ಹುಬ್ಬಳ್ಳಿ:ಮಹದಾಯಿ ನದಿ ನೀರಿನಲ್ಲಿ ರಾಜ್ಯದ ಪಾಲನ್ನು ಸದ್ಬಳಕೆ ಮಾಡಿಕೊಳ್ಳಲು ಕಾಮಗಾರಿ ಪ್ರಾರಂಭಿಸುವುದಕ್ಕಾಗಿ ಶೀಘ್ರ ತಜ್ಞರ ಸಮಿತಿ ರಚಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಶುಕ್ರವಾರ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಯಾವ ಯೋಜನೆಗಳನ್ನು ತಕ್ಷಣ ಪ್ರಾರಂಭಿಸಬೇಕು ಹಾಗೂ ಯಾವ ಯೋಜನೆಗಳಿಗೆ ಪರಿಸರ ಇಲಾಖೆಯ ಅನುಮತಿ ಬೇಕೆಂಬುದನ್ನು ತಜ್ಞರ ಸಮಿತಿ ರ್ಚಚಿಸಿ, ಸಮರ್ಪಕ ಯೋಜನೆ ರೂಪಿಸಬೇಕು ಎಂದರು.
ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಹದಾಯಿ ಯೋಜನೆ ಜಾರಿಗೆ ಈ ಬಜೆಟ್​ನಲ್ಲಿ ಕನಿಷ್ಠ 400-500 ಕೋಟಿ ರೂ. ಮೀಸಲಿಡುವಂತೆ ಮನವಿ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕಳಸಾ-ಬಂಡೂರಿ ನಾಲಾ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು.
ಹೀಗಾಗಿ ಅವರಿಗೂ ಈ ಯೋಜನೆಯೊಂದಿಗೆ ಭಾವನಾತ್ಮಕ ಸಂಬಂಧ ಇದ್ದು, ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈ ಹಿಂದೆ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಭೇಟಿ ನೀಡಿದ್ದಾಗ ಮಹದಾಯಿ ವಿಷಯಕ್ಕೆ ರ್ತಾಕ ಅಂತ್ಯ ನೀಡುವ ಬಗ್ಗೆ ಮಾತನಾಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ನರ್ಮದಾ ವಿವಾದ ಬಗೆ ಹರಿದಿತ್ತು. ಇನ್ನೂ ಕೆಲ ಅಂತರ ರಾಜ್ಯ ನದಿಗಳ ವಿವಾದ ಬಗೆ ಹರಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಎಲ್ಲ ಕೆಲಸಗಳು ಮೋದಿಯವರು ಪ್ರಧಾನಿಯಾಗಿದ್ದಕ್ಕೆ ಸಾಧ್ಯವಾಯಿತು ಎಂದರು. ಮೇಕೆದಾಟು ಯೋಜನೆ ಬಗ್ಗೆಯೂ ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ರ್ಚಚಿಸಿದ್ದು, ಶೀಘ್ರ ಇತ್ಯರ್ಥ ಪಡಿಸಲಾಗುವುದು ಎಂದು ಹೇಳಿದರು.
ನದಿ ಜೋಡಣೆಗೆ ಬದ್ಧ
ದಿ. ಪ್ರಧಾನಿ ಎ.ಬಿ. ವಾಜಪೇಯಿ ಅವರ ನದಿಗಳ ಜೋಡಣೆ ಕನಸು ನನಸಾಗಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು. ಈಗಾಗಲೇ ಕೆಲ ರಾಜ್ಯಗಳ ನದಿ ಜೋಡಣೆ ಕಾರ್ಯ ನಡೆದಿದೆ. ಇನ್ನೂ ಕೆಲ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಅವುಗಳ ಮನವೊಲಿಸುವ ಪ್ರಯತ್ನ ಚಾಲ್ತಿಯಲ್ಲಿದೆ.
ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನದಿಗಳ ಜೋಡಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಏಕಕಾಲಕ್ಕೆ ನದಿಗಳ ಜೋಡಣೆ ಕಾರ್ಯ ಕೈಗೊಂಡಲ್ಲಿ ಬಹಳಷ್ಟು ಸಂಪನ್ಮೂಲಗಳು ಬೇಕಾಗು ತ್ತವೆ. ಹೀಗಾಗಿ ಹಂತ ಹಂತವಾಗಿ ಈ ಯೋಜನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉ.ಕ.ದಲ್ಲಿ ಮಹಾ ಹರ್ಷ
ಮಹದಾಯಿ ನದಿ ನೀರಿನಲ್ಲಿ ಕರ್ನಾಟಕದ ಪಾಲನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದ ಪ್ರಯುಕ್ತ ಶುಕ್ರವಾರ ಉತ್ತರ ಕರ್ನಾಟಕದ ವಿವಿಧೆಡೆ ಹರ್ಷಾಚರಣೆ ಮಾಡಲಾಯಿತು. ಸವೋಚ್ಚ ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದ ಪರ ಘೊಷಣೆ ಮೊಳಗಿಸಲಾಯಿತು. ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು, ರೈತರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಗುಲಾಲು ಎರಚಿ ಸಂಭ್ರಮಿಸಿದರು. ಉತ್ತರ ಕರ್ನಾಟಕದ ಕಳಸಾ ಬಂಡೂರಿ ಹೋರಾಟಗಾರರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪರಸ್ಪರ ಸಹಿ ಹಂಚಿ ಶುಕ್ರವಾರ ಸಂಭ್ರಮ ಪಟ್ಟರು.
1688 ದಿನಗಳಿಂದ ನಿರಂತರ ಧರಣಿ ನಡೆದಿರುವ ನರಗುಂದ ಪಟ್ಟಣದಲ್ಲಿ ಹೋರಾಟಗಾರರು ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಹದಾಯಿ ನದಿ ನೀರಿನ ಅಭಿಷೇಕ ಮಾಡಿ, ಪುರಸಭೆ ಆವರಣದಿಂದ ಹೋರಾಟದ ವೇದಿಕೆಯವರೆಗೆ ಪಟಾಕಿ ಸಿಡಿಸಿ, ಸಿಹಿ ಹಂಚುತ್ತ ವಿಜಯೋತ್ಸವ ಮೆರವಣಿಗೆ ನಡೆಸಿದರು.
ರೈತಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ, ವಿಶ್ವನಾಥ ಗುಡಿಸಾಗರ, ಫಕೀರಪ್ಪ ಜೋಗಣ್ಣವರ, ಮಲ್ಲಣ್ಣ ವಾಲೀಕಾರ ಮಾತನಾಡಿದರು. ಈ ವೇಳೆ, ಮಹದಾಯಿ ಹೋರಾಟದಲ್ಲಿ ಭಾಗಿಯಾಗಿ ಸಾವನ್ನಪ್ಪಿದ 11 ಜನ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹದಾಯಿಗಾಗಿ ಬಂಡಾಯವೇ ನಡೆದಿದ್ದ ನವಲಗುಂದದಲ್ಲಿಯೂ ರೈತ ಹೋರಾಟಗಾರರು, ವಿವಿಧ ಸಂಘಟನೆಯವರು ವಿಜಯೋತ್ಸವ ನಡೆಸಿ ಸಿಹಿ ಹಂಚಿದರು.
ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದಗಳನ್ನು ನ್ಯಾಯಾಧಿಕರಣ 18 ತಿಂಗಳಲ್ಲಿಯೇ ಮುಗಿಸುವಂತೆ ಕೇಂದ್ರ ಸರ್ಕಾರ ಕಾಯ್ದೆಯೊಂದನ್ನು ಜಾರಿಗೆ ತರಲಿದೆ. ಈಗಾಗಲೇ ಈ ಕಾಯ್ದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರಕಿದೆ. ಈ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿಯೂ ಅನುಮೋದನೆ ದೊರಕಿಸಲಾಗುವುದು. ನೂತನ ಕಾಯ್ದೆಯಡಿ ನ್ಯಾಯಾಧಿಕರಣ ವಿವಾದದ ವಿಚಾರಣೆಯನ್ನು ನಿತ್ಯ ನಡೆಸಬೇಕು. ಎಷ್ಟೇ ಜಟಿಲ ವಿಷಯವಾಗಿದ್ದರೂ 18 ತಿಂಗಳಲ್ಲಿ ತೀರ್ಪು ನೀಡಬೇಕಾಗುತ್ತದೆ.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮದಿನದಂದೇ ಮಹದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಗಿಫ್ಟ್ ನೀಡಿದೆ. ಹೋರಾಟ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
| ಸಿ.ಸಿ. ಪಾಟೀಲ ಸಚಿವ
ಮಹದಾಯಿ ವಿವಾದ ಬಿಜೆಪಿ ಸರ್ಕಾರದ ಅವಧಿ ಯಲ್ಲಿ ರ್ತಾಕ ಅಂತ್ಯ ಕಂಡಿದ್ದು, ರೈತ ನಾಯಕ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನದಂದು ಅಧಿಸೂಚನೆ ಹೊರಡಿಸಿರುವುದು ಸಂತಸದ ಸಂಗತಿ. ಮಲಪ್ರಭೆಗೆ ಮಹದಾಯಿ ನೀರು ಹರಿದು ಈ ಭಾಗದ ರೈತರ ಕನಸು ನನಸಾಗಲಿದೆ.
| ನಳಿನಕುಮಾರ ಕಟೀಲು ಬಿಜೆಪಿ ರಾಜ್ಯಾಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eighteen =
Remember me
