| ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದೆನಿಸಿರುವ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ವರ್ಷ ಹೊಸ ಪೀಳಿಗೆ ಮತ್ತು ಹಳೇ ತಲೆಮಾರಿನ ನಡುವಿನ ಮಹಾ ಸಂಗ್ರಾಮ ಏರ್ಪಟ್ಟಿದೆ. 60 ವರ್ಷದ ಹಿರಿಯ ರಾಜಕಾರಣಿ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಅವರಿಗೆ 27ರ ಯುವಕ, ಸಚಿವ ಆನಂದಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ಸವಾಲೊಡ್ಡಿದ್ದಾರೆ. ಜತೆಗೆ ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಇಬ್ಬರು ಹಾಲಿ ಶಾಸಕರಾದ ಭೀಮಾನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಕರುಣಾಕರ ರೆಡ್ಡಿ ಎರಡನೇ ಅವಧಿಗೆ ಆಯ್ಕೆಯಾಗಲು ಕಸರತ್ತು ನಡೆಸಿದ್ದಾರೆ.
ಪ್ರತಿಷ್ಠೆ- ಸ್ವಾಭಿಮಾನದ ಸಮರ: 2008ರ ಕ್ಷೇತ್ರ ಮರು ವಿಂಗಡಣೆಯಲ್ಲಿ ವಿಜಯನಗರ ಕ್ಷೇತ್ರ ಉದಯವಾಗಿದ್ದು, ಈವರೆಗೆ ಒಂದು ಉಪ ಚುನಾವಣೆ ಸೇರಿ ನಾಲ್ಕು ಎಲೆಕ್ಷನ್ ಕಂಡಿದೆ. ಮೂರು ಬಾರಿ ಬಿಜೆಪಿಯಿಂದ, ಒಮ್ಮೆ ಕಾಂಗ್ರೆಸ್​ನಿಂದ ಆನಂದ ಸಿಂಗ್ ಗೆಲುವು ದಾಖಲಿಸಿದ್ದಾರೆ. 2018ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್​ನಿಂದ ಗೆದ್ದಿದ್ದ ಸಿಂಗ್ ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದರು. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ದಾಖಲಿಸಿದ್ದಾರೆ. ಸಿಂಗ್ ಮತ್ತು ಅವರ ಪುತ್ರನಿಗೆ ಸೋಲಿನ ರುಚಿ ತೋರಿಸಬೇಕೆಂದು ಕಾಂಗ್ರೆಸ್ ಪಡೆ ಸನ್ನದ್ಧವಾಗಿದೆ. ಸತತ ನಾಲ್ಕು ಸಲ ಶಾಸಕರಾಗಿದ್ದ ಆನಂದ ಸಿಂಗ್ ಈ ಬಾರಿ ಕಣದಲ್ಲಿಲ್ಲ. ಆದರೆ, ಪುತ್ರ ಸಿದ್ಧಾರ್ಥ ಸಿಂಗ್ ಅವರನ್ನು ಅಖಾಡಕ್ಕಿಳಿಸಿದ್ದಾರೆ. ಮತ್ತೊಂದೆಡೆ ಎದುರಾಳಿ ಕಾಂಗ್ರೆಸ್​ನಲ್ಲಿ 11 ಆಕಾಂಕ್ಷಿಗಳಿದ್ದರೂ ಅಳೆದೂ ತೂಗಿ ಹಿರಿಯ ರಾಜಕಾರಣಿಯೂ ಆದ ಮಾಜಿ ಶಾಸಕ ಎಚ್.ಆರ್.ಗವಿಯಪ್ಪಗೆ ಮಣೆ ಹಾಕಲಾಗಿದೆ. ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಚಾರ ಕಣ ರಂಗೇರಿದೆ.
ಐಎಸ್​ಆರ್ ಸಕ್ಕರೆ ಕಾರ್ಖಾನೆಯಿಂದ ತಮ್ಮ ಬಂಗ್ಲೆಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಸಚಿವ ಆನಂದ ಸಿಂಗ್ ಅದನ್ನು ಮುಚ್ಚಿಸಿದರು. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ಸರ್ಕಾರಿ ಜಾಗ ಒತ್ತುವರಿ ಮಾಡಿ ಬಂಗ್ಲೆ ನಿರ್ವಿುಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಸಂಡೂರು ತಾಲೂಕಿನಲ್ಲಿ ಇನಾಮು ಭೂಮಿ ಖರೀದಿಸಿದ್ದಾರೆ ಮತ್ತು ಅವರಿಗೆ ರಾಜಕಿಯ ಅನುಭವ ಇಲ್ಲ ಎಂಬೆಲ್ಲ ಆರೋಪಗಳು ಬಿಜೆಪಿಗೆ ಅಡ್ಡಿಯಾಗಿವೆ. ಆದರೆ ನೂತನ ಜಿಲ್ಲೆಯ ರಚನೆ, ಪಿ.ಕೆ. ಹಳ್ಳಿ ಏತ ನೀರಾವರಿ ಜಾರಿಗೊಳಿಸಿದ್ದು, 300 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಗೆ ಶಂಕು ಸ್ಥಾಪನೆ ಸಿಂಗ್ ಕಾರಣೀಕರ್ತರು. ಸಿದ್ಧಾರ್ಥ ಸಿಂಗ್ ಕೂಡಾ ಗ್ರಾಮವಾಸ, ವಿವಿಧ ಕ್ರೀಡೆಗಳ ಆಯೋಜನೆಯಿಂದ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅದರಂತೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಬಗ್ಗೆಯೂ ಸಾಕಷ್ಟು ಪರ-ವಿರೋಧದ ಮಾತುಗಳಿವೆ. ಎಚ್.ಆರ್.ಗವಿಯಪ್ಪ ಆಗರ್ಭ ಶ್ರೀಮಂತ. ಆದರೆ, ಬೇಗನೇ ಜನ ಸಾಮಾನ್ಯರೊಂದಿಗೆ ಬೆರೆಯುವುದಿಲ್ಲ ಎಂಬ ಆರೋಪಗಳಿವೆ.
ಸಾಮಾನ್ಯ ಕ್ಷೇತ್ರವಾದ ಹರಪನಹಳ್ಳಿಯಲ್ಲಿ ಈ ಬಾರಿ ಲಿಂಗಾಯತ ಮತ್ತು ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಎಲ್ಲ ಪಕ್ಷದಲ್ಲಿ ಬಲವಾಗಿತ್ತು. ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿತ್ತು. ಸ್ವಪಕ್ಷೀಯ ನಾಯಕರ ಅಪಸ್ವರದ ಮಧ್ಯೆಯೂ ಬಿಜೆಪಿಯ ಹಾಲಿ ಶಾಸಕ ಜಿ.ಕರುಣಾಕರರೆಡ್ಡಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಂಗ್ರೆಸ್​ನಿಂದ ಎನ್.ಕೊಟ್ರೇಶಿ ಸ್ಪರ್ಧಿಸಿದ್ದು, ಕಾಂಗ್ರೆಸ್​ಗೆ ಬಂಡಾಯವಾಗಿ ಎಂ.ಪಿ.ಪ್ರಕಾಶ ಅವರ ಪುತ್ರಿ ಎಂ.ಪಿ.ಲತಾ ಕಣಕ್ಕಿಳಿದಿದ್ದಾರೆ. ಮತ್ತೋರ್ವ ಪುತ್ರಿ ಎಂ.ಪಿ.ವೀಣಾ ಸ್ವತಂತ್ರವಾಗಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದು, ಲತಾಗೆ ಬೆಂಬಲ ಸೂಚಿಸುವ ಮೂಲಕ ಸಹೋದರಿಯರು ಪಟ್ಟು ಪ್ರದರ್ಶಿಸುತ್ತಿದ್ದಾರೆ.
ಹೂವಿನಹಡಗಲಿ(ಎಸ್​ಸಿ) ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ ಉದಾಹರಣೆಗಳಿಲ್ಲ. ಈ ಬಾರಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ ಹ್ಯಾಟ್ರಿಕ್ ಗೆಲುವಿಗೆ ಬಿಜೆಪಿಯ ಕೃಷ್ಣಾ ನಾಯ್ಕ ತೊಡರುಗಾಲಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಕಮಲ ತೆಕ್ಕೆಗೆ ಜಾರಿರುವ ಕೃಷ್ಣಾ ನಾಯ್ಕ ಈಗ ನಾಯ್ಕಗೆ ಸವಾಲೊಡ್ಡಿದ್ದಾರೆ. ಕಾಂಗ್ರೆಸ್​ನ ನಾಯಕರೇ ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಲ್ಲದೆ, ಸೋಲಿಸುವುದಾಗಿ ಶಪಥ ಮಾಡಿರುವುದು ಕ್ಷೇತ್ರದಲ್ಲಿ ರ್ಚಚಿತ ವಿಷಯ. ಜೆಡಿಎಸ್​ನಿಂದ ಕೆ.ಪುತ್ರೇಶ್ ಕಣದಲ್ಲಿದ್ದಾರೆ.
ಹಗರಿಬೊಮ್ಮನಹಳ್ಳಿ (ಎಸ್​ಸಿ) ಕ್ಷೇತ್ರದಲ್ಲಿ ಶಾಸಕ ಭೀಮಾನಾಯ್ಕ ಮತ್ತು ನೇಮಿರಾಜ್ ನಾಯ್ಕ ಸತತ ನಾಲ್ಕನೇ ಬಾರಿಗೆ ಮುಖಾಮುಖಿಯಾಗಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ನೇಮಿರಾಜ ನಾಯ್ಕ ಬಳಿಕ 2013, 2018ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದ ಭೀಮಾನಾಯ್ಕ ಎದುರು ಮುಗ್ಗರಿಸಿದ್ದಾರೆ. ಈ ಬಾರಿ ಬಿಜೆಪಿ ಟಿಕೆಟ್ ವಂಚಿತ ನೇಮಿರಾಜ್ ನಾಯ್ಕ ಜೆಡಿಎಸ್​ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಬಲ್ಲಾಹುಣಸಿ ರಾಮಣ್ಣ ಕಣಕ್ಕಿಳಿದಿದ್ದು, ಮೊದಲ ಬಾರಿಗೆ ಬಿಜೆಪಿ ಎಸ್​ಸಿ ಎಡ ಸಮುದಾಯಕ್ಕೆ ಮನ್ನಣೆ ನೀಡಿದೆ. ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಬಂಜಾರೇತರ ಸಮುದಾಯಗಳು ಬಿಜೆಪಿಗೆ ಪ್ಲಸ್ ಆಗುವ ಲೆಕ್ಕಾಚಾರ ನಡೆದಿದೆ. ಆದರೆ, ಶಾಸಕ ಭೀಮಾನಾಯ್ಕ ಮತ್ತು ನೇಮಿರಾಜ್ ನಾಯ್ಕ ಮಧ್ಯೆ ಗೆಲುವಿಗೆ ಪೈಪೋಟಿ ಏರ್ಪಡಲಿದೆ.
ಕೂಡ್ಲಿಗಿ (ಎಸ್​ಟಿ) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆಗೊಂಡು, ಮೂಲ ಕ್ಷೇತ್ರ ಮೊಳಕಾಲ್ಮೂರಿಗೆ ಹೋಗಿದ್ದಾರೆ. ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ ಎರಡನೇ ಸ್ಥಾನದಲ್ಲಿದ್ದ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಪುತ್ರ ಡಾ.ಎನ್.ಟಿ.ಶ್ರೀನಿವಾಸಗೆ ಕಾಂಗ್ರೆಸ್ ಮಣೆ ಹಾಕಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ಲೋಕೇಶ ನಾಯಕ ಕಮಲ ಹಿಡಿದು ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಸ್ಪರ್ಧಾಕಾಂಕ್ಷಿಯಾಗಿದ್ದ ಕೋಡಿಹಳ್ಳಿ ಭೀಮಣ್ಣ ಜೆಡಿಎಸ್ ಪಾಲಾಗಿದ್ದಾರೆ. ಇದರಿಂದಾಗಿ ಮೂರು ಪಕ್ಷದ ಅಭ್ಯರ್ಥಿಗಳು ತಮ್ಮ ಸಾಧನೆ, ಜನ ಸೇವೆಯನ್ನು ಮುಂದಿಡುವುದರ ಜತೆಗೆ ಮತದಾರರ ಅನುಕಂಪದ ನಿರೀಕ್ಷೆಯಲ್ಲಿದ್ದಾರೆ.

ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 6 =
Remember me
