| ಡಾ. ಜೆ.ಕರಿಯಪ್ಪ ಮಾಳಿಗೆ, ಚಿತ್ರದುರ್ಗಆದಿಕವಿ ವಾಲ್ಮೀಕಿ ಮಹರ್ಷಿಯ ರಾಮಾಯಣವು ಮಾನವ ಕುಲವನ್ನು ಉದ್ಧಾರ ಮಾಡಲಿಕ್ಕೆ ಹುಟ್ಟಿದ ಮಹಾಗ್ರಂಥ ಎನ್ನುವ ರವೀಂದ್ರನಾಥ್ ಟ್ಯಾಗೋರರ ಮಾತಿನಂತೆ ದಾರ್ಶನಿಕ ವಾಲ್ಮೀಕಿ ಸೃಷ್ಟಿಸಿದ ರಾಮಾಯಣದಲ್ಲಿ ಪ್ರತಿಪಾದಿತವಾಗಿರುವ ಮೌಲ್ಯಗಳು ಕಾಲಬದ್ಧವಲ್ಲ, ದೇಶಬದ್ದವಲ್ಲ, ಸಾರ್ವಕಾಲಿಕ ನಿತ್ಯ ಸತ್ಯ. ಕಾವ್ಯದ ಪ್ರತೀ ಪಾತ್ರಗಳು, ಸನ್ನಿವೇಶಗಳೂ, ಘಟನೆಗಳೂ ಆದರ್ಶವನ್ನೇ ಪ್ರತಿಬಿಂಬಿಸುತ್ತವೆ.
ಸಿದ್ದಾಂತ ರೂಪದಲ್ಲಿದ್ದ ಧರ್ಮವನ್ನು, ಜ್ಞಾನವನ್ನು ದೈನಂದಿನ ವ್ಯವಹಾರ ರೂಪದಲ್ಲಿ ಬಿಂಬಿಸಿ ಶಾಶ್ವತವಾದ ಜೀವನಮೌಲ್ಯಗಳನ್ನು ಅನಾವರಣಗೊಳಿಸುವ ಫಲವಾಗಿ ಮೂಡಿದವುಗಳೆ ಈ ನೆಲದ ಮಹಾಕಾವ್ಯಗಳು. ಎಲ್ಲರೂ ಓದಬಹುದಾದ, ಕೇಳಬಹುದಾದ ಅಥವಾ ಅರ್ಥೈಸಿಕೊಳ್ಳಬಹುದಾದ ಬದುಕಿನ ಮೌಲ್ಯವನ್ನು ಅನೇಕ ಪುರಾಣಕಾವ್ಯಗಳಲ್ಲಿ ಅಡಕಗೊಳಿಸಲು ಪ್ರಯತ್ನಿಸಿದ ಫಲವೇ ರಾಮಾಯಣ ಮಹಾಭಾರತಗಳೆಂಬ ಎರಡು ಮಹಾಕಾವ್ಯಗಳು, ಇವೆರಡೂ ಕೃತಿ ಬರೆದವರಲ್ಲಿ ಒಬ್ಬ ಬೇಟೆ ಸಂಸ್ಕೃತಿಯವನು, ಮತ್ತೊಬ್ಬ ಜಲ ಸಂಸ್ಕೃತಿಯವನು.
ವಾಲ್ಮೀಕಿ ಕೃತ ರಾಮಾಯಣ ರಚಿತವಾದದ್ದೇ ಧರ್ಮದ ತಾತ್ವಿಕತೆಯನ್ನು, ಆದರ್ಶವನ್ನು, ಸಮನ್ವಯತೆಯನ್ನು ಜನಸಾಮಾನ್ಯರ ವ್ಯಾವಹಾರಿಕ ಜೀವನಕ್ಕೆ ಅಳವಡಿಸಿಕೊಡಲು. ಇಲ್ಲಿಯ ರಾಮತತ್ವ ಜಾತ್ಯತೀತ, ಧರ್ವತೀತ, ಕಾಲಾತೀತ, ದೇಶಾತೀತ. ಈ ಕಾವ್ಯದ ಮೂಲಕ ವಾಲ್ಮೀಕಿ ಹೇಳಬಯಸಿರುವುದು ಮಾನವನ ಮನೋವಿಕಾಸ ಮತ್ತು ಮಾನವರ ಬದುಕಿನ ಮಾರ್ಗಸೂಚಿಯನ್ನು. ಆದರ್ಶ ತಂದೆ-ತಾಯಿಗಳು, ಆದರ್ಶ ಸಹೋದರರು, ಆದರ್ಶ ಪತಿ-ಪತ್ನಿ, ಆದರ್ಶ ಪ್ರಜೆಗಳು, ಆದರ್ಶ ರಾಜ್ಯವನ್ನು ನಿರೂಪಿಸಲು ಬೇಕಾಗಿರುವ ನ್ಯಾಯ, ನೀತಿ, ಧರ್ಮ, ಸ್ನೇಹ, ಸತ್ಯ, ಶಾಂತಿ, ಸರಳತೆ, ಭಕ್ತಿ, ಇತ್ಯಾದಿ ಆದರ್ಶಗಳೇ ಈ ಕಾವ್ಯದ ಜೀವಾಳವಾಗಿ ಮೂಡಿಬಂದಿವೆ. ಈ ಕಾವ್ಯದ ಜೀವರಸ, ಕಾವ್ಯದ ಆತ್ಮರಸ, ಕಾವ್ಯದ ಧ್ವನಿರಸ, ಕರುಣಾರಸಂ ಏಕೋರಸಂ ಎನ್ನುವಂತೆ ಕಾವ್ಯ ಕರುಣಾ ರಸದಿಂದಲೆ ಆರಂಭವಾಗಿ, ಕರುಣಾ ರಸದಿಂದಲೇ ಮುಕ್ತಾಯವಾಗುತ್ತದೆ. ಕಾವ್ಯದಲ್ಲಿನ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವಗಳು ವಿಶ್ವವ್ಯಾಪಿಯಾಗಿ ವಿಸ್ತರಿಸಿ ಜನರ ಮನೆ ಮತ್ತು ಮನ ಗೆದ್ದಿವೆ. ಇಂತಹ ಪುರಾಣ ವಸ್ತುವನ್ನೊಳಗೊಂಡ ಮಹಾಕಾವ್ಯವನ್ನು ಸಮಕಾಲೀನಗೊಳಿಸುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿವೆ. ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯ ಮೂಲಕ ಕಾಲಕಾಲಕ್ಕೆ ಪಡೆದುಕೊಂಡ ವಿಭಿನ್ನ ಮಾರ್ಪಾಡುಗಳಿಂದ ಕಾವ್ಯ ಹೊಸತನದೊಂದಿಗೆ ಮರುಹುಟ್ಟು ಪಡೆಯುತ್ತಿದೆ.
‘ವಾಲ್ಮೀಕಿ ರಾಮಾಯಣದ ನಂತರ ಜಗತ್ತಿನಾದ್ಯಂತ ಸಾವಿರಾರು ರಾಮಾಯಣಗಳು ರಚನೆಯಾಗಿವೆ. ಸಾವಿರಾರು ರಾಮಾಯಣಗಳಲ್ಲಿ ಸಾವಿರಾರು ರೂಪಗಳಿವೆ’ ಎಂಬುದನ್ನು ಎ.ಕೆ.ರಾಮಾನುಜನ್ ಅವರು ‘ಮುನ್ನೂರು ರಾಮಾಯಣಗಳು’ ಎನ್ನುವ ಲೇಖನದಲ್ಲಿ ರ್ಚಚಿಸಿದ್ದಾರೆ. ಶಿಷ್ಟ ಕಾವ್ಯಗಳ ಭಿನ್ನತೆಯ ಸ್ವರೂಪ ಒಂದು ತೆರನಾದರೆ, ಜಾನಪದ, ಮತ್ತು ಬುಡಕಟ್ಟು ಕಾವ್ಯಗಳ ವೈವಿಧ್ಯತೆಯಲ್ಲಿ ಹಲವಾರು ಭಿನ್ನ ರೂಪಗಳಿರುವುದನ್ನು ಕಾಣಬಹುದಾಗಿದೆ. ಹಾಗೆಯೇ ಸಿ.ಎನ್.ರಾಮಚಂದ್ರನ್ ಅವರು ಬೇರೆ ಬೇರೆ ಭಾಷೆಗಳ ಜಾನಪದ ರಾಮಾಯಣಗಳನ್ನು ಅಧ್ಯಯನ ಮಾಡಿ ‘ಮೌಖಿಕ ರಾಮಾಯಣಗಳು’ ಎನ್ನುವ ಪ್ರಬಂಧದಲ್ಲಿ ರಾಮಾಯಣದ ಹಲವು ಭಿನ್ನತೆಗಳನ್ನು ಸುದೀರ್ಘವಾಗಿ ರ್ಚಚಿಸಿದ್ದಾರೆ. ನಮ್ಮ ಕನ್ನಡದ ಕವಿ ಕುಮಾರವ್ಯಾಸ ಹೇಳಿರುವಂತೆ, ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ ಅಷ್ಟೊಂದು ರಾಮಾಯಣಗಳು. ಅವೆಲ್ಲವೂ ಆಯಾ ಕಾಲದ ಅಂದಿನ ಅಗತ್ಯ ಮತ್ತು ಅವಶ್ಯಕತೆಗಳನ್ನೊಳಗೊಂಡು ಬಂದವುಗಳಾಗಿವೆ. ವಾಲ್ಮೀಕಿಯ ಸೃಷ್ಟಿಯಲ್ಲಿ ಬಂದಿರುವ ರಾಮ, ಲಕ್ಷ್ಮಣ, ಸೀತೆ, ರಾವಣ, ಆಂಜನೇಯ, ವಾಲಿ, ಸುಗ್ರೀವ, ಮಂಥರೆ ಮೊದಲಾದ ಪಾತ್ರಗಳೆಲ್ಲಾ ಸಮಾಜದೊಳಗಿನ ನಮ್ಮೊಳಗಿನ ಭಾವಸ್ವಭಾವಗಳೇ ಆಗಿರುವುದರಿಂದ ವಾಲ್ಮೀಕಿಯ ಆಲೋಚನೆಗಳು ಆಶಯಗಳು ಸಾರ್ವಕಾಲಿಕವಾಗಿ ವಿಸ್ತರಿಸುತ್ತಲೇ ಇವೆ. ಬೇಟೆ ಸಂಸ್ಕೃತಿಯ ವಾಲ್ಮೀಕಿ ಕಾಡೊಳಗಿನ ಬುಡಕಟ್ಟು ಸಮುದಾಯದ ವೈವಿಧ್ಯತೆ ಬಲ್ಲವನಾಗಿದ್ದರಿಂದ ಬಹುತ್ವದಲ್ಲಿ ನಂಬಿಕೆ ಇಟ್ಟವರು. ಹಾಗಾಗಿ ರಾಮಾಯಣ ಒಂದೇ ಪಠ್ಯವಾಗಿರದೆ ಬಹುಮುಖಿ ಪಠ್ಯವಾಗಿ ರ್ಚಚಿತವಾಗುತ್ತಲೇ ಬೆಳೆಯುತ್ತಿದೆ.
ವಾಲ್ಮೀಕಿಯ ರಾಮ ಯುದ್ಧಪ್ರಿಯನಲ್ಲ. ಶಾಂತಿ ಮತ್ತು ಆದರ್ಶಗಳ ಪರಿಪಾಲಕ. ಎಂಥ ವಿಪತ್ತಿನಲ್ಲೂ, ಬಿಕ್ಕಟ್ಟಿನಲ್ಲೂ, ಸಂಕಟದಲ್ಲೂ ಇದನ್ನು ಪಾಲಿಸುತ್ತಾನೆ. ರಾಮ ರಾವಣರ ಭೀಕರ ಯುದ್ಧವೂ ಕೂಡ ಪತಿ ಪತ್ನಿಯರ ಆದರ್ಶವಾದ ಪ್ರೀತಿಯನ್ನು ತೋರಿಸುವುದಕ್ಕಾಗಿ ಬಳಸಿಕೊಂಡ ಸಾಧನವಾಗಿದೆ. ರಾಜನಾದವನು ರಾಷ್ಟ್ರದ ಅಧಿಪತಿ. ಅವನಿಗೆ ಪ್ರಜೆಗಳ ಹಿತಚಿಂತನೆಯೇ ಮುಖ್ಯವಾಗಿರಬೇಕು. ಅವರಿಗಾಗಿ ನಿರಂತರ ಶ್ರಮಿಸುತ್ತಿರಬೇಕು ಎನ್ನುವುದನ್ನು ರಾಮನ ಮೂಲಕ ಜಗತ್ತಿಗೆ ತಿಳಿಯಪಡಿಸಿದ್ದಾರೆ. ಅದನ್ನೇ ನಾವು ರಾಮರಾಜ್ಯ ಎನ್ನುವುದು. ‘ಲೋಭದಿಂದಾಗಲೀ, ಮೋಹದಿಂದಾಗಲೀ ಅಜ್ಞಾನದಿಂದಾಗಲೀ ಸ್ವಾರ್ಥದಿಂದಾಗಲೀ ನಾನು ಸತ್ಯ ಮತ್ತು ಪ್ರಾಮಾಣಿಕತೆಯನ್ನು ಮೀರಿ ನಡೆಯುವುದಿಲ್ಲ. ನನ್ನ ಪ್ರಾಣವನ್ನಾದರೂ ಬಿಡುತ್ತೇನೆ, ಹೆಂಡತಿ, ಸಹೋದರರನ್ನು, ಬಂಧುಬಳಗವನ್ನು ಬಿಡುತ್ತೇನೆ. ಆದರೆ ಸತ್ಯಧರ್ಮ ಪ್ರಾಮಾಣಿಕತೆಗೆ ವಿಮುಖನಾಗಲು ಸಾಧ್ಯವಿಲ್ಲ’ ಎನ್ನುವ ರಾಮ ಆದರ್ಶಪುರುಷನಾಗುತ್ತಾನೆ. ಪ್ರಜೆಗಳು ಮತ್ತು ರಾಜರ ನಡುವೆ ನಾಡಿನ ಹಿತಚಂತನೆ ಹಿತಾಚರಣೆ, ಮುಖ್ಯವೆನ್ನುವ ನೈತಿಕಮಾರ್ಗವನ್ನು ಲೋಕಕ್ಕೆ ತಿಳಿಯಪಡಿಸುತ್ತ, ಮನುಷ್ಯನ ನಿರ್ಮಲ ಚಾರಿತ್ರ್ಯಗಳೆ ಅವನನ್ನು ದೈವತ್ವದ ಸ್ಥಾನಕ್ಕೆ ಕೊಂಡೊಯ್ಯುತ್ತವೆಂಬುದನ್ನು ವಾಲ್ಮೀಕಿ ಮಹರ್ಷಿ ಕಾವ್ಯದ ಮೂಲಕ ಪ್ರಸ್ತುತಪಡಿಸಿದ್ದಾರೆ.
ಸತ್ಯ, ಶಾಂತಿ, ನ್ಯಾಯನೀತಿಗಳನ್ನು ನಂಬಿ, ಅದರಂತೆ ಪ್ರಾಮಾಣಿಕತೆಯಿಂದ ನಡೆಯಬೇಕಾದರೆ ಕೆಲವೊಮ್ಮೆ ಮಾನವತ್ವದ ವಿವೇಚನೆಗಳು ಮಹತ್ವ ಪಡೆಯುತ್ತವೆಂಬುದನ್ನು, ಅಂಥ ಸಂದರ್ಭಗಳ ವಿವೇಕವನ್ನರಿತು ನೈತಿಕ ಸಂದಿಗ್ಧ ಸ್ಥಿತಿಯಲ್ಲಿಯೂ ಬದುಕಬೇಕಾಗುತ್ತದೆ ಎನ್ನುವುದನ್ನು ರಾಮನ ಬದುಕಿನಲ್ಲಿ ಸಂಭವಿಸುವ ಹಲವಾರು ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಮಿತ್ರಧರ್ಮ ಪಾಲನೆಯ ಸಂದರ್ಭ, ಸೀತೆಯ ಅಗ್ನಿಪ್ರವೇಶದ ಸಂದರ್ಭ, ಶಂಬೂಕನ ವಧೆಯ ಸಂದರ್ಭ ಎಲ್ಲರೂ ನಮ್ಮವರೆನ್ನುವ ಸದ್ಗುಣಗಳ ಸಂದರ್ಭ, ಸನ್ನಿವೇಶಗಳು ರಾಮನನ್ನು ಆದರ್ಶಪುರುಷನನ್ನಾಗಿಸಿವೆ. ರಾಜರಾದವರು ಜನರ ನಡುವೆ ಒಂದಾಗಿ ತಾನೂ ಒಬ್ಬ ಸಾಮಾನ್ಯನಂತೆ ಅವರೊಂದಿಗಿದ್ದು, ಅವರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಾ ಜನಕಲ್ಯಾಣವನ್ನು ಬಯಸುವವರು ಮಾತ್ರ ಆದರ್ಶರಾಗಿ ನಿಲ್ಲುತ್ತಾರೆ ಎನ್ನುವುದನ್ನು ರಾಮ ಭರತರಾದಿಯಾಗಿ ಹಲವು ಪಾತ್ರಗಳ ಮೂಲಕ ನಿರೂಪಿಸಿದ್ದಾರೆ. ಒಟ್ಟಾರೆ ಮಾನವ ಸ್ವಭಾವದ ವಿವಿಧ ಮುಖಗಳನ್ನು ತಿಳಿಸುವ ಮಹಾಚಿಂತನೆ, ಮಹಾದರ್ಶನ, ಮಹಾಶೈಲಿ, ಮಹಾಕಲ್ಪನೆ ಮೊದಲಾದ ತತ್ವಗಳಿಂದ ಕಾವ್ಯ ಇಡೀ ಜಗತ್ತಿನ ನಾಡಿಮಿಡಿತವನ್ನು ಮುಟ್ಟಿದೆ. ಜನಜೀವನ ಸುಧಾರಣೆಯಾಗುವಲ್ಲಿ, ಬದುಕು ಪವಿತ್ರಗೊಳಿಸುವಲ್ಲಿ ಬದುಕಿನ ಜೀವನಾದರ್ಶಗಳ ನೈಜಚಿತ್ರಣ ಕಟ್ಟಿ ಕೊಟ್ಟಿರುವಲ್ಲಿ ವಾಲ್ಮೀಕಿ ಪಾತ್ರ ಹಿರಿದು. ಹಾಗಾಗಿಯೆ ವಾಲ್ಮೀಕಿ ರಾಮಾಯಣ ಜನಸಾಮಾನ್ಯರ ವೇದವಿದ್ದಂತೆ. ಸಮಕಾಲೀನ ಸಮಸ್ಯೆಗಳಿಗೆ ಅದರಲ್ಲಿ ಪರಿಹಾರವಿದೆ.
ವಾಲ್ಮೀಕಿ ಒಬ್ಬ ಬೇಡ, ಬೇಟೆಗಾರ. ಗುಡ್ಡಗಾಡು ತಿರುಗುವ ಅಲೆಮಾರಿ. ಕಾಯಕದಿಂದಲೇ ಕೈಲಾಸ ಎನ್ನುವಂತೆ ಬೇಟೆಗಾರನಾದ ಬೇಡನಿಗೆ ಆ ಬೇಟೆಯೆ ಅವನ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸಿ ತಿರುವನ್ನು ಕೊಡುತ್ತದೆ. ಬೇಟೆಯಿಂದಾಗುವ ನೋವು, ಸಂಕಟ, ವಿಷಾದಗಳ ಶೋಕವೇ ಶ್ಲೋಕವಾಗಿ ವಾಲ್ಮೀಕಿ ಪರಿವರ್ತಿತನಾಗುತ್ತಾನೆ. ಕವಿಯಾಗಿ. ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ, ಭಾರತೀಯ ಸಂಸ್ಕೃತಿಯ ಸೃಷ್ಟಿಕರ್ತನಾಗಿ ಕಾವ್ಯ, ಧರ್ಮ, ನೀತಿ ಮೊದಲಾದ ಮೌಲ್ಯಗಳನ್ನು ತನ್ನ ಕೃತಿಯಲ್ಲಿ ಅನಾವರಣಗೊಳಿಸುತ್ತಾನೆ. ವಾಲ್ಮೀಕಿ ನಮಗೆ ಪ್ರಸ್ತುತವಾಗೋದೆ ಹೀಗೆ. ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಇಂಥ ಸಂಘರ್ಷಗಳಿದ್ದರೆ, ವಿಷಾದಗಳಿದ್ದರೆ, ದುಃಖಗಳಿದ್ದರೆ, ಇಕ್ಕಟ್ಟು ಬಿಕ್ಕಟ್ಟುಗಳಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದನ್ನು ವಾಲ್ಮೀಕಿ ಬದುಕು ಸಾಬೀತು ಪಡಿಸುತ್ತದೆ.
ಬದುಕಿನಲ್ಲಿ ಸಂಘರ್ಷ ಅನಿವಾರ್ಯ, ಅಂತಿಮವಾಗಿ ಗೆಲುವು ಮಾತ್ರ ಸತ್ಯ, ಧರ್ಮ, ನಿಸ್ವಾರ್ಥ ತುಂಬಿದ ಮಾನವೀಯ ಮೌಲ್ಯಗಳಿಗೆ ಎನ್ನುವ ಸಾರ್ವಕಾಲಿಕ ಜೀವನದರ್ಶನವನ್ನು ನೀಡಿರುವುದರಿಂದ, ಜೊತೆಗೆ ಜನಸಾಮಾನ್ಯರ ಕಲ್ಯಾಣವೇ ಕೃತಿಯ ಪ್ರಧಾನ ಆಶಯವಾಗಿರುವುದರಿಂದ ಯುಗಯುಗಗಳೇ ಕಳೆದರೂ ರಾಮಾಯಣದ ಮೋಹಕತೆ, ಆಕರ್ಷಣೆ ಕಡಿಮೆಯಾಗಿಲ್ಲ.
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ.
ಆಶ್ಚರ್ಯದ ಸಂಗತಿಯೆಂದರೆ ಈ ನೆಲದ ಜನರಿಗೆ ವಾಲ್ಮೀಕಿಗಿಂತ, ವಾಲ್ಮೀಕಿ ಸೃಷ್ಟಿಸಿದ ರಾಮಾಯಣಕ್ಕೆ, ಅಲ್ಲಿನ ಪಾತ್ರಗಳಿಗೆ ಮಹತ್ವವಿದೆ, ಅವುಗಳಿಗೆ ಮಂದಿರಗಳಿವೆ. ಅವರೆಲ್ಲಾ ನಮ್ಮವರಾಗುತ್ತಿದ್ದಾರೆ. ಆದರೆ ದೇಶ, ಭಾಷೆ, ಧರ್ಮ ಹೀಗೆ ಎಲ್ಲವನ್ನೂ ಮೀರಿ ಮನುಷ್ಯ ಪ್ರೀತಿಯನ್ನು, ಮಾನವೀಯ ಮೌಲ್ಯವನ್ನು ಸಾರಿದ ವಾಲ್ಮೀಕಿ ಮಾತ್ರ ನಮ್ಮವನಾಗುತ್ತಿಲ್ಲ. ನಮ್ಮಿಂದ ಹೊರಗೇ ನಿಂತಿದ್ದಾನೆ. ಬಯಲಲ್ಲಿ, ಬಿಸಿಲಿನಲ್ಲಿ. ಮಣ್ಣಲ್ಲಿ. ಮಳೆಯಲಿ. ಅರಿವು, ಆಚಾರ ಮತ್ತು ಆಚರಣೆಗಳು ನಡೆನುಡಿಯಲ್ಲಿ ನೆಲೆಗೊಂಡರೆ ಎಲ್ಲವೂ ಸಾರ್ಥಕ.
(ಲೇಖಕರು ಪ್ರಾಧ್ಯಾಪಕರು, ಸಾಹಿತಿ)
ಈ ದೇವಸ್ಥಾನದಲ್ಲಿ ಮಹಿಳೆಯರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಪೂಜಿಸಲು ಅವಕಾಶ: ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ!

ಇದೊಂದಿದ್ರೆ ಸಾಕು, ಬ್ಯಾಂಕ್​ ಖಾತೆಯೇ ಬೇಕಾಗಿಲ್ಲ: ಹಣ ಪಾವತಿ-ಸ್ವೀಕೃತಿ ಎಲ್ಲವೂ ಬ್ಯಾಂಕ್ ಅಕೌಂಟ್ ಇಲ್ಲದೆಯೂ ಸಾಧ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
