ಸಾಂಪ್ರದಾಯಿಕ ಕೃಷಿ ಸಂಸ್ಕೃತಿಯನ್ನು ಕಾಪಿಟ್ಟುಕೊಂಡು, ಆಧುನಿಕ ಬೇಸಾಯ ಪದ್ಧತಿ ಅಳವಡಿಕೆ ಜತೆಗೆ ನೆಲ- ಜಲ ಸಂರಕ್ಷಣೆಯಲ್ಲಿ ರೈತರ ಪಾತ್ರ ಹಿರಿದು. ‘ಬೇಸಾಯ ನೀ ಸಾಯ’ ಎಂಬ ನಾಣ್ಣುಡಿಗೆ ಅಪವಾದವಾಗಿ ಕೃಷಿಯಲ್ಲೂ ಬಂಗಾರ ಬೆಳೆಯುತ್ತಿರುವ ನೂರಾರು ರೈತರ ಉದಾಹರಣೆ ಕಣ್ಣಮುಂದಿದೆ. ವ್ಯವಸಾಯವನ್ನೇ ಬದುಕನ್ನಾಗಿಸಿ, ಬೆಳಕಾಗಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವ ಇಂತಹ ಕೆಲವು ವಿಶೇಷ ರೈತರ ಪರಿಚಯ, ಚಿತ್ರಣ ಇಲ್ಲಿದೆ. ಇದು ರೈತದಿನಕ್ಕೆ (ಡಿಸೆಂಬರ್ 23) ವಿಜಯವಾಣಿ ವಿಶೇಷ.
| ಪರಶುರಾಮ ಭಾಸಗಿ ವಿಜಯಪುರ
ಉದ್ಯೋಗ ಅರಸಿ ದೇಶ- ವಿದೇಶಗಳಿಗೆ ಗುಳೆ ಹೋಗುವವರ ಸಂಖ್ಯೆ ಹೆಚ್ಚುತ್ತಿರುವ ಸನ್ನಿವೇಶದಲ್ಲಿಯೇ ವಿದೇಶದಲ್ಲಿಯ ಉನ್ನತ ಹುದ್ದೆ ತೊರೆದು ಹಳ್ಳಿಗೆ ಬಂದು ಕೃಷಿಯಲ್ಲಿ ಖುಷಿ ಕಂಡುಕೊಂಡವರು ಪಾರಗೊಂಡ ದಂಪತಿ!
ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಶಿವರಾಜ ಪಾರಗೊಂಡ ಹಾಗೂ ಪುಷ್ಪಾ ದಂಪತಿ ಕೃಷಿಯಲ್ಲಿ ಮಾಡಿದ ಸಾಧನೆ ನಿಬ್ಬೆರಗಾಗಿಸುವಂಥದ್ದು. ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇಬ್ಬರು ಜರ್ಮನಿಯ ಖಾಸಗಿ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದರು. ತಿಂಗಳಿಗೆ ತಲಾ 3 ಲಕ್ಷ ರೂ. ಗಳಂತೆ ಒಟ್ಟು 6 ಲಕ್ಷ ಸಂಬಳ. ಅದಾಗ್ಯೂ ಕೃಷಿಗಾಗಿ ಹೈ-ಫೈ ಬದುಕು ತೊರೆದು ಬಂದು ಇವರು ಸಾಧಿಸಿದ್ದು ಅದಕ್ಕಿಂತಲೂ ಮಿಗಿಲಾದದ್ದು. ಅಪಾರ ಜಮೀನಿದ್ದರೂ ಕೃಷಿ ಮಾಡಿಕೊಳ್ಳಲಾಗದೆ ಶಿವರಾಜ ತಂದೆ ಅದನ್ನು ಪಾಳು ಬೀಳಿಸಿದ್ದರು. ಮಗ ಮತ್ತು ಸೊಸೆ ಜರ್ಮನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿದಾಗ ಸಾಕಷ್ಟು ಸಂತಸ ಪಟ್ಟುಕೊಂಡಿದ್ದರು. ಯಾವಾಗ ಕೃಷಿ ಮಾಡುತ್ತೇವೆಂದರೋ ಆಗಲೇ ಎರಡೂ ಕುಟುಂಬಗಳಿಗೆ ದಿಗಿಲು ಬಡಿದಿತ್ತು. ಎಷ್ಟೇ ಮನವರಿಕೆ ಮಾಡಿದರೂ ಕೇಳದಾದಾಗ ಏಳು ಎಕರೆ ಬರಡು ನೆಲ ಬಿಟ್ಟುಕೊಟ್ಟರು. ಇದೊಂದು ಸವಾಲಾಗಿ ಸ್ವೀಕರಿಸಿದ ಶಿವರಾಜ ದಂಪತಿ 2 ವರ್ಷದಲ್ಲಿ ಮಾಡಿದ ಸಾಧನೆ ಇಂದು ರಾಜ್ಯದ ಜನತೆಗೂ ಅಚ್ಚರಿ ಎನಿಸಿದೆ.
ಹೇಗಿದೆ ಇವರ ಕೃಷಿ ಬದುಕು?: ಆರಂಭದಲ್ಲಿ ಕೇವಲ 1.20 ಲಕ್ಷ ರೂ. ಬಂಡವಾಳದಲ್ಲಿ ನೈಸರ್ಗಿಕ ಕೃಷಿಗೆ ಮುಂದಾದ ಪಾರಗೊಂಡ ದಂಪತಿ ಕೃಷಿಯಲ್ಲಿನ ಸವಾಲು ಕಂಡು ಒಬ್ಬರಿಗೊಬ್ಬರು ತಿಳಿಯದಂತೇ ಕಣ್ಣೀರು ಸುರಿಸಿದರು. ಆದರೂ ಛಲ ಬಿಡದೆ ಹನಿ ನೀರಾವರಿ ಪದ್ಧತಿ ಮೂಲಕ ಪಂಚತರಂಗಿಣಿ ಕೃಷಿ ಪದ್ಧತಿ ಅನುಸರಿಸಿ ಯಾವುದೇ ರಾಸಾಯನಿಕ ಬಳಸದೆ ಸಮೃದ್ಧ ಫಸಲು ತೆಗೆಯುವಲ್ಲಿ ಯಶಸ್ವಿಯಾದರು. ಬರೋಬ್ಬರಿ 9ಭಾಷೆ ಬಲ್ಲ ಶಿವರಾಜ ವಿವಿಧ ಕೃಷಿ ಪದ್ಧತಿಗಳನ್ನು ಅಧ್ಯಯನ ಮಾಡಿ ಮಾರುಕಟ್ಟೆ ಸೌಲಭ್ಯ ಕೂಡ ಕಂಡುಕೊಂಡರು. ಇದೀಗ ಅವರ ಸಾಧನೆ ಅನೇಕ ರೈತರಿಗೆ ಮಾದರಿಯಾಗಿದೆ. ಬರೋಬ್ಬರಿ 1500ಕ್ಕೂ ಅಧಿಕ ವಿವಿಧ ಬಗೆಯ ಸಸಿಗಳು ಹಾಗೂ ಬೆಳೆಗಳು ಪಾರಗೊಂಡರ ತೋಟದಲ್ಲಿವೆ. ಕೇವಲ ಎರಡು ವರ್ಷದಲ್ಲಿ ಬರಡು ನೆಲವನ್ನು ನಂದನವನ ಮಾಡಿದ್ದಾರೆ. ರಾಸಾಯನಿಕ ಸಿಂಪಡಿಸದೆ ಕಳೆ ರಹಿತ ಕೃಷಿ ಮಾಡುತ್ತಿದ್ದಾರೆ.
ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿರುವ ಶಿವರಾಜ ಪೇರು ಹಣ್ಣಿನ ಮಾರಾಟಕ್ಕೆ ಕೋಲಂಬಿಯಾ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆಸ್ಪತ್ರೆಯವರು ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ಈ ಹಣ್ಣನ್ನು ಬಳಸುತ್ತಿದ್ದು, ನೇರವಾಗಿ ಜಮೀನಿಗೆ ಬಂದು ಕಟಾವು ಮಾಡಿಕೊಂಡು ಹೋಗುತ್ತಾರೆೆ. ತಮ್ಮದೇ ದೇಶಿ ಬೀಜ ಬ್ಯಾಂಕ್ ಸಹ ಮಾಡಿಕೊಂಡಿದ್ದಾರೆ. ಮೊದಲ ವರ್ಷ ತುಮಕೂರು ಸಿದ್ಧಗಂಗಾ ಮಠದಿಂದ ಸಿದ್ಧಚೇತನ ಸೇವಾರತ್ನ ಪ್ರಶಸ್ತಿ ಹಾಗೂ ಕೃಷಿ ಸಾಧನಾ ಪ್ರಶಸ್ತಿ ಲಭಿಸಿದೆ. ಕೃಷಿ ಆರಂಭಿಸಿದ ಮೊದಲ ವರ್ಷ 7-8 ಲಕ್ಷ ರೂ. ಆದಾಯ ತೆಗೆದ ಶಿವರಾಜ 2ನೇ ವರ್ಷಕ್ಕೆ 10 ಲಕ್ಷ ರೂ. ಗೂ ಅಧಿಕ ಆದಾಯ ಗಳಿಸಿದ್ದು, ಬಹು ವಾರ್ಷಿಕ ಬೆಳೆಗಳನ್ನು ಬೆಳೆದಿರುವುದರಿಂದ ಮುಂದೆ ಇನ್ನೂ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಜರ್ಮನಿಯಲ್ಲಿದ್ದಾಗ ಸಹೋದ್ಯೋಗಿ ರಿಚರ್ಡ್ ಲೂಯಿ ಕೈಗೊಂಡ ನೈಸರ್ಗಿಕ, ಸುಸ್ಥಿರ ಕೃಷಿಯಿಂದ ಆಕರ್ಷಿತನಾದೆ. ರಿಚರ್ಡ್ 150 ಕುಟುಂಬಗಳಿರುವ ಕಾಲನಿಯನ್ನು ವೆಜಿಟೇಬಲ್ ವಿಲೇಜ್ ಆಗಿ ಪರಿವರ್ತಿಸಿದ್ದು ಪ್ರೇರಣೆಯಾಯಿತು. ಪತ್ನಿ ಪುಷ್ಪಾ ಕೃಷಿಗೆ ಒಲವು ತೋರಿದ್ದು ಮತ್ತಷ್ಟು ಪ್ರೇರಣೆಯಾಯಿತು. ಜರ್ಮನಿ ಕಂಪನಿಯಲ್ಲಿ ಪಡೆಯುತ್ತಿದ್ದ ಆದಾಯಕ್ಕಿಂತ ಹೆಚ್ಚು ಪಡೆಯುತ್ತಿದ್ದೇನೆ.
| ಶಿವರಾಜ ಪಾರಗೊಂಡ ಮಾದರಿ ಕೃಷಿಕ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − nine =
Remember me
