ಪೂರ್ವಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠದಿಂದಾಗುವ ಕಿರಿಕಿರಿ ಬಗ್ಗೆ ವಿಜಯವಾಣಿ ಆರಂಭಿಸಿರುವ ಅಭಿಯಾನಕ್ಕೆ ಶಿಕ್ಷಣ ತಜ್ಞರು, ಪಾಲಕರು ಹಾಗೂ ಪ್ರಜ್ಞಾವಂತ ನಾಗರಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ಇ ಮೇಲ್ ಮುಖಾಂತರ ಸಾವಿರಾರು ಜನರಿಂದ ಪ್ರತಿಕ್ರಿಯೆಗಳು ಹರಿದುಬಂದಿವೆ. ಯಾವುದೇ ಕಾರಣಕ್ಕೂ ಆನ್​ಲೈನ್ ತರಗತಿಗಳು ಬೇಡವೇ ಬೇಡ ಎಂದು ಖಾಸಗಿ ಶಾಲೆಗಳು ಹಾಗೂ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಮಕ್ಕಳ ಕೈಗೆಮೊಬೈಲ್ ಕೊಡುವುದೇ ಕಷ್ಟ. ಇಂತಹ ಸಮಯದಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮುಂದೆಯೇ ಮಕ್ಕಳು ಗಂಟೆಗಟ್ಟಲೆ ಕುಳಿತು ಪಾಠ ಕೇಳಬೇಕು ಎಂದಾದರೆ ಮಕ್ಕಳ ಆರೋಗ್ಯ ಏನಾಗಬೇಕು? ಮನೆಯಲ್ಲಿ ಇಬ್ಬರು ಮಕ್ಕಳಿರುವವರು ಏನು ಮಾಡಬೇಕು? ಗ್ರಾಮೀಣ ಪ್ರದೇಶದಲ್ಲಿ ನೆಟ್​ವರ್ಕ್ ಸಮಸ್ಯೆ ಇದೆ. ಇಲ್ಲಿರುವವರು ಏನು ಮಾಡಬೇಕು? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳನ್ನು ಪಾಲಕರು ಹಾಗೂ ಶಿಕ್ಷಣ ತಜ್ಞರು ಶಾಲೆಗಳು ಹಾಗೂ ಸರ್ಕಾರದ ಮುಂದಿಟ್ಟಿದ್ದಾರೆ. ಎಲ್ಲ ಪಾಲಕರು ಆರ್ಥಿಕವಾಗಿ ಸಬಲರಾಗಿ ಇರುವುದರಿಲ್ಲ. ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಮಕ್ಕಳಿರುವವರು ಎರಡೆರಡು ಮೊಬೈಲ್ ಅಥವಾ ಕಂಪ್ಯೂಟರ್, ಇದಕ್ಕೆ ಇಂಟರ್​ನೆಟ್ ಸಂಪರ್ಕ ಕಲ್ಪಿಸಿಕೊಡಲು ಎಲ್ಲಿಂದ ಹಣ ತರಬೇಕು? ಖಾಸಗಿ ಶಾಲೆಗಳು ದುಡ್ಡು ಮಾಡಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಕಾಟಾಚಾರಕ್ಕೆ ಆನ್​ಲೈನ್ ತರಗತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊಬೈಲ್ ಗೀಳುಆನ್​ಲೈನ್ ಶಿಕ್ಷಣ ಎಂದಾದ ಮೇಲೆ ಈ ವೇಳೆ ಪಾಲಕರು ಅನಿವಾರ್ಯವಾಗಿ ಮಕ್ಕಳಿಗೆ ಮೊಬೈಲ್ ನೀಡಬೇಕು. ಪ್ರಾಥಮಿಕ ಹಂತದಲ್ಲಿ ನಾವೇ ಮಕ್ಕಳಿಗೆ ಮೊಬೈಲ್ ಗೀಳು ಅಂಟಿಕೊಳ್ಳಲು ಕಾರಣರಾಗುತ್ತೇವೆ. ಇದು ಆತಂಕದ ವಿಷಯ ಎಂದಿದ್ದಾರೆ ಶಿಕ್ಷಣ ತಜ್ಞರು.
3 ತಿಂಗಳವರೆಗೆ ಶಾಲೆ ತೆರೆಯಬೇಡಿ
ಫ್ರಾನ್ಸ್​ನಲ್ಲಿ ಶಾಲೆ ತೆರೆದ ನಂತರ ಮಕ್ಕಳಿಗೆ ಕರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ರಾಜ್ಯದಲ್ಲಿ ಇನ್ನೂ ಮೂರು ತಿಂಗಳವರೆಗೆ ಶಾಲೆ ತೆರೆಯದೆ ಇರುವುದು ಉತ್ತಮ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಮೂರು ತಿಂಗಳು ಕಳೆದ ನಂತರ ಸಾಧ್ಯವಾದರೆ ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸಲಿ. ಮಕ್ಕಳಲ್ಲಿ ಕರೊನಾ ಕಾಣಿಸಿಕೊಂಡರೆ ಮನೆಯಲ್ಲಿ ಎಲ್ಲರಿಗೂ ಸೋಂಕು ಹರಡುತ್ತದೆ. ಹೀಗಾಗಿ ಸರ್ಕಾರ ಶಾಲೆ ತೆರೆಯಲು ಬೇಕಿದ್ದಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಲಿ. ಆದರೆ, ಯಾವುದೇ ಕಾರಣಕ್ಕೂ ಮುಂದಿನ ಮೂರು ತಿಂಗಳವರೆಗೆ ಶಾಲೆ ತೆರೆಯುವುದು ಸೂಕ್ತ ಅಲ್ಲ ಎಂದು ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು. ಶಾಲೆ ತೆರೆಯಲು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಆತುರ ತೋರುತ್ತಿವೆ. ಖಾಸಗಿ ಶಾಲೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಯಾವುದೇ ಕಾರಣಕ್ಕೂ ಪಾಲಕರಿಂದ ಶುಲ್ಕ ವಸೂಲಾತಿಗೆ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಬಾರದು. ಅದೇ ರೀತಿ ಆನ್​ಲೈನ್ ಶಿಕ್ಷಣ ನಡೆಸಲು ಅವಕಾಶ ಮಾಡಿಕೊಡಬಾರದು. ಹಳ್ಳಿಗಳಲ್ಲಿ ನೆಟ್​ವರ್ಕ್ ಸಮಸ್ಯೆ ಇದೆ. ಆನ್​ಲೈನ್ ಕಲಿಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಾಥಮಿಕಕ್ಕೆ ಬೇಡಆಟವಾಡಬೇಕಾದ ಮಕ್ಕಳು ಮೊಬೈಲ್ ಮುಂದೆ ಕುಳಿತು ಪಾಠ ಕೇಳುವ ಪರಿಪಾಠವನ್ನು ನಾವೇ ಬೆಳೆಸುವುದು ಸರಿಯಾದ ಕ್ರಮವಲ್ಲ. ಮಕ್ಕಳಲ್ಲಿ ದೃಷ್ಟಿದೌರ್ಬಲ್ಯ ಹೆಚ್ಚಾಗುತ್ತಿದ್ದು, ಸಣ್ಣವಯಸ್ಸಿಗೆ ಕನ್ನಡಕ ಹಾಕಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇನ್ನು ಆನ್​ಲೈನ್ ತರಗತಿ ಎಂದರೆ, ದೃಷ್ಟಿದೌರ್ಬಲ್ಯ ಮತ್ತಷ್ಟು ಕಾಡುವುದರಲ್ಲಿ ಅನುಮಾನವೇ ಇಲ್ಲ. ಆನ್​ಲೈನ್ ಮಾಡಲೇ ಬೇಕು ಎಂದಾದರೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಿ. ಪ್ರಾಥಮಿಕ ಶಿಕ್ಷಣಕ್ಕಂತೂ ಬೇಡವೇ ಬೇಡ ಎಂದು ಹಲವು ಪಾಲಕರು ಒತ್ತಾಯಿಸಿದ್ದಾರೆ.
ಸರ್ಕಾರವೇಕೆ ಮೌನ?ರಾಜ್ಯದಲ್ಲಿರುವ ಬಹುತೇಕ ಖಾಸಗಿ ಶಾಲೆಗಳು ಆನ್​ಲೈನ್ ತರಗತಿ ತೆಗೆದುಕೊಳ್ಳುತ್ತಿವೆ. ಇದು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸಂಕಷ್ಟ ತಂದೊಡ್ಡಿದೆ. ಆದರೂ, ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಏಕೆ ಮೌನವಹಿಸಿದೆ? ಆನ್​ಲೈನ್ ತರಗತಿ ಆಯೋಜನೆ ಮಾಡುವ ಕುರಿತು ಮಾರ್ಗಸೂಚಿಗಳನ್ನು ಹೊರಡಿ ಸುವಂತೆ ಶಿಕ್ಷಣ ಸಚಿವರು ಕಳೆದ ತಿಂಗಳೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದರೂ ಇಲಾಖೆ ಮಾತ್ರ ಈ ಬಗ್ಗೆ ನಿಯಮಗಳನ್ನು ರೂಪಿಸದಿರುವುದು ಏಕೆ? ಎಂದು ಪಾಲಕರು ಪ್ರಶ್ನಿಸಿದ್ದಾರೆ.
ಬೆಂಗಳೂರು ನಗರದಲ್ಲಿಯೇ ಇಂಟರ್​ನೆಟ್ ಸಿಗುತ್ತಿಲ್ಲ. ಇನ್ನು ಹಳ್ಳಿಗಳಲ್ಲಿ ಮಕ್ಕಳು ಆನ್​ಲೈನ್​ನಲ್ಲಿ ಓದಿ ಎಂದರೆ ಹೇಗೆ? ಸರ್ಕಾರ ಜನರ ಅಭಿಪ್ರಾಯಕ್ಕೆ ಮಣಿಯಬೇಕು. ವಿದ್ಯಾರ್ಥಿಗಳನ್ನು ಬೀದಿಗೆ ತಂದು ನಿಲ್ಲಿಸಬೇಡಿ.| ಎಚ್.ಡಿ.ಕುಮಾರಸ್ವಾಮಿಮಾಜಿ ಸಿಎಂ

ಕರೊನಾ ಸಂದರ್ಭದಲ್ಲಿ ಶಾಲೆ ತೆರೆಯುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶಕುಮಾರ್ ಕರೆ ಮಾಡಿದ್ದರು, ಪತ್ರ ಬರೆದಿದ್ದಾರೆ. ಪ್ರತಿ ಪಾಲಕರಿಗೂ ಅವರ ಮಕ್ಕಳ ವಿಚಾರವಾಗಿ ಆತಂಕವಿರುತ್ತದೆ. ಶಿಕ್ಷಣ ಸಂಸ್ಥೆಗಳೂ ಪಾಠದ ಬಗ್ಗೆ ಜವಾಬ್ದಾರಿ ಹೊಂದಿವೆ. ಪಾಲಕರ ಜತೆ ರ್ಚಚಿಸಿ ಎಂದಿದ್ದೇನೆ. ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ.| ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಲ್ಯಾಪ್​ಟಾಪ್​ಗಾಗಿ ಕಳ್ಳತನ ಮಾಡಿ ಅಂದ್ರು!
ಆನ್​ಲೈನ್ ತರಗತಿಗಳ ಕಾಟ ಹೆಚ್ಚಾಗುತ್ತಿದ್ದು, ‘ಕಳ್ಳತನ ಮಾಡಿಯಾದ್ರೂ ಅಥವಾ ಭಿಕ್ಷೆ ಬೇಡಿಯಾದ್ರೂ ಲ್ಯಾಪ್​ಟಾಪ್ ತೆಗೆದುಕೊಳ್ಳುವಂತೆ ಖಾಸಗಿ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ‘ಊಟ-ತಿಂಡಿಗೆ ಖರ್ಚು ಮಾಡೋಕೆ ಆಗುತ್ತೆ. ಲ್ಯಾಪ್​ಟಾಪ್ ತಗೋಳೋಕೆ ಏನ್ ಪ್ರಾಬ್ಲಂ?’ ಎಂದು ಬೆಂಗಳೂರಿನ ಎಂವಿಜೆ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆ ಕಾಲೇಜಿನ ಮುಖ್ಯಸ್ಥ ಪ್ರೊ.ಮುರಳೀಧರ್ ಕೊಟ್ಟಿರುವ ಖಡಕ್ ಸೂಚನೆಗೆ ವಿದ್ಯಾರ್ಥಿಗಳು ತಬ್ಬಿಬ್ಬಾಗಿದ್ದಾರೆ. ಮುಂದಿನ ವಾರದಲ್ಲಿ ಇಂಟರ್ನಲ್ ಪರೀಕ್ಷೆ ಇದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ವಿಡಿಯೋ ಕಾಲ್ ಮಾಡಿದಾಗ ಈ ರೀತಿ ಮಾತನಾಡಿದ್ದಾರೆ. ಆನ್​ಲೈನ್​ನಲ್ಲಿ ಇಂಟರ್ನಲ್ ಪರೀಕ್ಷೆ ಮಾಡುವುದು ಬೇಡ. ಎಲ್ಲರೂ ಲ್ಯಾಪ್​ಟಾಪ್ ಖರೀದಿ ಮಾಡುವುದು ಕಷ್ಟ. ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ಓದುಗರ ದನಿ
ನಮಗೆ ಆನ್​ಲೈನ್ ತರಗತಿಯಲ್ಲಿ ಏನೂ ಅರ್ಥವಾಗೋಲ್ಲ, ಅಲ್ಲದೆ ಒಂದು ರೀತಿಯಲ್ಲಿ ಕಿರಿ-ಕಿರಿ ಉಂಟುಮಾಡುತ್ತಿದೆ. ಇಂತಹ ಪದ್ಧತಿಯನ್ನು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಮೇಲೆ ಪ್ರಯೋಗ ಮಾಡುವುದು ತಪ್ಪು.| ಮನೋಜ್ಇಂಜಿನಿಯರಿಂಗ್ ವಿದ್ಯಾರ್ಥಿ, ಚಿತ್ರದುರ್ಗ
ನನಗೆ ಅವಳಿ-ಜವಳಿ ಮಕ್ಕಳು. ಇಬ್ಬರೂ ಎಲ್​ಕೆಜಿ ವ್ಯಾಸಂಗ ಮಾಡುತ್ತಿದ್ದಾರೆ. ಆನ್​ಲೈನ್ ಕ್ಲಾಸ್ ಅವರ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದರಿಂದ ನಾನಿದನ್ನು ವಿರೋಧಿಸುತ್ತೇನೆ.| ಎ.ಅಶೋಕ್ಪಾಲಕ, ಯಲಹಂಕ
ಹಳ್ಳಿಗಳ ಕಡೆ ನೆಟ್​ವರ್ಕ್ ಸಿಗುವುದಿಲ್ಲ. ನೆಟ್​ವರ್ಕ್​ಗಾಗಿ ಮಾಡುವ ಸಾಹಸಗಳು ಜೀವಕ್ಕೆ ಕುತ್ತು ತರುವಂತೆ ಇರುತ್ತವೆ. ಈ ಹಿನ್ನೆಲೆಯಲ್ಲಿ ಆನ್​ಲೈನ್ ತರಗತಿ ಬೇಡ.| ಜಿ.ಬಿ.ಭರತ್ವಿದ್ಯಾರ್ಥಿ, ಪಾವಗಡ
ಎರಡು ಮಕ್ಕಳು ಇರುವ ಮನೆಯಲ್ಲಿ ಇಬ್ಬರಿಗೂ ಮೊಬೈಲ್ ಕೊಡಿಸುವುದು ಕಷ್ಟ. ಅವರನ್ನು ಆನ್​ಲೈನ್ ತರಗತಿಗೆ ಸಿದ್ಧ ಮಾಡುವುದು ವಿಪರೀತ ತಲೆನೋವಿನ ಕೆಲಸ.| ಜಯಶ್ರೀಬಾಗಲಕೋಟೆ
ಆನ್​ಲೈನ್ ಕ್ಲಾಸ್ ಆಲೋಚನೆಯೇ ವೇಸ್ಟ್. ಶೇಕಡ 60 ಪಾಲಕರ ಬಳಿ ಸ್ಮಾರ್ಟ್ ಫೋನ್ ಇಲ್ಲ. ಇದ್ದರೂ ಅದನ್ನು ಆನ್​ಲೈನ್ ತರಗತಿಗಾಗಿ ಕೊಟ್ಟು ಕೆಲಸಕ್ಕೆ ಹೋಗದೇ ಮನೆಯಲ್ಲೇ ಕೂರಲು ಸಾಧ್ಯವಿಲ್ಲ.| ಪ್ರದೀಪ್ ಖಂಡ್ರೆಪಾಲಕ ಭಾಲ್ಕಿ
ಖಾಸಗಿ ಶಾಲೆಗಳ ಲಾಭಕ್ಕಾಗಿ ಮಕ್ಕಳನ್ನು ಹಿಂಸಿಸುವ ಈ ತರಗತಿಗಳನ್ನು ಮೊದಲು ಸರ್ಕಾರ ನಿಷೇಧ ಮಾಡಬೇಕು. ಮಕ್ಕಳ ಆರೋಗ್ಯದ ಮೇಲೆ ಅವರಿಗೆ ಸ್ವಲ್ಪವೂ ಆಲೋಚನೆ ಇಲ್ಲ.| ಕೆ.ಆರ್.ರವೀಂದ್ರನಾಥ್ನಿವೃತ್ತ ಇಂಜಿನಿಯರ್
ಆನ್​ಲೈನ್​ನಲ್ಲಿ ಬೋಧನೆ ಬೇಡ. ಮಾಡುವುದಾದರೆ, ಪಠ್ಯೇತರ ಚಟುವಟಿಕೆಗಳ ಕಡೆ ಗಮನ ನೀಡಲಿ. ಇಲ್ಲವೇ, ದೂರದರ್ಶನದಲ್ಲಿ ಪಾಠಗಳನ್ನು ಬಿತ್ತರ ಮಾಡಲಿ.| ಅನಿಲ್ ಕುಮಾರ್ ನಾಡಿಗೇರ್ಪಾಲಕ, ಮೈಸೂರು
ಆನ್​ಲೈನ್ ನೆಪದಲ್ಲಿ ಮಕ್ಕಳು ಬೇರೆ ವೆಬ್​ಸೈಟ್​ಗಳ ಮೇಲೂ ಕಣ್ಣಾಡಿಸುತ್ತವೆ. ಇದರಿಂದ ಭಾರಿ ಅನಾಹುತಕ್ಕೆ ನಾವೇ ದಾರಿ ತೋರಿದಂತಾಗುತ್ತದೆ. ಪಾಲಕರೇ ಮನೆಯಲ್ಲಿ ನಿತ್ಯ ಕೆಲವುಗಂಟೆ ಅಭ್ಯಾಸ ಮಾಡಿಸುವುದು ಉತ್ತಮ.| ಪಿ.ಜೆ.ಸೀತಾರಾಮರೆಡ್ಡಿಶಿಕ್ಷಕರು, ಚಿತ್ರದುರ್ಗ
ಮೊಬೈಲ್ ಮುಂದೆ ಗಂಟೆಗಟ್ಟಲೇ ಕುಳಿತು ಪಾಠ ಕೇಳುವ ಕರ್ಮ ಮಕ್ಕಳಿಗೆ ಬೇಡ. ಶಾಲೆ ಆರಂಭವಾದ ಮೇಲೆಯೇ ಪಾಠ-ಪ್ರವಚನ ಆರಂಭಿಸಲಿ.| ಜಿ.ಎಸ್.ಸುತಾರಪಾಲಕ, ಜಮಖಂಡಿ
ಇದು ಸರ್ಕಾರದ ತಪ್ಪು ನಿರ್ಧಾರವಾಗಿದೆ. ಇದು ದೈಹಿಕ ಮತ್ತು ಮಾನಸಿಕ ಪರಿಣಾಮ ಬೀರಲಿದೆ. ಮೊಬೈಲ್ ಬಳಕೆಯೇ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡಲಿದೆ.| ಡಾ.ಬಿ.ಎಸ್.ದಳವಾಯಿನಿವೃತ್ತ ಶಿಕ್ಷಕ, ಕಿತ್ತೂರು
ಇದು ಖಾಸಗಿ ಶಾಲೆಗಳು ಹಣ ವಸೂಲಿ ಮಾಡಲು ಹುಡುಕಿಕೊಂಡಿರುವ ಹೊಸ ಮಾರ್ಗ. ಭೌತಿಕ ತರಗತಿಗಳಲ್ಲೇ ಮಕ್ಕಳಿಗೆ ಪಾಠಗಳನ್ನು ಅರ್ಥ ಮಾಡಿಸುವುದು ಕಷ್ಟ. ಹಾಗಿರುವಾಗ ಆನ್​ಲೈನ್ ಎಷ್ಟರ ಮಟ್ಟಿಗೆ ಫಲಕಾರಿ ಆಗಲಿದೆ?| ರಾಜಶೇಖರ ಗಣಾಚಾರಿನಿವೃತ್ತ ಪ್ರಾಂಶುಪಾಲ
ನಮ್ಮ ದೇಶದಲ್ಲಿ ಆನ್​ಲೈನ್ ಪಾಠಗಳಿಗೆ ಪೂರಕವಾದ ವಾತಾವರಣ ಇನ್ನೂ ನಿರ್ವಣವಾಗಿಲ್ಲ. ಅಲ್ಲದೆ, ಮಕ್ಕಳಿಗೆಲ್ಲ ಮೊಬೈಲ್ ಖರೀದಿ ಮಾಡಿ ಕೊಡುವ ಶ್ರೀಮಂತ ಪಾಲಕರು ನಮ್ಮಲ್ಲಿಲ್ಲ.| ಮಲ್ಲಿಕಾರ್ಜುನ ಚಿಕ್ಕಮಠನಿವೃತ್ತ ಶಿಕ್ಷಕ, ಧಾರವಾಡ
ಆಟವಾಡಬೇಕಾದ ಮಕ್ಕಳನ್ನು ಒಂದು ಕಡೆ ಕೂರಿಸಿ ಆನ್​ಲೈನ್​ನಲ್ಲಿ ಪಾಠ ಕೇಳುವಂತೆ ಮಾಡುವುದು ಸಲ್ಲ. ಸದ್ಯಕ್ಕೆ ಆನ್​ಲೈನ್ ತರಗತಿ ಬೇಡ.| ಪ್ರಸನ್ನಕುಮಾರ್ ಕುಲಕರ್ಣಿಇಂಜಿನಿಯರಿಂಗ್ ವಿದ್ಯಾರ್ಥಿ
ಪೂರ್ವ ಪ್ರಾಥಮಿಕ ಮಕ್ಕಳೇನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕೇ? ಆನ್​ಲೈನ್​ನಲ್ಲಿ ಮಕ್ಕಳು ಎಷ್ಟು ಕಲಿಯಲು ಸಾಧ್ಯ?| ಮೈತ್ರಿಸಾಗರ
ಲಾಕ್​ಡೌನ್ ವೇಳೆ ಮಕ್ಕಳಿಗೆ ಮನೆಯಲ್ಲೇ ಕಲಿಸುವುದು ಬಹಳಷ್ಟಿದೆ. ಆನ್​ಲೈನ್ ತರಗತಿಗೆ ಮಕ್ಕಳನ್ನು ಸೀಮಿತ ಗೊಳಿಸುವುದು ಬೇಡ. ಆ ಮೂಲಕ ಮೊಬೈಲ್ ದಾಸರಾಗಿಸುವುದು ಸಹ ಬೇಡ.| ಉಲ್ಲಾಸ್ವಿದ್ಯಾರ್ಥಿ, ಧರ್ಮಸ್ಥಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
