|ವಿಲಾಸ ಮೇಲಗಿರಿಬೆಂಗಳೂರು
ಕರೊನಾ ಲಸಿಕೆಯ ಗುಣಮಟ್ಟದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ರಾಜ್ಯಾದ್ಯಂತ 1.15 ಕೋಟಿ ಜಾನುವಾರುಗಳಿಗೆ ಹಾಕಿರುವ ಕಾಲುಬಾಯಿ ಜ್ವರದ ಲಸಿಕೆ ಕಳಪೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿವೆ. ಈ ಎಡವಟ್ಟಿನಿಂದಾಗಿ ನಿಂತಲ್ಲೇ ನೋವು ನುಂಗಿಕೊಂಡು ಸಂಕಟಪಡುತ್ತಿರುವ ಮೂಕ ಪ್ರಾಣಿಗಳ ಯಾತನೆ ಒಂದೆಡೆಯಾದರೆ, ಲಸಿಕೆಗಾಗಿ ಕೇಂದ್ರ ಸರ್ಕಾರ ಕೊಟ್ಟಿದ್ದ 6-7 ಕೋಟಿ ರೂ. ಭತ್ಯೆ ಕೂಡ ಮಣ್ಣುಪಾಲಾಗಿರುವುದು ಮತ್ತೊಂದು ದುರಂತ.
ಕೇಂದ್ರ ಸರ್ಕಾರದ ಪಶು ಸಂಗೋಪನಾ ಇಲಾಖೆ ಜಾನುವಾರುಗಳಿಗೆ ಹಾಕಿರುವ ಲಸಿಕೆ ಗುಣಮಟ್ಟದ್ದಲ್ಲ ಎಂದು ಹೇಳಿದೆ. ಈ ಸಂಬಂಧ ರಾಜ್ಯಕ್ಕೆ ಪತ್ರ ಬರೆದು ಎಚ್ಚರಿಸಿದೆ. ಇಂಡಿಯನ್ ಇಮ್ಯೂನೋಲೊಜಿಕಲ್ ಲಿಮಿಟೆಡ್​ನಿಂದ ರಾಜ್ಯ ಸರ್ಕಾರ ಟೆಂಡರ್ ಮೂಲಕ ಖರೀದಿಸಿದ್ದ ಈ ಲಸಿಕೆ ಮಾದರಿಯನ್ನು ಐಸಿಎಆರ್-ಇಂಡಿಯನ್ ವೆಟರ್ನರಿ ರಿಸರ್ಚ್ ಇನ್​ಸ್ಟಿಟ್ಯೂಟ್ ಗುಣಮಟ್ಟದ್ದಲ್ಲ ಎಂದು ದೃಢಪಡಿಸಿದೆ.
ಎಷ್ಟು ಹಣ ಖರ್ಚು?:ಲಸಿಕೆ ನೀಡಿಕೆ, ಲಸಿಕೆದಾರರ ಭತ್ಯೆ ಸೇರಿ ಎಲ್ಲ ಅನುದಾನ ವನ್ನು ಕೇಂದ್ರವೇ ಭರಿಸುತ್ತದೆ. ಪ್ರತಿ ಲಸಿಕೆಗೆ 6 ರೂ. ಉತ್ಪಾದನಾ ವೆಚ್ಚವಿದೆ ಎಂಬ ಮಾಹಿತಿ ಇದೆ. ರಾಜ್ಯದ 1.15 ಕೋಟಿ ಜಾನುವಾರುಗಳ ಲಸಿಕೆಗೆ 6 ರಿಂದ 7 ಕೋಟಿ ರೂ. ವೆಚ್ಚ ತಗುಲಿದೆ. ಜತೆಗೆ ಲಸಿಕೆದಾರರಿಗೆ ಕೇಂದ್ರ 8 ಕೋಟಿ ರೂ. ಭತ್ಯೆಯನ್ನೂ ಭರಿಸಿದೆ. ರಾಜ್ಯದ ಪಾಲು ಇದರಲ್ಲಿ ಒಂದು ನಯಾ ಪೈಸೆ ಇಲ್ಲ. ಆದರೆ, ಟೆಂಡರ್ ಕರೆದು ಲಸಿಕೆ ಖರೀದಿ ಮಾಡಿದ್ದು ರಾಜ್ಯದ ಹೊಣೆಗಾರಿಕೆ.
ಹೊಣೆ ಯಾರು?:ಲಸಿಕೆ ಗುಣಮಟ್ಟ ಖಾತರಿಪಡಿಸಿಕೊಳ್ಳದೆಯೇ ವಿತರಿಸಿದ್ದಕ್ಕೆ ಕಾರಣ ಯಾರು ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಪಶು ಸಂಗೋಪನಾ ಇಲಾಖೆ ಮತ್ತು ಹಾಲು ಉತ್ಪಾದಕ ಮಂಡಳಿಗಳ ಸಹಸ್ರಾರು ಸಿಬ್ಬಂದಿ ಮಾಡಿದ ಕೆಲಸ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಈಗಾಗಲೇ ಮಾಡಿರುವ ಲಸಿಕೆಯ ವೆಚ್ಚ, ಸಿಬ್ಬಂದಿ ಶ್ರಮದ ಬೆಲೆ ಕಟ್ಟುವವರು ಯಾರು? ಪುನಃ ಲಸಿಕೆ ಮಾಡಿದರೆ ಅದಕ್ಕೆ ತಗುಲುವ ವೆಚ್ಚ ಯಾರು ಭರಿಸುವರು? ಸಂದಿಗ್ಧ ಆರ್ಥಿಕ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಇದು ಹೊರೆಯಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತಲೆ ಎತ್ತಿದೆ.
ಕಾಲುಬಾಯಿ ಸಮಸ್ಯೆಯಿಂದಾಗಿ ಹೈನು ರಾಸುಗಳ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಹಾಗಾಗಿ ಕೇಂದ್ರ ಸರ್ಕಾರ ಈ ರೋಗ ನಿಮೂಲನೆಗಾಗಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 2008ರಿಂದ ಪ್ರತಿ ವರ್ಷ 2 ಸುತ್ತು ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದೆ. ಅದರ ಭಾಗವಾಗಿ ರಾಜ್ಯದಲ್ಲಿ ಕಾಲು ಮತ್ತು ಬಾಯಿ ಬೇನೆ ಲಸಿಕಾ ಕಾರ್ಯಕ್ರಮವನ್ನು 2020ರ ಅ.2 ರಿಂದ ನ.15 ರ ವರೆಗೆ ಸುಮಾರು 45 ದಿನಗಳ ಕಾಲ ಪಶುಪಾಲನಾ ಇಲಾಖೆ ಮತ್ತು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿಯಿಂದ ಹಮ್ಮಿಕೊಂಡಿತ್ತು. ಸುಮಾರು 1.15 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳಿಸಲಾಗಿದೆ.
ಈ ರೋಗ ಒಂದು ಜಾನುವಾರಿನಿಂದ ಇನ್ನೊಂದು, ಮತ್ತೊಂದು ಹೀಗೆ ಇಡೀ ಗ್ರಾಮದ ರಾಸುಗಳಿಗೇ ಹಬ್ಬುತ್ತಿತ್ತು. ಸರ್ಕಾರದ ಅಭಿಯಾನದಲ್ಲಿ ಎಲ್ಲ ಜಾನುವಾರುಗಳಿಗೆ ಮೊದಲು ಕಿವಿಯೋಲೆಗಳನ್ನು ಅಳವಡಿಸಿ ನಂತರ ಆನ್​ಲೈನ್​ನಲ್ಲಿ ಜಾನುವಾರು ಮತ್ತು ಮಾಲೀಕರ ಸಂಪೂರ್ಣ ಮಾಹಿತಿಯನ್ನು ಅಧಾರ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಇನ್ಪಾರ್ವೆಷನ್ ನೆಟ್​ವರ್ಕ್ ಫಾರ್ ಅನಿಮಲ್ ಪ್ರೊಡಕ್ಟಿವಿಟಿ ಅಂಡ್ ಹೆಲ್ತ್ (ಐಎನ್​ಎಪಿಎಚ್) ವೆಬ್​ಸೈಟ್​ನಲ್ಲಿ ದಾಖಲಿಸಲಾಗಿದೆ. ನಂತರ ಕಿವಿಯೋಲೆ ಅಳವಡಿಸಿದ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿ ಮಾಹಿತಿಯನ್ನು ನ್ಯಾಷನಲ್ ಅನಿಮಲ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂ (ಎನ್​ಎಡಿಸಿಪಿ) ವೆಬ್​ಸೈಟ್​ಗೆ ಅಪ್​ಲೋಡ್ ಮಾಡಲಾಗಿದೆ. ಇದಕ್ಕಾಗಿ ರಾಜ್ಯದ ಪಶು ಸಂಗೋಪನಾ ಇಲಾಖೆಯ 10-12 ಸಾವಿರ ಸಿಬ್ಬಂದಿ ಹಾಗೂ ಕರ್ನಾಟಕ ಹಾಲು ಉತ್ಪಾದಕ ಮಂಡಳಿಗಳ 4 ರಿಂದ 5 ಸಾವಿರ ಸಿಬ್ಬಂದಿ 45 ದಿನ ಬೆಳಗ್ಗೆ 6 ರಿಂದ 12 ಗಂಟೆವರೆಗೆ ಪ್ರತಿದಿನ ರಾಸುಗಳಿಗೆ ಲಸಿಕೆ ಕೊಡುವ ಕಾರ್ಯ ನಿರ್ವಹಿಸಿದ್ದರು.
ಮತ್ತೆ ಲಸಿಕೆ?:ಡಿ.18ರಂದು ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಪಾಲನೆ ಮತ್ತು ಡೈರಿ ಮಂತ್ರಾಲಯದ ಜಂಟಿ ಕಾರ್ಯದರ್ಶಿಗಳು ರಾಜ್ಯದ ಪಶುಪಾಲನಾ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈವರೆಗೆ ನೀಡಲಾಗಿರುವ ಲಸಿಕೆಯ ಗುಣಮಟ್ಟ ಸರಿ ಇಲ್ಲ ಎಂಬುದು ಪ್ರಯೋಗಾಲಯ ಪರೀಕ್ಷೆಯಿಂದ ತಿಳಿದುಬಂದಿದೆ. ಆದ್ದರಿಂದ ಲಸಿಕಾ ಕಾರ್ಯಕ್ರಮವನ್ನು ತಕ್ಷಣಕ್ಕೆ ನಿಲ್ಲಿಸಿ ಅಥವಾ ಪುನಃ ಲಸಿಕೆ ಹಾಕಿ ಎನ್ನುವ ಸೂಚನೆ ನೀಡಿದ್ದಾರೆ.
ರೋಗದ ಆತಂಕ:ಇದೊಂದು ಸಾಂಕ್ರಾಮಿಕ ರೋಗವಾಗಿದೆ. ತಕ್ಷಣ ಲಸಿಕೆ ಹಾಕದಿದ್ದರೆ ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪಶು ತಜ್ಞರು ಹೇಳುತ್ತಾರೆ.
ಇದೇ ಮೊದಲಲ್ಲ:ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2011-12 ರಲ್ಲಿ ಕಳಪೆ ಗುಣಮಟ್ಟದ ಲಸಿಕೆ ಕಾರಣದಿಂದ 8-10 ಸಾವಿರ ಜಾನುವಾರು ಮೃತಪಟ್ಟಿದ್ದವು. ಆಗ ಲಸಿಕೆ ಪೂರೈಕೆದಾರರು ತಲಾ 10 ಸಾವಿರ ರೂ.ಪರಿಹಾರ ನೀಡಿದ ಉದಾಹರಣೆ ಇನ್ನೂ ಜೀವಂತವಾಗಿದೆ.
ಅಮ್ಮ ಇರಲಿಲ್ಲ, ಅದಕ್ಕೆ ಅಪ್ಪ ಟ್ಯಾಬ್ಲೆಟ್​ ತಗೊಂಡು ಮಗುವಿಗೆ ಹಾಲು ಕುಡಿಸಿದ!

ಮತ್ತೊಬ್ಬ ನಟಿ ಅರೆಸ್ಟ್​; ಮತ್ತೆ ಸದ್ದು ಮಾಡುತ್ತಿರುವ ಡ್ರಗ್ಸ್ ಮಾರಾಟ ಪ್ರಕರಣ

ಮರ್ಮಾಂಗವನ್ನೇ ಕತ್ತರಿಸಿ ಕೊಂದ ಪಾಪಿಗಳು! ಆಣೆಕಟ್ಟಿನ ಮೇಲಿತ್ತು ಯುವಕನ ಮೃತದೇಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
