ಬೆಂಗಳೂರು:ಶಿಕ್ಷಣ ಕಾಶಿ ಎಂದೇ ಖ್ಯಾತವಾಗಿರುವ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತೆರೆದುಕೊಂಡು ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಬಹುದೊಡ್ಡ ವೇದಿಕೆ ಕಲ್ಪಿಸಿಕೊಟ್ಟ ಶಿಕ್ಷಣ ಪ್ರಿಯ ಲಕ್ಷ್ಮಣ ಎಸ್. ಉಪ್ಪಾರ ಅವರಿಗೆ ಕನ್ನಡದ ನಂ.1 ದಿನಪತ್ರಿಕೆವಿಜಯವಾಣಿಮತ್ತುದಿಗ್ವಿಜಯ ಸುದ್ದಿವಾಹಿನಿಯ ಪ್ರತಿಷ್ಠಿತವಿಜಯರತ್ನ-2022 ಪ್ರಶಸ್ತಿಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ- 2022 ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರನಟ ರಮೇಶ್​ ಅರವಿಂದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ನಟಿ ಶರ್ಮಿಳಾ ಮಾಂಡ್ರೆ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಪರೀಕ್ಷೆ ಭಯ ಬಿಡಿಸಿದ ಆಪ್ತಸ್ನೇಹಿತ:ಪದವೀಧರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡಲು ಅವಕಾಶಗಳೇ ಇಲ್ಲದ ಸಮಯದಲ್ಲಿ ಮರುಭೂಮಿಯ ಓಯಸಿಸ್‌ನಂತೆ ಜನ್ಮತಳೆದ ಲಕ್ಷ್ಮಣ ಎಸ್. ಉಪ್ಪಾರ ಅವರ ಕ್ಲಾಸಿಕ್ ಕೆಎಎಸ್ ಹಾಗೂ ಐಎಎಸ್ ಸ್ಟಡಿ ಸರ್ಕಲ್ ಇಂದು ತನ್ನ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ. ಅಂದಿನಿಂದ ಇಲ್ಲಿಯವರೆಗೆ ವಿದ್ಯಾರ್ಥಿಗಳ ಭರವಸೆಯ ಆಪ್ತಮಿತ್ರನಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
1997ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲೆಂದು ಧಾರವಾಡದ ಸಪ್ತಾಪುರದಲ್ಲಿ ಕ್ಲಾಸಿಕ್ ಕೆಎಎಸ್ ಹಾಗೂ ಐಎಎಸ್ ಸ್ಟಡಿ ಸರ್ಕಲ್ ಅನ್ನು ಉಪ್ಪಾರ ಅವರು ಆರಂಭಿಸಿದರು. ಕತ್ತಲೆಯಲ್ಲಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಬೆಳಕಾದರು. ಪೊಲೀಸ್, ಸರ್ಕಾರಿ, ಅರೆ ಸರ್ಕಾರಿ, ಬ್ಯಾಂಕ್ ಹೀಗೆ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ಅಣಿಗೊಳಿಸುವ ಮೂಲಕ ಜೀವನಾಧಾರ ಕಲ್ಪಿಸಿಕೊಡುವ ಕೆಲಸ ಮಾಡಿದರು.
ಕ್ಲಾಸಿಕ್ ಕೆಎಎಸ್ ಐಎಎಸ್ ಸ್ಟಡಿ ಸರ್ಕಲ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ಪರ್ಧಾಸ್ಫೂರ್ತಿಯ ಪ್ರಧಾನ ಸಂಪಾದಕರಾಗಿ ಲಕ್ಷ್ಮಣ ಎಸ್. ಉಪ್ಪಾರ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿದ ಇವರು ಉತ್ತಮ ವ್ಯಾಸಂಗ ಮಾಡಿ ಜ್ಞಾನದ ಕೃಷಿಯಲ್ಲಿ ತೊಡಗಿದವರು.
ಸ್ಪರ್ಧಾಸ್ಫೂರ್ತಿ ಮಾಸಪತ್ರಿಕೆ, ಉದ್ಯೋಗ ವಾರ್ತೆ ಪಾಕ್ಷಿಕ ಪತ್ರಿಕೆ, ಸ್ಟಡಿ ಪ್ಲಾನರ್ ಮಾಸಪತ್ರಿಕೆ, ಪ್ರ್ಯಾಕ್ಟೀಸ್ ಟೆಸ್ಟ್ ಸಿರೀಸ್, ಸ್ಫೂರ್ತಿ ಸಿಂಚನ ತ್ರೈಮಾಸಿಕ, ಜ್ಞಾನ ಸಂಗಾತಿ ಮುಂತಾದ ಪತ್ರಿಕೆಗಳು ಇವರ ಕೊಡುಗೆಗಳು. ವಿದ್ಯಾರ್ಥಿಗಳ ಅನುಕೂಲಕ್ಕೆ ಹಾಸ್ಟೆಲ್ ವ್ಯವಸ್ಥೆ, ಗ್ರಂಥಾಲಯ ಸ್ಥಾಪನೆ ಮಾಡಿದ್ದಾರೆ.
2010ರಿಂದ ಪ್ರತಿ ಭಾನುವಾರ ಮಾದರಿ ಪರೀಕ್ಷೆಗಳನ್ನು ಆಯೋಜಿಸಿ ಅಭ್ಯರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸುವ ಕೆಲಸ ಮಾಡುತ್ತಿದ್ದಾರೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ನೇಮಕಾತಿ, ಅರ್ಜಿ ಸಲ್ಲಿಕೆ ಮುಂತಾದ ವಿವರಗಳನ್ನು ಫೋನ್‌ನಲ್ಲಿಯೇ ತಿಳಿಯುವ ಸಲುವಾಗಿ ಕಾಲ್ ಸೆಂಟರ್ ಆರಂಭಿಸಿದ್ದಾರೆ.
ಪೂರ್ವ ಪ್ರಾಥಮಿಕದಿಂದ ಪದವಿ ಶಿಕ್ಷಣದವರೆಗೆ ಶಾಲೆ, ಕಾಲೇಜುಗಳನ್ನು ಆರಂಭಿಸಿ ಶೈಕ್ಷಣಿಕ ಸೇವಾ ಚಟುವಟಿಕೆಗೆ ಇಂಬು ನೀಡಿದ್ದಾರೆ. ಕ್ಲಾಸಿಕ್ ಸಂಸ್ಥೆಯಿಂದ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವದ್ಧಿಗೊಳಿಸಿದ್ದಾರೆ. ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿ ವಾಹನ, ವಸತಿ ಸೌಲಭ್ಯ ನೀಡಿದ್ದಾರೆ. ಅತಿವೃಷ್ಟಿ ಹಾಗೂ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗೆ ಆಹಾರ ವಿತರಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಜನರಿಗೆ ಆಹಾರ ಸಾಮಗ್ರಿ ವಿತರಿಸಿದರು.

ಶಿಸ್ತು, ಸಂಯಮ, ಸತತ ಪರಿಶ್ರಮದ ಲವಾಗಿ ಕ್ಲಾಸಿಕ್ ಸಂಸ್ಥೆ ಬೆಳೆದಿದೆ. ಡಾ.ವಿಜಯ ಸಂಕೇಶ್ವರ, ಡಾ.ಆನಂದ ಸಂಕೇಶ್ವರ, ಡಾ. ವೀರೇಂದ್ರ ಹೆಗ್ಗಡೆ ಅವರಂತಹ ಮಹನೀಯರ ಸಾಧನೆಗಳು ನನಗೆ ಪ್ರೇರಣೆ. ವಿಜಯರತ್ನ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಎಲ್ಲರ ಸಹಕಾರ, ಪ್ರೋತ್ಸಾಹವನ್ನು ಮುಂದೆಯೂ ಬಯಸುವೆ.| ಲಕ್ಷ್ಮಣ ಎಸ್. ಉಪ್ಪಾರ
ಗೋಕಾಕ ಮೂಲದವರು:ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಧರ್ಮಟ್ಟಿಯಲ್ಲಿ 1971ರ ಜೂನ್ 1ರಲ್ಲಿ ಸಿದ್ದಪ್ಪ ಉಪ್ಪಾರ ಹಾಗೂ ತಾಯವ್ವಾ ದಂಪತಿಯ ಮಗನಾಗಿ ಜನಿಸಿದ್ದ ಲಕ್ಷ್ಮಣ ಅವರ ಪ್ರಾಥಮಿಕ ಶಿಕ್ಷಣ ಮೂಡಲಗಿ ಬಳಿಯ ಧರ್ಮಟ್ಟಿಯಲ್ಲಿ, 8 ರಿಂದ 10ನೇ ತರಗತಿ ಮೂಡಲಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಪಿಯು ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದವರು ನಂತರದಲ್ಲಿ ಬಿವಿಬಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿದರು. ಲಕ್ಷಾಂತರ ರೂಪಾಯಿ ಸಂಬಳದ ನೌಕರಿ ಲಭ್ಯ ಇದ್ದರೂ ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತುಕೊಳ್ಳುವ ಛಲದೊಂದಿಗೆ ಐಎಎಸ್ ತರಬೇತಿಗಾಗಿ ಹೈದರಾಬಾದ್‌ಗೆ ತೆರಳಿದರು. ಇವರಂತೆ ಅಲ್ಲಿ ಉತ್ತರ ಕರ್ನಾಟಕದಿಂದ ನೂರಾರು ಆಕಾಂಕ್ಷಿಗಳು ಬಂದಿದ್ದರು. ಆಗಲೇ ಇವರಿಗೆ ಧಾರವಾಡದಲ್ಲಿ ಇಂತಹ ತರಬೇತಿಯ ಅವಶ್ಯಕತೆಯ ಬಗ್ಗೆ ಯೋಚನೆ ಬಂತು. ತರಬೇತಿ ನಂತರ ಧಾರವಾಡಕ್ಕೆ ಬಂದು ಕ್ಲಾಸಿಕ್ ಸ್ಟಡಿ ಸರ್ಕಲ್ ಆರಂಭಿಸಿಯೇ ಬಿಟ್ಟರು. ಹಲವು ಸವಾಲುಗಳ ಮಧ್ಯೆಯೂ ಇವರ ಶೈಕ್ಷಣಿಕ ಸೇವಾ ಪಯಣ 25 ವರ್ಷ ಪೂರೈಸಿದೆ. ಹಲವು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಅನೇಕ ಜನ ಪ್ರಾಧ್ಯಾಪಕರು ಇವರ ಜತೆಗೂಡಿದರು. ಐಎಎಸ್ ಆಗುವ ಕನಸು ಕಂಡಿದ್ದ ಇವರು ಇದೀಗ ಅಂತಹ ಆಕಾಂಕ್ಷಿಗಳಿಗೆ ಸೂಕ್ತ ತರಬೇತಿ ನೀಡಿ ಸೌಲಭ್ಯ ಒದಗಿಸುವುದರಲ್ಲಿ ಖುಷಿ ಕಾಣುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
