಕ್ಷಿಸಬಹುದು. ಉದಾಹರಣೆಗೆ ರೆಸ್ಪಿರೇಷನ್, ಇಸಿಜಿ, ಟೆಂಪರೇಚರ್ ಪರೀಕ್ಷಿಸಲು ವೈದ್ಯರಾಗಲಿ, ನರ್ಸ್ ಗಳಾಗಲಿ ಸೋಂಕಿತರ ಬಳಿ ಪದೇಪದೆ ಹೋಗದೆ ಅಗತ್ಯ ಪ್ಯಾರಾಮೀಟರ್ ಗಮನಿಸಲು ಸಾಧ್ಯವಿದೆ. ಸಾಮಾನ್ಯವಾಗಿ ರೋಗಿಯ ದೇಹದ ಉಷ್ಣಾಂಶ ಪತ್ತೆಗೆ ಥರ್ವಮೀಟರ್ ಬಳಸಲಾಗುತ್ತದೆ. ಅದರ ಬದಲು, ಬ್ಲೂಟೂತ್, ವೈಫೈ ಸಾಧನ ಅಡಗಿರುವ ರಿಸ್ಟ್ ಬ್ಯಾಂಡ್ ಬಳಸಬಹುದು. ಬ್ಯಾಂಡ್ ನಿರಂತರವಾಗಿ ದೇಹದ ಉಷ್ಣಾಂಶದ ಮಾಹಿತಿ ಕಳಿಸುವುದರಿಂದ ದಾದಿಯರು ಪದೇಪದೆ ವಾರ್ಡ್​ಗೆ ಹೋಗುವುದನ್ನು ತಪ್ಪಿಸಬಹುದು. ಹೃದಯ ಬಡಿತ ತಪಾಸಣೆಗಾಗಿ ಇಸಿಜಿ ಪ್ಯಾಚ್ ರೋಗಿಯ ಎದೆ ಭಾಗಕ್ಕೆ ಹಾಕಿದಲ್ಲಿ ಅದೂ ಬ್ಲೂಟೂತ್ ಅಥವಾ ವೈಫೈ ಮೂಲಕ ವೈದ್ಯರ ಮೊಬೈಲ್​ಫೋನ್​ಗೆ ಸಂದೇಶ ಕಳಿಸುತ್ತದೆ. ಉಸಿರಾಟದ ರೇಟ್ ಗಮನಿಸುವುದು ಮುಖ್ಯ. ಅದಕ್ಕೂ ಬ್ಯಾಂಡ್ ಸಿಗಲಿದ್ದು, ಅದರಲ್ಲಿ ಸೆನ್ಸಾರ್ ಇದ್ದು ದಾಖಲೆ ಸಂಗ್ರಹಿಸುತ್ತದೆ.
ಕ್ಯಾಮರಾ ಬೇಸ್ ಎಕ್ಸ್ ರೇ: ಇನ್ನೊಂದು ಮುಖ್ಯವಾದ ಸಾಧನವೆಂದರೆ ಕ್ಯಾಮರಾ ಬೇಸ್ ಎಕ್ಸ್​ರೇ ಮಷಿನ್. ಸಾಮಾನ್ಯವಾಗಿ ಎಕ್ಸ್​ರೇ ಮಾಡಬೇಕಾದಾಗ ರೋಗಿಯನ್ನೇ ಎಕ್ಸ್​ರೇ ಕೊಠಡಿಗೆ ಕರೆದೊಯ್ಯಬೇಕಾಗುತ್ತದೆ. ಹತ್ತು ಮಂದಿ ಸೋಂಕಿತರು ಎಕ್ಸ್​ರೇ ಕೊಠಡಿಗೆ ಬಂದರೆ, ಎಕ್ಸ್​ರೇ ಕೊಠಡಿ ಮತ್ತು ಅವರು ಬಂದು ಹೋಗುವ ದಾರಿ ಕಂಟಾಮಿನೇಟ್ ಆಗುತ್ತದೆ. ಆದರೆ, ಈ ಪೋರ್ಟೆಬಲ್ ಸಾಧನ ಬಳಸಿದರೆ ರೋಗಿ ಇದ್ದಲ್ಲೇ ಎಕ್ಸ್​ರೇ ಸಾಧ್ಯ ಮತ್ತು ಆ ಕ್ಷಣದಲ್ಲೇ ವೈಫೈ ಮೂಲಕ ವರದಿ ಸಿಗುತ್ತದೆ. ಈ ರೀತಿ ಸಾಧನಗಳನ್ನು ಸರ್ಕಾರಿ ಆರೋಗ್ಯ ಸೇವೆಯಲ್ಲಿ ಬಳಸಿಕೊಳ್ಳಲು ಇದು ಸುಸಂದರ್ಭ. ಜನರ ಆರೋಗ್ಯವೂ ಸುಧಾರಿಸುತ್ತದೆ, ವೈದ್ಯರನ್ನೂ ರಕ್ಷಿಸಬಹುದು ಎಂಬ ಅಭಿಪ್ರಾಯ ನೀಡುವ ಸಂಜೀವ್, ಸರ್ಕಾರ ಈ ಕ್ಷಣದಲ್ಲಿ ಮನಸ್ಸು ಮಾಡಬೇಕಷ್ಟೆ ಎನ್ನುತ್ತಾರೆ.
ಇಡೀ ಬೆಂಗಳೂರಲ್ಲಿ ಒಟ್ಟು 700 ವೆಂಟಿಲೇಟರ್ ಲಭ್ಯವಿಲ್ಲ. ಮಹೀಂದ್ರ, ಮಾರುತಿ ಸುಜುಕಿಯಂಥ ಕಂಪನಿಗಳು ವೆಂಟಿಲೇಟರ್ ಮಾಡಿಕೊಡಲು ಮುಂದೆ ಬಂದಿವೆ. ಹಾಗೇ ಇಂಥ ತಂತ್ರಜ್ಞಾನ ಆಧಾರಿತ ಉಪಕರಣ ತಕ್ಷಣವೇ ಬೆಂಗಳೂರಲ್ಲಿ ಮಾಡಿಕೊಡಲು ಸಿದ್ಧವಿರು ವವರಿಗೆ ಅವಕಾಶ ನೀಡಿದರೂ ಆಪತ್ಕಾಲದಲ್ಲಿ ಸಹಾಯವಾಗುತ್ತದೆ ಎಂಬ ಅಭಿಪ್ರಾಯವಿದೆ.
ಐಒಟಿ ತಂತ್ರಜ್ಞಾನ ಬಳಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಜಾಗೃತವಾಗಬೇಕು. ಇದರಿಂದ ನಾವು ರೋಗಿಗಳನ್ನು ಕಾಪಾಡಬಹುದು, ಹೆಲ್ತ್ ವಾರಿಯರ್​ಗಳನ್ನು ರಕ್ಷಿಸಿಕೊಳ್ಳಬಹುದು. ಇದನ್ನು ತಕ್ಷಣವೇ ಇಲ್ಲೇ ಉತ್ಪಾದಿಸಲೂ ಬಹುದು.
| ಡಾ.ಸಂಜೀವ್ ಕುಬಕಡ್ಡಿ ಐಟಿಐಇ ನಾಲೆಜ್ ಸಲ್ಯೂಷನ್
| ಶ್ರೀಕಾಂತ್ ಶೇಷಾದ್ರಿ
ಲಾಕ್‌ಡೌನ್ ಅವಧಿಯಲ್ಲಿ ಶುಚಿತ್ವ ವಸ್ತುಗಳ ಸಾಗಾಟಕ್ಕೂ ಅನುಮತಿ ನೀಡಿದ ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
