ನೀರಿನ ಅಭಾವ ಹಿನ್ನೆಲೆಯಲ್ಲಿ ಜಲಮಂಡಳಿಯಿಂದ ಹೊಸ ಉಪಕ್ರಮ | ನೀರು ಕಳ್ಳತನ ತಡೆಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಗೆ ಚಿಂತನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ಉಂಟಾಗಿರುವ ನೀರಿನ ಅಭಾವ ಹಿನ್ನೆಲೆಯಲ್ಲಿ ಮಳೆನೀರು ಕೊಯ್ಲು ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ‘ವರುಣಮಿತ್ರ’ ಹೆಸರಿನಲ್ಲಿ ಸ್ವಯಂಸೇವಕರಿಗೆ ತರಬೇತಿ ನೀಡಿ ಅವರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹೊಸ ಕಾರ್ಯಕ್ರಮವನ್ನು ಬೆಂಗಳೂರು ಜಲಮಂಡಳಿ ಸಿದ್ಧಪಡಿಸಿದೆ. ಜತೆಗೆ ಭವಿಷ್ಯದಲ್ಲಿ ನೀರಿನ ಕಳ್ಳತನ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಂಸ್ಥೆ ಮುಂದಾಗಿದೆ.
‘ವಿಜಯವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಭಾಗಿಯಾಗಿ ಸಂಸ್ಥೆ ಕೈಗೊಂಡಿರುವ ವಿನೂತನ ಕಾರ್ಯಕ್ರಮಗಳು ಹಾಗೂ ನೀರು ಸರಬರಾಜು ವಿಧಾನದಲ್ಲಿ ಸುಧಾರಣಾ ಕ್ರಮಗಳ ಕುರಿತು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದರು.
ಬೆಂಗಳೂರಿಗೆ ಶಾಶ್ವತವಾದ ನೀರಿನ ಆಸರೆ ಇಲ್ಲ. 100 ಕಿ.ಮೀ. ದೂರದಿಂದ ಕಾವೇರಿ ನದಿ ನೀರನ್ನು ನಗರಕ್ಕೆ ಪೂರೈಸಲಾಗುತ್ತಿದೆ. ಪ್ರಸ್ತುತ ಬರ ಹಾಗೂ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಭವಿಷ್ಯದಲ್ಲಿ ಇಂತಹ ಸಂಕಷ್ಟಕ್ಕೆ ಸಿಲುಕದಿರಲು ಮಳೆನೀರು ಕೊಯ್ಲು ಪರಿಹಾರ ನೀಡಬಲ್ಲದು. ಇದನ್ನು ದೊಡ್ಡ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಉತ್ಸಾಹಿ ಯುವಜನರನ್ನು ಬಳಸಿಕೊಳ್ಳಲಿದ್ದೇವೆ. ಇವರಿಗೆ ಇಂಗುಗುಂಡಿ ನಿರ್ವಣ, ಅದರ ಉಪಯೋಗ ಹಾಗೂ ಇನ್ನಿತರ ಅಂಶಗಳ ಬಗ್ಗೆ 15 ದಿನಗಳ ತರಬೇತಿ ನೀಡಲಾಗುವುದು. ಬಳಿಕ ಇವರು ಸ್ವತಂತ್ರವಾಗಿ ನಾಗರಿಕರ ಬಳಿ ತೆರಳಿ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಮನವೊಲಿಸುವಂತಹ ಜಾಗೃತಿ ಕೈಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿ ಅನುಷ್ಠಾನ ಹಾಗೂ ಸಹಕಾರ ಕೋರಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಒಪ್ಪಿಗೆ ದೊರೆತ ತಕ್ಷಣ ತರಬೇತಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ನೀರಿನ ಕಳ್ಳತನಕ್ಕೆ ತಡೆ:ಬೆಂಗಳೂರು ಜಲಮಂಡಳಿ ಈಗಾಗಲೇ ಮಾಹಿತಿ ತಂತ್ರಜ್ಞಾನದ (ಐಟಿ) ಮೂಲಕ ದತ್ತಾಂಶ ಸಂಗ್ರಹ ಸೇರಿ ವಿವಿಧ ವಿಭಾಗಗಳಲ್ಲಿ ತಾಂತ್ರಿಕತೆ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಈಗ ಕೃತಕ ಬುದ್ಧಿಮತ್ತೆ (ಎಐ) ಮುನ್ನೆಲೆಗೆ ಬಂದಿದ್ದು, ಈ ವಿಧಾನದ ಮೂಲಕವೂ ಹೆಚ್ಚಿನ ಪ್ರಯೋಜನ ಪಡೆಯುವತ್ತ ಲಕ್ಷ್ಯ ಹರಿಸಲಾಗಿದೆ. ಮುಖ್ಯವಾಗಿ ನೀರಿನ ಕಳ್ಳತನ ತಡೆಗೆ ಎಐ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಸಂಸ್ಥೆಯಿಂದ ನೀರಿನ ಸಂಪರ್ಕ ಪಡೆದಿರುವ ಗ್ರಾಹಕರು ನಿಗದಿತ ಬಳಕೆಗಿಂತ ಹೆಚ್ಚು ಪ್ರಮಾಣದಲ್ಲಿ ಬಳಸಿಕೊಳ್ಳಲು ವಾಮಮಾರ್ಗ ಅನುಸರಿಸಿದರೆ ಅದನ್ನು ಪತ್ತೆಹಚ್ಚಬಹುದು. ಆಯಾ ಪ್ರದೇಶಕ್ಕೆ ಪೂರೈಕೆಯಾಗುವ ನೀರಿನ ಮಿತಿಗಿಂತ ಹೆಚ್ಚು ಬಳಸಿಕೊಂಡರೂ ಶೀಘ್ರವೇ ಮಾಹಿತಿ ಸಂಗ್ರಹಿಸಬಹುದಾಗಿದೆ. ಇದಕ್ಕಾಗಿ ನೀರಿನ ಮೀಟರ್ ಸಾಧನದಲ್ಲಿ ಸೆನ್ಸರ್ ಅಳವಡಿಸಿದರೆ ಕಳ್ಳತನದ ಪ್ರಕರಣಗಳ ಮೇಲೆ ನಿಗಾ ಇಡಬಹುದಾಗಿದೆ. ಈ ವಿಚಾರದಲ್ಲಿ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ. ಮುಂದಿನ 2-3 ತಿಂಗಳಲ್ಲಿ ಅಧಿಕಾರಿ ಮಟ್ಟದಲ್ಲಿ ಚಿಂತನ-ಮಂಥನ ನಡೆಸಿ ಮಾಹಿತಿ ಸಂಗ್ರಹಿಸಲಾಗುವುದು. ಆ ಬಳಿಕ ಸ್ಪಷ್ಟ ಚೌಕಟ್ಟು ರೂಪಿಸಿ ಕಾರ್ಯಕ್ರಮ ಜಾರಿಗೊಳಿಸುವ ಉದ್ದೇಶ ಇದೆ. ಈ ವಿಧಾನ ಯಶಸ್ವಿಯಾದಲ್ಲಿ ನೀರಿನ ಕಳ್ಳತನ ಹಾಗೂ ಸೋರಿಕೆಯನ್ನು ಗಣನೀಯವಾಗಿ ತಡೆಗಟ್ಟಬಹುದಾಗಿದೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಪ್ರತಿಪಾದಿಸಿದರು.
ಸಂಸ್ಕರಿತ ನೀರಿಗೆ ಬೇಡಿಕೆ ಹೆಚ್ಚಳ:ಹಾಲಿ ವರ್ಷದಲ್ಲಿ ಸಂಸ್ಕರಿತ ನೀರಿನ ಬಳಕೆಗೆ ಜನರಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಮೊದಲು ನಿತ್ಯ 60 ಸಾವಿರ ಲೀ. ಬೇಡಿಕೆ ಇದದ್ದು, ಈಗ 60 ಲಕ್ಷ ಲೀ.ಗೆ ಏರಿದೆ. ಸಂಸ್ಕರಿತ ನೀರನ್ನು ಬೇಡಿಕೆಯಷ್ಟು ಪೂರೈಸಲು ಜಲಮಂಡಳಿ ಸಿದ್ಧವಿದೆ. ಇದಕ್ಕಾಗಿ ಖಾಸಗಿ ಟ್ಯಾಂಕರ್​ಗಳನ್ನು ಪಡೆದುಕೊಂಡು ಪೂರೈಕೆ ಕೂಡ ಮಾಡುತ್ತಿದ್ದೇವೆ. ಕಟ್ಟಡ ನಿರ್ಮಾಣ ಸೇರಿ ಗೃಹೇತರ ಕಾರ್ಯಕ್ಕೆ ಸಂಸ್ಕರಿತ ನೀರನ್ನೇ ಬಳಸುವ ಪದ್ಧತಿಯನ್ನು ಜನರು ಅನುಸರಿಸಿದ್ದೇ ಆದಲ್ಲಿ ನೀರಿನ ಮಿತವ್ಯಯ ಸುಲಭವಾಗಲಿದೆ ಎನ್ನುತ್ತಾರೆ ಜಲಮಂಡಳಿ ಅಧ್ಯಕ್ಷರು.
ಬೆಂಗಳೂರು ನಗರದಲ್ಲಿ ಕಾವೇರಿ ನೀರು ಪೂರೈಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರಿನ ಅಭಾವವಿಲ್ಲ. ಅಲ್ಲದೆ, ನಗರಕ್ಕೆ ವರ್ಷಪೂರ್ತಿ ಕಾವೇರಿ ನೀರು ಪೂರೈಕೆ ಮಾಡುವಷ್ಟು ಜಲ ಸಂಗ್ರಹ ಕೆಆರ್​ಎಸ್​ನಲ್ಲಿ ಲಭ್ಯವಿದೆ. ಆದರೆ, ಹೆಚ್ಚು ಹಣ, ವಿದ್ಯುತ್ ಹಾಗೂ ಶ್ರಮದಿಂದ ನೀರನ್ನು ತಂದು ವಿತರಿಸುತ್ತಿರುವ ಕಾರಣ ಮಿತವ್ಯಯ ಮಾಡಬೇಕಾದ ಅಗತ್ಯ ಇದೆ. ಕಾವೇರಿ ಸಂಪರ್ಕ ಇಲ್ಲದೆ, ಬೋರ್​ವೆಲ್ ಮೇಲೆ ಅವಲಂಬಿತವಾಗಿರುವ ಪ್ರದೇಶಗಳಲ್ಲಿ ನೀರಿನ ಪೂರೈಕೆ ಸಮಸ್ಯೆ ಇದೆ. ಹೀಗಾಗಿ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕಿದೆ. ವಾಹನ ಸ್ವಚ್ಚತೆ, ಗಾರ್ಡನಿಂಗ್ ಇತ್ಯಾದಿಗೆ ಸಂಸ್ಕರಿತ ನೀರು ಬಳಸಿಕೊಳ್ಳಲು ಜನತೆ ಮುಂದಾಗಬೇಕು.
| ಡಾ. ರಾಮ್ ಪ್ರಸಾತ್ ಮನೋಹರ್ ಜಲಮಂಡಳಿ ಅಧ್ಯಕ್ಷ
ಪ್ರಸ್ತುತ ಸನ್ನಿವೇಶದಲ್ಲಿ ಜಲ ಸಂರಕ್ಷಣೆ ಜತೆಗೆ ನೀರಿನ ಮಿತವ್ಯಯಕ್ಕೆ ಆದ್ಯತೆ ಸಿಗಬೇಕಿದೆ. ಇದನ್ನಾಧರಿಸಿ ಜಲಮಂಡಳಿಯು ‘ಪಂಚಸೂತ್ರ’ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
1. ನಲ್ಲಿಗಳಿಗೆ ಏರಿಯೇಟರ್ ಅಳವಡಿ ಸುವುದರಿಂದ ಕಡಿಮೆ ನೀರು ಖರ್ಚು.
2. ವಾಷಿಂಗ್ ಮೆಶಿನ್, ಶೌಚಾಲಯ ಸ್ವಚ್ಚತೆ, ಗಾರ್ಡನಿಂಗ್, ವಾಹನ ಸ್ವಚ್ಚತೆಗೆ ಸಂಸ್ಕರಿತ ನೀರು ಬಳಕೆ.
3. ಅಂತರ್ಜಲ ಹೆಚ್ಚಿಸಲು ಇಂಗು ಗುಂಡಿಗಳ ನಿರ್ವಣಕ್ಕೆ ಆದ್ಯತೆ.
4. ಬೋರ್​ವೆಲ್ ನೀರನ್ನು ಅನಗತ್ಯ ಬಳಕೆಗೆ ನಿರ್ಬಂಧ.
5. ಬಲ್ಕ್ ಬಳಕೆದಾರರು ನೀರಿನ ಬಳಕೆಯನ್ನು ಕಡಿಮೆಗೊಳಿಸಲು ಸಮುದಾಯ ಜಾಗೃತಿ.
ಹ್ಯಾಟ್ರಿಕ್​ ಸೋಲು: ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
