ಬೆಂಗಳೂರು:ನಾಡಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ‘ವಿಜಯರತ್ನ-2022’ ಪುರಸ್ಕಾರಕ್ಕೆ ಭಾಜನರಾಗಿರುವುದು ಮಾತ್ರವಲ್ಲದೆ, ತಮ್ಮನ್ನು ಆದರ್ಶ ವ್ಯಕ್ತಿಗಳಾಗಿ ರೂಪಿಸಿಕೊಂಡಿರುವುದರ ಪ್ರತೀಕವಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಶ್ಲಾಘಿಸಿದ್ದಾರೆ.
ನಗರದ ಖಾಸಗಿ ಹೋಟೆಲ್​ನಲ್ಲಿ ಶನಿವಾರ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಚಾನಲ್ ವತಿಯಿಂದ ಕೊಡಮಾಡಲಾದ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್​ನ ಮಾಲೀಕರಾದ ಡಾ. ವಿಜಯ ಸಂಕೇಶ್ವರ ಅವರು ದೇಶಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ. ಅವರ ಸಂಸ್ಥೆಯಿಂದ ಹಲವು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ತುಂಬಾ ವಿಶೇಷವಾಗಿದೆ. ಬಹುತೇಕ ಸಂಘ-ಸಂಸ್ಥೆಗಳು ಬೆಂಗಳೂರು ಮತ್ತು ಹಳೆಯ ಮೈಸೂರು ಪ್ರಾಂತ್ಯದಲ್ಲಿರುವ ವ್ಯಕ್ತಿ ಮತ್ತು ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಆದರೆ, ಉತ್ತರ ಕರ್ನಾಟಕದ ಅನೇಕ ಸಮಾಜಮುಖಿ ಕೆಲಸ ಮಾಡಿದವರು, ಯೋಗಪಟುಗಳು, ಉದ್ಯಮಿಗಳು, ದಾನಿಗಳು, ಆರೋಗ್ಯ ಸೇವಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನಾಡಿನ ಎಲ್ಲ ಭಾಗದಲ್ಲಿಯೂ ಸಾಧಕರಿಗೆ ಕೊರತೆಯಿಲ್ಲ ಎಂಬುದನ್ನು ತೋರಿಸುತ್ತಿದೆ ಎಂದರು.
ಲಾಭದ ಉದ್ದೇಶಕ್ಕೆ ಉದ್ಯಮ ಬೇಡ:ಉದ್ಯಮಿಗಳು ಕೇವಲ ಲಾಭದ ಗುರಿ ಮಾತ್ರ ಇಟ್ಟುಕೊಳ್ಳದೆ ರಾಷ್ಟ್ರದ ಅಭಿವೃದ್ಧಿ ದ್ಯೋತಕ ಚಿಂತನೆ ತಲೆಯಲ್ಲಿಟ್ಟುಕೊಂಡು ಉದ್ಯಮ ನಡೆಸಬೇಕು. ಉದ್ಯಮಗಳನ್ನು ಆರಂಭಿಸುವ ಪ್ರತಿಯೊಬ್ಬರೂ ವೈಯಕ್ತಿಕ ಅಭಿವೃದ್ಧಿ ಗುರಿ ಹೊಂದಿರುತ್ತಾರೆ. ಲಾಭದ ಉದ್ದೇಶದ ಉದ್ಯಮವನ್ನು ಬಿಟ್ಟು ಯುವಕರಿಗೆ ಉದ್ಯೋಗ ನೀಡುವ ಮತ್ತು ಸಮಾಜಕ್ಕೆ ವಿವಿಧ ವಿಭಾಗಗಳಿಂದ ಸೇವೆ ಸಲ್ಲಿಸುವ ಕಾರ್ಯವನ್ನು ಮಾಡಬೇಕು. 21ನೇ ಶತಮಾನದಲ್ಲಿ ಉದ್ಯಮ ಆರಂಭ, ಬೆಳವಣಿಗೆ ಹಾಗೂ ಮುನ್ನಡೆಸಲು ಸಾಕಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಅವಕಾಶಗಳಿದ್ದು, ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈಗ ವಿಜಯರತ್ನ ಪುರಸ್ಕಾರ ಪಡೆದವರು ಹೊಸ ಗುರಿಗಳನ್ನು ಹಾಕಿಕೊಳ್ಳಬೇಕು ಎಂದು ಸುಧಾಕರ್ ಸಲಹೆ ನೀಡಿದರು.
2ನೇ ತಲೆಮಾರಿನವರ ಕಾರ್ಯವೂ ಸವಾಲು:ಯಾವುದೇ ವ್ಯಕ್ತಿ ದೂರದೃಷ್ಟಿಯಿಂದ ಉದ್ಯಮ ಮತ್ತು ಸಂಸ್ಥೆಯನ್ನು ಆರಂಭಿಸಿದಾಗ ತನ್ನ ಗುರಿ ತಲುಪುವ ಕಾರ್ಯಕ್ಕೆ ಅವಿರತ ಶ್ರಮಿಸಿದರೆ ಫಲ ಸಿಗುತ್ತದೆ ಎಂಬುದಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಅವರೇ ಸಾಕ್ಷಿಯಾಗಿದ್ದಾರೆ. ವಿಆರ್​ಎಲ್ ಸೇರಿ ನಾಡಿನ ಬಹುತೇಕ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಮತ್ತು ಉದ್ಯಮಗಳು 2ನೇ ತಲೆಮಾರುಗಳನ್ನು ಕಾಣುತ್ತಿವೆ. ಅದರಲ್ಲಿ ಡಾ. ಆನಂದ ಸಂಕೇಶ್ವರ ಅವರು ಸೇರಿ ಅನೇಕರು ತಮ್ಮ ಮುಂದಿರುವ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಉತ್ತಮವಾಗಿ ನಿರ್ವಹಿಸಿ ಉದ್ಯಮ ಸಂಸ್ಥೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ದೊಡ್ಡ ಸಾಧನೆಯಾಗಿದೆ ಎಂದು ಸುಧಾಕರ್ ಶ್ಲಾಘಿಸಿದರು.
ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಮಾತನಾಡಿ, ವಿಜಯವಾಣಿ ಪತ್ರಿಕೆ ಆರಂಭವಾಗಿ 10 ವರ್ಷ ಆಯಿತು. ಆದರೆ, ಮೂರ್ನಾಲ್ಕು ವರ್ಷಗಳ ಹಿಂದೆಯೇ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಬೇಕು ಎನ್ನುವ ಚಿಂತನೆ ಇದ್ದರೂ, ಕೋವಿಡ್ ಇದಕ್ಕೆ ತಡೆ ಒಡ್ಡಿತ್ತು. ಕೋವಿಡ್ ಅವಧಿಯಲ್ಲಿ ಜನರು ಸಂಕಷ್ಟ ಅನುಭವಿಸುತ್ತಿದ್ದ ವೇಳೆ ಅನೇಕರು ನೆರವು ನೀಡಿದ್ದಾರೆ. ಇನ್ನು ಉದ್ಯಮಿಗಳು, ಕಂಪನಿಗಳು ಪದವಿ ಮುಗಿಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್ ಅವಕಾಶ ಮಾಡಿಕೊಟ್ಟಲ್ಲಿ ಉದ್ಯಮ ಮತ್ತು ಕೆಲಸದ ಬಗ್ಗೆ ಅನುಭವ ಸಿಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಕಂಪನಿಗಳ ವರದಿ ಸಿದ್ಧಪಡಿಸಲು ಅವಕಾಶ ನೀಡಿದರೆ ಅನುಕೂಲ ಆಗುತ್ತದೆ ಎಂದು ಸಲಹೆ ನೀಡಿದರು.
ವಿಜಯವಾಣಿ 10 ವರ್ಷದಿಂದ ವರ್ಷದ 365 ದಿನಗಳಲ್ಲಿ ಕನಿಷ್ಠ 150 ದಿನ ಹತ್ತೂ ಆವೃತ್ತಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ದೇಶದಲ್ಲಿ ಮೊದಲ ಬಾರಿಗೆ ಬ್ರೖೆಲ್ ಲಿಪಿ ಕೈಪಿಡಿ ವಿತರಣೆ, ಪ್ರಾಪರ್ಟಿ ಎಕ್ಸ್​ಪೋ, ಫರ್ನಿಚರ್ ಎಕ್ಸ್​ಪೋ, ಎಜುಕೇಷನ್ ಎಕ್ಸ್​ಪೋ, ಮಹಿಳೆ- ಮಕ್ಕಳ ದಿನಾಚರಣೆ, ಪರಿಸರ ದಿನಾಚರಣೆ, ಅವಿವಾಹಿತರ ಅನುಕೂಲಕ್ಕೆ ಸ್ವಯಂವರ ಪಾರ್ವತೀ ಯಾಗ, ಕಾರ್ಗಿಲ್ ವಿಜಯ್ ದಿವಸ, ದಸರಾ, ದೀಪಾವಳಿ ವೇಳೆ ಶಾಪಿಂಗ್ ಫೆಸ್ಟಿವಲ್ ಆಯೋಜನೆ ಮೂಲಕ ಗ್ರಾಹಕರಿಗೆ ವಾರ್ಷಿಕ 2 ಸಾವಿರಕ್ಕೂ ಅಧಿಕ ಬಹುಮಾನ ನೀಡಲಾಗುತ್ತದೆ. ಹೀಗೆ, ಫೆಸ್ಟಿವಲ್ ಕೂಪನ್​ಗಳಲ್ಲಿ ಆಯ್ಕೆ ಆದವರಿಗೆ ಈವರೆಗೆ 80 ಕಾರು, 80 ಬೈಕ್ ವಿವಿಧ ಗೃಹೋಪಯೋಗಿ ಉಪಕರಣ ಕೊಡಲಾಗಿದೆ ಎಂದರು.
ವಿಆರ್​ಎಲ್​ನಲ್ಲೀಗ 5 ಸಾವಿರಕ್ಕೂ ಅಧಿಕ ಟ್ರಕ್​ಗಳಿದ್ದು, 20 ಸಾವಿರಕ್ಕೂ ಅಧಿಕ ಸಿಬ್ಬಂದಿ ನಮ್ಮ ಕುಟುಂಬ ಸದಸ್ಯರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಡಾ. ಆನಂದ ಸಂಕೇಶ್ವರ ಹೇಳಿದರು.
ರಾಜ್ಯದ ನಂಬರ್ ಒನ್ ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿಯಿಂದ 40ಕ್ಕೂ ಅಧಿಕ ಸಾಧಕರಿಗೆ ವಿಜಯರತ್ನ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಾಧಕರಿಗೆ ನೀಡುತ್ತಿರುವ ಪೋ›ತ್ಸಾಹವಾಗಿದೆ. ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿಗಳು ಜನರಿಗೆ ಕೇವಲ ಸುದ್ದಿ ಕೊಡುವ ಕೆಲಸ ಮಾಡದೇ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿವೆ. ದುಡಿಮೆ, ಸಮಯ ಪ್ರಜ್ಞೆ ಮತ್ತು ಇತರ ಕಾರ್ಯಗಳಿಂದ ಸಾಮಾನ್ಯ ವ್ಯಕ್ತಿಯೊಬ್ಬರು ಸಾಧಕರಾಗಿ ಹೊರ ಹೊಮ್ಮಿರುವುದಕ್ಕೆ ಡಾ. ವಿಜಯ ಸಂಕೇಶ್ವರರು ಮಾದರಿಯಾಗಿದ್ದಾರೆ. ಅವರ ಜೀವನ ಕುರಿತ ಸಿನಿಮಾ ಮೂಡಿ ಬರುತ್ತಿರುವುದು ಯುವಕರಿಗೆ ಪ್ರೇರಣೆಯಾಗಲಿದೆ. ಈಗ ಡಾ. ಆನಂದ ಸಂಕೇಶ್ವರ ಅವರು ತಂದೆಯ ಮಾದರಿಯಲ್ಲೇ ಹೆಜ್ಜೆಗುರುತು ಮೂಡಿಸುತ್ತಿದ್ದು, ಅವರಿಗೆ ಶುಭಾಶಯ ಕೋರುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂದೇಶ ಕಳುಹಿಸಿದ್ದರು.
ರಿಷಿಕಾ ಶರ್ಮಾ ಅವರು ನಮ್ಮ ತಂದೆ ಬಳಿ ಬಯೋಪಿಕ್ ಚಲನಚಿತ್ರ ಮಾಡುವುದಾಗಿ ಕೇಳಿದ್ದರು. ನಾವೇ ಅದರ ನಿರ್ಮಾಣ ಕೈಗೆತ್ತಿಕೊಂಡೆವು.ಈಗ ಸಿನಿಮಾ ನಿರ್ಮಾಣ ಮುಗಿಯುವ ಹಂತದಲ್ಲಿದ್ದು, 4 ದಿನಗಳ ಹಿಂದೆ 4 ಭಾಷೆಗಳಲ್ಲಿ ಬಿಡುಗಡೆಯಾದ ವಿಜಯಾನಂದ ಸಿನಿಮಾ ಟೀಸರ್ 1 ಕೋಟಿ ವೀಕ್ಷಣೆ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಡಾ. ಆನಂದ ಸಂಕೇಶ್ವರ ಹೇಳಿದರು. ಇನ್ನು ದಿಗ್ವಿಜಯ ಮತ್ತು ವಿಜಯವಾಣಿ ಫೇಸ್ ಬುಕ್ ಪೇಜ್​ನಲ್ಲಿಯೂ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಕೆಂಪು ಬಣ್ಣದ ಸಾಧಕರ ಕುರ್ಚಿಯಲ್ಲಿ ಕೂರಿಸಲಾಗುತ್ತಿತ್ತು. ಆದರೆ, ವಿಜಯರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕುಳಿತಿರುವ 42 ಜನರೂ ಸಾಧಕರು ಎನ್ನುವುದು ಹೆಮ್ಮೆಯ ವಿಚಾರ. ಶಿಕ್ಷಣ, ಸಮಾಜ, ಆರೋಗ್ಯ, ಯೋಗಪಟು, ಗೋಶಾಲೆ, ಉದ್ಯೋಗ, ಉದ್ಯಮ, ದಾನ ಇತ್ಯಾದಿ ಕಾರ್ಯಗಳಿಂದ ಸಾಧನೆ ಮಾಡಿದವರನ್ನು ಇಲ್ಲಿ ಗೌರವಿಸಲಾಗುತ್ತಿದೆ. ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ವಿಜಯರತ್ನ ಪ್ರಶಸ್ತಿ ಪಡೆದವರು ಸ್ಪೂರ್ತಿ ಆಗಿದ್ದಾರೆ. ವಿಜಯ ಸಂಕೇಶ್ವರ ಅವರು ‘ದುಡ್ಡಿನ ಹಿಂದೆ ಓಡಬೇಡಿ, ಆದರೆ ಓಡುವುದನ್ನು ನಿಲ್ಲಿಸಬೇಡಿ’ ಎಂದು ಹೇಳಿದ ಮಾತನ್ನು ಪಾಲಿಸಿದಲ್ಲಿ ಜೀವನದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದು ಚಿತ್ರನಟ ರಮೇಶ್ ಅರವಿಂದ್ ತಿಳಿಸಿದರು.
ಡಾ. ಆನಂದ ಸಂಕೇಶ್ವರ ಅವರೊಂದಿಗಿನ ಸ್ನೇಹ 25 ವರ್ಷಕ್ಕಿಂತಲೂ ಅಧಿಕವಾಗಿದೆ. ನನ್ನ ಸಿನಿಮಾದ ಆರಂಭಿಕ ಅವಧಿಯಲ್ಲಿ ಅವರು ನನಗೆ ಪ್ರಶಸ್ತಿ ನೀಡುವ ಮುಖ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಡಾ. ಆನಂದ ಸಂಕೇಶ್ವರ ಅವರಿಗೆ ಸಿನಿಮಾದ ನಂಟು ತುಂಬಾ ಹಳೆಯದು.
|ರಮೇಶ್ ಅರವಿಂದ್ಚಿತ್ರನಟ
ಸಾಧನೆ ಎನ್ನುವುದು ನಿರಂತರ ಪರಿಶ್ರಮ ಪಡುವವರ ಸ್ವತ್ತಾಗಿದೆ. ಜೀವನದಲ್ಲಿ ಏಳು ಬೀಳುಗಳನ್ನು ಕಂಡು ಉನ್ನತ ಸ್ಥಾನಕ್ಕೆ ಬಂದು ವಿಜಯರತ್ನ ಪ್ರಶಸ್ತಿ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆಗಳು.
|ಶರ್ವಿುಳಾ ಮಾಂಡ್ರೆನಟಿ
ಸರ್ಕಾರ, ಸಂಘ, ಸಂಸ್ಥೆಗಳು ಸಾಧಕರನ್ನು ಗುರುತಿಸಿ ಗೌರವಿಸುತ್ತವೆ. ಆದರೆ, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ, ತಮ್ಮದೇ ರೀತಿಯಲ್ಲಿ ಬೆಳೆಯುತ್ತಿರುವ ಅನೇಕ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ನಾವು ಸಿನಿಮಾ ಮೂಲಕ ವಿಆರ್​ಎಲ್ ಸಂಸ್ಥೆಯ ಭಾಗ ಆಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಕನ್ನಡದ ಸಾಧಕರ ಬಯೋಪಿಕ್ ಮಾಡಿರುವುದು ಯುವಜನರಿಗೆ ಮಾದರಿಯಾಗಿದೆ. ಈಗ ಟೀಸರ್​ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಮುಂದಿನ 2 ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತದೆ. ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಸೇರಿ 4 ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಬೆಂಬಲಿಸಬೇಕು ಎಂದು ವಿಜಯಾನಂದ ಸಿನಿಮಾ ನಿರ್ದೇಶಕಿ ರಿಷಿಕಾ ಶರ್ಮಾ ಮನವಿ ಮಾಡಿದರು.
ಸಿನಿಮಾದಲ್ಲಿ ನಾಯಕ ಎನ್ನುವುದಕ್ಕಿಂತ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಮ್ಮ ಹೆಮ್ಮೆಯ ಕನ್ನಡಿಗ ಡಾ. ವಿಜಯ ಸಂಕೇಶ್ವರ ಅವರ ಪಾತ್ರ ಮಾಡಿರುವುದು ಹೆಮ್ಮೆಯಾಗಿದೆ. ವಿಆರ್​ಎಲ್ ಫಿಲಂ ಪೊ›ಡಕ್ಷನ್ ನೂರರಷ್ಟು ವೇಗವಾಗಿ ಓಡುತ್ತಿದೆ.
|ಆರ್. ನಿಹಾಲ್ವಿಜಯಾನಂದ ಚಿತ್ರದ ನಾಯಕ
42 ಸಾಧಕರಿಗೆ ವಿಜಯರತ್ನ ಪ್ರಶಸ್ತಿ; ಬೆಂಗಳೂರಿನಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್ ಗೌರವ ಪ್ರದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 6 =
Remember me
