ಸಮಾಜದಲ್ಲಿ ಅನೇಕರು ಸಾಧನೆ ಮಾಡಿದವರಿದ್ದಾರೆ.ಎಲೆಮರೆ ಕಾಯಿಯಂತೆ ಕೆಲಸ ಮಾಡುವವರೂ ಇದ್ದಾರೆ. ಇಡೀ ಬದುಕನ್ನೇ ಸಮಾಜಕ್ಕೆ ಮುಡಿಪಿಟ್ಟವರೂ ಇದ್ದಾರೆ. ಅಂತಹವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’, ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡುತ್ತ ಬಂದಿದೆ. ರಾಜಕೀಯ, ಸಮಾಜ ಸೇವೆ, ಶಿಕ್ಷಣ, ಬಿಸಿನೆಸ್… ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಮಾಜ ಸೇವೆಗೆ ತಮ್ಮ ಬದುಕು ಸವೆಸಿ, ಬೇರೆಯವರ ಬಾಳು ಬೆಳಗಿದ ಮಹನೀಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ‘ವಿಜಯವಾಣಿ’ಯ ಎರಡನೇ ವರ್ಷದ ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಕೆಲಸ ಮಾಡಿದ 29 ಸಾಧಕರಿಗೆ ನೀಡಿ ಗೌರವಿಸಲಾಯಿತು. ಡಿಸಿಎಂ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಸಿ.ಎನ್.ಅಶ್ವತ್ಥನಾರಾಯಣ, ವಿಆರ್​ಎಲ್ ಮೀಡಿಯಾ ಪ್ರೖೆ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಮಾಜಿ ಮೇಯರ್​ಗಳು, ಮಾಜಿ ಉಪ ಮೇಯರ್, ಪಾಲಿಕೆ ಮಾಜಿ ಸದಸ್ಯರು, ಶಿಕ್ಷಣ ತಜ್ಞರು, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ಉದ್ಯಮಿಗಳು ಹೀಗೆ ನಾನಾ ರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರು ‘ಬೆಂಗಳೂರು ರತ್ನ’ ಎನಿಸಿಕೊಂಡರು.
ನೆನಪಿರಲಿ, ಹಾರ ಬಹಳ ಭಾರ!ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಬಹುಮುಖ್ಯ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಅವರ ಪುತ್ರ ಡಾ. ಆನಂದ ಸಂಕೇಶ್ವರ ಅವರು ಅನೇಕ ಉದ್ಯಮಗಳಿಗೆ ಕೈ ಹಾಕಿ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡಿ ಅವರ ಕುಟುಂಬಗಳ ದೀಪ ಬೆಳಗಿಸುವ ಕೆಲಸ ಮಾಡಿದ್ದಾರೆ. ‘ವಿಜಯ ಕರ್ನಾಟಕ’, ‘ವಿಜಯವಾಣಿ’. ‘ವಿಆರ್​ಎಲ್ ಲಾಜಿಸ್ಟಿಕ್’ ಟಿ.ವಿ. ಚಾನಲ್ ಇನ್ನೂ ಅನೇಕ ಬಿಸಿನೆಸ್ ಮಾಡಿ ದೊಡ್ಡ ಯಶಸ್ಸು ಕಂಡಿದ್ದಾರೆ. ಇಂತಹ ಸಂಸ್ಥೆ ಸಮಾಜ ಸೇವಕರನ್ನು ಗುರುತಿಸಿ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸಾರ್ಹ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಪ್ರಶಸ್ತಿ ಜತೆಗೆ ನಿಮಗೆ ಹಾಕಿರುವ ಹಾರ ಬಹಳ ಭಾರ. ಅದು ತಲೆಯಲ್ಲಿರಬೇಕು. ಈ ಪ್ರಶಸ್ತಿ ಫೋಟೋಗೆ, ಫಲಕಕ್ಕೆ, ಹೆಸರಿಗೆ ಮಾತ್ರ ಸೀಮಿತ ಆಗಬಾರದು. ನಿಮ್ಮ ಬದುಕಿನಲ್ಲಿ ಸಾಧನೆಯ ಸಾಕ್ಷಿ ಗುಡ್ಡೆ ಇದ್ದರೆ ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ನಿಸ್ವಾರ್ಥ ಸೇವೆಗೆ ಗೌರವಹಸು, ಮರ, ನದಿಯಂತೆ ನಾವು ಸ್ವಾರ್ಥರಹಿತವಾಗಿ ಕೆಲಸ ಮಾಡಬೇಕು. ಕೋಟಿ ಕೋಟಿ ಗಳಿಸಿದರೂ ತಿನ್ನುವುದು ಸ್ವಲ್ಪ ಮಾತ್ರ. ನೀವು ಎಷ್ಟು ಕೋಟಿ ಸಂಪಾದನೆ ಮಾಡಿದರೂ ಕೊನೆಗೆ ಅದೆಲ್ಲ ಕುಟುಂಬ, ಬೇರೆಯವರು, ಸಮಾಜಕ್ಕೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ದೇಹ ಕೂಡ ಬೇರೆಯವರಿಗೆ ಇದೆ ಎಂಬುದನ್ನು ತಿಳಿಯಬೇಕು. ನೀವೆಲ್ಲ ಸಾಧನೆ ಮಾಡಿದ್ದೀರಿ, ಸಂಪಾದನೆ ಮಾಡಿದ್ದೀರಿ. ದೊಡ್ಡವರಾಗಿದ್ದೀರಿ. ಸಾಧನೆ ಎಂದರೆ ಹಣ ಮಾತ್ರವಲ್ಲ, ಗೌರವ, ಪ್ರೀತಿ, ವಿಶ್ವಾಸ… ಇವು ಕೂಡ ಸಾಧನೆಗಳೇ. ‘ವಿಜಯವಾಣಿ’ ನಿಮ್ಮ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ ಇಟ್ಟು ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಪ್ರತಿಷ್ಠಿತ ಸಂಸ್ಥೆಯ ಪ್ರಶಸ್ತಿ ಪಡೆಯುತ್ತಿರುವ ನೀವು ಭಾಗ್ಯಶಾಲಿಗಳು ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ಡಿಸಿಎಂ ಸಲಹೆ ನೀಡಿದರು.
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದುಪ್ರಶಸ್ತಿ ಪುರಸ್ಕೃತರೆಲ್ಲರೂ ಇತಿಹಾಸ ಪುಟಕ್ಕೆ ಸೇರಬೇಕು. ಮುಂದೆ ಏನು ಬೇಕಾದರೂ ಆಗಬಹುದು. ರಾಮಲಿಂಗಾ ರೆಡ್ಡಿ, ಸೋಮಣ್ಣ, ಹೇಮಲತಾ ಗೋಪಾಲಯ್ಯ ಅಷ್ಟೇ ಅಲ್ಲ, ಈ ರಾಜ್ಯದ ಸಿಎಂ ಆಗಿದ್ದ ಕೆಂಗಲ್ ಹನುಮಂತಯ್ಯ ಕಾಪೋರೇಟರ್, ಮೇಯರ್ ಆಗಿ ರಾಜಕೀಯದಲ್ಲಿ ಎತ್ತರಕ್ಕೆ ಏರಿದ್ದರು. ವಿಲಾಸ್​ರಾವ್ ದೇಶ್​ವುುಖ್, ಬಿ.ಡಿ. ಜತ್ತಿ ಅಂತಹವರೂ ಪಂಚಾಯಿತಿ ಚೇರ್ಮನ್ ಆಗಿದ್ದರು. ನೆಹರೂ ಅವರು ಅಲಹಾಬಾದ್ ಮುನ್ಸಿಪಾಲಿಟಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ರಾಜಕೀಯದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಹಾಗಾಗಿ ನಾನು ಬೆಳೆಯಲು ಆಗುವುದಿಲ್ಲ ಎಂಬ ಭಾವನೆ ಯಾರಿಗೂ ಬೇಡ. ಹಂತ ಹಂತವಾಗಿ ಬೆಳೆಯಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸದುಪಯೋಗಪಡಿಸಿಕೊಳ್ಳಿದೇವರು ಶಾಪ ಕೊಡುವುದಿಲ್ಲ, ವರವನ್ನೂ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಅವಕಾಶವನ್ನು ಯಾವ ರೀತಿ ಉಪಯೋಗಿಸಿ ಕೊಳ್ಳಬೇಕು ಎಂಬುದು ಮುಖ್ಯ. ಜೀವನ ಶಾಶ್ವತವಲ್ಲ. 15-20 ಇಲ್ಲವೇ, 30 ವರ್ಷ ಕೆಲಸ ಮಾಡಬಹುದು. ಈ ಅವಧಿಯಲ್ಲಿ ನಾವು ಪರೋಪ ಕಾರ ಮಾಡಬೇಕು ಎಂದು ‘ಪರೋಪಕಾರಾಯ ಫಲಂತಿ ವೃಕ್ಷಾಃ, ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾ ರಾಯ ದುಹಂತಿ ಗಾವಃ, ಪರೋಪಕಾರಾರ್ಥ ಮಿದಂ ಶರೀರಂ’ ಎಂಬ ಶ್ಲೋಕವನ್ನು ಡಿ.ಕೆ. ಶಿವಕುಮಾರ್ ಉಲ್ಲೇಖಿಸಿದರು.
ಎಲ್ಲ ರಂಗದಲ್ಲೂ ನಾಯಕತ್ವಕ್ಕೆ ಅವಕಾಶಸಂವಿಧಾನದ 73, 74ನೇ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಯುವ ನಾಯಕತ್ವಕ್ಕೆ ಒಳ್ಳೆಯ ಅವಕಾಶ ಕೊಡಲಾಗಿದೆ. ನಾವೆಲ್ಲ ಕಾಲೇಜು ಲೀಡರ್ ಆಗಿ ಬೆಳೆದವರು. ಇತಿಹಾಸವನ್ನು ನೆನಪಿಟ್ಟುಕೊಳ್ಳಬೇಕು. ಇತಿಹಾಸ ಮರೆತವನು ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಎಲ್ಲ ರಂಗದಲ್ಲೂ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶವಿದೆ. ಯಾರು ಶಾಶ್ವತವಲ್ಲ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ನಾಯಕರು ಹುಟ್ಟುತ್ತಾರೆ. ನಾಯಕರು ಮುಳುಗುತ್ತಾರೆ. ಸಿಕ್ಕ ಅವಕಾಶದಲ್ಲಿ ನಾಲ್ಕು ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನೀವೆಲ್ಲ ಸಾಧನೆ ಮಾಡಿದ್ದೀರಿ, ಸಂಪಾದನೆ ಮಾಡಿ ದ್ದೀರಿ, ದೊಡ್ಡವರಾಗಿದ್ದೀರಿ. ಸಾಧನೆ ಎಂದರೆ ಹಣ ಮಾತ್ರವಲ್ಲ, ಗೌರವ, ಪ್ರೀತಿ, ವಿಶ್ವಾಸ… ಇವು ಕೂಡ ಸಾಧನೆ ಗಳೇ. ‘ವಿಜಯವಾಣಿ’ ನಿಮ್ಮ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ ಇಟ್ಟು ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಪ್ರತಿಷ್ಠಿತ ಸಂಸ್ಥೆಯ ಪ್ರಶಸ್ತಿ ಪಡೆಯುತ್ತಿರುವ ನೀವು ಭಾಗ್ಯಶಾಲಿಗಳು ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು.
| ಡಿ.ಕೆ.ಶಿವಕುಮಾರ್ ಡಿಸಿಎಂ
ವಿಜಯವಾಣಿಯು ‘ಬೆಂಗಳೂರು ರತ್ನ’ ಪ್ರಶಸ್ತಿ ಪಡೆದವರ ಸಾಧನೆಯನ್ನು ಗುರುತಿಸಿರುವುದರ ಜತೆಗೆ ಅವರ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಸಮಾಜಸೇವೆ ಸೇರಿ ವಿವಿಧ ವೃತ್ತಿಗಳಲ್ಲಿ ನಿಮ್ಮ ಆಸಕ್ತಿಕರ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರಯತ್ನಿಸಿ. ಈ ಸಂದರ್ಭದಲ್ಲಿ ವಿಆರ್​ಎಲ್ ಸಮೂಹದ ಮುಖ್ಯಸ್ಥ ಡಾ. ವಿಜಯ ಸಂಕೇಶ್ವರ ಅವರ ಅವಿರತ ಕಾರ್ಯ ನಿಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಈ ಮಹಾನ್ ಸಾಧಕನ ಸಮಯಪ್ರಜ್ಞೆ, ಬದ್ಧತೆ ಸದಾ ಸ್ಪೂರ್ತಿದಾಯಕ. ಪ್ರಶಸ್ತಿ ಸ್ವೀಕರಿಸಿರುವವರು ವಿಶ್ವದ ಜತೆ ಸ್ಪರ್ಧೆ ಮಾಡಬೇಕಿದೆ ಎಂಬುದನ್ನು ಗಮನದಲ್ಲಿರಿಸಿ ಇನ್ನಷ್ಟು ಸಾಧನೆ ಮಾಡಲು ಹಾರೈಸುವೆ.
| ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾಜಿ ಡಿಸಿಎಂ
ವಿಜಯವಾಣಿಗೆ ಧನ್ಯವಾದ‘ಬೆಂಗಳೂರು ರತ್ನ’ ಪ್ರಶಸ್ತಿಗೆ ಭಾಜನರಾದ ಪುರಸ್ಕೃತರು ಭವಿಷ್ಯದಲ್ಲೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಸಂಕಲ್ಪ ತೊಟ್ಟ ಕ್ಷಣಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಯಿತು. ಸಮಾಜದ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದ ಪುರಸ್ಕೃತರು ಭಾವಾವೇಶಕ್ಕೆ ಒಳಗಾದರು. ಜನಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದ ನಮಗೆ ನಾಡಿನ ಮುಂಚೂಣಿ ಪತ್ರಿಕೆ ‘ವಿಜಯವಾಣಿ’ ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಿರುವುದು ಮನದುಂಬಿ ಬಂದಂತೆ ಆಗಿದೆ ಎಂದು ಸಾಧಕರು ಪ್ರತಿಕ್ರಿಯಿಸಿದರು. ಗಣ್ಯರು ಆಡಿದ ಪ್ರೋತ್ಸಾಹದಾಯಕ ಮಾತುಗಳು ನಾವು ಇನ್ನಷ್ಟು ಸೇವೆ ಮಾಡಲು, ಗಟ್ಟಿ ನಿರ್ಧಾರ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇಂತಹ ವೇದಿಕೆ ಕಲ್ಪಿಸಿದ ‘ವಿಜಯವಾಣಿ’ಗೆ ಪುರಸ್ಕೃತರು ಹಾಗೂ ಅವರ ಬಂಧುಗಳು ಧನ್ಯವಾದ ಅರ್ಪಿಸಿದರು.
‘ಬೆಂಗಳೂರು ರತ್ನ’ ಪ್ರಶಸ್ತಿ ಪುರಸ್ಕೃತರೆಲ್ಲರೂ ತಮ್ಮದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದಕ್ಕೆ ಈ ಗೌರವ ದೊರೆತಿದೆ. ನಿಮ್ಮ ಕಾರ್ಯಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗುವಂತಾಗಲಿ. ಪ್ರಶಸ್ತಿಗೆ ಭಾಜನರಾದವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
| ರಾಮಲಿಂಗಾ ರೆಡ್ಡಿ ಸಾರಿಗೆ ಹಾಗೂ ಮುಜರಾಯಿ ಸಚಿವ
ನೈಜ ಸಾಧಕರಿಗೆ ಮನ್ನಣೆಸಮಾಜದಲ್ಲಿ ನಿರಂತರವಾಗಿ ನಿಷ್ಠೆಯಿಂದ ಕೆಲಸ ನಿರ್ವಹಿಸಿರುವವರನ್ನು ಗುರುತಿಸಿ ‘ಬೆಂಗಳೂರು ರತ್ನ’ಪ್ರಶಸ್ತಿ ನೀಡಲಾಗಿದೆ ಎಂದು ವಿಆರ್​ಎಲ್ ಮೀಡಿಯಾ ಪ್ರೖೆ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ತಿಳಿಸಿದರು. ‘ವಿಜಯವಾಣಿ’ಯು ಕಳೆದ 11 ವರ್ಷಗಳಿಂದ ಓದುಗರನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿದೆ. ಪ್ರತೀ ವರ್ಷ ರೈತ, ಮಹಿಳೆ, ವಿದ್ಯಾರ್ಥಿ ಸೇರಿ ವಿವಿಧ ವಿಭಾಗಳಿಗೆ ಸೇರಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ. ಇದು ಪತ್ರಿಕೆ ಹಾಗೂ ಓದುಗರ ಮಧ್ಯೆ ಬಾಂಧವ್ಯ ವೃದ್ಧಿಗೆ ಅವಕಾಶವಾಗಿದೆ. ಇಷ್ಟೂ ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳಡಿ 30 ಸಾವಿರ ಓದುಗರಿಗೆ ಬಹುಮಾನ ನೀಡಲಾಗಿದೆ. 2022ರಲ್ಲಿ 42 ಸಾಧಕರಿಗೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಬಾರಿ 29 ಪುರಸ್ಕೃತರಿಗೆ ಗೌರವ ಸಂದಿದೆ. ಸಮಾಜಮುಖಿ ಕೆಲಸವನ್ನು ನಿಷ್ಠೆಯಿಂದ ಕೈಗೊಂಡವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು. ಕಳೆದ ಫೆ.22ರಂದು ಹುಬ್ಬಳ್ಳಿಯಲ್ಲಿ ಶ್ರೀ ಶಿವಶಕ್ತಿ ಧಾಮ ಎಂಬ ನೂತನ ದೇಸ್ಥಾನವನ್ನು ಉದ್ಘಾಟಿಸಿ ಅದನ್ನು ಶ್ರೀ ಶೃಂಗೇರಿ ಮಠಕ್ಕೆ ಕೊಡುಗೆಯಾಗಿ ನೀಡಲಾಗಿದೆ. ಈ ಭವ್ಯ ಹಾಗೂ ದಿವ್ಯ ದೇಗುಲಕ್ಕೆ ಎಲ್ಲರೂ ತಪ್ಪದೇ ಭೇಟಿ ನೀಡಿ ದೇವರ ಆಶೀವಾರ್ದಕ್ಕೆ ಪಾತ್ರರಾಗಬೇಕು ಎಂದು ಡಾ. ಆನಂದ ಸಂಕೇಶ್ವರ ವಿನಂತಿಸಿದರು.
‘ವಿಜಯವಾಣಿ’ಯು ಕನ್ನಡಿಗರ ಧ್ವನಿಯಾಗಿ ಕಾರ್ಯಾಚರಿಸುತ್ತ ನಾಡಿನಾದ್ಯಂತ ನಂ.1 ಪತ್ರಿಕೆಯಾಗಿ ಗುರುತಿಸಿಕೊಂಡು ಅಪಾರ ಓದುಗ ಬಳಗವನ್ನು ಸಂಪಾದಿಸಿದೆ. ಸಮಾಜದಲ್ಲಿ ನಿಷ್ಠೆಯಿಂದ ಕಾಯಕದಲ್ಲಿ ತೊಡಗಿಸಿಕೊಂಡಿರುವವರನ್ನು ಹುಡುಕಿ ಅಂತಹವರಿಗೆ ‘ಬೆಂಗಳೂರು ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪುರಸ್ಕೃತರೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು.
| ಡಾ. ಆನಂದ ಸಂಕೇಶ್ವರ ವಿಆರ್​ಎಲ್ ಮೀಡಿಯಾ ಪ್ರೖೆ.ಲಿ.ನ ವ್ಯವಸ್ಥಾಪಕ ನಿರ್ದೇಶಕ
ಬಿರುದು ಬಂದ ಮೇಲೆ ಹುಷಾರಾಗಿರಬೇಕುಬೆಂಗಳೂರು ಎನ್ನುವುದು ಬ್ರ್ಯಾಂಡ್ ನೇಮ್ ಬೆಂಗಳೂರಿಗೆ ತನ್ನದೇ ಆದ ಹಿರಿಮೆ, ಗರಿಮೆ, ಶಕ್ತಿ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತು ಮಾಡಿದೆ. ನೀವೆಲ್ಲ ‘ಬೆಂಗಳೂರು ರತ್ನ’ರಾಗಿದ್ದೀರಿ. ಈ ಬಿರುದು ಬಂದಮೇಲೆ ಹುಷಾರಾಗಿರಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಇಷ್ಟು ದಿನ ಹೇಗೋ ನಡೆದು ಹೋಯಿತು. ‘ಬೆಂಗಳೂರು ರತ್ನ’ ಆದಮೇಲೆ ತಿಪ್ಪೆಯಲ್ಲಿ ಬಿದ್ದರೂ ರತ್ನ, ರಸ್ತೆಯಲ್ಲೂ ರತ್ನ, ಮನೆಯಲ್ಲಿ ಇದ್ದರೂ ರತ್ನವೇ. ನಿಮ್ಮ ಜವಾಬ್ದಾರಿ ಇನ್ನುಮುಂದೆ ಹೆಚ್ಚುತ್ತದೆ. ಈ ರೀತಿ ಎಲ್ಲರಿಗೂ ಗೌರವ ಸಿಗುವುದು ಕಷ್ಟ. ಡಾ. ವಿಜಯ ಸಂಕೇಶ್ವರ ಅವರು ಕಟ್ಟಿದ ಸಂಸ್ಥೆಗಳು ಎತ್ತರಕ್ಕೆ ಬೆಳೆದು ನಿಂತಿವೆ. ಈ ಪ್ರಶಸ್ತಿಗೆ ಭಾಜನರಾದವರು ಕೂಡ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅನ್ಯರ ಬಾಳು ಬೆಳಗುವ ಕೆಲಸ ಮಾಡಿಹಾರ ಎಂದರೆ ಭಾರ. ಭಾರ ಎಂದರೆ ತಲೆ ಬಾಗು ಎಂದರ್ಥ. ತಲೆ ಬಾಗು ಎಂದರೆ ಸಮಾಜದ ಮುಂದೆ ತಲೆಬಾಗಿ ನಿಲ್ಲು ಎಂದರ್ಥ. ಸಮಾಜದ ಪರ ತಲೆಬಾಗಿ ನಿಲ್ಲುವ ಅವಕಾಶವನ್ನು ‘ವಿಜಯವಾಣಿ’ ನಿಮ್ಮೆಲ್ಲರಿಗೆ ಕೊಟ್ಟಿದೆ. ಇಷ್ಟು ದಿನ ನೀವು ಹೇಗಿದ್ದಿರೋ ಗೊತ್ತಿಲ್ಲ. ಈಗ ಬೆಂಗಳೂರು ರತ್ನರಾಗಿದ್ದೀರಿ. ನಿಜವಾದ ರತ್ನ ಆಗಿ ಬಾಳು ಬೆಳಗಿ ಎಂದು ಆರ್.ಅಶೋಕ್ ಶುಭ ಹಾರೈಸಿದರು.
ನಿಮ್ಮ ಹೆಸರು ಉಳಿಸಿ ಹೋಗಿನಾವು ಮನಸ್ಸು ಮಾಡಿದರೆ ಎಷ್ಟು ವರ್ಷವಾದರೂ ಬದುಕಬಹುದು, ಮನಸ್ಸು ಮಾಡಬೇಕಷ್ಟೇ. ಹೀಗೆ ಹೇಳಿದರೆ ನಾವು ಚಿರಂಜೀವಿಗಳಾ? ಎಂದು ಕೇಳಬಹುದು. ನೀವು ಚಿರಂಜೀವಿಗಳಾಗುವಂತೆ ಬದುಕಬೇಕಷ್ಟೆ. ಅಂದರೆ ನಿಮ್ಮಕಾರ್ಯ ಹಾಗಿರಬೇಕು. ನಾವು ಇರುತ್ತೇವೆ, ಸಾಯುತ್ತೇವೆ. ಡಾ.ರಾಜಕುಮಾರ್ ನಮ್ಮ ಮಧ್ಯೆ ಇಲ್ಲ. ಆದರೂ ಬದುಕಿದ್ದಾರೆ. ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್ ಸಿಂಗ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ವಿವೇಕಾನಂದರು ಐವತ್ತು ವರ್ಷವೂ ಬದುಕಿರಲಿಲ್ಲ. ಆದರೆ ಅವರ ಹೆಸರು ಶಾಶ್ವತವಾಗಿಲ್ಲವೇ? ಎಷ್ಟು ದಿನ ಬದುಕುತ್ತೀರಿ ಎಂಬುದು ಮುಖ್ಯವಲ್ಲ. ಎಷ್ಟು ದಿನ ನಮ್ಮ ಹೆಸರು ಇರುತ್ತದೆ ಎಂಬುದು ಮುಖ್ಯ ಎಂದು ಆರ್. ಅಶೋಕ್ ಹೇಳಿದರು.
ಮನುಷ್ಯ ಮರದಂತೆ ಬದುಕಬೇಕು…ಉಸಿರು ಇರುವವರೆಗೆ ಹೆಸರಿದ್ದರೆ ಅದಕ್ಕೆ ಮೂರು ಪೈಸೆ ಬೆಲೆಯೂ ಇಲ್ಲ. ಉಸಿರು ಹೋದಮೇಲೆ ಹೆಸರು ತರುವವರು ರಿಯಲ್ ಹೀರೋಗಳು. ಮರ ಸತ್ತ ಮೇಲೂ ನೂರಾರು ವರ್ಷ ತೊಲೆಯಾಗಿ ಮನೆಗೆ ಆಧಾರವಾಗಿರುತ್ತದೆ. ಆ ರೀತಿ ಇರಬೇಕು. ನಮ್ಮ ಆಕಾರ, ಬಟ್ಟೆ ಯಾವುದೂ ಉಳಿಯುವುದಿಲ್ಲ. ಕೊನೆಗೆ ಉಳಿಯುವುದು ಹೆಸರು ಮಾತ್ರ. ಪ್ರಶಸ್ತಿ ಸ್ವೀಕರಿಸಿ ದವರು ಹಣ್ಣು ಕೊಡುವ ಮರದಂತಿರಬೇಕು ಎಂದು ಆರ್. ಅಶೋಕ್ ತಿಳಿಸಿದರು.
ಹಾರ ಎಂದರೆ ಭಾರ. ಭಾರ ಎಂದರೆ ತಲೆ ಬಾಗು ಎಂದರ್ಥ. ತಲೆ ಬಾಗು ಎಂದರೆ ಸಮಾಜದ ಮುಂದೆ ತಲೆಬಾಗಿ ನಿಲ್ಲು ಎಂದರ್ಥ. ಸಮಾಜದ ಪರ ತಲೆಬಾಗಿ ನಿಲ್ಲುವ ಅವಕಾಶವನ್ನು ‘ವಿಜಯವಾಣಿ’ ನಿಮ್ಮೆಲ್ಲರಿಗೆ ಕೊಟ್ಟಿದೆ.
| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ
ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಯಾಯ್ತು ಸಿಎಎ: ಕೇಂದ್ರದಿಂದ ಕೊನೆಗೂ ಅಧಿಸೂಚನೆ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 15 =
Remember me
