|ಕೀರ್ತಿನಾರಾಯಣ ಸಿ.ಬೆಂಗಳೂರು
ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್​ಟಿಒ) 2008ರಲ್ಲಿ ಸೇವೆಗೆ ಸೇರ್ಪಡೆಯಾಗಿದ್ದ ಮೋಟಾರು ವಾಹನ ನಿರೀಕ್ಷಕರ ನೇಮಕಾತಿ ವಿವಾದಕ್ಕೆ ಸುಪ್ರೀಂಕೋರ್ಟ್ ಅಂತ್ಯ ಹಾಡಿದೆ. ಇದರೊಂದಿಗೆ ಅತಂತ್ರ ಸ್ಥಿತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ 105 ಬ್ರೇಕ್ ಇನ್​ಸ್ಪೆಕ್ಟರ್​ಗಳ ನೇಮಕಾತಿ ಸಿಂಧುಗೊಳ್ಳುವ ಜತೆಗೆ ಬರೋಬ್ಬರಿ 15 ವರ್ಷ ಒಂದೇ ಹುದ್ದೆಯಲ್ಲಿ ದುಡಿಯುತ್ತಿದ್ದವರಿಗೆ ಮುಂಬಡ್ತಿ ಭಾಗ್ಯ ಒಲಿಯಲಿದೆ. ಇದೇ ವೇಳೆ ಎತ್ತರ ಕಡಿಮೆ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿದ್ದ 39 ಅಭ್ಯರ್ಥಿಗಳಿಗೆ ಮತ್ತೆ ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳುವಂತೆ ಸುಪ್ರೀಂಕೊರ್ಟ್ ಆದೇಶ ನೀಡಿದೆ. 145 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು 2008ರಲ್ಲಿ ಬಿಡುಗಡೆ ಮಾಡಿತ್ತು. 145 ಅಭ್ಯರ್ಥಿಗಳ ಪೈಕಿ 39 ಜನ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹರಾಗಿದ್ದರು. ಇದೇ ವೇಳೆ ನ್ಯಾಯಯುತವಾಗಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ ಎಂದು ಆರೋಪಿಸಿ ಕೆಲವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಪಡಿಸಿತ್ತು.
ಹೈಕೋರ್ಟ್ ಕೂಡ ಕೆಎಟಿ ಆದೇಶವನ್ನು ಪುರಸ್ಕರಿಸಿತ್ತು. ಆದರೆ, ಆಯ್ಕೆಯಾದ ಅಭ್ಯರ್ಥಿಗಳು ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 105 ಅಭ್ಯರ್ಥಿಗಳನ್ನು ಷರತ್ತುಬದ್ಧ ನೇಮಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. 15 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಈಗ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಿಚಾರಣೆ ವೇಳೆ ಖುದ್ದು ಹಾಜರಿದ್ದ ಸಾರಿಗೆ ಇಲಾಖೆ ಕಾರ್ಯದರ್ಶಿ ಸಹ, ಷರತ್ತುಬದ್ಧವಾಗಿ ನೇಮಕಗೊಂಡು ಕೆಲಸ ಮಾಡುತ್ತಿರುವ 105 ಇನ್​ಸ್ಪೆಕ್ಟರ್​ಗಳ ಸೇವೆಯನ್ನು ಅವರು ಸೇರ್ಪಡೆಯಾದ ದಿನದಿಂದಲೇ ಪರಿಗಣಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸೇವಾ ಭದ್ರತೆಯ ಆತಂಕ ದೂರಾಗುವ ಜತೆಗೆ ಅವರಿಗೆ ಬಡ್ತಿಯೂ ದೊರೆಯಲಿದೆ.
ಕಾಲಮಿತಿ ಬಡ್ತಿಗೆ ಆದೇಶಿಸಿದ್ದ ಕೆಎಟಿ:ಕಾಲಮಿತಿ ವೇತನ ಬಡ್ತಿ ಕೊಡಲು ಸಾರಿಗೆ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಬ್ರೇಕ್ ಇನ್​ಸ್ಪೆಕ್ಟರ್​ಗಳಾದ ತಿಪ್ಪೇಸ್ವಾಮಿ ಹಾಗೂ ಬಿ.ಎಸ್. ರಮೇಶ್ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೆಎಟಿ 3 ತಿಂಗಳ ಒಳಗೆ ಕಾಲಮಿತಿ ವೇತನ ಬಡ್ತಿ ಕೊಡಬೇಕು ಎಂದು 2021ರ ನ.11ರಂದೇ ಆದೇಶ ಹೊರಡಿಸಿದೆ. ಆದರೆ, ಕೆಎಟಿ ಆದೇಶವಾಗಿ 10 ತಿಂಗಳಾದರೂ ಈವರೆಗೆ ಪಾಲಿಸಿಲ್ಲ. ಸುಪ್ರೀಂಕೋರ್ಟ್ ಹೇಳಿರುವುದರಿಂದ ಈಗ ಪರಿಗಣಿಸುವ ಆಶಾಭಾವನೆ ವ್ಯಕ್ತವಾಗಿದೆ.
11 ಅಭ್ಯರ್ಥಿಗಳು ಆಯ್ಕೆಯೇ ಆಗಿಲ್ಲ:ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ನೇಮಕ ಮಾಡಿಕೊಂಡಿಲ್ಲ ಎಂದು 11 ಅಭ್ಯರ್ಥಿಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ, 2022ರ ಆ.26ರಂದು ಸಾರಿಗೆ ಇಲಾಖೆಗೆ ಕೆಪಿಎಸ್​ಸಿ ಕೊಟ್ಟಿರುವ ಮಾಹಿತಿ ಪ್ರಕಾರ ಕಾಂಬ್ಳೆ ಸತೀಶ್​ಕುಮಾರ್, ಎ.ಆರ್. ರಘುನಂದನ್, ವಿ.ಎಸ್. ಸಿದ್ದರಾಮಯ್ಯ, ವೆಂಕಟೇಶ್ ವಡ್ಡರ್ ಮತ್ತು ಕೆ. ರಾಜೇಶ್ ಮೀಸಲಾತಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಿಂತ ಕಡಿಮೆ ಅಂಕ ಪಡೆದಿದ್ದಾರೆ. ಎಚ್.ಎಂ. ಕುಮಾರ್, ಎಚ್.ಎಸ್. ವೇಣುಗೋಪಾಲ್, ಅರುಣ್ ಸುರೇಂದ್ರ ಪಾಟೀಲ್, ಕೆ. ಮರಿಲಿಂಗಪ್ಪ, ವೀರಭದ್ರಪ್ಪ ಹರಿಹರ್ ಅವರನ್ನು ಡಿಎಲ್ ಇಲ್ಲ ಎಂಬ ಕಾರಣಕ್ಕೆ ಹಾಗೂ ಬಿ.ಎನ್. ಶಿವನಂಜೇಗೌಡ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇವರ ಅರ್ಜಿಗೆ ಸಂಬಂಧಿಸಿದಂತೆ 2 ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ಸಾರಿಗೆ ಇಲಾಖೆಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದ್ದು, ಎಲ್ಲ ಪ್ರಕ್ರಿಯೆಯೂ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ.
ಇನ್​ಸ್ಪೆಕ್ಟರ್​ಗಳ ಅಭಾವ ನೀಗಲಿದೆ:ಹೈಕೋರ್ಟ್ ಆದೇಶದ ಅನ್ವಯ ಈಗಾಗಲೇ 141 ಬ್ರೇಕ್ ಇನ್​ಸ್ಪೆಕ್ಟರ್​ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಈಗ 33 ಅಭ್ಯರ್ಥಿಗಳ ನೇಮಕಾತಿಯೂ ನಡೆಯುತ್ತಿದ್ದು, ಪೂರ್ಣಗೊಂಡರೆ ಒಟ್ಟು 174 ಮೋಟಾರು ವಾಹನ ನಿರೀಕ್ಷಕರು ಸಾರಿಗೆ ಇಲಾಖೆಗೆ ಸೇರ್ಪಡೆಯಾಗಲಿದ್ದಾರೆ. ರಾಜ್ಯದಲ್ಲಿ 20ಕ್ಕೂ ಅಧಿಕ ಆರ್​ಟಿಒಗಳಲ್ಲಿ ಬ್ರೇಕ್ ಇನ್​ಸ್ಪೆಕ್ಟರ್​ಗಳೇ ಇಲ್ಲ. 174 ಮಂದಿ ಬಂದರೆ ಸಾರ್ವಜನಿಕ ಸೇವೆ ಸುಧಾರಿಸಲಿದೆ ಎಂದು ಹೇಳಲಾಗಿದೆ.
ಸುಪ್ರೀಂಕೋರ್ಟ್ ಆದೇಶದನ್ವಯ ಷರತ್ತುಬದ್ಧ ಕರ್ತವ್ಯದಲ್ಲಿರುವ 101 ಮೋಟಾರು ವಾಹನ ನಿರೀಕ್ಷಕರ ಸೇವೆಯನ್ನು ಅವರು ಸೇರ್ಪಡೆಯಾದ ದಿನದಿಂದಲೇ ಪರಿಗಣಿಸಿ, ಮುಂಬಡ್ತಿ ಕೊಡಲಾಗುತ್ತದೆ. ಹೊಸದಾಗಿ 39 ಅಭ್ಯರ್ಥಿಗಳ ನೇಮಕಾತಿ ಸಂಬಂಧ ವೈದ್ಯಕೀಯ ಪರೀಕ್ಷೆಗೆ ವೈದ್ಯಕೀಯ ಮಂಡಳಿ ಸ್ಥಾಪಿಸಲಾಗಿದೆ.
|ಡಾ.ಎನ್.ವಿ.ಪ್ರಸಾದ್ಕಾರ್ಯದರ್ಶಿ, ಸಾರಿಗೆ ಇಲಾಖೆ
39 ಅಭ್ಯರ್ಥಿಗಳ ನೇಮಕಾತಿ ಶುರು:ಎತ್ತರದ ನಿಯಮವನ್ನು ಹೊರಗಿಟ್ಟು ಬೇರೆಲ್ಲ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಮೂಲಕ 39 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವ ಸಾರಿಗೆ ಇಲಾಖೆ, ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸುವ ಮುಖೇನ ಬುಧವಾರ ಮತ್ತು ಗುರುವಾರ (ಸೆ.14, 15) ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆಯನ್ನು ನಡೆಸಿದೆ. ಯಾವುದೇ ರೀತಿಯ ಆಕ್ಷೇಪಕ್ಕೆ ಆಸ್ಪದವಾಗಬಾರದು ಎಂಬ ಕಾರಣಕ್ಕೆ ಇಡೀ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 39 ಅಭ್ಯರ್ಥಿಗಳಲ್ಲಿ ಕೆಲವರು ಮೃತಪಟ್ಟಿದ್ದು, ಮತ್ತೆ ಕೆಲವರು ವಯೋಮಿತಿ ಮೀರಿದ್ದಾರೆ. ಹೀಗಾಗಿ 33 ಅಭ್ಯರ್ಥಿಗಳ ನೇಮಕಾತಿ ಆಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
