ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಗುರುವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಕುರುಕ್ಷೇತ್ರಕ್ಕೆ ಕಾರಣವಾಯಿತು. ರಾಜ್ಯಾದ್ಯಂತ ಸದ್ದು ಮಾಡಿರುವ ಈ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಉತ್ತರ ನೀಡಲು ಮುಂದಾದರು. ಈ ವೇಳೆ ಡೆತ್​ನೋಟ್​ನಲ್ಲಿರುವ ಅಂಶ ಪ್ರಸ್ತಾಪಿಸಿದ ಅವರು ಬಳಿಕ ಸಮರ್ಥಿಸಿಕೊಳ್ಳಲಾಗದೆ ತಡವರಿಸಿದರು. ಕೆರಳಿದ ಬಿಜೆಪಿ ಸದಸ್ಯರು ಸಿಎಂ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದ್ದರಿಂದಾಗಿ ಕೋಲಾಹಲ ಏರ್ಪಟ್ಟಿತ್ತು. ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪವನ್ನು ಮುಂದೆ ಹಾಕಿ ಸಂಧಾನ ಸಭೆ ನಡೆಸಿದರೂ ಪ್ರಯತ್ನ ಫಲಕೊಡಲಿಲ್ಲ. ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ, ಪ್ರತಿಪಕ್ಷ ಕೂಡ ಹಠ ಬಿಡದ ಪರಿಣಾಮ ಸದನಕದನ ಶುಕ್ರವಾರಕ್ಕೆ ಮುಂದೂಡಿಕೆ ಆಗಿದೆ.
ಜಟಾಪಟಿಗೇನು ಕಾರಣ?:ವಿಧಾನಸಭೆಯಲ್ಲಿ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೆ ತಾವು ಏನೆಲ್ಲ ಮಾಡಿದ್ದೇವೆಂಬುದನ್ನು ಪ್ರಸ್ತಾಪಿಸುತ್ತಲೇ ಬಿಜೆಪಿಯನ್ನು ಕೆಣಕಿದರು. ಬಳಿಕ ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ವಿಚಾರ ಪ್ರಸ್ತಾಪಿಸಿ, ಚಂದ್ರಶೇಖರನ್ ಪತ್ನಿ ಕೊಟ್ಟ ದೂರಿನ ಆಧಾರದಲ್ಲಿ ಎಫ್​ಐಆರ್ ದಾಖಲಿಸಿ ತನಿಖೆ ಶುರು ಮಾಡಿದೆವು ಎಂದು ಎಫ್​ಐಆರ್ ಓದಿದರು.
ಜತೆಗೆ ನಿಗಮದ ಜನರಲ್ ಮ್ಯಾನೇಜರ್ ರಾಜಶೇಖರ್ ಕೊಟ್ಟ ದೂರಿನ ಅನುಸಾರ ಯೂನಿಯನ್ ಬ್ಯಾಂಕಿನ ಆರು ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳ ಹೆಸರು ಪ್ರಸ್ತಾಪಿಸಿದರು. ಈ ವೇಳೆ, ಡೆತ್​ನೋಟ್ ವಿಷಯವಾಗಿ ಚರ್ಚೆ ಆರಂಭವಾಯಿತು. ಡೆತ್​ನೋಟ್​ನಲ್ಲಿ ‘ಸಚಿವರ ಮೌಖಿಕ ಸೂಚನೆಯಂತೆ…’ ಎಂಬ ಪದ ಉಲ್ಲೇಖವಾಗಿದ್ದರೂ ಅವರ ಹೆಸರನ್ನು ಎಫ್​ಐಆರ್​ನಲ್ಲೇಕೆ ದಾಖಲಿಸಿಲ್ಲ ಎಂಬುದು ಪ್ರತಿಪಕ್ಷದ ಪ್ರಶ್ನೆಯಾಗಿತ್ತು.
ನಾವು ಮೃತರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಎಫ್​ಐಆರ್ ದಾಖಲಿಸಿದ್ದೇವೆ ಎಂದು ಸಿಎಂ ಹಾಗೂ ಗೃಹ ಸಚಿವರು ಸಮಜಾಯಿಷಿ ನೀಡಿದರು. ಡೆತ್​ನೋಟ್​ನಲ್ಲಿ ಸಚಿವರ ಬಗ್ಗೆ ಉಲ್ಲೇಖವಿದ್ದರೂ ಕ್ರಮಕೈಗೊಳ್ಳದಿರುವುದು ಅವರ ರಕ್ಷಣೆ ಯತ್ನವೇ ಹೊರತು ಬೇರೇನಲ್ಲ ಎಂಬ ಪಟ್ಟು ಪ್ರತಿಪಕ್ಷದಿಂದ ಗಟ್ಟಿಯಾಯಿತು.
ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ ದನಿ ಗಟ್ಟಿಯಾಗುತ್ತಿದ್ದಂತೆ ಸದನ ಕಾವೇರಿತು. ಕೊನೆಗೆ ಪ್ರತಿಪಕ್ಷ ಸದಸ್ಯರು ಸ್ಪೀಕರ್ ಪೀಠದ ಮುಂದೆ ಧರಣಿ ನಡೆಸಿದರು.
ಸ್ಪೀಕರ್ ಖಾದರ್ ತಮ್ಮ ಕೊಠಡಿಗೆ ಸಿಎಂ, ಗೃಹ, ಕಾನೂನು ಸಚಿವರು ಹಾಗೂ ಪ್ರತಿಪಕ್ಷ ಮುಖಂಡರನ್ನು ಕರೆಸಿ ಸಂಧಾನ ಮಾಡುವ ಪ್ರಯತ್ನ ನಡೆಸಿದರು. ಡೆತ್​ನೋಟ್ ಬಗ್ಗೆ ಐದು ನಿಮಿಷ ಮಾತನಾಡಲು ಅವಕಾಶ ಕೊಡಿ ನಂತರ ಉತ್ತರ ನೀಡಿ ಎಂಬ ಪ್ರತಿಪಕ್ಷದ ಸಲಹೆಯನ್ನು ಸಿಎಂ ತಿರಸ್ಕರಿಸಿದರು. ಅಂತಿಮವಾಗಿ ಸದನ ಸೇರಿದರೂ ಗದ್ದಲ ಮುಂದುವರಿದ ಕಾರಣ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತು. ಬಳಿಕ ಪ್ರತಿಪಕ್ಷ ನಾಯಕರು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತಲೇ ವಿಧಾನಸಭೆ ಹೊರ ಆವರಣಕ್ಕೆ ಆಗಮಿಸಿ ಸಾಂಕೇತಿಕ ಧರಣಿ ನಡೆಸಿದರು.
ಇದಕ್ಕೂ ಮುನ್ನ ಮಾತನಾಡಿದ್ದ ಸಿಎಂ ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡಲ್ಲ, ಪ್ರತಿಪಕ್ಷದವರು ತಪು್ಪ ಮಾಡಿದರೂ ಅವರನ್ನೂ ರಕ್ಷಿಸಲ್ಲ ಎಂದು ಹೇಳಿದರು. ಸಿಎಂ ನೇತೃತ್ವದಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದರು. ಇದು ಮುಖ್ಯಮಂತ್ರಿಯವರ ತಾಳ್ಮೆ ಕದಡಿತು. ಜತೆಗೆ ಹಗರಣ ನಡೆದಿದೆ, ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ಆತ್ಮವಂಚನೆ ಮಾಡಿಕೊಳ್ಳಬೇಡಿ ಎಂದು ಆರಗ ಜ್ಞಾನೇಂದ್ರ ಮುಖ್ಯಮಂತ್ರಿಯನ್ನು ಚುಚ್ಚಿದರು.
2. ಪರಿಶಿಷ್ಟರ ಆರ್ಥಿಕ ಬಲವರ್ಧನೆಗಾಗಿ ಎಸ್​ಸಿಎಸ್​ಪಿ ಟಿಎಸ್ಪಿ ಕಾಯ್ದೆಯನ್ನು ಸಿಎಂ ಆದ ಬಳಿಕ ಜಾರಿ ಮಾಡಿದೆ. ಶೇ.24.1 ಅಭಿವೃದ್ಧಿ ಹಣ ಈ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕೆಂಬುದನ್ನು ಕಡ್ಡಾಯ ಮಾಡಿದೆ. ಬಿಜೆಪಿಯವರದ್ದು ಬರಿ ಮೊಸಳೆ ಕಣ್ಣೀರು
3. ಪರಿಶಿಷ್ಟ ಸಮುದಾಯಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕೇಂದ್ರದ ಬಿಜೆಪಿಯಾಗಲಿ, ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗಲಿ ಎಸ್​ಸಿಪಿ, ಟಿಎಸ್ಪಿ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ?
4. ಗುತ್ತಿಗೆಯಲ್ಲೂ ಎಸ್ಸಿಎಸ್ಟಿ ಸಮುದಾಯಗಳಿಗೆ ಮೀಸಲಾತಿ ಜಾರಿ ಮಾಡಿರುವುದು, ಮುಂಬಡ್ತಿ ಮೀಸಲು ತಂದಿದ್ದು ನಾನು. ಎಸ್ಸಿಎಸ್ಟಿ ಉದ್ದಿಮೆಗಳಿಗೆ ವಿಶೇಷ ಸಾಲದ ಸವಲತ್ತು, ಕೆಐಎಡಿಬಿ ಭೂಮಿ ವಿಚಾರದಲ್ಲಿ ಈ ಸಮುದಾಯಗಳಿಗೆ ಅನುಕೂಲ ಮಾಡಿ ಕಾನೂನು ತಂದವರು ನಾವು
5. ಸಂವಿಧಾನ ಬಂದು 70 ವರ್ಷವಾದರೂ ಸಮಾನತೆ ಸಿಕ್ಕಿಲ್ಲ. ಹೀಗಾಗಿ ವಾಲ್ಮೀಕಿ, ಬೋವಿ, ಆದಿಜಾಂಭವ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸೇರಿ ಹಲವು ನಿಗಮ ಆರಂಭಿಸಲಾಗಿದೆ. ಈ ನಿಗಮಗಳ ಉದ್ದೇಶ ಆಯಾ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದೇ ಆಗಿದೆ.
6. ನಾವು ಎಸ್ಸಿಎಸ್ಟಿ ಸಮುದಾಯದವರ ವಿರೋಧಿಯಾಗಿದ್ದರೆ ಇವೆಲ್ಲವನ್ನೂ ಜಾರಿ ಮಾಡಲು ಆಗುತ್ತಿತ್ತಾ? ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧರು. ಬಿಜೆಪಿಯಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ.
ನಮ್ಮ ಸರ್ಕಾರ ಯಾರನ್ನೂ ರಕ್ಷಿಸಿಲ್ಲ, ಪ್ರತಿಪಕ್ಷದವರು ತಪು್ಪ ಮಾಡಿದರೆ ಅವರನ್ನೂ ರಕ್ಷಿಸಲ್ಲ.
| ಸಿದ್ದರಾಮಯ್ಯ ಸಿಎಂ
ಉದ್ದುದ್ದ ಭಾಷಣ ಬಿಗಿಯುವ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಅವಮಾನ, ಅನ್ಯಾಯ ಮಾಡುತ್ತಿದ್ದಾರೆ. ಹೆಂಡ ಖರೀದಿಸಿ ಚುನಾವಣೆ ವೇಳೆ ಹಂಚಿದ್ದು ಗೊತ್ತಾಗಿದೆ. ರಾಜೀನಾಮೆ ಕೊಡುವ ಪ್ರಸಂಗ ಸೃಷ್ಟಿಯಾಗಿದೆ.
| ಬಿ.ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ
ಮುಖ್ಯಮಂತ್ರಿಗಳು ವಾಲ್ಮೀಕಿ ನಿಗಮದ ಹಗರಣವನ್ನು ಮುಚ್ಚಿಹಾಕುವ ಷಡ್ಯಂತ್ರ ಮಾಡಿರುವುದು ಸ್ಪಷ್ಟಗೊಂಡಿದೆ. ಅವರಿಗೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ.
| ಆರ್.ಅಶೋಕ್, ವಿಧಾನಸಭೆ ವಿರೋಧ ಪಕ್ಷದ ನಾಯಕ
ಸಿಬ್ಬಂದಿ, ಮನೆಗೆಲಸದವರಿಗೆ ಅಂಬಾನಿ ಕುಟುಂಬದಿಂದ ಅದ್ಧೂರಿ ಔತಣ ಕೂಟ; ಎ.ಆರ್ ರೆಹಮಾನ್ ಸಂಗೀತ ಕಛೇರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
