ಹುಬ್ಬಳ್ಳಿ:ಅತ್ಯಂತ ಚಿಕ್ಕದಾಗಿ ಆರಂಭವಾದ ವಿಆರ್​ಎಲ್ ಕಂಪನಿ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಇಲ್ಲಿನ ಜನರು ಸಂಸದರನ್ನಾಗಿ ಮಾಡಿದರು. ಇಂತಹ ಹಲವು ಗೌರವಯುತ ಸ್ಥಾನಗಳನ್ನು ಕೊಟ್ಟ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಶಯವೇ ಪಾಲಿಕೊಪ್ಪ ಬಳಿ ಶಿವಶಕ್ತಿ ಧಾಮ ತಲೆ ಎತ್ತಲು ಕಾರಣ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಹೇಳಿದರು.
15 ವರ್ಷದ ಹಿಂದೆ ಬೃಹತ್ ದೇವಾಲಯ ಕಟ್ಟಬೇಕು ಎಂಬ ಆಶಯ ಮೂಡಿತ್ತು. ಇದಕ್ಕಾಗಿ ಜಾಗ ನೋಡಿ ಎಂದು 35 ವರ್ಷ ವಿಆರ್​ಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಯಲ್ಲಪ್ಪ ಹೊನ್ನಳ್ಳಿ ಅವರಿಗೆ ಕೇಳಿಕೊಂಡಿದ್ದೆ. ಜಾಗವು ಹೆದ್ದಾರಿಗೆ ಹೊಂದಿಕೊಂಡಿರಬೇಕು. ವಾಸ್ತು ಪ್ರಕಾರ ಇರಬೇಕು ಎಂಬುದೊಂದೇ ನಮ್ಮ ಬೇಡಿಕೆಯಾಗಿತ್ತು. ಅದರಂತೆ ಜಾಗ ಹುಡುಕಿಕೊಟ್ಟರು. ಗುಡಿ ನಿರ್ಮಾಣ ಮಾಡಬೇಕು, ಅಲ್ಲಿ ಧಾರ್ವಿುಕ ಕಾರ್ಯ ನಿರಂತರ ನಡೆಯಬೇಕು ಎಂದು ಸಂಕಲ್ಪ ಮಾಡಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರನ್ನು ಸಂಪರ್ಕ ಮಾಡಿ, ಟ್ರಸ್ಟ್​ಗೆ ಒಂದು ಒಳ್ಳೆ ಹೆಸರು ಸೂಚಿಸಿ ಎಂದು ಕೇಳಿದ್ದೆವು. ಅವರು ಆರೇಳು ಹೆಸರು ಕೊಟ್ಟರು. ಅದರಲ್ಲಿ ಅವರು ನೀಡಿದ ‘ಆರಾಧನಾ ಟ್ರಸ್ಟ್’ ಹಿಡಿಸಿತು. ಇದಾದ ನಂತರ ಆರ್.ಎನ್. ಶೆಟ್ಟಿ ಅವರ ಬಳಿ ಹೋಗಿ ಮುರುಡೇಶ್ವರ ದೇವಾಲಯ ನಿರ್ಮಾಣ ಮಾಡಿದವರ ವಿಳಾಸ ಕೇಳಿದೆ. ಅವರಿಂದ ಸಹಾಯ ಪಡೆದು ದೇವಾಲಯ ನಿರ್ವಣದ ಜವಾಬ್ದಾರಿಯನ್ನು ಸ್ಥಪತಿ ಸ್ವಾಮಿನಾಥನ್ ಅವರಿಗೆ ವಹಿಸಲಾಯಿತು. ವಾಸ್ತು ತಜ್ಞರಾದ ಬೆಂಗಳೂರಿನ ರವೀಂದ್ರ ಅವರು ವಾಸ್ತುಶಿಲ್ಪ ರಚಿಸಿ ಕೊಟ್ಟರು. ಆರ್​ಸಿಸಿ ಕಟ್ಟಡ ಕಟ್ಟಿದರೆ ಆಯಸ್ಸು ಕಡಿಮೆ ಎಂದು ದೇವಾಲಯಗಳನ್ನು ಕಲ್ಲಿನಲ್ಲಿಯೇ ಕಟ್ಟಲು ಯೋಜನೆ ರೂಪಿಸಲಾಯಿತು. ಉಡುಪಿಯ ಇಂಜಿನಿಯರ್ ರಾಘವೇಂದ್ರ ಅವರು ಅಚ್ಚುಕಟ್ಟಾಗಿ ಈ ಕೆಲಸ ಮಾಡಿದ್ದಾರೆ.
ಐದು ವರ್ಷದ ಹಿಂದೆ ಗುಡಿ ಕಟ್ಟಲು ಯೋಜನೆ ಮಾಡಿ ಮೂರು ವರ್ಷದಲ್ಲಿ ಪೂರ್ಣಗೊಳಿಸುವ ಉದ್ದೇಶ ಇತ್ತು. ಆದರೆ, ಮಳೆಗಾಲ, ಕರೊನಾ ಇತ್ಯಾದಿ ಕಾರಣದಿಂದ ಎರಡು ವರ್ಷ ತಡವಾಯಿತು ಎಂದು ಹೇಳಿದರು.
ಗುಡಿ ಸಿದ್ಧಗೊಂಡ ನಂತರ ಆರಾಧನಾ ಟ್ರಸ್ಟ್ ಆಡಳಿತ ಮಂಡಳಿಯೊಂದಿಗೆ ಶೃಂಗೇರಿ ಮಠದ ಶ್ರೀಗಳನ್ನು ಭೇಟಿ ಮಾಡಿ ವಿನಂತಿ ಪೂರ್ವಕ ಕೇಳಿಕೊಂಡಾಗ ಅವರು ಸಂತೋಷದಿಂದ ಇದರ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಂಡರು. ಪೂಜ್ಯರು ಹೇಳಿದ ಪ್ರಕಾರ ಈಗ ಲೋಕಾರ್ಪಣೆ ಮಾಡಿದ್ದೇವೆ. ದೇವಾಲಯ ಸ್ಥಾಪನೆಗೆ ಅನೇಕರು ಸಹಾಯ, ಸಹಕಾರ ನೀಡಿದ್ದಾರೆ. ಆದರೆ, ಕೆಲವೇ ಜನರನ್ನು ಈಗ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ದೇಗುಲ ದರ್ಶನಕ್ಕೆ ಆಹ್ವಾನಿಸಲಾಗುವುದು ಎಂದರು.
ಶಕ್ತಿ ಸ್ಥಳ:ದೇವಾಲಯದ ಕಟ್ಟಡ ಕೆಲಸ ಆರಂಭವಾದಾಗ ಅನೇಕ ಜಗದ್ಗುರುಗಳು, ಸ್ವಾಮೀಜಿಗಳು ಇಲ್ಲಿಗೆ ಬಂದು ಧನಾತ್ಮಕ ಕಂಪನ ಇರುವ ಜಾಗ ಇದು. ಉತ್ತಮ ಕೆಲಸ ಕೈಗೊಂಡಿದ್ದೀರಿ ಎಂದು ಆಶೀರ್ವಾದ ಮಾಡಿದರು. ನೀವು ಸಂಸಾರಸ್ಥರು ಒಬ್ಬರೇ ದೇವಸ್ಥಾನ ಕಟ್ಟಬೇಡಿ, ಸಾರ್ವಜನಿಕರ ಸಹಕಾರ ಪಡೆದುಕೊಳ್ಳಿ ಎಂದು ಸಲಹೆಯನ್ನೂ ನೀಡಿದರು. ಅದರಂತೆ ಬಹಳ ಆತ್ಮೀಯರಿಂದ ಟ್ರಸ್ಟ್ ಹೆಸರಿನಲ್ಲಿ ಹಣ ಸಂಗ್ರಹ ಮಾಡಿದೆವು. ಸುಮಾರು 1.33 ಕೋಟಿ ರೂ. ಸಂಗ್ರಹ ಆಗಿತ್ತು. ಎಲ್ಲರೂ ಬಹಳ ಸಂತೋಷದಿಂದ ದೇಣಿಗೆ ಕೊಟ್ಟಿದ್ದಾರೆ ಎಂದರು.
ಗಬ್ಬೂರಿನಿಂದ ಹಿಡಿದು ತಡಸ ವರೆಗೆ ಸುಮಾರು 25 ಕಿ.ಮೀ. ಅಂತರದಲ್ಲಿ ತುಂಬಾ ಒಳ್ಳೆಯ ವೈಬ್ರೇಷನ್ ಇರುವ ಜಾಗ ಇದೆ. ಕೆಲ ವರ್ಷಗಳ ಹಿಂದೆ ಪಿಯುಸಿ ಓದುತ್ತಿದ್ದ ಹುಡುಗನಿಗೆ ಹೊಲದಲ್ಲಿ ವೀರಭದ್ರೇಶ್ವರ ಮೂರ್ತಿ ಸಿಕ್ಕಿತ್ತು. ಆತ ಜೈನ್ ಹುಡುಗ. ಆತ ವರೂರಿನ ಒಬ್ಬರಿಗೆ ಆ ಮೂರ್ತಿ ಕೊಟ್ಟಿದ್ದ. ಆದರೆ, ಆತನಿಗೆ ನಿತ್ಯ ಕನಸಿನಲ್ಲಿ ಬಂದು ದೇಗುಲ ಮಾಡಲು ದೇವರು ಪ್ರೇರಣೆ ನೀಡಿದ. ಅದರಂತೆ ಆ ಹುಡುಗ ದೇವಾಲಯ ನಿರ್ವಿುಸಿದ. ಇದೀಗ ಅನೇಕ ಭಕ್ತರು ಆ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ ಎಂದರು.
ಗಾಯತ್ರಿ ದೇವಿ ನಿತ್ಯ ಕನಸಿನಲ್ಲಿ ಬಂದು ನನ್ನ ದೇವಾಲಯ ಇಂತಹ ಸ್ಥಳದಲ್ಲಿ ಕಟ್ಟಬೇಕು ಎಂದು ಹಿಮಾಲಯಕ್ಕೆ ತೆರಳಿದ್ದ ಒಬ್ಬ ಗುರುಗಳಿಗೆ ಆಜ್ಞೆ ಆಗಿತ್ತು. ಕರ್ನಾಟಕ ಬಿಟ್ಟು ಹೋಗಿ 40 ವರ್ಷವಾಗಿದ್ದ ಅವರು, ಇಲ್ಲಿ ಬಂದು ಜಾಗ ನೋಡಿ ದೇಗುಲ ನಿರ್ವಣದ ಸಂಕಲ್ಪ ಮಾಡಿದರು. ಇದಕ್ಕಾಗಿ ಊರೂರು ಅಲೆದರು. ಅನೇಕರು ಇದಕ್ಕೆ ಸಹಾಯ ಮಾಡಿದರು. ಹುಬ್ಬಳ್ಳಿಯ ವಿನಾಯಕ ಆಕಳವಾಡಿ ಅವರು ಇದರ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಗಬ್ಬೂರಿನಲ್ಲಿಯೂ ಕನಸಿನ ಪ್ರಭಾವದಿಂದ ಒಂದು ದೇವಾಲಯ ಆಗಿದೆ. ಬುಡರಸಿಂಗಿಯಲ್ಲಿಯೂ ಜಿನ ಮಂದಿರ ಆಗಿದೆ. ವಿಆರ್​ಎಲ್ ಸಂಸ್ಥೆಯ ಎದುರು ಅದ್ಭುತ ನವಗ್ರಹ ತೀರ್ಥ ಕ್ಷೇತ್ರ ನಿರ್ಮಾಣ ಆಗಿದೆ. ಇವೆಲ್ಲವೂ ಕನಸಿನಲ್ಲಿ ಬಂದು ಹೇಳಿದಂತೆ ಆಗಿವೆ ಎಂದರು.
ತಂದೆಯನ್ನು ಮೀರಿಸಿದ ಮಗಎಲ್ಲರಿಗೂ ರಾತ್ರಿ ಕನಸು ಬೀಳುತ್ತವೆ. ಆದರೆ ಈ ದೇವಾಲಯ ನಿರ್ಮಾಣ ಮಾಡಬೇಕೆಂದು ನಾನು ಹಗಲಿನಲ್ಲೇ ಕನಸು ಕಂಡಿದ್ದೆ. ಇದನ್ನು ಮಾಡಬೇಕು ಎಂಬ ಛಲ ಇತ್ತು. ಈ ಜವಾಬ್ದಾರಿಯನ್ನು ಪುತ್ರ ಆನಂದಗೆ ವಹಿಸಿದೆ. ಆತ ಅತ್ಯುತ್ತಮವಾಗಿ ಈ ಕಾರ್ಯ ಮಾಡಿದ್ದಾನೆ. ‘ಗುರು ಶಿಷ್ಯನನ್ನು ಮೀರಿಸಬೇಕು. ಮಗ ತಂದೆಯನ್ನು ಮೀರಿಸಬೇಕು’ ಎಂಬ ಮಾತಿದೆ. ಆನಂದ ಆ ಮಾತನ್ನು ನಿಜ ಮಾಡಿದ್ದಾನೆ. ಇತ್ತೀಚೆಗೆ ಹಲವರು ನನ್ನನ್ನು ಭೇಟಿಯಾದಾಗ, ನಿಮ್ಮ ಮೊಮ್ಮಗ ಶಿವನನ್ನು ಭೇಟಿಯಾಗಿದ್ದೆವು, ಆತ ಅವರ ತಂದೆಯನ್ನು ಮೀರಿ ಬೆಳೆಯುತ್ತಾನೆ ಎಂದು ಹೇಳುತ್ತಿದ್ದಾರೆ. ಅದನ್ನು ಕಾದು ನೋಡಬೇಕಿದೆ ಎಂದು ಮೊಮ್ಮಗನ ಭವಿಷ್ಯದ ಕುರಿತು ಡಾ. ವಿಜಯ ಸಂಕೇಶ್ವರ ಅವರು ಆಶಾಭಾವ ವ್ಯಕ್ತಪಡಿಸಿದರು.
ಕ್ಷೇತ್ರದ ವಿಶೇಷತೆಕುಲದೇವರಾದ ಶ್ರೀಶೈಲ ಮಲ್ಲಿಕಾರ್ಜುನರನ್ನು ಸ್ಮರಿಸಿ ಮಾತು ಆರಂಭಿಸಿದ ಡಾ. ವಿಜಯ ಸಂಕೇಶ್ವರ ಅವರು, ಶಿವಶಕ್ತಿ ಧಾಮದ ವಿಶೇಷತೆಗಳನ್ನು ಹೇಳಿದರು. ಇಲ್ಲಿ ಶಿವನ ಮೂರ್ತಿ ಅಲ್ಲದೇ ಬಲಮುರಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಶಿವ ಪಾರ್ವತಿ ದೇವಾಲಯ, ನವಗ್ರಹ, ಕಾಲಭೈರವ ದೇಗುಲ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು. ನನಗೆ ಬಹಳ ಇಷ್ಟದ ದೇವರು ಶನಿದೇವರು. ಎಲ್ಲರಿಗೂ ಜೀವನದಲ್ಲಿ ತಾಪತ್ರಯ ಇರುತ್ತವೆ. ಅವರೆಲ್ಲ ಶನಿದೇವರ ದರ್ಶನ ಮಾಡಬೇಕಾದರೆ ತಮಿಳುನಾಡಿನ ತಿರುನೆಲ್ಲೂರು, ಇಲ್ಲವೇ ಮಹಾರಾಷ್ಟ್ರದ ಶನಿಶಿಂಗ್ಣಾಪುರಕ್ಕೆ ಹೋಗಬೇಕು. ಸಾವಿರಾರು ಮಠ, ಮಂದಿರಗಳನ್ನು ನೋಡಿದ್ದೇನೆ. ಆದರೆ, ಶನಿಶಿಂಗ್ಣಾಪುರ ಬಹಳ ಇಷ್ಟವಾಗುತ್ತದೆ. ಅಲ್ಲಿ ಯಾವುದೇ ವಸ್ತು ಕಳ್ಳತನವಾಗುವುದಿಲ್ಲ. ಅನೇಕ ಬಾರಿ ಹೋಗಿ ಬಂದಿದ್ದೇನೆ. ಹಾಗಾಗಿ ಇಲ್ಲಿ ಕೂಡ ಶನಿ ದೇಗುಲ ಇರಬೇಕು ಎನ್ನುವ ಇಚ್ಛೆಯಿಂದ ಕಟ್ಟಲಾಗಿದೆ ಎಂದರು.
ಹಿಂದು ಎನ್ನಲು ಅಂಜುವ ಕಾಲ ಇತ್ತುಕೇವಲ ಹತ್ತು ವರ್ಷಗಳ ಹಿಂದೆ ರಾಮನ ಗುಡಿ ಕಟ್ಟುತ್ತೇವೆ ಎಂದರೆ ಭಯ ಆಗುತ್ತಿತ್ತು. ಯಾರಾದರೂ ವಿದ್ವಾಂಸರು ಹಿಂದು ಧರ್ಮದ ಬಗ್ಗೆ ಸಂದೇಶದ ಮಾತು ಹೇಳಿದರೆ ಕೇಳಲು ಅಂಜುವ ಸ್ಥಿತಿ ಇತ್ತು. ಹಿಂದು ಎನ್ನಲು ಅಳುಕು ಉಂಟಾಗುತ್ತಿತ್ತು. ಆದರೆ, ಕಳೆದ 10 ವರ್ಷದಲ್ಲಿ ಸನಾತನ ಧರ್ಮದ ದೊಡ್ಡ ಪ್ರಚಾರ ಪಡೆದಿದೆ. ಅಮೆರಿಕ ಅಧ್ಯಕ್ಷ, ಇಂಗ್ಲೆಂಡ್ ಪ್ರಧಾನಿ ಕೂಡ ಹಿಂದು ಧರ್ಮಗುರುಗಳ ಸಮ್ಮುಖದಲ್ಲಿ ಪ್ರಮಾಣ ವಚನ ತೆಗೆದುಕೊಂಡರು. ಗಲ್ಪ್ ರಾಷ್ಟ್ರಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಇಂಡೋನೇಷ್ಯಾದಲ್ಲಿ ದೊಡ್ಡ ಹಿಂದು ದೇವಾಲಯ ಕಟ್ಟಲಾಗಿದೆ. ಜನರಿಗೆ ಈಗ ತಿಳಿವಳಿಕೆ ಬರುತ್ತಿದೆ ಎಂದು ಡಾ. ವಿಜಯ ಸಂಕೇಶ್ವರ ಅವರು ಹೇಳಿದರು.
ಯೋಗ ಕೂಡ ಜನಪ್ರಿಯಗೊಂಡಿದ್ದು ಬಾಬಾ ರಾಮದೇವಜೀ ಅವರಿಂದಾಗಿ. ಅದಕ್ಕೂ ಮೊದಲು ಬಾಗಿಲು ಹಾಕಿಕೊಂಡು ಒಳಗಡೆ ಯೋಗ ಮಾಡುವ ಸ್ಥಿತಿ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಆಚರಣೆಗೆ ಪ್ರೇರಣೆ ನೀಡಿದರು. ಈಗ 160 ದೇಶಗಳಲ್ಲಿ ಇದನ್ನು ಆಚರಿಸುತ್ತಾರೆ. ಹಿಂದು ಎಂದು ಹೇಳಲು ಧೈರ್ಯ ಕೊಟ್ಟವರು ಮೋದಿಜಿ ಎಂದರು. 12 ವರ್ಷದವನಿದ್ದಾಗಲೇ ಸಂಘ ಪರಿವಾರದಲ್ಲಿ ಬೆಳೆದ ನನಗೆ ಯಾವುದೇ ಅಂಜಿಕೆ ಇರಲಿಲ್ಲ. ಜಾತಿ ಪದ್ಧತಿ ತೆಗೆದು ವಿಶಾಲ ದೃಷ್ಟಿ ಬೆಳೆಯಬೇಕು ಎಂಬುದು ನನ್ನ ಭಾವನೆ ಎಂದರು. ಜ್ಞಾನವಾಪಿ ಮಂದಿರದಲ್ಲಿ ಕನ್ನಡ ಶಿಲಾಫಲಕ ಸಿಕ್ಕಿದೆ. ಅಂದರೆ ಕನ್ನಡ ಎಲ್ಲಿಯವರೆಗೂ ಹಬ್ಬಿತ್ತು ಎಂಬುದು ಅರಿವಿಗೆ ಬರುತ್ತದೆ. ತೆಲುಗು, ಕನ್ನಡ ಅತ್ಯಂತ ಹಳೇ ಭಾಷೆಗಳಾಗಿವೆ. ಕನ್ನಡಿಗರ ವ್ಯಾಪ್ತಿ ದೊಡ್ಡದು, ಸನಾತನ ಧರ್ವಿುಯರ ವ್ಯಾಪ್ತಿ ಇನ್ನೂ ದೊಡ್ದದು. ಹಿಂದುಗಳು ಒಂದು ಎಂಬ ಭಾವನೆ ಎಲ್ಲ ಕಡೆ ಮೂಡಬೇಕು ಎಂದು ಅಭಿಲಾಶೆ ವ್ಯಕ್ತಪಡಿಸಿದರು.
ಸ್ವಾಮೀಜಿಗಳಿಗೆ ಅನುಕೂಲಹಿಂದು ಸ್ವಾಮೀಜಿಗಳು, ಜೈನ ಮುನಿಗಳು ಧರ್ಮ ಪ್ರಚಾರಕ್ಕೆ ಈ ಭಾಗಕ್ಕೆ ಆಗಮಿಸಿದಾಗ ಶಿವಶಕ್ತಿ ಧಾಮಕ್ಕೆ ಬಂದು ವಸತಿ ಮಾಡಬಹುದು. ಅವರ ಸ್ನಾನ, ಪೂಜೆ, ಧಾರ್ವಿುಕ ವಿಧಿ ವಿಧಾನ ನೆರವೇರಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಹೆದ್ದಾರಿ ಬಳಿ ಇರುವುದರಿಂದ ಬಂದು ಹೋಗುವವರಿಗೆ ಅನುಕೂಲವಿದೆ. ಪಾದಯಾತ್ರೆ ಹೊರಟ ಜೈನ ಮುನಿಗಳಿಗೆ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆಯನ್ನು ಚಿತ್ರದುರ್ಗದ ವಿಆರ್​ಎಲ್ ಆವರಣದಲ್ಲಿಯೂ ಮಾಡುವ ಉದ್ದೇಶ ಇದೆ ಎಂದು ಡಾ. ವಿಜಯ ಸಂಕೇಶ್ವರ ಅವರು ಹೇಳಿದರು.
ಡಾ. ವಿಜಯ ಸಂಕೇಶ್ವರ ಅವರಲ್ಲಿ ಕಾಯಕದ ಜತೆಗೆ ಧರ್ಮಶ್ರದ್ಧೆಯಿದೆ

ಶಿವಶಕ್ತಿಧಾಮ ದೇಗುಲದ ವಿಶೇಷತೆಗಳು: ಬೃಹತ್ ಊಟದ ಮನೆ, ಸೇವಾ ಕೈಂಕರ್ಯ ಕೊಠಡಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − eight =
Remember me
