ರುದ್ರಣ್ಣ ಹರ್ತಿಕೋಟೆಬೆಂಗಳೂರು:ರಾಜ್ಯದಲ್ಲಿ 38 ವರ್ಷಗಳ ನಂತರ ಆಡಳಿತ ಪಕ್ಷದ ಲಾಭ ಇಲ್ಲದೇ ಕಾಂಗ್ರೆಸ್ ಸಕಾರಾತ್ಮಕ ವಿಚಾರಗಳ ಆಧಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಬಂದಿರುವ ಫಲಿತಾಂಶ ಇಡೀ ದೇಶ ರಾಜಕಾರಣಕ್ಕೆ ದಿಕ್ಸೂಚಿಯಾಗುವ ಸಂದೇಶ ರವಾನಿದೆ.
1989ರಿಂದ ನಡೆದಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಯಾವಾಗ ಅಧಿಕಾರ ಹಿಡಿದಿದೆಯೋ ಆಗೆಲ್ಲ ಆಡಳಿತ ಪಕ್ಷ ಇಬ್ಭಾಗ ಆಗಿರುವ ಲಾಭ ಮಾಡಿಕೊಂಡು ಅಧಿಕಾರ ಮಾಡಿದೆ. 1989 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಜನತಾ ಪಕ್ಷದ ಗೊಂದಲ ಕಾರಣವಾಯಿತು. 1994ರಲ್ಲಿ ಜನತಾ ಪಕ್ಷ ಇಬ್ಭಾಗ ಆಯಿತು. 2013ರಲ್ಲಿ ಬಿಜೆಪಿ ಕೆಜೆಪಿ ಹಾಗೂ ಬಿಎಸ್​ಆರ್ ಪಕ್ಷಗಳಾಗಿ ಇಬ್ಭಾಗವಾಯಿತು.
ಇದರ ಪರಿಣಾಮ ಕಾಂಗ್ರೆಸ್ ಗೆದ್ದಿತ್ತು. ಆದರೆ ಈ ಬಾರಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿದರೂ ಸಹ ಪಕ್ಷ ಇಬ್ಭಾಗವಾಗಲಿಲ್ಲ. ಸಮರ್ಥವಾದ ಕೇಂದ್ರ ನಾಯಕತ್ವ ಇದೆ ಎಂದೇ ಬಿಜೆಪಿ ಬೀಗುತ್ತಿತ್ತು. ಆಡಳಿತ ಪಕ್ಷದ ವಿರುದ್ಧ ಸಮರ್ಥವಾದ ಅಲೆಯನ್ನು ಸೃಷ್ಟಿಸುವ ಮೂಲಕ ಕಾಂಗ್ರೆಸ್ ಸಕಾರಾತ್ಮಕವಾದ ಗೆಲುವನ್ನು ದಾಖಲಿಸಿದೆ.
ಅದು ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದ ದೃಷ್ಠಿಯಿಂದ ಅತ್ಯಂತ ಮುಖ್ಯವಾಗಿದೆ. 2014ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸತತ ಸೋಲುಗಳನ್ನೇ ಅನುಭವಿಸುತ್ತ ಸುಣ್ಣವಾಗಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ವಿಫಲಗೊಳಿಸುವ ಒಂದು ಅವಕಾಶವನ್ನೂ ಬಿಟ್ಟುಕೊಡಲಿಲ್ಲ.
ಗುತ್ತಿಗೆದಾರರ ಸಂಘ ಆರಂಭಿಸಿದ ಶೇ.40 ಕಮಿಷನ್​ಆರೋಪವನ್ನು ಕಾಂಗ್ರೆಸ್ ಸಮರ್ಥವಾಗಿ ರಾಜ್ಯದ ಜನರ ಮನಸ್ಸಿನಲ್ಲಿ ಬಿಂಬಿಸಿತು. ಅದರ ಜತೆಗೆ ತನ್ನ ಗ್ಯಾರಂಟಿಗಳನ್ನು ನೀಡಿತು. ಅವುಗಳ ಬಗ್ಗೆ ಜನರಿಗೆ ಭರವಸೆ ಮೂಡುವಂತೆ ಮಾಡಿತು. ಅದೆಲ್ಲದಕ್ಕಿಂತ ರಾಜ್ಯ ನಾಯಕರ ನಡುವೆ ಒಗ್ಗಟ್ಟು ಪ್ರದರ್ಶನ ಮಾಡಿತು. ತನ್ನ ವಿರುದ್ಧ ಮಾತಿನ ಬಾಣ ತಿರುಗಿಸಲು ಬಿಜೆಪಿಗೆ ಅವಕಾಶವೇ ಇಲ್ಲದಂತೆ ನೋಡಿಕೊಂಡಿತು.
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಅದೃಶ್ಯ ಮತದಾರರು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಕಡೆ ವಾಲಿದ್ದಾರೆ. ಶೇ.12ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಅದೃಶ್ಯ ಮತದಾರರಿದ್ದಾರೆ. ಬಹುತೇಕ ಬಿಜೆಪಿ ಹಾಗೂ ಜೆಡಿಎಸ್​ನಿಂದ ಮತದಾರ ಕಾಂಗ್ರೆಸ್​ಗೆ ತೆರಳಿದ್ದಾರೆ. ಅದು ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ.
ಚುನಾವಣೆಯ ಕಣದಲ್ಲಿ ಬಿಜೆಪಿ ಆರಂಭದಿಂದಲೂ ಮುಗ್ಗರಿಸುತ್ತ ಹೋಯಿತು. ಬಿ.ಎಸ್. ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಿದ ದಿನದಿಂದಲೇ ಬಿಜೆಪಿಯ ಅವನತಿ ಆರಂಭವಾಗಿತ್ತು. ಸೃಷ್ಟಿಯಾಗಿದ್ದ ಆಡಳಿತ ವಿರೋಧಿ ಅಲೆಯನ್ನು ಗುರುತಿಸಿಕೊಳ್ಳಲಿಲ್ಲ. ಅತಿಯಾದ ಆತ್ಮವಿಶ್ವಾಸ, ರಾಜ್ಯ ಮಟ್ಟದ ನಾಯಕತ್ವ ತಿರಸ್ಕರಿಸಿ ಎಲ್ಲವನ್ನೂ ತಾವೇ ಮಾಡುತ್ತೇವೆ ಎಂಬ ರಾಷ್ಟ್ರೀಯ ನಾಯಕತ್ವದ ಧೋರಣೆ. ಅನೇಕ ಹಿರಿಯರನ್ನು ಕಡೆಗಣಿಸಿದ್ದಕ್ಕೆ ಈಗ ಬೆಲೆ ತೆತ್ತಿದೆ. ಶೆಟ್ಟರ್ ಸೋತು, ಸವದಿ ಗೆದ್ದಿದ್ದರು ಸಹ ಅವರಿಬ್ಬರು ಪಕ್ಷ ತೊರೆದಿದ್ದರ ಪರಿಣಾಮ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಗಿದೆ. ಲಿಂಗಾಯತ ಮತ ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಚದುರಿತು.
ಒಂದು ಸರ್ಕಾರದಲ್ಲಿನ ಸಂಪುಟ ಸದಸ್ಯರು ಜನರ ನಡುವೆ ಇದ್ದಾಗ ಮಾತ್ರ ಆಡಳಿತ ವಿರೋಧಿ ಅಲೆ ಎದುರಿಸಲು ಸಾಧ್ಯವಾಗುತ್ತದೆ. ಆದರೆ ಬಹುತೇಕ ಸಚಿವರು ಜನರಿಂದ ದೂರವಿದ್ದರು. ಅದು ಸರ್ಕಾರದ ಬಗ್ಗೆ ತಿರಸ್ಕಾರದ ಭಾವನೆಯನ್ನು ಮೂಡಿಸಿತು. ಮೀಸಲಾತಿಯಲ್ಲಿ ತಂದ ಬದಲಾವಣೆಗಳು ಸಹ ಬಿಜೆಪಿಯ ಕೈ ಹಿಡಿಯಲಿಲ್ಲ.
ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳಿಗೆ ಸರಿಯಾದ ರೀತಿಯಲ್ಲಿ ಪ್ರತಿರೋಧ ಇರಲಿಲ್ಲ. ವಂಶಾವಳಿ ಆಡಳಿತವನ್ನು ವಿರೋಧಿಸುತ್ತಲೇ ಅದಕ್ಕೆ ಮನ್ನಣೆ ನೀಡಿದ್ದು ಸಹ ಜನ ಸಹಿಸಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವಿರುದ್ಧ ಸರಿಯಾದ ರೀತಿಯಲ್ಲಿ ಉತ್ತರ ನೀಡುವಲ್ಲಿ ವಿಫಲತೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಎಲ್ಲವೂ ನಮ್ಮಿಂದಲೇ ಎಂದು ಧೋರಣೆ ದೊಡ್ಡ ಪೆಟ್ಟನ್ನು ನೀಡಿದೆ. ಬಿಜೆಪಿ 75 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿತ್ತು. ಅದರಲ್ಲಿ ಗೆದ್ದಿರುವುದು 14 ಜನ ಮಾತ್ರ. ಆದರೆ ಹೊಸ ನಾಯಕತ್ವ ಬೆಳೆಸಲು ಇದರಿಂದ ಸಹಾಯವಾಗಿದೆ.
ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಯಾಗಿದ್ದರ ಜತೆಗೆ ಬಿಜೆಪಿ ಹಾಗೂ ಜೆಡಿಎಸ್ ಸಹ ಅನುಕೂಲವನ್ನೇ ಮಾಡಿಕೊಟ್ಟಿವೆ. ಮುಸ್ಲಿಮ್ ಮತಗಳು ಚದುರದಂತೆ ಮಾಡುವಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕೊಡುಗೆ ಇದೇ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿ ಪಿಎಫ್​ಐ ಸಂಘಟನೆಯನ್ನು ನಿಷೇಧ ಮಾಡಿತ್ತು. ಅದರ ಅನೇಕರನ್ನು ಬಂಧಿಸಿತ್ತು. ಅವರಲ್ಲಿ ಬಹಳಷ್ಟು ಮಂದಿ
ಎಸ್​ಡಿಪಿಐ ಮೂಲಕ ಚುನಾವಣೆಗೆ ನಿಲ್ಲುವ, ಎಸ್​ಡಿಪಿಐ ಬೆಂಬಲಿಸಿ ಪ್ರಚಾರ ಮಾಡುವವರು ಸೇರಿದ್ದರು. ಅದು ಪರೋಕ್ಷವಾಗಿ ಕಾಂಗ್ರೆಸ್​ಗೆ ಆದ ಅನುಕೂಲವೆಂದೇ ಹೇಳಲಾಗುತ್ತಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಬಿಜೆಪಿಯ ನಾಯಕರು ಪ್ರತಿರೋಧ ತೋರಿಸಿದ್ದು ಸಹ ಮುಸ್ಲಿಮ್ ಮತಗಳು ಒಂದಾಗುವಂತೆ ಮಾಡಿತು. ಜೆಡಿಎಸ್ ಕಡೆಗೂ ವಾಲಲಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಅಭ್ಯರ್ಥಿಯನ್ನು ನಿಲ್ಲಿಸುತ್ತಿದ್ದ ಹೈದರಾಬಾದ್​ನ ಎಐಎಂಐಎಂನ ಓವೈಸಿಯನ್ನು ಈ ಬಾರಿ ತಡೆದಿದ್ದು ಪರೋಕ್ಷವಾಗಿ ಜೆಡಿಎಸ್. ಓವೈಸಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಅವರಿಗೆ ಆಪ್ತ. ಓವೈಸಿ ಹೋದರೆ ಜೆಡಿಎಸ್​ಗೆ ಬರಬಹುದಾದ ಮುಸ್ಲಿಮ್ ಮತಗಳು ಕೈ ತಪು್ಪತ್ತವೆ ಎಂದೇ ಅವರು ರಾಜ್ಯಕ್ಕೆ ಬಾರದಂತೆ ತಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಚುನಾವಣೆಯಂತೆ ನಡೆಯಲಿಲ್ಲ. ಬದಲಾಗಿ ಅದು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ ನಡುವಿನ ಚುನಾವಣೆ ಎಂದೇ ಎರಡೂ ಪಕ್ಷಗಳು ಬಿಂಬಿಸಿದ್ದವು. ಸಿದ್ದರಾಮಯ್ಯರನ್ನು ಸೋಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಸಿದ್ದರಾಮಯ್ಯ ಸಹ ತಮ್ಮ ಭಾಷಣದುದ್ದಕ್ಕೂ ಮೋದಿಯನ್ನೇ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಈ ಚುನಾವಣೆ ರಂಗು ಮೂಡಿಸಿತ್ತು. ಬಿಜೆಪಿಗೆ ಮೋದಿಯದೇ ನೇತೃತ್ವ ಹಾಗೂ ಮೋದಿ ಮುಖ ನೋಡಿ ಓಟು ಕೊಡಿ ಎಂದೇ ಬಿಜೆಪಿಗರು ಹೇಳಿಕೊಂಡು ತಿರುಗಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − three =
Remember me
