| ಪ್ರಶಾಂತ ರಿಪ್ಪನ್​ಪೇಟೆ
ಮೂವತ್ಮೂರು ಕೋಟಿ ದೇವಾನುದೇವತೆಗಳನ್ನು ಪೂಜಿಸುವ ಹಿಂದೂ ಪರಂಪರೆಯಲ್ಲಿ ಪ್ರತಿ ದೇವರ ಅವತಾರದ ಹಿಂದೆಯೂ ಪೌರಾಣಿಕ ಕತೆಗಳಿವೆ. ಅಂತೆಯೇ ಅಧರ್ಮದ ನಾಶಕ್ಕಾಗಿಯೇ ಅವತರಿಸಿದ ಉಗ್ರಸ್ವರೂಪಿ ವೀರಭದ್ರ ಸ್ವಾಮಿ. ಹೆಸರೇ ಹೇಳುವಂತೆ ಈತ ವೀರನೂ ಹೌದು ಭದ್ರನೂ ಹೌದು. ಭದ್ರನೆಂದರೆ ಭಯಂಕರ, ವೀರನೆಂದರೆ ಮಹಾಶೂರ. ವೀರಭದ್ರನೆಂದರೆ ದುಷ್ಟರ ಪಾಲಿಗೆ ಭಯಂಕರ ಸ್ವರೂಪದಲ್ಲಿ ಬಂದು ತನ್ನ ಪರಾಕ್ರಮದಿಂದ ಅವರನ್ನು ಸಂಹಾರ ಮಾಡಿ ಜಗತ್ತಿಗೆ ಶಿವಧರ್ಮದ ಸಾರವನ್ನು ಸಾರಿದ ಮಹಾತ್ಮ. ಇಂತಹ ವೀರಭದ್ರಸ್ವಾಮಿ ಅವತರಿಸಿದ ಪುಣ್ಯದಿನವೇ ಭಾದ್ರಪದ ಮಾಸದ ಮೊದಲನೇ ಮಂಗಳವಾರ.
ವೀರಭದ್ರ ಶಿವಗಣಗಳಲ್ಲಿ ಪ್ರಮುಖನಾದವನು. ಬ್ರಹ್ಮನಿಗೆ ಸೃಷ್ಟಿಕಾರ್ಯ ಮಾಡುವುದು ಹೇಗೆ ಎಂಬುದನ್ನು ತೋರಿಸುವುದಕ್ಕಾಗಿ ಶಿವ ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರನೂ ಓರ್ವ. ಹಾಗೆ ಶಿವನಿಂದ ಸೃಷ್ಟಿಗೊಂಡ ಪಂಚಗಣಾಧೀಶ್ವರರನ್ನು ಗೋತ್ರಪುರುಷರೆನ್ನಲಾಗುತ್ತದೆ. ಅಂತೆಯೇ ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಪೀಠದ ಗೋತ್ರಪುರುಷನಾಗಿ, ಕ್ಷೇತ್ರನಾಥ ವೀರಭದ್ರ ಪೂಜೆಗೊಳ್ಳುತ್ತಿದ್ದಾನೆ.
ದಕ್ಷಬ್ರಹ್ಮನು ಶಿವನಿಗೆ ಮಾಡಿದ ಅಪಮಾನದಿಂದ ನೊಂದು, ಪುತ್ರಿ ದಾಕ್ಷಾಯಣಿ ಯಾಗಕುಂಡಕ್ಕೆ ಹಾರಿ ಅಗ್ನಿಪ್ರವೇಶ ಮಾಡಿದಾಗ ಕೋಪೋದ್ರಿಕ್ತನಾದ ರುದ್ರದೇವ ದಕ್ಷನ ಸಂಹಾರಕ್ಕೆ ವೀರಭದ್ರನನ್ನು ಆಹ್ವಾನಿಸುತ್ತಾನೆ. ರುದ್ರನ ಅಂಶವೇ ಆದ ವೀರಭದ್ರ ದಕ್ಷನನ್ನು ಸಂಹರಿಸಿ, ಶಿವದ್ರೋಹಿಗಳ ಪಾಲಿಗೆ ಹೊಸ ಸಂದೇಶವನ್ನು ನೀಡುತ್ತಾನೆ.
ಐತಿಹಾಸಿಕ, ಸಾಂಸ್ಕೃತಿಕ ನಾಯಕ ವೀರಭದ್ರ:ವೀರಭದ್ರಸ್ವಾಮಿ ಕೇವಲ ಪೌರಾಣಿಕ ಪುರುಷನಲ್ಲ. ಐತಿಹಾಸಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿಯೂ ಅಷ್ಟೇ ಪ್ರಸಿದ್ಧ. ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ವೀರಗಾಸೆಯ ಮೂಲಕ ವೀರಭದ್ರನ ಚರಿತ್ರೆ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದೆ. ತ್ರೇತಾಯುಗದಲ್ಲಿ ಆಂಜನೇಯನಿಗೆ ಸ್ವತಃ ವೀರಭದ್ರ ಲಿಂಗದೀಕ್ಷೆಯನ್ನು ನೀಡಿದ ಉಲ್ಲೇಖವಿದ್ದು, ಆದ್ದರಿಂದಲೇ ವೀರಾಂಜನೇಯ ಎಂಬ ಹೆಸರು ಬಂದಿದೆ.
ಹಿರಿಯ ಸಂಶೋಧಕ ಎಂ.ಜಿ.ನಾಗರಾಜ ವೀರಭದ್ರ ಪರಂಪರೆ ಕುರಿತು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಅವರ ಪ್ರಕಾರ ಪ್ರಾಚೀನವಾದ ಸಿಂಧೂ ಸಂಸ್ಕೃತಿಯಲ್ಲೂ ರುದ್ರಪಶುಪತಿಯ ಉಬ್ಬುಮುದ್ರಿಕೆ ದೊರೆತಿದ್ದು, ವೀರಭದ್ರ ಪರಂಪರೆಯ ಅತ್ಯಂತ ಪ್ರಾಚೀನ ದಾಖಲೆಯಾಗಿದೆ. ಈ ನಿಟ್ಟಿನಲ್ಲಿ ವಿದ್ವಾಂಸರಾಗಿದ್ದ ಜಚನಿಯವರು ಸಾಕಷ್ಟು ಗ್ರಂಥಗಳನ್ನು ರಚಿಸಿದ್ದಾರೆ.
ಶೈವರು ಮಾತ್ರವಲ್ಲದೆ ಎಲ್ಲ ಜಾತಿ ಜನಾಂಗದವರು ವೀರಭದ್ರನನ್ನು ಪೂಜಿಸಿದ ಇತಿಹಾಸವಿದೆ. ವೈಷ್ಣವನಾಗಿದ್ದ ಬಾಣದೊರೆ ನಂದಿವರ್ಮನ ಸಾಮರ್ಥ್ಯವನ್ನು ವೀರಭದ್ರನ ಶೌರ್ಯಕ್ಕೆ ಹೋಲಿಸಲಾಗಿದೆ. ಬಾದಾಮಿ ಚಾಲುಕ್ಯರು ತಮ್ಮ ಆರಾಧ್ಯ ದೇವಿಯರಾದ ಸಪ್ತಮಾತೃಕೆಯರ ರಕ್ಷಕನಾಗಿ ವೀರಭದ್ರನನ್ನು ಚಿತ್ರಿಸಿದ್ದಾರೆ. ಜೈನಕವಿ ಕನ್ನಡಪಾಯನನು ವೀರೇಶ ಚರಿತೆಯನ್ನು ರಚಿಸಿದ್ದು ಗಮನಾರ್ಹ. ನಾಡಪ್ರಭು ಕೆಂಪೇಗೌಡರ ವಂಶಸ್ಥರು ಸಾವನದುರ್ಗ ವೀರಭದ್ರನ ಆರಾಧಕರಾಗಿದ್ದರು. ಬೆಂಗಳೂರಿನ ವಿಭೂತಿಪುರ ಮಠದ ವೀರಭದ್ರನ ದೇವಾಲಯವನ್ನು ಜೀಣೋದ್ಧಾರ ಮಾಡಿದ ಪೆರಿಯ ಕೆಂಪೇಗೌಡರ ಇತಿಹಾಸ ಅಲ್ಲಿನ ಶಾಸನದಿಂದ ತಿಳಿಯುತ್ತದೆ. ಈ ಮೂಲಕ ಒಕ್ಕಲಿಗ ಸಮುದಾಯದವರು ಕೂಡ ವೀರಭದ್ರನನ್ನು ಪೂಜಿಸಿದ ಉಲ್ಲೇಖಗಳು ದೊರೆಯುತ್ತವೆ.
ಹಿರಿಯ ಸಂಶೋಧಕ ಸಂಗಮೇಶ ಸವದತ್ತಿಮಠ ಗುರುತಿಸುವಂತೆ ವೀರಭದ್ರನ ಕ್ಷೇತ್ರಗಳು ಜಗತ್ತಿನಾದ್ಯಂತ ಇವೆ. ಭಾರತದಲ್ಲಂತೂ ದಶದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳು ಕಾಣುತ್ತವೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಜಾಟ್ ಸಮುದಾಯಕ್ಕೆ ವೀರಭದ್ರನೇ ಮೂಲಪುರುಷ ಎನ್ನಲಾಗುತ್ತದೆ.
ರಾಷ್ಟ್ರಮಟ್ಟದಲ್ಲಿ ವೀರಭದ್ರ ಜಯಂತಿ:ವೀರಭದ್ರ ಕ್ಷೇತ್ರಗಳು ಕರ್ನಾಟಕದ ಮಟ್ಟಿಗೆ ಹೆಚ್ಚೆಂದೇ ಹೇಳಬಹುದು. ಗೋತ್ರಪುರುಷನಾಗಿರುವ ವೀರಭದ್ರಸ್ವಾಮಿ ವೀರಶೈವ ಲಿಂಗಾಯತ ಸಮುದಾಯದ ಲಕ್ಷಾಂತರ ಕುಟುಂಬಗಳ ಕುಲದೈವನಾಗಿದ್ದಾನೆ. ರಂಭಾಪುರಿ ಪೀಠದಲ್ಲಿ ನೆಲೆಯಾಗಿರುವ ವೀರಭದ್ರನನ್ನೇ ಮೂಲವೆಂದುಕೊಂಡು, ನೆರೆಯ ಆಂಧ್ರಪ್ರದೇಶದ ರಾಯಚೋಟಿ, ಬೆಳಗಾವಿಯ ಗೊಡಚಿ, ಯಡೂರ, ಸಾಗರದ ಕೆಳದಿ, ಕೆಂಜಿಗಾಪುರ, ಬೆಂಗಳೂರಿನ ಪ್ರಳಯಕಾಲ ವೀರಭದ್ರ ಹೀಗೆ ನೂರಾರು ಪ್ರಖ್ಯಾತ ವೀರಭದ್ರ ಕ್ಷೇತ್ರಗಳಿವೆ. ಆ ಎಲ್ಲ ಕ್ಷೇತ್ರಗಳಲ್ಲಿ ಪ್ರತಿವರ್ಷ ಭಾದ್ರಪದ ಮಾಸದ ಮೊದಲನೇ ಮಂಗಳವಾರ ವೀರಭದ್ರನ ಜಯಂತಿಯನ್ನು ಆಚರಿಸಲಾಗುತ್ತದೆ.
ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ವೀರಭದ್ರನ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಸಾರ್ವತ್ರಿಕವಾಗಿ ಆಚರಿಸಬೇಕೆಂಬುದು ಹಲವು ಮಠಾಧೀಶರು, ಮುಖಂಡರು ಮತ್ತು ಸಮಾಜ ಬಾಂಧವರ ಹೆಬ್ಬಯಕೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ವೀರಭದ್ರ ಜಯಂತಿ ಆಚರಣೆಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಮುಂದಾಳತ್ವ ವಹಿಸಿದ್ದಾರೆ. ಕರೊನಾ ಇರುವುದರಿಂದ ದೇಶಾದ್ಯಂತ ಇರುವ ಭಕ್ತರು ಇಂದು ಆನ್​ಲೈನ್ ಮೂಲಕ ವೀರಭದ್ರ ಜಯಂತಿ ಆಚರಣೆಗೆ ಕರೆ ನೀಡಿದ್ದಾರೆ.
(ಲೇಖಕರು ದಿಗ್ವಿಜಯ ನ್ಯೂಸ್ ಕಾರ್ಯಕ್ರಮ ನಿರ್ಮಾಪಕರು)
ನಾಯಕತ್ವ ಹೊಣೆ ಹೊರಲು ರೆಡಿಯಾಗಿರುವ ರಾಹುಲ್​ಗೆ ಮಾದರಿ ನಾಯಕರು ಯಾರು ಗೊತ್ತೆ..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − thirteen =
Remember me
