ದಾವಣಗೆರೆ:‘ನಮ್ಮ ಸಮುದಾಯದ ಶಾಸಕರನ್ನು ಡಿಸಿಎಂ ಮಾಡಿ, ಮಂತ್ರಿ ಸ್ಥಾನ ಕೊಡಿ’ ಎಂದು ವಿವಿಧ ಮಠಾಧೀಶರು ಹಾಗೂ ಸಮಾಜದ ಮುಖಂಡರು ಮಾಧ್ಯಮಗಳ ಮುಂದೆ ಪದೇಪದೆ ಹೇಳಿಕೆ ನೀಡುವುದಲ್ಲದೆ, ಸಿಎಂಗೆ ಮಾಡುತ್ತಿದ್ದ ಮನವಿ ಮಂಗಳವಾರ ಬಿ.ಎಸ್.ಯಡಿಯೂರಪ್ಪ ಅವರ ತಾಳ್ಮೆಯ ಕಟ್ಟೆಯೊಡೆಯುವಂತೆ ಮಾಡಿತು. ಹೀಗೆ ಒತ್ತಡ ಹಾಕಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿಎಸ್​ವೈ ಅಸಮಾಧಾನವನ್ನೂ ಹೊರಹಾಕಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಾತ್ರಾ ಮಹೋತ್ಸವದಲ್ಲಿ ಪಂಚಮಸಾಲಿ ಸಮಾಜಕ್ಕೆ ಸಚಿವಗಿರಿ ಕೇಳುವ ಭರದಲ್ಲಿ ವಚನಾಂದಶ್ರೀಗಳು ಆಡಿದ ಮಾತು ಯಡಿಯೂರಪ್ಪ ಕೋಪಕ್ಕೆ ಕಾರಣವಾಯಿತು. ಅಸಮಧಾನಗೊಂಡ ಸಿಎಂ ವೇದಿಕೆಯಿಂದಲೇ ನಿರ್ಗಮಿಸುವುದಾಗಿ ಮೇಲೆದ್ದರು. ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಮಂತ್ರಿಗಿರಿಗೆ ಹೀಗೆ ಒತ್ತಡ ಹಾಕಿದರೆ ನಾಳೆಯೇ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ. ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಸಮಾಜದ ಮೂವರಿಗೆ ಅದರಲ್ಲೂ ಮುರುಗೇಶ್ ನಿರಾಣಿಗೆ ಮಂತ್ರಿಗಿರಿ ಕೊಡಲೇಬೇಕು. ಒಂದು ವೇಳೆ ಅವರನ್ನು ಕೈ ಬಿಟ್ಟರೆ ಅಖಂಡ ಪಂಚಮಸಾಲಿ ಸಮಾಜ ನಿಮ್ಮ ಕೈ ಬಿಡುತ್ತದೆ ಎಂದು ವಚನಾನಂದಶ್ರೀ ಹೇಳಿದರು. ಇದರಿಂದ ಕೆರಳಿದ ಬಿಎಸ್​ವೈ, ಸ್ವಾಮೀಜಿ ತಾವು ಈ ಮಾತು ಆಡಬಾರದು. ಹೀಗೆ ಮಾತನಾಡಿದರೆ ಕೆಲಸ ಮಾಡಲು ಆಗಲ್ಲ. ನೀವು ಸಲಹೆ ಕೊಡಬಹುದಷ್ಟೇ. ಆದರೆ, ಬೆದರಿಸೋದಕ್ಕೆ ಆಗಲ್ಲ ಎಂದರಲ್ಲದೆ, ನಿರಾಣಿಯತ್ತ ತಿರುಗಿ ಸ್ವಾಮೀಜಿಗೆ ಸ್ವಲ್ಪ ಹೇಳಿ ಎಂದು ತಾಕೀತು ಮಾಡಿದರು.
ಅಷ್ಟಕ್ಕೆ ಸುಮ್ಮನಾಗದ ಸ್ವಾಮೀಜಿ, ನಾವು ಬೆದರಿಸುತ್ತಿಲ್ಲ. ನಮ್ಮ ಹಕ್ಕು ಕೇಳುತ್ತಿದ್ದೇವೆ. ಹೌದೋ ಅಲ್ಲವೋ ಎಂದು ನೆರೆದಿದ್ದ ಜನಸ್ತೋಮವನ್ನು ಪ್ರಶ್ನಿಸಿದರು. ಮಾತು ಮುಂದುವರಿಸಿ, ನೀವು ಬಹಳ ಒಳ್ಳೇಯವರು. ಸಮಾಧಾನದಿಂದ ಇರಬೇಕು. ನಮ್ಮ ಸಮುದಾಯ ಸದಾ ಕಾಲ ನಿಮ್ಮ ಜತೆ ನಿಲ್ಲುತ್ತದೆ. ವೀರಶೈವ ಸಮಾಜ ನಿಮ್ಮ ಹೆಲಗಲಿಗೆ ಹೆಗಲು ಕೊಡಲಿದೆ. ನಮ್ಮ ಸಮಾಜದಿಂದ ನೀವು ಬಲಾಢ್ಯ ಆಗಿದ್ದೀರಿ. ಉಪ ಚುನಾವಣೆಯಲ್ಲಿ ಸಮಾಜದ ಐವರು ಗೆದ್ದಿದ್ದಾರೆ ಎಂದರು. ಸಿಎಂ ಅಸಮಾಧಾನಗೊಂಡು ಕುರ್ಚಿಯಿಂದ ಮೇಲೆದ್ದರು. ಪಕ್ಕದಲ್ಲೇ ಇದ್ದ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಮಾಧಾನಪಡಿಸಿದರು.
ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ
ನನ್ನ ಪರಿಸ್ಥಿತಿಯನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳಿ. 17 ಶಾಸಕರು ರಾಜೀನಾಮೆ ನೀಡಿ 4 ತಿಂಗಳು ವನವಾಸ ಅನುಭವಿಸಿದ್ದಾರೆ. ಅವರ ತ್ಯಾಗದಿಂದ ಹಾಗೂ ಪಂಚಮಸಾಲಿ ಸಮಾಜದ ಆಶೀರ್ವಾದದಿಂದ ನಿಮ್ಮ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಸ್ವಾಮೀಜಿ ಏನು ಬೇಕಾದರೂ ಸಲಹೆ ಕೊಡಲಿ ಸ್ವೀಕರಿಸುತ್ತೇನೆ. ಎಲ್ಲ ಸ್ವಾಮೀಜಿಗಳನ್ನೂ ಒಂದೆಡೆ ಸೇರಿಸುತ್ತೇನೆ. ಮಾರ್ಗದರ್ಶನ ಮಾಡಿ. ನಿಮ್ಮೆಲ್ಲರ ಸಲಹೆಗೆ ತಲೆ ಬಾಗುತ್ತೇನೆ. ನಿಮಗೆ ಬೇಡ ಎಂದಾದರೆ ನಾಳೆಯೇ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ. ಅಧಿಕಾರಕ್ಕೆ ಅಂಟಿಕೊಂಡು ನಾನು ಕುಳಿತಿಲ್ಲ ಎಂದು ಬಿಎಸ್​ವೈ ಭಾಷಣದಲ್ಲಿ ಹೇಳಿದರು. ಅತಿವೃಷ್ಟಿಗೆ 4000 ಗ್ರಾಮಗಳು ನೆಲಸಮವಾಗಿವೆ. 7 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾಳಾಗಿದೆ. ಅವರಿಗೆ ನೆರವು ನೀಡುವತ್ತ ನನ್ನ ಗಮನವಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದರೆ ಮಾಧ್ಯಮಗಳಲ್ಲಿ ನಾಳೆ ದೊಡ್ಡ ಸುದ್ದಿಯಾಗುತ್ತದೆ. ನಾನು ಮಾರ್ಚ್​ವರೆಗೆ ಕಾಯಲೇಬೇಕಿದೆ. ರಾತ್ರಿ ನಿದ್ರೆ ಬಿಟ್ಟು ರಾಜ್ಯದ ಬಗ್ಗೆ ಚಿಂತೆ ಮಾಡುತ್ತಿದ್ದೇನೆ. ನಾನು ಸ್ವಾರ್ಥಿ ಅಲ್ಲ. ನೀವು ನನ್ನ ಜತೆ ನಿಲ್ಲದಿದ್ದರೆ ಸಿಎಂ ಆಗುತ್ತಿರಲಿಲ್ಲ ಎಂಬುದೂ ಗೊತ್ತಿದೆ ಹಾಗೆಯೇ ನಿಮ್ಮ ಋಣ ತೀರಿಸಬೇಕು ಎಂಬ ಅರಿವೂ ನನಗಿದೆ. ನಿಮಗಾಗಿ ನನ್ನ ಮನೆಬಾಗಿಲು ಸದಾ ತೆರೆದಿರುತ್ತದೆ ಎಂದಾಗ ನೆರೆದಿದ್ದ ಜನಸ್ತೋಮ ಚಪ್ಪಾಳೆ ತಟ್ಟಿ ಖುಷಿಪಟ್ಟಿತು. ಬಜೆಟ್​ನಲ್ಲಿ ಪಂಚಮಸಾಲಿ ಸಮಾಜದ ಅಭಿವೃದ್ಧಿಗೆ ಅನುದಾನ ನೀಡುವ ಸಂಬಂಧ ಮಂತ್ರಿ ಮಂಡಲ ಸಭೆಯಲ್ಲಿ ರ್ಚಚಿಸುತ್ತೇನೆ. ಈ ಕುರಿತು ಸ್ವಾಮೀಜಿ ಜತೆಯೂ ಮಾತನಾಡುತ್ತೇನೆ ಎಂದರು.
ಹರ ಜಾತ್ರೋತ್ಸವಕ್ಕೆ ಚಾಲನೆ
ಹರಿಹರ: ಸಮಾಜ ಸಂಘಟನೆಯ ಆಶಯ ಹೊತ್ತ ಪ್ರಪ್ರಥಮ ಹರ ಜಾತ್ರೋತ್ಸವ ಹಾಗೂ ರಾಜ್ಯ ಪಂಚಮಸಾಲಿ ಸಂಘದ ಬೆಳ್ಳಿ ಬೆಡಗು ಮಹೋತ್ಸವಕ್ಕೆ ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ಸಂಭ್ರಮದ ಚಾಲನೆ ಸಿಕ್ಕಿತು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಪೀಠದ ಅಭಿವೃದ್ಧಿ ಮತ್ತು ಸಮಾಜದ ಅಭಿವೃದ್ಧಿ ಪಾಧಿಕಾರಕ್ಕೆ ತಲಾ 50 ಕೋಟಿ ರೂ., ವೀರಶೈವ ಲಿಂಗಾಯತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಶೇ.16 ಮೀಸಲಾತಿ ನೀಡಬೇಕು ಎಂಬ ಬೇಡಿಕೆಗಳು ಕೇಳಿಬಂದವು. ಇದಕ್ಕೆ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಧ್ವನಿಗೂಡಿಸಿದರು. ರಾಜ್ಯದ ಎಲ್ಲ ವೀರಶೈವ
ಒಳಪಂಗಡಗಳು ಭೇದ ಮರೆತು ಒಂದಾದರೆ ಬಲಿಷ್ಠ ವೀರಶೈವ ಸಂಘಟನೆ ಕಟ್ಟಬಹುದು. ಎಲ್ಲರೂ ಒಂದಾಗಲು ವಚನಾನಂದ ಶ್ರೀಗಳೇ ನೇತೃತ್ವ ವಹಿಸಲಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು. ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್​ನ ಶ್ರೀ ರವಿಶಂಕರ ಗುರೂಜಿ, ಕೇಂದ್ರ ಕಾನೂನು ಮತ್ತು ಸಂಸದೀಯ ಸಚಿವ ಪ್ರಲ್ಹಾದ್ ಜೋಷಿ, ಶಾಸಕ ಡಾ. ಕೆ. ಸುಧಾಕರ್, ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಇತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 19 =
Remember me
