ಬೆಂಗಳೂರು:ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿದೆ. ಹಿರಿಯ ಲೇಖಕಿ, ನಾಡೋಜ ಕಮಲಾ ಹಂಪನಾ (89) ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವಯೋ ಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು ಬೆಂಗಳೂರಿನ ಪುತ್ರಿಯ ನಿವಾಸದಲ್ಲಿ ರಾತ್ರಿ ನಿದ್ರಿಸುವಾಗಲೇ ಚಿರನಿದ್ರೆಗೆ ಜಾರಿದ್ದಾರೆ. ಮೃತರು ಪತಿ ಡಾ. ಹಂ.ಪ. ನಾಗರಾಜಯ್ಯ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಸೇರಿ ಬಂಧುಮಿತ್ರರು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹಿತ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಸಾರ್ವಜನಿಕ ದರ್ಶನ ನಂತರ ಕಮಲಾ ಹಂಪನಾ ಅವರ ಇಚ್ಛೆಯಂತೆ ಕಣ್ಣು ಮತ್ತು ದೇಹವನ್ನು ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು.

‘ಅವರೆಲ್ಲಿ ಸಾಧು ಸಂತರು, ಸ್ವಾಮೀಜಿಗಳೆಂದು ಹೊರಟು ಬಿಡುತ್ತಾರೋ ಎಂಬ ಭಯ ನನಗೆ’ ಎಂದು ಹೆಂಡತಿ ಹೇಳಿದರೆ, ‘ಇವಳು ಹೀಗೆ ಮಾಡಿಯೇ ನನ್ನನ್ನು ಈ ಸಂಸಾರವೆಂಬ ಬಂಧನಕ್ಕೆ ಕಟ್ಟಿಹಾಕುತ್ತಾಳೆ’ ಎಂದು ಗಂಡನ ಉದ್ಗಾರ… ಇದು ಕನ್ನಡದ ಅಪರೂಪದ ಸಾಹಿತಿ ದಂಪತಿ ಕಮಲಾ ಹಂಪನಾ ಮತ್ತು ಹಂಪ ನಾಗರಾಜಯ್ಯ ಅವರ ದಾಂಪತ್ಯಗೀತದ ಮೆಲುಕು. ಅವರಿಬ್ಬರೂ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಇಬ್ಬರೂ ಪ್ರಾಧ್ಯಾಪಕರು, ಬರಹಗಾರರು, ಸಾಹಿತಿಗಳು. ಎಲ್ಲದರಲ್ಲಿಯೂ ಸಮಾನತೆ, ಸಮಭಾವ, ಸಮಚಿತ್ತವಿರುವ ಸಮರಸದ ಬದುಕು ಕಂಡವರು. ದಂಪತಿಗಳಿಬ್ಬರೂ ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದವರಂತೆ ಬರೆದರು, ಬರೆದಂತೆ ಬದುಕಿದರು, ಬದುಕಿನ ಆ ಸುದೀರ್ಘ ಪಯಣದ ಒಳ ಹೂರಣವನ್ನು ಸೊಗಸಾಗಿ ಬಿಡಿಸಿಟ್ಟರು. ಇದೀಗ ಕಮಲಾ ಹಂಪನಾ ಸಾವಿರ ನೆನಪುಗಳನ್ನುಳಿಸಿ ಇಹದ ಬದುಕು ತ್ಯಜಿಸಿದ್ದಾರೆ.ವಿಜಯವಾಣಿಕೆಲವು ವರ್ಷ ಕೆಳಗೆ ಇವರಿಬ್ಬರ ಅಪರೂಪದ ದಾಂಪತ್ಯ ಸಹಯಾನವನ್ನು ವಿಶೇಷವಾಗಿ ಪ್ರಕಟಿಸಿತ್ತು. ಹಂ.ಪ. ನಾಗರಾಜಯ್ಯ ಕಂಡಂತೆ ಕಮಲಾ ಅವರೊಂದಿಗಿನ ಸಹಯಾನದ ಅಪರೂಪದ ಮೆಲುಕನ್ನು ಮತ್ತೊಮ್ಮೆ ಇಲ್ಲಿ ಕಟ್ಟಿಕೊಡಲಾಗಿದೆ.
‘ನಮ್ಮದು ಲವ್ ಎಟ್ ಫಸ್ಟ್ ಸೈಟ್ ಅಲ್ಲ, ಲವ್ ಎಟ್ ಮೆನಿಮೆನಿ ಸೈಟ್. ನನ್ನ ಮನ ಗೆದ್ದ ಇವಳು ನನ್ನ ಗರ್ಲ್​ಫೆಂಡ್, ಆಗಲೂ ಈಗಲೂ, ಎಂದೆಂದಿಗೂ… ನಾವಿಬ್ಬರೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಓದುತ್ತಿದ್ವಿ. ಹುಡುಗಿ ಬಲು ಜಾಣೆ, ಸುಸಂಸ್ಕೃತ ನಡೆನುಡಿ, ಇವಳೇ ಯಾಕಾಗಬಾರದು ನನ್ನ ಮನದನ್ನೆ… ಅವಳನ್ನು ನೋಡಿದಾಗಲೆಲ್ಲ ಅನಿಸುತ್ತಿತ್ತು. ಆದರೆ ಅವಳೋ ಸ್ಟ್ರಿಕ್ಟೋ ಸ್ಟ್ರಿಕ್ಟೋ. ಈ ಕಡೆ ನೋಡುವುದೂ ಇಲ್ಲ ಅಂತಾಳಲ್ಲ. ಅದಕ್ಕೆ ಯುಗಾದಿಯ ದಿವಸ ಅವಳಿಗೊಂದು ಗ್ರೀಟಿಂಗ್ ಕಳುಹಿಸಿದೆ. ಅದರಲ್ಲಿ ದೊಡ್ಡದಾದ ರಾಧಾ ಕೃಷ್ಣ ಚಿತ್ರವಿತ್ತು. ಜೊತೆಗೆ ಕುವೆಂಪು ಅವರ, ತೊಲಗಲಿ ದುಃಖ | ತೊಲಗಲಿ ಮತ್ಸರ | ಪ್ರೇಮಕ್ಕೆ ಮೀಸಲು ನವ ಸಂವತ್ಸರ ||
ಕವನವಿರುವ ಗ್ರೀಟಿಂಗ್​ನ್ನು ಹಾಸ್ಟೆಲ್​ಗೆ ಪೋಸ್ಟ್ ಮಾಡಿಬಿಟ್ಟೆ, ಏನಾದರಾಗಲಿ ಎಂದು. ಆ ರಾಧೆ ನೀನು, ಈ ಕೃಷ್ಣ ನಾನು ಎಂಬ ಸೂಚನೆಯನ್ನೂ ಅದರಲ್ಲಿ ಕೊಟ್ಟಿದ್ದೆ. ಆದರೆ ಅವಳಿಂದ ಯಾವ ಉತ್ತರವೂ ಬರಲಿಲ್ಲ. ನಂತರ ಅವಳಿಗೆ ಲೈಬ್ರರಿಯಲ್ಲಿ ಯಾವುದಾದರೂ ಪುಸ್ತಕ ಬೇಕೆಂದರೆ ನಾನೇ ಹೋಗಿ ತೆಗೆದುಕೊಟ್ಟು ಅದರಲ್ಲೊಂದು ಲವ್ ಲೆಟರ್ ಇಟ್ಟು ಕೊಡುತ್ತಿದ್ದೆ. ಅದಕ್ಕೂ ಉತ್ತರ ಇಲ್ಲ ಇವಳದ್ದು. ಮನದಲ್ಲೇನೋ ಕಸಿವಿಸಿ, ಹೃದಯದ ಭಾವನೆಗಳನ್ನು ಬಚ್ಚಿಡಲಾಗದೆ ತಹತಹಿಸುತ್ತಿದ್ದೆ. ಹೀಗಿರುವಾಗಲೇ ನಮ್ಮ ಸಹಪಾಠಿಯೊಬ್ಬನ ಮದುವೆಗೆ ನಾವಿಬ್ಬರೂ ಟಾಂಗಾದಲ್ಲಿ ಹೋಗಬೇಕಾದ ಸಂದರ್ಭ ಒದಗಿ ಬಂತು. ನನ್ನ ಜೀವನದ ಬಹು ಅಮೂಲ್ಯ ಕ್ಷಣವದು. ಆಗ ಆದ ರೋಮಾಂಚನ ಅನುಭವದ ನೆನಪು ಇನ್ನೂ ನನ್ನ ಮನದಲ್ಲಿ ಹಸಿಯಾಗಿದೆ. ಹೀಗೆ ಶುರುವಾದ ನಮ್ಮ ಪ್ರೇಮ ಅಲ್ಲಿಂದ ಮುಂದೆ ಗಟ್ಟಿಯಾಗುತ್ತ ಹೋಯಿತು.
ಎಂ.ಎ ಮಾಡುವ ವೇಳೆಗೆ ನಮ್ಮಿಬ್ಬರ ಪ್ರೇಮ ದಟ್ಟವಾಯಿತು. ಆ ದಿನಗಳು ನಿಜಕ್ಕೂ ತುಂಬ ಸಂತಸದ ದಿನಗಳು. ಎಂ.ಎ ಮುಗಿದ ತಕ್ಷಣವೇ ಇಬ್ಬರಿಗೂ ಕೆಲಸ ಸಿಕ್ಕಿತು ಕೂಡ. ನನಗೆ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಅವಳಿಗೆ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಕೆಲಸ ಸಿಕ್ಕಿತು.
ಇಬ್ಬರಿಗೂ ಕೆಲಸವೇನೋ ಸಿಕ್ಕಿತು. ಆದರೆ ಇಬ್ಬರೂ ಬೇರೆಯಾಗುವ ಸಮಯವದು. ಆ ಯಾತನೆ ಯಾರಿಗೂ ಬೇಡ. ಆಗ ನಮ್ಮನ್ನು ಬದುಕಿಸಿದ್ದೇ ಈ ಪೋಸ್ಟ್ ಆಫೀಸು. ಈಗಿನ ಹಾಗೆ ಆಗ -ಫೋನುಗಳಿರಲಿಲ್ಲ. ಹಾಗಾಗಿ ಪತ್ರಗಳೇ ನಮ್ಮನ್ನು ಬದುಕಿಸಿದವು. ಅವಳ ಪತ್ರಕ್ಕಾಗಿ ನಿಮಿಷ ನಿಮಿಷಕ್ಕೂ ಕಾಯುತ್ತಿದ್ದೆ. ಅವಳು ಹಾಸ್ಟೆಲ್​ನಲ್ಲಿದ್ದಾಗೇನೋ ಪರವಾಗಿಲ್ಲ. ಪ್ರೀಯಾಗಿ ಬರೆದುಬಿಡುತ್ತಿದ್ದೆ. ಆದರೆ ಅವಳು ಮನೆಯಲ್ಲಿದ್ದಾಗ ಮಾತ್ರ ಸ್ವಲ್ಪ ಕಷ್ಟವಾಗುತ್ತಿತ್ತು. ನಾಗು ಎಂಬ ಹುಡುಗಿ ಹೆಸರಿನಿಂದ ಅವಳಿಗೆ ಪತ್ರ ಬರೆಯುತ್ತಿದ್ದೆ. ಆಗ ಸ್ವಲ್ಪ ಗಂಭೀರವಾಗಿಯೇ ಬರೆಯುತ್ತಿದ್ದೆ. ಹೀಗೆ ಸಾಗಿತು ನಮ್ಮ ಪತ್ರವ್ಯವಹಾರ. ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಬೆಂಗಳೂರಿಗೆ ಹೋಗಿ ಬಿಡುತ್ತಿದ್ದೆ. ಆಗ ಅವಳ ಮುಖದಲ್ಲಿನ ಭಯ, ಸಂತೋಷ ಎಲ್ಲವೂ ಇಂದಿಗೂ ನನ್ನ ನೆನಪಿನಲ್ಲುಳಿದಿದೆ.

ಕನ್ನಡದ ಕಂಪು ಹೆಚ್ಚಿಸಿದ ಕಮಲಾ: ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1935ರಲ್ಲಿ ಜನಿಸಿದ ಕಮಲಾ ಹಂಪನಾ, ಚಳ್ಳಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ, ತುಮಕೂರಿನಲ್ಲಿ ಪ್ರೌಢ ಶಿಕ್ಷಣ ಹಾಗೂ ಮೈಸೂರಿನಲ್ಲಿ ಕಾಲೇಜು ವ್ಯಾಸಂಗ ಮಾಡಿದರು. ಬಿ.ಎ. ಆನರ್ಸ್ ಪದವಿ ಪಡೆದ ಅವರು, 1958ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಆರಂಭಿಸಿದರು. ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕಿ, ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ನಿವೃತ್ತರಾದ ಬಳಿಕ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಜೈನಧರ್ಮದ ಹಳಗನ್ನಡ ಗ್ರಂಥ ಸಂಪಾದನೆ, ಜೀವನ ಚರಿತ್ರೆ, ಕಥೆ, ಕವನ, ವ್ಯಕ್ತಿ ಚಿತ್ರ ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 60ಕ್ಕೂ ಹೆಚ್ಚು ಕೃತಿಗಳನ್ನು ಕಮಲಾ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಗೌರವ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೂಡಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು ಕಮಲಾ ಹಂಪನಾ ಅವರ ಸಾಹಿತ್ಯ ಪಯಣದ ಬಹುದೊಡ್ಡ ಮೈಲಿಗಲ್ಲು. ತಮ್ಮ ಅಧ್ಯಯನ, ಅಧ್ಯಾಪನ, ಬರಹ, ಭಾಷಣ ಮತ್ತು ಸಂಶೋಧನೆಗಳಿಂದ ಸುಮಾರು 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಕಮಲಾ ಹಂಪನಾ, ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿಯಾಗಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.
ಡಾ. ಕಮಲಾ ಹಂಪನಾ ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಸಂಪುಟಗಳು ಹೊರಬಂದಿವೆ. ನಾಟಕ, ಕತೆಗಳು ಮತ್ತು ಆಧುನಿಕ ವಚನಗಳನ್ನು ಬರೆದಿದ್ದಾರೆ. ಹಾಗೂ ಎರಡು ಇಂಗ್ಲಿಷ್ ಪುಸ್ತಕಗಳನ್ನೂ ರಚಿಸಿದ್ದಾರೆ.

ನಮ್ಮಿಬ್ಬರ ಪ್ರೇಮಕಾಂಡ ಮದುವೆ ಪ್ರಸ್ತಾಪದಿಂದ ಯುದ್ಧಕಾಂಡವಾಗಿ ಬದಲಾಯಿತು. ಪ್ರೀತಿಗೆ ಜಾತಿಯ ಗೋಡೆ ಅಡ್ಡವಾಗಿತ್ತು. ಕಮಲಾ ಬೇಡ ಜನಾಂಗಕ್ಕೆ ಸೇರಿದವರು. ಮದುವೆಗೆ ಮನೆಯಲ್ಲಿ ಒಪ್ಪಲಿಲ್ಲ. ಹಾಗಾಗಿ ಇನ್ನು ಒಳ್ಳೆ ಮಾತಿನಿಂದ ಪ್ರಯೋಜನವಿಲ್ಲ ಎಂದು ತಿಳಿದೆವು. ಯಾರನ್ನೂ ಒಪ್ಪಿಸಲು ಸಾಧ್ಯವಿಲ್ಲ ಎಂದೆನಿಸಿತು. ಅದಕ್ಕೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವುದೆಂದು ತೀರ್ವನಿಸಿದೆವು. ನಾನು ಒಟ್ಟು ಏಳು ಜಾತಿಯ ಸ್ನೇಹಿತರನ್ನು ರಿಜಿಸ್ಟರ್ ಆಫೀಸಿಗೆ ಕರೆದುಕೊಂಡು ಹೋಗಿದ್ದೆ. ಆ ಸ್ನೇಹಿತರೆಲ್ಲ ನನ್ನ ಬೆಂಬಲಕ್ಕಿದ್ದರು. ಅವರೆಲ್ಲ ಜಾತಿ ಪದ್ಧತಿ ನಿಮೂಲನೆಗೊಳ್ಳಬೇಕೆಂದು ಭಾಷಣ ಬಿಗಿಯುತ್ತಿದ್ದರು. ಜಾತಿ ಪದ್ಧತಿ ವಿರುದ್ಧ ಚಳವಳಿ ಮಾಡುತ್ತಿದ್ದರು. ಆದರೆ ಯಾರಿಗೂ ಅದನ್ನು ಮುರಿಯುವ ದೈರ್ಯವಿರಲಿಲ್ಲ. ಅಂಥದ್ದರಲ್ಲಿ ನಮ್ಮ ಜೊತೆ ಇರುವ ಹುಡುಗನೊಬ್ಬ ಹೀಗೆ ಇದನ್ನು ಕಾರ್ಯರೂಪದಲ್ಲಿ ತರುತ್ತಿದ್ದಾನಲ್ಲ ಎಂಬ ಆಶ್ಚರ್ಯ ಅವರಿಗೆಲ್ಲ. ಆದರೆ ನಾವೇನೋ ದೊಡ್ಡ ಕ್ರಾಂತಿ ಮಾಡಿಬಿಡುತ್ತೇನೆಂಬ ಹುಮ್ಮಸ್ಸಾಗಲೀ, ಮನಸ್ಸಾಗಲೀ ನಮಗಿರಲಿಲ್ಲ. ನಾವಿಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ವಿ. ಪ್ರೀತಿಸುವಾಗ ಅವಳ ಜಾತಿ, ಅಂತಸ್ತು, ಅವಳ್ಯಾರು ಎಂಬುದನ್ನೇನೂ ನೋಡಲೇ ಇಲ್ಲ. ಹೀಗೆ ಮದುವೆಯಾಗಿ ಬಂದೆವು.
ಮುಂದೆ ಮಗ ಹುಟ್ಟಿದ. ಆ ಮಗುವನ್ನು ಕರೆದುಕೊಂಡು ನಮ್ಮ ಮನೆಗೆ ಹೋದ್ವಿ. ನನ್ನ ತಂದೆತಾಯಿಗಳಿಗೆ ಮೊಮ್ಮಗುವನ್ನು ನೋಡಿದ ಕೂಡಲೇ ಎಲ್ಲ ವೈಷಮ್ಯ, ವೈರತ್ವವೆಲ್ಲ ಮರೆತೇ ಹೋದವು. ನಿಜಕ್ಕೂ ಈ ಜಗತ್ತಿನಲ್ಲಿ ಮೊಮ್ಮಗು ಎಂಬುದು ದೊಡ್ಡದಾದ ವಸ್ತು. ಎಲ್ಲ ವೈಷಮ್ಯಗಳನ್ನೂ ಅದು ಅಳಿಸಿಹಾಕುತ್ತದೆ. ನಮ್ಮ ಎರಡು ಮನೆತನಗಳನ್ನು ಒಟ್ಟುಗೂಡಿಸುವ ಕೊಂಡಿಯಾಗಿ ಅವನು ಬೆಳೆದು ಬಂದ. ಜತೆಗೆ ಅವಳ ಒಳ್ಳೆಯತನ, ಅವಳ ವಿಶಾಲ ಹೃದಯ ಎಲ್ಲರ ಮನ ಗೆದ್ದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವಳು ಜೈನ ಸಾಹಿತ್ಯದಲ್ಲಿ, ಅಪಾರ ವಿದ್ವತ್ ಪಡೆದಳು. ನಮ್ಮ ಜೈನ ಜನಾಂಗದವರಿಗಿಂತ ಅದ್ಭುತವಾಗಿ ಈ ಬಗ್ಗೆ ಮಾತನಾಡುತ್ತಿದ್ದಳು. ಎಷ್ಟೆಂದರೂ ಹೆಂಗಸರಿಗೆ ಬಾಯಿ ಜಾಸ್ತಿ. ಅದಕ್ಕೆ ಅವಳು ಕಮಲಾಬಾಯಿ. ಹಾಗಾಗಿ ಅದ್ಭುತ ವಾಗ್ಮಿ ಕೂಡ.
ಮದುವೆಯಾದ ಮೇಲೆ ಮನೆಯನ್ನು, ಸಂಸಾರವನ್ನು, ನನ್ನನ್ನು ಅವಳೇ ನೋಡಿಕೊಳ್ಳುತ್ತಿದ್ದಳು. ಮನೆಯ ಕಡೆ ನಾನು ಖಂಡಿತ ತಲೆ ಹಾಕಲಿಲ್ಲ. ಅವಳು ಮಾಡಿದ್ದನ್ನು ಚೆನ್ನಾಗಿ ಉಂಡು ಮಲಗುತ್ತಿದ್ದೆ. ಈಗ ಎಷ್ಟೋ ಬಾರಿ ಅನಿಸಿದ್ದಿದೆ. ಅವಳಿಗೆ ನಾನು ಸ್ವಲ್ಪ ಸಹಾಯ ಮಾಡಿದ್ದಿದ್ದರೆ, ಅವಳ ಕೆಲಸಗಳನ್ನು ಇನ್ನಷ್ಟು ಹಗುರಮಾಡಿಕೊಟ್ಟಿದ್ದಿದ್ದರೆ ಬಹುಶಃ ಅವಳು ಇನ್ನೂ ಎತ್ತರಕ್ಕೆ ಬೆಳೆಯುತ್ತಿದ್ದಳೇನೋ ಎಂದು. ಅದು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಮನೆಯ ಕಡೆ ಗಮನಕೊಡಲೇ ಇಲ್ಲ ಎಂಬ ನೋವು ನನ್ನನ್ನು ಸಾಕಷ್ಟು ಸಲ ಕಾಡಿದ್ದಿದೆ. ಆದರೂ, ಪರಸ್ಪರ ಪ್ರೀತಿಯಿಂದ, ವಿಶ್ವಾಸದಿಂದ, ಪ್ರೇಮದಿಂದ ಜೀವನಯಾನದಲ್ಲಿ ನಾವು ಗೆದ್ದಿದ್ದೇವೆ. ಕಮಲಾ ಎಲ್ಲ ರೀತಿಯಿಂದಲೂ ನನಗೆ ಸ್ವೀಟ್ ವೈಫ್. ಕನ್ನಡದ ಒಬ್ಬ ಶ್ರೇಷ್ಠ ಲೇಖಕಿ, ಅನುಪಮ ವಾಗ್ಮಿ, ನನ್ನ ಪತ್ನಿ ಎಂಬುದು ನನಗೆ ಹೆಮ್ಮೆ.
ಖ್ಯಾತ ಸಾಹಿತಿ, ಸಂಶೋಧಕಿ, ಉತ್ತಮ ವಾಗ್ಮಿ, ಆದರ್ಶ ಉಪನ್ಯಾಸಕಿ ಕಮಲಾ ಹಂಪನಾ ನಿಧನದಿಂದ ಕನ್ನಡ ನಾಡು, ನುಡಿ ಬಡವಾಗಿದೆ. ಜೈನಧರ್ಮದ ಬಗ್ಗೆ ಸಂಶೋಧನೆ ನಡೆಸಿ, ಅನೇಕ ಉಪಯುಕ್ತ ಮಾಹಿತಿ ನೀಡಿದ್ದಾರೆ.
| ಡಿ.ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ
ಕಮಲಾ ಹಂಪನಾ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಅವರ ನಿಧನದಿಂದ ಸಮಾಜ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
| ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಸ್ವಾಮೀಜಿ ಶ್ರವಣಬೆಳಗೊಳ
ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜತೆ ಸಂಶೋಧನೆ ಮತ್ತು ಬೋಧನೆಯಿಂದಲೂ ಜನಪ್ರಿಯರಾಗಿದ್ದ ಅವರದ್ದು ಒಳಿತನ್ನು ಬಯಸಿದ ಜೀವ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
| ಸಿದ್ದರಾಮಯ್ಯ ಸಿಎಂ
ಕನ್ನಡ ಸಾರಸ್ವತ ಲೋಕದಲ್ಲಿ ಮಹಿಳಾ, ಜೀವ ಪರ ಸಂವೇದನೆಗಳ ಪ್ರತೀಕವಾಗಿದ್ದ ಕಮಲಾ ಹಂಪನಾ ಅವರು 60ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಅವರ ಅಗಲಿಕೆ ಕನ್ನಡಕ್ಕೆ ಬಹುದೊಡ್ಡ ನಷ್ಟ. ಆ ಚೇತನಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
| ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಬಲು ಅಪರೂಪದ ಜೋಡಿ ಹಂಪನಾ ದಂಪತಿ ಕೊಡುಗೆ ಅನುಪಮವಾದುದು. ನಾಡು ನುಡಿಯ ಬಗೆಗಿನ ಪ್ರೀತಿ, ನಿರಂತರ ಪರಿಶ್ರಮ ಅವರ ಸಾಹಿತ್ಯಕ ಸಾಧನೆಯಿಂದಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು ಕಮಲಾ ಹಂಪನಾ. ಅವರ ಅಗಲಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಕನ್ನಡ ನಾಡಿನ ಶ್ರೇಷ್ಠ ಮಹಿಳಾ ಸಾಹಿತಿ ಡಾ. ಕಮಲಾ ಹಂಪನಾ ನಿಧನ ಸಾಹಿತ್ಯಲೋಕಕ್ಕೆ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿಯನ್ನು, ಡಾ. ಹಂಪನಾ ಮತ್ತು ಅವರ ಕುಟುಂಬವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಕೋರುತ್ತೇನೆ.
| ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ರೀ ಸುತ್ತೂರು ಮಠ
ಕಮಲಾ ಹಂಪನಾ ಲೇಖಕಿ ಮಾತ್ರವಲ್ಲ, ಒಬ್ಬ ಹೋರಾಟ ಗಾರ್ತಿಯಾಗಿದ್ದರು. ಲೇಖಕಿಯಾಗಿ ಅವರದು ಅಪೂರ್ವ ಕೃಷಿ. ಸಂಶೋಧನೆ, ವೈಚಾರಿಕ ಬರಹ ಮತ್ತು ಸೃಜನಶೀಲ ಸಾಹಿತ್ಯ ಸೃಷ್ಟಿಯನ್ನು ಒಟ್ಟಿಗೇ ನಿರ್ವಹಿಸಿದ್ದಾರೆ. ಅವರ ನಿಧನದಿಂದ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವಾಗಿದೆ.
| ಡಾ. ಬರಗೂರು ರಾಮಚಂದ್ರಪ್ಪ ಸಾಹಿತಿ
ಲೋಕಸಭೆ ಚುನಾವಣೆ: ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ತಪ್ಪಾಯಿತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
