ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕಗೊಂಡು ನೂತನ ಜಿಲ್ಲೆಯಾಗಿ ರೂಪುಗೊಂಡಿರುವ ‘ವಿಜಯನಗರ’ದ ಐದು ವಿಧಾನಸಭಾ ಕ್ಷೇತ್ರಗಳು ಚುನಾವಣಾ ಸಮರಾಂಗಣಕ್ಕೆ ಸಿದ್ಧಗೊಳ್ಳುತ್ತಿವೆ. ಹಲವು ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ, 2008ರ ಕ್ಷೇತ್ರ ಮರು ವಿಂಗಡಣೆ ಬಳಿಕ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಪ್ರಧಾನಿ ಮೋದಿ ಅಲೆ ನಡುವೆಯೂ ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾರುಪತ್ಯ ಮುಂದುವರಿದಿದೆ. ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕ್ಷೇತ್ರ ಮರು ವಿಂಗಡಣೆ ಬಳಿಕ ಜೆಡಿಎಸ್ ಸಂಪೂರ್ಣ ನೆಲಕಚ್ಚಿದೆ. ಎಂ.ಪಿ.ಪ್ರಕಾಶ್ ನಿಧನ ಹಾಗೂ ಪ್ರಭಾವಿ ನಾಯಕರು ಕಾಂಗ್ರೆಸ್​ಗೆ ವಲಸೆ ಹೋದ ಬಳಿಕ ಜೆಡಿಎಸ್ ಎಂಬುದು ಯಜಮಾನರಿಲ್ಲದ ಮನೆಯಂತಾಗಿದೆ. ಸದ್ಯ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಪೈಪೋಟಿಯಿದೆ.
ವೀರೇಂದ್ರ ನಾಗಲದಿನ್ನಿಹೊಸಪೇಟೆ
ವಿಜಯನಗರದಲ್ಲಿ ಆನಂದ ಅದೃಷ್ಟ:
2008ರಲ್ಲಿ ಕ್ಷೇತ್ರ ಮರುವಿಂಗಡಣೆ ವೇಳೆ ವಿಜಯನಗರ ಕ್ಷೇತ್ರ ರಚನೆ ಆದಾಗಿನಿಂದ ಆನಂದ್ ಸಿಂಗ್ ಅದೃಷ್ಟ ಖುಲಾಯಿಸಿದೆ. ಸತತ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಮೂಲಕ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹೆಚ್ಚಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿರುವ ಆನಂದ್ ಸಿಂಗ್ ಅವರ ಮುಂದಿನ ನಡೆ ನಿಗೂಢ ಎನ್ನಲಾಗುತ್ತಿದೆ. ಆದರೂ, ಬಿಜೆಪಿ ಟಿಕೆಟ್​ಗೆ ಆನಂದ ಸಿಂಗ್ ಹೆಸರು ಕೇಳಿ ಬರುತ್ತಿದೆ. 2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಎಚ್.ಆರ್.ಗವಿಯಪ್ಪ 2008ರಲ್ಲಿ ಕಾಂಗ್ರೆಸ್​ನಿಂದ ಪರಾಭಾವಗೊಂಡಿದ್ದರು. 2013ರಲ್ಲಿ ಅಬ್ದುಲ್ ವಹಾಬ್​ರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ, ಮುಸ್ಲಿಂ, ದಲಿತ ಸಮುದಾಯದ ಮತ ಸೆಳೆಯುವ ಪ್ರಯತ್ನ ಫಲಿಸಲಿಲ್ಲ. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆನಂದ್ ಸಿಂಗ್ ವಿರುದ್ಧ ಬಿಜೆಪಿ ಉಮೇದುದಾರರಾಗಿ ಅಲ್ಪಅಂತರದಲ್ಲಿ ಗವಿಯಪ್ಪ ಪರಾಭಾವಗೊಂಡರು. 2019ರ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಲ್ಲಿದ್ದರೂ ತಟಸ್ಥರಾಗಿದ್ದರು. ಈಗ ಮತ್ತೆ ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ. ಆದರೆ, ಕೈ ನಾಯಕರಿನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಕ್ಷೇತ್ರ ಸುತ್ತುತ್ತಿದ್ದು, ವೆಂಕಟರಾವ್ ಘೊರ್ಪಡೆ, ಇಮಾಮ್ ನಿಯಾಜಿ ಹೆಸರು ಸಹ ಕೇಳಿ ಬರುತ್ತಿವೆ. ಮತ್ತೊಂದೆಡೆ ಆನಂದ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ಕೂಡಾ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಗಳಿಂದ ಗಮನ ಸೆಳೆಯುತ್ತಿದ್ದಾರೆ.
ಕೂಡ್ಲಗಿ ಗೆಲುವಿಗೆ ಕೈ ರಣತಂತ್ರ:
ಕೂಡ್ಲಿಗಿ ವಿಧಾನಸಭಾ(ಎಸ್​ಟಿ) ಕ್ಷೇತ್ರವನ್ನು ಸದ್ಯ ಬಿಜೆಪಿಯ ಎನ್.ವೈ.ಗೋಪಾಲಕೃಷ್ಣ ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾಲ್ಕು ಬಾರಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಗೋಪಾಲಕೃಷ್ಣ, 2018ರಲ್ಲಿ ಕೊನೆಯ ಗಳಿಗೆಯಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ವಿಜಯ ಪತಾಕೆ ಹಾರಿಸಿ ಅಚ್ಚರಿ ಮೂಡಿಸಿದ್ದರು. ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಗೋಪಾಲಕೃಷ್ಣ, ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವುದು ಖಚಿತ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದಿತ್ತು. ಕಾಂಗ್ರೆಸ್ ಬಂಡಾಯವಾಗಿ ಕಣಕ್ಕಿಳಿದಿದ್ದ ಲೋಕೇಶ ನಾಯಕ ಮೂರನೇ ಸ್ಥಾನ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗುಜ್ಜಲ ರಘು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಸದ್ಯ ರಘು ಗುಜ್ಜಲ, ನಾಗಮಣಿ ಜಿಂಕಲ್ ಕೈ ಟಿಕೆಟ್ ಆಕಾಂಕ್ಷಿತರಾಗಿದ್ದಾರೆ. ಈ ಹಿಂದೆ ಬಿಜೆಪಿ ಹಾಗೂ ಪಕ್ಷೇತರರಾಗಿ ಕೂಡ್ಲಿಗಿ ಕ್ಷೇತ್ರ ಪ್ರತಿನಿಧಿಸಿದ್ದ ಬಿ.ನಾಗೇಂದ್ರ ಸದ್ಯ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕರಾಗಿದ್ದಾರೆ. ಆದರೆ, ಈ ಬಾರಿ ಅಲ್ಲಿ ಶ್ರೀರಾಮುಲು ಸ್ಪರ್ಧಿಸಿದರೆ, ನಾಗೇಂದ್ರ ತವರಿಗೆ ವಾಪಸಾಗುವ ಸಾಧ್ಯತೆಗಳಿವೆ.
ಹೂವಿನಹಡಗಲೀಲಿ ಹೊಸಬರ ಕೂಗು:
ಹೂವಿನಹಡಗಲಿ ಕ್ಷೇತ್ರದಲ್ಲಿ ಪುನರಾಯ್ಕೆ ಮೂಲಕ ಕಾಂಗ್ರೆಸ್​ನ ಪಿ.ಟಿ.ಪರಮೇಶ್ವರ ನಾಯ್ಕ ದಾಖಲೆ ನಿರ್ವಿುಸಿದ್ದಾರೆ. ಈ ಹಿಂದೆ ಮುತ್ಸದ್ಧಿ ನಾಯಕ ಎಂ.ಪಿ.ಪ್ರಕಾಶಗೂ ಪುನರಾಯ್ಕೆ ಭಾಗ್ಯ ಒಲಿದಿರಲಿಲ್ಲ. ಆದರೆ, 2013, 2018ರ ಚುನಾವಣೆಯಲ್ಲಿ ಪಿ.ಟಿ.ಪರಮೇಶ್ವರ ನಾಯ್ಕ ಜಯ ಗಳಿಸಿದ್ದು, ಹ್ಯಾಟ್ರಿಕ್ ಕನಸು ಕಾಣುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳಿಲ್ಲ. 2008ರಲ್ಲಿ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಗೆದ್ದು ಬೀಗಿದ್ದ ಬಿಜೆಪಿಯ ಚಂದ್ರಾನಾಯ್ಕ, ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಮುಗ್ಗರಿಸಿದ್ದರು. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಓದೊ ಗಂಗಪ್ಪ ಎರಡನೇ ಸ್ಥಾನ ಪಡೆದಿದ್ದರಿಂದ ಬಿಜೆಪಿ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿತ್ತು. ಸದ್ಯ ಓದೊ ಗಂಗಪ್ಪ ಬಿಜೆಪಿಯಲ್ಲಿದ್ದಾರೆ. ಚಂದ್ರಾನಾಯ್ಕ, ಓದೋ ಗಂಗಪ್ಪ ಮತ್ತು ಸಂಘದ ಪರಿವಾರ ಹಿನ್ನೆಲೆಯಿಂದ ಬಂದಿರುವ ಪೂಜಪ್ಪ, ಎಸ್​ಟಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ನಾಯ್ಕ ಹೆಸರು ಪ್ರಮುಖವಾಗಿವೆ. ನಾನಾ ಕಾರಣಗಳಿಂದ ಬಿಜೆಪಿ ಮತ್ತು ಹೂವಿನಹಡಗಲಿ ಕ್ಷೇತ್ರದಲ್ಲಿ ಹೊಸಬರ ಆಯ್ಕೆಯ ಕೂಗು ಕೇಳಿಬರುತ್ತಿದೆ.
ಹಗರಿಬೊಮ್ಮನಳ್ಳಿಯಲ್ಲಿ ಭೀಮಬಲ:
ಹಗರಿಬೊಮ್ಮನಳ್ಳಿ ಎಸ್​ಸಿ ಮೀಸಲು ಕ್ಷೇತ್ರವನ್ನು ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಪ್ರತಿನಿಧಿಸುತ್ತಿದ್ದಾರೆ. 2008ರಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಸೋತಿದ್ದ ಅವರು, 2013ರಲ್ಲಿ ಅದೇ ಪಕ್ಷದಿಂದ ಗೆಲುವು ಸಾಧಿಸಿದ್ದರು. 2018ರಲ್ಲಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದು, ಸತತ ಎರಡನೇ ಬಾರಿ ಶಾಸಕರಾಗಿದ್ದಾರೆ. ಭೀಮಾನಾಯ್ಕ ವಿರುದ್ಧ ಮೊದಲ ಬಾರಿಗೆ ಗೆಲುವು ದಾಖಲಿಸಿದ್ದ ಕೆ.ನೇಮಿರಾಜ ನಾಯ್ಕ ಸತತ ಪರಾಭವಗೊಂಡಿದ್ದಾರೆ. ಕಳೆದ ಎರಡು ಚುನಾವಣಾ ಫಲಿತಾಂಶದಿಂದ ಕಂಗೆಟ್ಟಿರುವ ಬಿಜೆಪಿಗರು, ಈ ಬಾರಿಯೂ ನೇಮಿರಾಜಗೆ ಟಿಕೆಟ್ ದೊರೆತರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ. ‘ನೇಮಿರಾಜ ನಾಯ್ಕಗೆ ಬಿಜೆಪಿ ಟಿಕೆಟ್ ದೊರೆಯಲಿ.. ನನ್ನ ಗೆಲುವು ಸುಲಭವಾಗಲಿ’ ಎಂದು ಸ್ವತಃ ಭೀಮಾನಾಯ್ಕರೇ ದೇವರಲ್ಲಿ ಮೊರೆಯಿಟ್ಟ ವಿಡಿಯೋ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಸದ್ಯ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆ ಗುಸುಗುಸು ಶುರುವಾಗಿದೆ. ನೇಮಿರಾಜಗೆ ಟಿಕೆಟ್ ತಪ್ಪಿದ್ದೇ ಆದರೆ, ಕೃಷ್ಣ ನಾಯಕ ಬಲ್ಲಹುಣಸಿ ರಾಮಣ್ಣ, ಮಲ್ಲಿಕಾರ್ಜುನ ನಾಯ್ಕ ಹಾಗೂ ನೀರಾವರಿ ಇಲಾಖೆ ನಿವೃತ್ತ ಅಭಿಯಂತರ ಜಯಪ್ರಕಾಶ್ ಇದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಕೂಡಾ ಹಿಂದೆ ಬಿದ್ದಿಲ್ಲ. ಡಾ.ವಿ.ತಿಪ್ಪೇಸ್ವಾಮಿ ಮತ್ತು ನಿವೃತ್ತ ಆರ್​ಟಿಒ ಪರಮೇಶ್ವರಪ್ಪ ಸ್ಪರ್ಧಾಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ.
ಹರಪನಹಳ್ಳಿಯಲ್ಲಿ ಅಕ್ಕ-ತಂಗಿ ಕಸರತ್ತು:
ಸಾಮಾನ್ಯ ಕ್ಷೇತ್ರವಾಗಿರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯ ಗಾಲಿ ಕರುಣಾಕರ ರೆಡ್ಡಿ ಪ್ರತಿನಿಧಿಸುತ್ತಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಕರುಣಾಕರ ರೆಡ್ಡಿ, 2013ರಲ್ಲಿ ಕಾಂಗ್ರೆಸ್​ನ ಎಂ.ಪಿ.ರವೀಂದ್ರ ಎದುರು ಸೋತು, 2018ರಲ್ಲಿ ಅದೇ ರವೀಂದ್ರ ವಿರುದ್ಧ ಗೆಲುವಿನ ಬಾವುಟ ಹಾರಿಸಿದ್ದಾರೆ. ಈ ಬಾರಿ ಕರುಣಾಕರ ರೆಡ್ಡಿ ಜತೆಗೆ ಸ್ವಪಕ್ಷದಲ್ಲೇ ಅನೇಕ ಸ್ಪರ್ಧಾಕಾಂಕ್ಷಿಗಳ ಹೆಸರು ಮುನ್ನೆಲೆಯಲ್ಲಿವೆ. ಕರ್ನಾಟಕ ಸಾರಿಗೆ ನಿಗಮದ ಮಾಜಿ ನಿರ್ದೇಶಕ ಅರುಂಡಿ ನಾಗರಾಜ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸನಗೌಡ ಪಾಟೀಲ್, ಚಂದ್ರಶೇಖರ ಪೂಜಾರ ಹೆಸರು ಪ್ರಮುಖವಾಗಿವೆ. ಕಾಂಗ್ರೆಸ್​ನಲ್ಲೂ ಮಾಜಿ ಶಾಸಕ ಎಂ.ರವೀಂದ್ರ ಅವರ ಸಹೋದರಿಯರಾದ ಎಂ.ಪಿ. ವೀಣಾ ಮತ್ತು ಎಂ.ಪಿ. ಲತಾ ಕೂಡ ಸ್ಪರ್ಧಾಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ. ಉಭಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಎರಡು ಅಂಕಿ ದಾಟಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + six =
Remember me
