ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹು ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸ್ಪೋಟಕ ತಿರುವು ಪಡೆದುಕೊಂಡಿದೆ. ಹಗರಣ ಹೂರಣ ಬಗೆದಷ್ಟು ಬಗೆಬಗೆ ರೂಪ ಪಡೆದುಕೊಳ್ಳುತ್ತಾ ಮತ್ತೊಬ್ಬ ಸಚಿವರನ್ನು ಸುತ್ತಿಕೊಂಡಿದೆ.
ಅಕ್ರಮದ ಸಾಕ್ಷ್ಯಗಳ ನಾಶಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಚೇರಿಯಲ್ಲೇ ಸಂಚು ನಡೆದಿತ್ತು ಎಂಬ ಮತ್ತೊಂದು ಪ್ರಮುಖ ಆರೋಪ ಬಯಲಾಗಿದೆ. ಪ್ರಕರಣದ ಎಂಟನೇ ಆರೋಪಿಯಾಗಿರುವ ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಈ ಅಂಶ ಉಲ್ಲೇಖಿ ಸಿದ್ದು, ಅಫಿಡವಿಟ್​ನ ಪ್ರತಿ ಲಭ್ಯವಾಗಿದೆ. ಬೆಂಗಳೂರಿನ ಮೂರನೇ ಅಪರ ಮುಖ್ಯ ಮೆಟ್ರೋಪಾಲ್ಟೇನ್ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ 8ನೇ ಆರೋಪಿ ಪರ ವಕೀಲರು ಈ ಅಫಿಡವಿಟ್​ನ್ನು ಗುರುವಾರ ಸಲ್ಲಿಸಿದ್ದಾರೆ.
ಸಾಕ್ಷ್ಯ, ಪುರಾವೆ ಸಂರಕ್ಷಣೆಗೆ ಮೊರೆ: ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಮೇ 24ರಂದು ಸಭೆ ನಡೆದು, ಅಕ್ರಮದ ಸಾಕ್ಷ್ಯಗಳ ನಾಶ ಕುರಿತು ಚರ್ಚೆಯಾಗಿದೆ. ಮಾ.24ರ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗಿನ ಕಚೇರಿ ಸಿಸಿಟಿವಿ ಫೂಟೇಜ್​ಗಳನ್ನು ವಶಪಡಿಸಿಕೊಂಡು ಸಂರಕ್ಷಿಸಲು ತನಿಖಾಧಿಕಾರಿಗೆ ನಿರ್ದೇಶಿಸಬೇಕೆಂದು ಕೋರ್ಟ್​ಗೆ ಎಂಟನೇ ಆರೋಪಿ ಮೊರೆಯಿಟ್ಟಿದ್ದಾರೆ. ಈ ಸಭೆಯಲ್ಲಿ ಸಚಿವರಾದ ಶರಣ ಪ್ರಕಾಶ್ ಪಾಟೀಲ, ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ಕೂಡ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ವಾಟ್ಸ್​ಆಪ್ ಚಾಟ್ ಜತನಕ್ಕೂ ಮನವಿ: ಪ್ರಕರಣದ ಎಂಟನೇ ಆರೋಪಿ ಮೊಬೈಲ್ (ನಂಬರ್ 6363175903) ಜಪ್ತಿಯಾಗಿದೆ. ಈ ಮೊಬೈಲ್​ನ ಸ್ಕ್ರೀನ್ ಶಾಟ್​ಗಳನ್ನು ಜತನ ಮಾಡಿ ಪ್ರಕರಣದ ಪುರಾವೆಯಾಗಿ ಪರಿಗಣಿಸಲು ತನಿಖಾಧಿಕಾರಿಗೆ ಸೂಚಿಸಬೇಕು ಎಂದು ಅಫಿಡವಿಟ್​ನಲ್ಲಿ ಮನವಿ ಮಾಡಲಾಗಿದೆ.
ಅಲ್ಲದೆ ಆರೋಪಿ ಮೊಬೈಲ್​ನ ಸಂಪರ್ಕದ ಪಟ್ಟಿಯಲ್ಲಿರುವ ‘ಬಸವನಗೌಡ ದದ್ದಲ್’ ಹೆಸರು ಹಾಗೂ ಆರೋಪಿ ನಡುವಣ ವಾಟ್ಸಪ್ ಚಾಟ್​ಗಳನ್ನು ಸಂಗ್ರಹಿಸಿ ಜೋಪಾನವಾಗಿಟ್ಟುಕೊಂಡು, ಪುರಾವೆಯಾಗಿ ಪರಿಗಣಿಸುವಂತೆ ತನಿಖಾಧಿಕಾರಿಗೆ ನಿರ್ದೇಶಿಸಲು ಮೊರೆಯಿಡಲಾಗಿದೆ. ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಸಾಕ್ಷ್ಯ, ಪುರಾವೆಗಳು ಅಷ್ಟೇ ಮುಖ್ಯವಾಗಿದೆ. ಅವುಗಳನ್ನೆಲ್ಲ ವಶಕ್ಕೆ ಪಡೆದು ಕಾಯ್ದ್ದುಕೊಳ್ಳಲು ವಿಳಂಬ ಮಾಡಿದಷ್ಟು ನಾಶಪಡಿಸುವ ಸಾಧ್ಯತೆಗಳಿವೆ ಎಂದು ಅಫಿಡವಿಟ್​ನಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಬೆಂಗಳೂರು:ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನ ತ್ಯಜಿಸಿದ ಶಾಸಕ ಬಿ.ನಾಗೇಂದ್ರ ಭುಜದ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಿದ್ಯಾರು ಎಂಬ ಚರ್ಚೆ ಶುರುವಾಗಿದ್ದು, ಈ ಪ್ರಕರಣ ಇಷ್ಟಕ್ಕೆ ನಿಲ್ಲದೇ ತನಿಖೆ ವಿಸ್ತಾರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರದ ಹಣವನ್ನು ನಿಗಮದ ಖಾತೆಗೆ ವರ್ಗಾಯಿಸಿಕೊಂಡು ಅದನ್ನು ತೆಲಂಗಾಣದ ಬೇನಾಮಿ ಖಾತೆಗೆ ವರ್ಗಾಯಿಸಿದ್ದರ ಹಿಂದೆ ನಾಗೇಂದ್ರ ಪಾತ್ರ ಏನೂ ಇರಲಿಲ್ಲ, ಅವರು ಪಾತ್ರಧಾರಿಗಳಷ್ಟೇ, ಇವರ ಹಿಂದೆ ಪ್ರಮುಖ ಸಚಿವರೇ ಇದ್ದಾರೆ. ಹಿರಿಯ ಅಧಿಕಾರಿಗಳು, ಇಬ್ಬರು ಸಚಿವರು ಸೇರಿಯೇ ತಂತ್ರ ರೂಪಿಸಿದ್ದು ಎಂಬ ಮಾತುಗಳು ವಿಧಾನಸೌಧದಲ್ಲಿ ಗುಸುಗುಸು ಚರ್ಚೆಯಾಗುತ್ತಿದೆ. ಈಗಾಗಲೇ ಬಂಧಿತರಾಗಿರುವ ಕೆಲವು ಆರೋಪಿಗಳು ತನಿಖೆ ವೇಳೆ ಅನೇಕ ಸಂಗತಿ ಹೊರಹಾಕಿದ್ದು, ಮತ್ತಷ್ಟು ತಲೆದಂಡ ಖಚಿತ ಎಂದೇ ಹೇಳಲಾಗುತ್ತಿದೆ. ಸರ್ಕಾರದ ಕೋಟ್ಯಂತರ ರೂಪಾಯಿಯನ್ನು ಬಡ್ಡಿ ಆಸೆಗೆ ಅನ್ಯಖಾತೆಯಲ್ಲಿಡುವ ಪರಿಪಾಠ ಇದ್ದೇ ಇದೆ. ಕೆಲವು ನಿಗಮಗಳು ಸರ್ಕಾರ ನೀಡಿದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟು ಅದರ ಬಡ್ಡಿ ದುಡ್ಡಿನಲ್ಲಿ ಗುತ್ತಿಗೆ ಸಿಬ್ಬಂದಿ ವೇತನ, ಖರ್ಚುವೆಚ್ಚ, ಹೆಚ್ಚುವರಿ ವೆಚ್ಚವನ್ನು ತೂಗಿಸಿಕೊಳ್ಳುತ್ತಿದೆ. ಇದು ಸರ್ಕಾರದ ಅರಿವಿಗಿದೆ. ಅದೇ ರೀತಿ ಈ ಪ್ರಕರಣದಲ್ಲಿ ಸರ್ಕಾರದ ಹಣವನ್ನು ಬೇನಾಮಿ ಖಾತೆಗೆ ವರ್ಗಾಯಿಸಿದ್ದರ ಕಥೆ, ಚಿತ್ರಕತೆ, ನಿರ್ದೇಶನ ಬೇರೆಯವರದ್ದೇ. ನಾಗೇಂದ್ರ ಏನೂ ಅಲ್ಲ. ಪಾತ್ರಧಾರಿಯಾಗಿ ಮಾತ್ರ ಕಾಣಿಸುತ್ತಿದ್ದಾರೆ. ಅದರಲ್ಲೂ ಸರ್ಕಾರದ ಹಣವನ್ನು 50 ಕೋಟಿ ರೂ. ಠೇವಣಿ ಇಟ್ಟು, ಓಡಿ ಪಡೆದುಕೊಳ್ಳುವುದರ ಹಿಂದೆ ಹಿರಿಯ ಸಚಿವರೊಬ್ಬರ ನಿರ್ದೇಶನ ಮತ್ತು ಮಾರ್ಗದರ್ಶನ ಇದೆ ಎಂದು ಹೇಳಲಾಗುತ್ತಿದೆ.

ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಮಾತ್ರಕ್ಕೆ ಎಲ್ಲವೂ ಮುಗಿದಿದೆ ಎಂದಲ್ಲ. ಹಣಕಾಸು ಇಲಾಖೆ ಹೊಣೆ ಹೊತ್ತ ಸಿಎಂ ಸಿದ್ದರಾಮಯ್ಯಗೂ ಈ ಪ್ರಕರಣಕ್ಕೂ ಸಂಬಂಧವಿದೆ. ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಬಿಐ ವಿಚಾರಣೆ ಎದುರಿಸಬೇಕು ಎಂದು ಬಿಜೆಪಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ಪ್ರಕರಣದ ಎಂಟನೇ ಆರೋಪಿ, ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ಅವರು ಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್ ಪ್ರತಿಯನ್ನು ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ನಿಗಮದ 187 ಕೋಟಿ ರೂ.ಗಳ ಅವ್ಯವಹಾರ ಮುಚ್ಚಿಹಾಕಲು ಅಥವಾ ಮುಖ್ಯಮಂತ್ರಿ ರಾಜೀನಾಮೆ ಪಡೆಯಲು ಕೆಪಿಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಸಭೆ ಕರೆದಿದ್ದಾರಾ? ಎಂದು ಸಿ.ಎನ್.ಅಶ್ವತ್ಥ ನಾರಾಯಣ ಪ್ರಶ್ನಿಸಿದರು.
ದಲಿತರ ಹಣವನ್ನು ಲೂಟಿ ಹೊಡೆದ ಸರ್ಕಾರವಿದು. ಸಾಕ್ಷ್ಯ ನಾಶ ಮಾಡುವ ಬಗ್ಗೆ ಮಹತ್ವದ ಸಭೆ ನಡೆಸಿದ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಸಚಿವ ಶರಣ ಪ್ರಕಾಶ ಪಾಟೀಲರನ್ನು ಉಚ್ಚಾಟಿಸಿ ಬಂಧಿಸಲು ಅವಕಾಶ ಕೊಡುವಿರಾ? ಎಂದು ರಾಹುಲ್ ಗಾಂಧಿಗೆ ಕೇಳಿದರು. ಹಗರಣದಡಿ ದೊಡ್ಡ ಜಾಲವಿದ್ದಂತಿದೆ. ಎಲ್ಲರೂ ಅನುಕೂಲ ಪಡೆದುಕೊಂಡಂತಿದ್ದು, ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯನವರ ಧ್ವನಿಯೇ ಹೊರಟು ಹೋಗಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಾಗ್ದಾಳಿ ಮಾಡಿದರು.
ಎಲ್ಲಿಗೆ ಹೋಯಿತು ಹಣ?:ನಿಗಮದ ಯೂನಿಯನ್ ಬ್ಯಾಂಕ್ ಖಾತೆಯಿಂದ ಹೈದರಾಬಾದ್​ನ ಸಹಕಾರ ಬ್ಯಾಂಕ್ ಖಾತೆ, ಅಲ್ಲಿಂದ ಬೇರೆ ಬೇರೆ ಖಾತೆಗಳಿಗೆ 94 ಕೋಟಿ ರೂ. ವರ್ಗಾವಣೆಯಾಗಿದೆ. ಯಾವ ಕಾರಣಕ್ಕೆ ಈ ಹಣ ವರ್ಗಾವಣೆಯಾಯಿತು? ನಂತರ ಎಲ್ಲಿ ಹೋಯಿತು? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿಯೇ ಇಲ್ಲವೆಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು. ಹಾಗೆಯೇ ನಾಗೇಂದ್ರ ರಾಜೀನಾಮೆ ನೀಡಿದ ಮಾತ್ರಕ್ಕೆ ಪಕ್ಷ ಸುಮ್ಮನಿರದು. ಸಿಎಂ, ಸಚಿವ ಶರಣ ಪ್ರಕಾಶ್ ಪಾಟೀಲ ರಾಜೀನಾಮೆ, ಬಸನಗೌಡ ದದ್ದಲ್ ವಜಾ ಆಗಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.
ಸಿಬಿಐ ತನಿಖೆಗೆ ನಕಾರ:ವಾಲ್ಮೀಕಿ ನಿಗಮದ ಅಕ್ರಮ ಸಂಬಂಧ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ನಿಗಮ ಮಂಡಳಿಗಳಲ್ಲಿ ಹಣ ದುರುಪಯೋಗ ಪ್ರಕರಣ ಈ ಹಿಂದೆಯೂ ಆಗಿದೆ. ಈಗ ಆತ್ಮಹತ್ಯೆಯಿಂದಾಗಿ ಪ್ರಕರಣ ಈಚೆ ಬಂದಿದೆ. ಬಿಜೆಪಿ ಅವಧಿಯಲ್ಲಿನ ಪ್ರಕರಣಗಳು ಇವೆ. ಸಚಿವರು ಈಗಾಗಲೇ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ನಾನು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಸಚಿವರ ಜತೆ ಚರ್ಚೆ ಮಾಡಿದ್ದು, ಅವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಯಾವುದೇ ತನಿಖೆ ಬೇಕಾದರೂ ನಡೆಯಲಿ ಎಂದು ತಿಳಿಸಿದ್ದಾರೆ ಎಂದು ಡಿಕೆಶಿ ವಿವರಿಸಿದರು. ಸಿಬಿಐ ತನಿಖೆ ಆಗ್ರಹಿಸುವ ಬಗ್ಗೆ ಕೇಳಿದಾಗ, ಈ ಪ್ರಕರಣವನ್ನು ನಾವು ಸಿಬಿಐಗೆ ವಹಿಸುವ ಪ್ರಶ್ನೆಯಿಲ್ಲ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ರಾಜ್ಯ ಸರ್ಕಾರದ ಅನುಮತಿ ಇಲ್ಲದಿದ್ದರೂ ತನಿಖೆ ನಡೆಸಲು ಸಿಬಿಐಗೆ ಅವಕಾಶವಿದೆ. ನಾವು ಅವರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದ್ದೇವೆ ಎಂದರು.
ಸಿಕ್ಕಿಂ ಮುಖ್ಯಮಂತ್ರಿಯಾಗಿ ಜೂನ್​ 10ಕ್ಕೆ ತಮಾಂಗ್ ಪ್ರಮಾಣ ವಚನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
