ನವರಾತ್ರಿಯ ಒಂಬತ್ತು ದಿನಗಳ ದುರ್ಗಾಪೂಜೆಯ ವೈಭವದ ನವರಾತ್ರೋತ್ಸವದ ಶುಭಸಮಾಪ್ತಿಯೇ ವಿಜಯದಶಮಿ. ಈ ಉತ್ಸವವವನ್ನು ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ.
ಇದಕ್ಕೆ ವಿದ್ಯಾದಶಮಿ ಎಂದೂ ಹೆಸರಿದೆ. ಏಳನೆಯ ದಿವಸ ಅಂದರೆ ಸಪ್ತಮಿಯಂದು ಶಾರದೆಯನ್ನು ಆವಾಹನೆ ಮಾಡಿ ಪೂಜಿಸಿದ್ದೇವೆ. ದಶಮಿಯಂದು ಸರಸ್ವತಿಯನ್ನು ವಿಸರ್ಜಿಸುತ್ತೇವೆ. ಅಂದು ಕೆಲವರು ಪುಸ್ತಕಗಳನ್ನು ಪೂಜೆ ಮಾಡಿ ತದನಂತರದಲ್ಲಿ ಸ್ವಲ್ಪವಾದರೂ ಓದಬೇಕೆಂಬ ನಿಯಮವನ್ನು ಪಾಲಿಸುತ್ತಾರೆ.
ವಿಜಯದಶಮಿಗೆ ಇನ್ನೊಂದು ವಿಶೇಷವಿದೆ. ರಾಮಾಯಣ ಕಥಾನಕದಲ್ಲಿ ಬರುವ ರಾಮ-ರಾವಣರ ಯುದ್ಧ ಬಹಳ ಪ್ರಖ್ಯಾತವಾದದ್ದು. ಶಿಷ್ಟರಕ್ಷಕನಾದ ಶ್ರೀರಾಮನು ರಾವಣನೊಂದಿಗೆ ಯುದ್ಧ ಮಾಡಿ ಗೆದ್ದ ದಿನವನ್ನು ವಿಜಯದಶಮಿಯೆಂದು ಆಚರಿಸಲಾಗುತ್ತದೆ ಎಂಬುದು ಪ್ರತೀತಿ. ಅದರ ದ್ಯೋತಕವಾಗಿ ಉತ್ತರಭಾರತದ ಕೆಲವೆಡೆ ರಾವಣನ ಪ್ರತಿಮೆಯನ್ನು ಸುಟ್ಟು ರಾವಣ ಸಂಹಾರದ ಆಚರಣೆ ಮಾಡುವುದನ್ನು ಈಗಲೈ ನೋಡಬಹುದು. ವಿಜಯನಗರದ ರಾಜರು ಬಹಳ ವಿಜೃಂಭಣೆಯಿಂದ ವಿಜಯದಶಮಿಯನ್ನು ಆಚರಿಸುತ್ತಿದ್ದರು. ಮಹಾಭಾರತ ಕಥಾನಕದಂತೆ ಅರ್ಜುನನು ಲಕ್ಷಾಂತರ ಶತ್ರುಗಳನ್ನು ಕೊಂದು ವಿಜಯವನ್ನು ಸಾಧಿಸಿದ ದಿನವೆಂದು ನಂಬಲಾಗಿದೆ. ಹೀಗೆ ಪುರಾಣೇತಿಹಾಸಗಳನ್ನು ಗಮನಿಸಿದಾಗ ಇಂತಹ ಸಾವಿರಾರು ಘಟನೆಗಳು ವಿಜಯದಶಮಿಯ ಆಚರಣೆಗೆ ಕಂಡುಬರುತ್ತವೆ.
ಅಂದು ಶಮೀವೃಕ್ಷದ ಪೂಜೆ ಮತ್ತು ಶಮೀಪತ್ರ ವಿತರಣೆಗೆ ವಿಶೇಷ ಮಹತ್ವವಿದೆ. ಶಮೀಪತ್ರದ ವಿತರಣೆಯನ್ನು ಸ್ನೇಹದ ಸಂಕೇತವೆಂದು ಪರಿಗಣಿಸಿದ್ದಾರೆ. ಶಮೀಪತ್ರವನ್ನು ಕನ್ನಡದಲ್ಲಿ ‘ಬನ್ನಿ ಮರದ ಎಲೆ’ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಕಿರಿಯರು ಹಿರಿಯರಿಗೆ ಬನ್ನೀಮರದ ಪತ್ರೆಗಳನ್ನು ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಒಟ್ಟಿನಲ್ಲಿ ವಿಜಯದಶಮಿ ಆಬಾಲವೃದ್ಧರೆಲ್ಲರೂ ಸೇರಿ ಆನಂದದಿಂದ ಆಚರಿಸುವ ಸಂಭ್ರಮದ ಉತ್ಸವ.
ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲಿಯೂ ಭಗವಂತನನ್ನು, ಭಗವತಿಯನ್ನು ಕಂಡು ಪೂಜಿಸುವ ಸಂಪ್ರದಾಯ ನಮ್ಮ ಭಾರತೀಯರದ್ದು. ಆಕಾಶ, ಭೂಮಿ, ವೃಕ್ಷ, ಜಲ, ಶಿಲಾ ಎಲ್ಲೆಡೆಯೂ ನಮಗೆ ಭಗವಂತನೇ ಕಾಣುತ್ತಾನೆ. ಕಾಲಕಾಲಕ್ಕೆ ಆಯಾ ರೂಪದಲ್ಲಿ ನಾವು ಅವನನ್ನು ಆವಾಹಿಸಿ ಆರಾಧಿಸುತ್ತೇವೆ. ಪ್ರಸ್ತುತ ನವರಾತ್ರಿಯ ಒಂಬತ್ತನೆಯ ದಿನದಲ್ಲಿ ನಾವು ನಮ್ಮ ವಾಹನ, ಆಯುಧ ಮುಂತಾದವುಗಳಲ್ಲಿ ದೇವಿಯನ್ನು ಆವಾಹಿಸಿ ಪೂಜಿಸುತ್ತೇವೆ. ನಮ್ಮ ದೈನಂದಿನ ಕಾರ್ಯಗಳಲ್ಲಿ ಪ್ರಯೋಜನಕ್ಕೆ ಬರುವ ಎಲ್ಲ ವಸ್ತುಗಳೂ ದೈವದತ್ತವಾದವುಗಳು. ಆದ್ದರಿಂದ ಅವುಗಳನ್ನು ಪೂಜಿಸುವ ಸಂಪ್ರದಾಯವಿದೆ. ಅವುಗಳಿಂದ ಹಾಗೂ ಅವುಗಳಿಗೆ ಯಾವುದೇ ತೊಂದರೆಯಾಗದಿರಲಿ ಎಂಬುದಾಗಿ ಪ್ರಾರ್ಥಿಸಿಕೊಳ್ಳುತ್ತೇವೆ. ದುರ್ಗಾದೇವಿಯು ಮಹಿಷಾಸುರನನ್ನು ಕೊಂದ ನಂತರ ಯುದ್ಧದಲ್ಲಿ ಬಳಸಿದ ಆಯುಧಗಳನ್ನು ಪೂಜಿಸಲಾಗಿತ್ತು ಎಂಬ ಕಾರಣದಿಂದ ಆಯುಧಪೂಜೆ ವರ್ಷಂಪ್ರತಿಯೂ ನಡೆಯುತ್ತಿದೆ ಎಂದು ಹೇಳಲಾಗುತ್ತದೆ.
ಆಯುಧಗಳ ಜೊತೆಗೆ ಸಂಗೀತಪರಿಕರಗಳನ್ನು, ವಾಹನಗಳನ್ನು ಪೂಜಿಸಲಾಗುತ್ತದೆ. ಪೂಜಿಸುವ ದೇವಿಯರ ಹೆಸರು, ಆರಾಧನೆಯ ರೀತಿ ಭಿನ್ನವಾಗಿದ್ದರೂ ಆರಾಧ್ಯಳು ಮಹಾಶಕ್ತಿ ದೇವಿಯೊಬ್ಬಳೆ. ಆಚಾರ್ಯ ಶಂಕರರು ಜಗಜ್ಜನನಿಯನ್ನು ‘ಹೇ ಜನನಿ, ನಿನ್ನನ್ನು ಬ್ರಹ್ಮಪತ್ನಿ ಸರಸ್ವತಿಯೆಂದೂ ವಿಷ್ಣುಪತ್ನಿ ಲಕ್ಷ್ಮಿಎಂದೂ ಶಿವಪತ್ನಿ ಗೌರಿ ಎಂದೂ ಕರೆಯುತ್ತಾರೆ. ಆದರೆ ಈ ಮೂರನ್ನೂ ಮೀರಿದ ಶಕ್ತಿ ನೀನು. ನೀನು ವಾಕ್ ಮತ್ತು ಮನಸ್ಸುಗಳಿಗೆ ಅಗೋಚರಳು’ ಎಂದು ಪ್ರಾರ್ಥಿಸಿದ್ದಾರೆ. ದೇವಿಯ ಆರಾಧನೆಯ ಸಮಯದಲ್ಲಿ ನಾನಾ ರೂಪಗಳು ಗೋಚರವಾದರೂ ಕೊನೆಗೆ ದೇವಿಯೊಬ್ಬಳೆ ಎಂಬ ಕಲ್ಪನೆ ನಮ್ಮಲ್ಲಿರಬೇಕು. ಅವಳ ಧ್ಯಾನದಲ್ಲಿ ನಾವು ಆಳಕ್ಕಿಳಿದಂತೆ ಅವಳ ಅದ್ವಿತೀಯರೂಪ ಗೋಚರವಾಗಬೇಕು. ನಿರಾಕಾರಚಿನ್ಮಾತ್ರಸ್ವರೂಪದ ಅನುಭವವಾಗಬೇಕು. ಆಗ ಮಾತ್ರವೇ ನವರಾತ್ರಿಯ ಉತ್ಸವ ಸಾರ್ಥಕ ಆಚರಣೆಯಾಗುತ್ತದೆ. ಹೇಗೆ ಸಕ್ಕರೆಯಿಂದ ಮಾಡಿದ ನಾನಾ ಆಕಾರದ ತಿನಿಸುಗಳು ಬಾಯಿಗೆ ಇಡುವವರೆಗೂ ಭಿನ್ನವಾಗಿದ್ದು ಆಮೇಲೆ ಸಿಹಿ ಮಾತ್ರವೇ ಏಕರೂಪವಾಗಿ ಕಾಣುವುದೋ ಹಾಗೆ ಬಾಹ್ಯ ಆಚರಣೆಗಳಲ್ಲಿ ದೇವಿಯು ನಾನಾ ಸ್ವರೂಪಳು. ಉಪಾಸನೆಯ ಮೂಲಕ ಅವಳು ನಮ್ಮೊಳಗಿಳಿದಾಗ ಕೇವಲ ಶಕ್ತಿಸ್ವರೂಪಿಣಿಯಾಗಿ ಕಾಣಸಿಗುತ್ತಾಳೆ.
ಭಗವಂತನನ್ನು ಅರ್ಚಿಸಿ ತನ್ಮಯತೆ ಸಾಧಿಸುವ ಕಾರಣಕ್ಕಾಗಿ ಕಲ್ಪಿಸಲ್ಪಟ್ಟ ನಾನಾ ಆಕಾರಗಳಲ್ಲಿ ಪರವಸ್ತುವನ್ನು ದೇವಿಯನ್ನಾಗಿ ಆರಾಧಿಸುವುದೂ ಒಂದು ಬಗೆ. ಭಗವಂತನಲ್ಲಿ ಕೇವಲ ಶಕ್ತಿಯನ್ನು ಗುರುತಿಸುವ ಉಪನಿಷತ್ತುಗಳಲ್ಲಿ ಸ್ತ್ರೀ ಪುರುಷದೇವತೆಗಳ ಕಲ್ಪನೆ ಅಷ್ಟಾಗಿ ಕಂಡುಬರುವುದಿಲ್ಲ. ಆದರೆ ಆ ಪರವಸ್ತುವನ್ನು ಸ್ತ್ರೀ ಎಂದು ಭಾವಿಸಿ ಅರ್ಚಿಸುವುದರಲ್ಲಿ ಆನಂದ ಮತ್ತು ಸಾರ್ಥಕತೆ ಕಂಡು ಸಮಾಧಾನ ಹೊಂದುವವರಿಗೆ ಆ ಪರಶಕ್ತಿಯು ಸ್ತ್ರೀ ರೂಪದಲ್ಲಿ ಪ್ರತ್ಯಕ್ಷಳಾಗಿದ್ದಾಳೆ ಅಷ್ಟೆ. ಅಂತಹ ದೇವಿಯ ಆರಾಧನೆಯು ಪ್ರತಿಯೊಬ್ಬರಿಗೂ ಒಳಿತನ್ನು ಮಾಡುವುದರಲ್ಲಿ ಸಂಶಯವಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + ten =
Remember me
