| ನಾರಾಯಣ ಯಾಜಿ ಸಾಲೇಬೈಲುಅನಂತ ವೈದ್ಯರೆಂದರೆ ಹೀಗೆ ಎಂದು ನಿರ್ದಿಷ್ಟ ತತ್ತ್ವದಲ್ಲಿ ಕಟ್ಟಿಹಾಕಿ ಹೇಳುವುದು ಕಷ್ಟ. ಸಾಹಿತ್ಯ, ಸಂಗೀತ, ತಾಳಮದ್ದಳೆ, ವಿಮರ್ಶೆ, ಒಳ್ಳೆಯ ಓದುಗ, ಪುಸ್ತಕ ಸಂಗ್ರಹಕಾರ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಅವರ ಪ್ರೌಢಿಮೆ ಎದ್ದುಕಾಣುತ್ತಿತ್ತು. ಅವರಿಗೆ ತೀರದ ಜ್ಞಾನ ದಾಹವಿತ್ತು. ಕನ್ನಡ, ಇಂಗ್ಲಿಷ್, ಸಂಸ್ಕೃತ ಈ ಎಲ್ಲಾ ಭಾಷೆಯ ಸಾಹಿತ್ಯವನ್ನು ಸವಿಯುತ್ತ ಅದರ ಸ್ವಾರಸ್ಯವನ್ನು ಸಾಹಿತ್ಯಾಸಕ್ತರೊಂದಿಗೆ ಹಂಚಿಕೊಳ್ಳುವುದು ಅವರ ಹವ್ಯಾಸ. ಸಾಂಸ್ಕೃತಿಕ ಲೋಕ ಅವರನ್ನು ಗುರುತಿಸುವುದು ಅವರೋರ್ವ ಪಂಡಿತ ವರ್ಗಕ್ಕೆ ಸೇರಿದ ತಾಳಮದ್ದಳೆಯ ಅರ್ಥದಾರಿ ಎಂಬುದಾಗಿ. ಆದರೆ ಕನ್ನಡದ ಪತ್ರಿಕೆಯ ಓದುಗರು ಅವರನ್ನು ಗುರುತಿಸುವುದು ಅವರು ವಿಜಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಪಾಚೀನ ಜ್ಞಾನ’ ಅಂಕಣದಿಂದಾಗಿ. ಇವರ ಅಂಕಣದಲ್ಲಿ ವೇದ ಉಪನಿಷತ್ತು ಮಹಾಕಾವ್ಯಗಳಲ್ಲಿ ಹುದುಗಿರುವ ಪ್ರಾಚಿನರ ವಿಜ್ಞಾನ ಮತ್ತು ಅವರ ಬೌದ್ಧಿಕ ಮಟ್ಟದ ಎತ್ತರದ ಕುರಿತು ವಿವರವಾಗಿ ಬರೆಯುತ್ತಿದ್ದರು. ಅವರು ಬಲಿ ಮತ್ತು ಮಾಯನ್ ಲೋಕದ ಕುರಿತು ಬರೆದಿರುವ ಸಂಗತಿಗಳಾಗಲಿ, ಹರಪ್ಪಾ ನಾಗರಿಕತೆಯ ವಿಶೇಷತೆಯ ಕುರಿತು ಅಥವಾ ರಾಮಾಯಣದಲ್ಲಿ ಪ್ರಸ್ತಾಪವಿರುವ ಹಾರುವ ತಂತ್ರಜ್ಞಾನದ ಕುರಿತಾದ ಬರಹಗಳಲ್ಲಿ ನಾವರಿಯದ ಅನೇಕ ಗೂಢತೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಿದ್ದರು. ಅದಕ್ಕೆ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ರ್ತಾಕ ಅಂತ್ಯವನ್ನು ಕೊಡುತ್ತಿದ್ದರು.
ಅಂಕೋಲಾ ತಾಲೂಕಿನ ಆದರೆ ಯಲ್ಲಾಪುರಕ್ಕೆ ಹತ್ತಿರವಿರುವ ವೈದ್ಯ ಹೆಗ್ಗಾರಿನ ಆಡ್ಯಸ್ಥ ಕುಟುಂಬ ಇವರದು. ಇವರ ತಂದೆ ಮಹಾಬಲೇಶ್ವರ ವೈದ್ಯರು. ಇವರ ಅಣ್ಣಂದಿರಾದ ಅಣ್ಣಯ್ಯ ಮತ್ತು ಸುಬ್ರಾಯ ವೈದ್ಯ ಇಬ್ಬರೂ ಕೃಷಿಯೊಟ್ಟಿಗೆ ಅರ್ಥಗಾರರೂ ಆಗಿದ್ದರು. ಇವರ ಮನೆಯಲ್ಲಿ ಪ್ರತಿ ವರ್ಷ ಅನಂತವೃತದಂದು ನಡೆಯುವ ತಾಳಮದ್ದಳೆ ಒಂದು ಪ್ರತಿಷ್ಠಿತ ಕೂಟವಾಗಿರುತ್ತಿತ್ತು. ಇಂಥ ಪರಿಸರದಲ್ಲಿ ಬೆಳೆದ ವೈದ್ಯರಿಗೆ ಅರ್ಥಗಾರಿಕೆಯ ಕುರಿತು ಸಹಜವಾಗಿಯೇ ಆಸಕ್ತಿ ಬೆಳೆಯಿತು. ಅದರೊಟ್ಟಿಗೆ ಅವರು ಎಂ. ಎ ಮಾಡಲು ಧಾರವಾಡಕ್ಕೆ ಹೋದಾಗ ಅಲ್ಲಿನ ಸಾಹಿತಿಗಳ ಒಡನಾಟದ ಮೂಲಕವಾಗಿ ಪಂಪ, ರನ್ನ, ನಾರಣಪ್ಪ ಕುರಿತು ಆಸಕ್ತಿ ಮೂಡಿತು. ಖ್ಯಾತ ವಿದ್ವಾಂಸರಾದ ನಾರಾಯಣಾಚಾರ್ಯರ ಒಡನಾಟದಲ್ಲಿ ಮಹಾಕಾವ್ಯ ಮತ್ತು ಪುರಾಣಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದರು. ಮೊದಲಿಂದಲೂ ಸ್ವಾಭಿಮಾನಿಯಾದ ಇವರು ಇದೇ ಕಾರಣದಿಂದ ಕಾಲೇಜಿನಲ್ಲಿ ಅಧ್ಯಾಪಕರಾಗುವ ಅವಕಾಶದಿಂದ ವಂಚಿತರಾಗಬೇಕಾಯಿತು. ಆದರೆ ಅದಕ್ಕೆ ಕುಗ್ಗದೇ ಮುದ್ರಣಾಲಯ, ಕಂಟ್ರಾಕ್ಟ, ಜೆಸಿಬಿ ಹೀಗೆ ಹಲವು ಮಾರ್ಗಗಳಲ್ಲಿ ತೊಡಗಿಕೊಂಡರು. ಅದೇ ಹೊತ್ತಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ರಾಮಾಯಣದ ಮೇಲೆ ಬರೆಯುತಿದ್ದರು. ಆದರೆ ಇವರ ಪ್ರತಿಭೆ ಬೆಳಕಿಗೆ ಬಂದಿರುವುದು ಶೇಣಿ ಗೋಪಾಲಕೃಷ್ಣ ಭಟ್ಟರ ಬಳಗಕ್ಕೆ ಸೇರಿದಾಗ. ಶೇಣಿ, ಸಾಮಗ, ದೇರಾಜೆ ಸೀತಾರಾಮಯ್ಯ ಈ ಮೂವರೂ ಇವರ ಅಭಿಮಾನದ ಅರ್ಥಗಾರರಾಗಿದ್ದರು. ಉತ್ತರ ಕನ್ನಡದ ಬುಚ್ಚನ್ ನಾರಾಯಣ ಶಾಸ್ತ್ರಿಗಳೂ ವೇದೋಪನಿಷತ್ತಿನ ಪಾಂಡಿತ್ಯದ ಅರ್ಥವನ್ನು ಹೇಳುತ್ತಿದ್ದರು. ಅವರೂ ಇವರಿಗೆ ಗುರುವಾದರು. ಡಾ. ಎಂ. ಪ್ರಭಾಕರ ಜೋಷಿ ಇವರ ಆತ್ಮೀಯರು. ಕಡತೋಕಾ ಮಂಜುನಾಥ ಭಾಗವತರು ಇವರ ನೆಚ್ಚಿನ ಭಾಗವತರಾಗಿದ್ದರು. ಜನಪ್ರಿಯತೆಯೆನ್ನುವುದು ಎದುರಾಳಿಯ ಮೇಲೆ ಎಸೆಯುವ ಪಟ್ಟುಗಳಲ್ಲಿದೆ ಎನ್ನುವುದರತ್ತ ಅವರು ಆಕರ್ಷಿತರಾದರು. ಇದು ಶೇಣಿ ಮಾರ್ಗವಾಗಿತ್ತು. ಹಾಗಾಗಿ ತನ್ನಲ್ಲಿರುವ ಪಾಂಡಿತ್ಯವನ್ನು ಅರ್ಥಗಾರಿಕೆಯಲ್ಲಿ ಬಳಸತೊಡಗಿದರು. ಇವರ ಅರ್ಥಗಾರಿಕೆಯಲ್ಲಿ ಲಘು ಹಾಸ್ಯ ಮತ್ತು ಎದುರಿನ ಪಾತ್ರದ ದೌರ್ಬಲ್ಯವನ್ನು ಬಯಲು ಮಾಡುವ ಚಾಕಚಕ್ಯತೆ ಎರಡೂ ಇದ್ದವು. ತಾಳಮದ್ದಳೆಯ ಗಡುಚಿನ ಅರ್ಥಧಾರಿ ಎನ್ನುವ ಅಪವಾದಕ್ಕೆ ಇವರು ಗುರಿಯಾಗಬೇಕಾಯಿತು. ಅದೇ ಕಾಲಕ್ಕೆ ಇವರನ್ನು ಅಂಕಣಕಾರರನ್ನಾಗಿಸಿದ್ದು, ಮೊದಲು ಸಂಯುಕ್ತ ಕರ್ನಾಟಕ, ನಂತರದಲ್ಲಿ ವಿಜಯವಾಣಿ. ವಿಜಯವಾಣಿಯ ‘ಪ್ರಾಚೀನ ಜ್ಞಾನ’ ಅಂಕಣ ರಾಜ್ಯದಾದ್ಯಂತ ಇವರಿಗೆ ಅಭಿಮಾನಿಗಳನ್ನು ಸೃಷ್ಟಿಸಿತು. ಶಿರಸಿಯ ಜನಮಾದ್ಯಮ ಪತ್ರಿಕೆಯಲ್ಲಿಯೂ ಇವರು ನಿರಂತರವಾಗಿ ಅಂಕಣವನ್ನು ಬರೆದಿದ್ದಾರೆ.
ಸಾಹಿತ್ಯದಲ್ಲಿ ಮಾತ್ರ ಇವರದು ನವಿರುತನ. ರಾಮಾಯಣದ ಸುಮಿತ್ರೆಯ ಕುರಿತು ಕೃತಿ ರಚನೆ ಮಾಡಬೇಕೆಂದಿದ್ದರು. ಯಕ್ಷಗಾನದ ಮೊದಲ ಮಾಸಪತ್ರಿಕೆ ಯಕ್ಷರಂಗ ವನ್ನು ಕಡತೋಕಾ ಮಂಜುನಾಥ ಭಾಗವತರ ಜೊತೆ ಅನೇಕ ವರ್ಷಗಳ ಕಾಲ ಇವರ ವಿಜಯಶ್ರೀ ಮುದ್ರಣಾಲಯದಲ್ಲಿ ಪ್ರಕಟಿಸಿ ಯಕ್ಷಗಾನಕ್ಕೆ ಒಂದು ಸಾಹಿತ್ಯಿಕ ಚಿಂತನೆಯನ್ನು ಕೊಡುವಲ್ಲಿ ನೆರವಾದರು. ತಮ್ಮ ಗುರು ಶೇಣಿಯವರ ಅರ್ಥಗಾರಿಕೆಯ ಕುರಿತು ಇವರ ‘ಜ್ಞಾನಯಜ್ಞ’ ಶೇಣಿ ಚಿಂತನೆಗಳನ್ನು ಅರಿಯಲು ಇರುವ ಒಂದು ಮಹತ್ವದ ಕೃತಿ. ರಾಮಾಯಣದ ಮೇಲೆ ಇವರು ಬರೆದ ‘ಪಾದುಕಾ ಪ್ರದಾನ’ ಭರತ, ರಾಮ ಹಾಗೂ ಅಯೋಧ್ಯೆಯ ಆಗಿನ ಘಟನೆಗಳ ಕುರಿತು ಜಿಜ್ಞಾಸೆಗೆ ತೊಡಗಿಸುವ ಕೃತಿಯಾಗಿದೆ.
ವೈದ್ಯರು ಪಾತ್ರಗಳನ್ನು ನೋಡುವ ಸೂಕ್ಷ್ಮದೃಷ್ಟಿ ಅಚ್ಚರಿ ಮೂಡಿಸುತ್ತದೆ. ಅವರು ಕೈಕೇಯಿಗೆ ಭರತನ ಮೇಲಿರುವ ಪ್ರೀತಿಯನ್ನು ಮಾತೃ ಗಂಧಿನಿ ಎಂದಿದ್ದರು. ವಾತ್ಸಲ್ಯವೆನ್ನುವುದು ಹೃದಯ ಮೂಲ. ಗಂಧಿನಿಯೆನ್ನುವುದು ಬಾಹ್ಯಕ್ಕೆ ಅಂಟಿಸಿಕೊಳ್ಳುವುದು- ನಾವು ಮೈಗೆ ಗಂಧವನ್ನು ಲೇಪಿಸಿಕೊಳ್ಳುವಂತೆ. ಅವಳಿಗೆ ಭರತನ ಮೇಲೆ ಏಕಾಏಕಿ ಪ್ರೀತಿ ಮೂಡಿರುವುದು ಅವಳ ಈ ಗುಣಗಳಿಂದಾಗಿ. ಸ್ವಸಮ್ಮೋಹಿತಳಾಗಿರುವವಳಲ್ಲಿ ಮಾತೃವಾತ್ಸಲ್ಯ ಮೂಡುವುದಿಲ್ಲ ಎನ್ನುವುದನ್ನು ಅವರು ಈ ಮೂಲಕ ಹೇಳಿದ್ದರು. ಇದು ಅವರು ಮಹಾಕಾವ್ಯವನ್ನು ಅವಲೋಕಿಸಿದ ರೀತಿಯಾಗಿತ್ತು. ಇಂತಹ ಅನೇಕ ಶಬ್ದಗಳೆಲ್ಲವೂ ಸಾಹಿತ್ಯದ ಕೃತಿಗಳಾಗಿ ದಾಖಲಾಗಬೇಕಾಗಿತ್ತು. ವೇದಮೂರ್ತಿ ಸೂರಾಲು ದೇವಿಪ್ರಸಾದ ತಂತ್ರಿಗಳು ಇವರ ನೆಚ್ಚಿನ ವಿದ್ವಾಂಸರಾಗಿದ್ದರು. ಇತ್ತೀಚೆಗೆ ವೈದ್ಯರ ಆರೋಗ್ಯ ತುಂಬಾ ಕೆಡುತ್ತಿತ್ತು. ತನ್ನ ಅಪ್ರಕಟಿತ ಕೃತಿಗಳನ್ನು ಪ್ರಕಟಿಸಬೇಕು ಎಂದುಕೊಂಡಿದ್ದರು. ವಿಧಿ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಸೆಳೆದೊಯ್ದು ಬಿಟ್ಟಿತು. ಇವರ ಪತ್ನಿ ವಿಜಯಶ್ರೀ ಪತಿಗೆೆ ಸದಾ ಒತ್ತಾಸೆಯಾಗಿ ನಿಂತವರು. ಹೆಣ್ಣುಮಕ್ಕಳು ಕವಿತಾ ಮತ್ತು ಸಂಗೀತಾ ಇಬ್ಬರೂ ಗಲ್ಪ್ ದೇಶದಲ್ಲಿ ಇದ್ದಾರೆ, ಸಾಹಿತ್ಯ ರಚನೆಯಲ್ಲೂ ತೊಡಗಿದ್ದಾರೆ. ಮಗ ಕಿರಣ ಬೆಂಗಳೂರಿನಲ್ಲಿ ಎಂಜಿನಿಯರ್. ಸದಾ ಜಿಜ್ಞಾಸುವಾಗಿದ್ದ ವೈದ್ಯರು ಅದರ ಅಂತಿಮ ಹಂತವಾದ ಅನಂತದಲ್ಲಿ ಲೀನವಾಗಿಬಿಟ್ಟರು. ಕನ್ನಡ ಸಾರಸ್ವತದ ವಿದ್ವಾಂಸರೋರ್ವರನ್ನು ನಾವು ಕಳೆದುಕೊಂಡೆವು.
(ಲೇಖಕರು ವಿದ್ವಾಂಸರು, ಅಂಕಣಕಾರರು, ಯಕ್ಷಗಾನ ಅರ್ಥದಾರಿ)
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
