ಬೆಂಗಳೂರು:ಹಿಂದು ಧಾರ್ವಿುಕ ಹಾಗೂ ಧರ್ವದಾಯ ದತ್ತಿಗಳ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳ ಅರ್ಚಕರು ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ಕೊಡಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ, 65 ವರ್ಷಕ್ಕೆ ನಿವೃತ್ತರಾಗುವ ದೇವಸ್ಥಾನಗಳ ನೌಕರರು/ಅರ್ಚಕರಿಗೆ 2 ಲಕ್ಷ ರೂ. ಇಡುಗಂಟು ನೀಡುವುದಕ್ಕೂ ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ 40 ರಿಂದ 45 ಸಾವಿರ ಅರ್ಚಕರಿದ್ದು, ಈ ಪೈಕಿ ಅಂದಾಜು 3 ಸಾವಿರ ಅರ್ಚಕರು/ಸಿಬ್ಬಂದಿ ನೇಮಕಗೊಂಡವರಿದ್ದಾರೆ. ಉಳಿದವರೆಲ್ಲ ಆನುವಂಶಿಕವಾಗಿ ಅರ್ಚಕ ವೃತ್ತಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅರ್ಚಕರು ಮೃತಪಟ್ಟರೆ ಇದುವರೆಗೆ ಯಾವುದೇ ಪರಿಹಾರ ಕೊಡುತ್ತಿರಲಿಲ್ಲ. ನಮ್ಮ ಸರ್ಕಾರ ಯಾರೇ ಅರ್ಚಕರು ಮೃತಪಟ್ಟರೂ 2 ಲಕ್ಷ ರೂ. ನೀಡಲು ಈಗಾಗಲೇ ತೀರ್ವನಿಸಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ಸಚಿವರು, ದೇವಸ್ಥಾನಗಳಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರು/ಅರ್ಚಕರು ನಿವೃತ್ತರಾಗುವಾಗ ಅವರಿಗೆ ಯಾವುದೇ ಇಡುಗಂಟು ಸಿಗುತ್ತಿಲ್ಲ. ಬರಿಗೈಲಿ ಹೋಗುವ ಸ್ಥಿತಿ ಇದೆ. ಹೀಗಾಗಿ ಆ ಅರ್ಚಕರು/ನೌಕರರಿಂದ 2 ಲಕ್ಷ ರೂ. ಇಡುಗಂಟು ನೀಡುವಂತೆ ಬೇಡಿಕೆ ಇದೆ. ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಡಿಬಿಟಿ ಮೂಲಕ ತಸ್ತಿಕ್ ಹಣ ಹಂಚಿಕೆ:ಕಾಂಗ್ರೆಸ್ ಸರ್ಕಾರ ತಸ್ತಿಕ್ ಹಣ ಹೆಚ್ಚಳ ಮಾಡಿದೆ. ಈ ಹಣ ಪಡೆಯಲು ಅರ್ಚಕರು ಕೆಲವು ಕಡೆ ಲಂಚ ನೀಡಬೇಕಾದ ದೂರು ಕೇಳಿ ಬಂದಿದ್ದವು. ಮತ್ತೆ ಕೆಲವು ಕಡೆ ಕಚೇರಿಗೆ ಅಲೆದಾಡುತ್ತಿದ್ದರು. ಇದನ್ನು ತಪ್ಪಿಸಲು ಡಿಬಿಟಿ ಮೂಲಕ ನೇರವಾಗಿ ಅರ್ಚಕರ ಖಾತೆಗೆ ಹಣ ಪಾವತಿಸುವ ವ್ಯವಸ್ಥೆ ಜಾರಿ ಮಾಡಿದ್ದೇವೆ. ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆಯಾಗಿದ್ದು, ಮುಜರಾಯಿ ಇಲಾಖೆ ಕಾರ್ಯದರ್ಶಿಗಳ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಲಂಚ ಪಡೆಯುವ ಯಾವುದೇ ದೂರುಗಳು ಕೇಳಿ ಬಂದಿಲ್ಲ. ಇನ್ನು ಮುಂದಿನ ಕಂತುಗಳ ಹಣ ನೇರವಾಗಿ ಅರ್ಚಕರ ಖಾತೆಗೇ ಜಮೆ ಆಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ:ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. 5 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ವಿದ್ಯಾರ್ಥಿ ವೇತನ ದೊರೆಯಲಿದೆ. ಅರ್ಜಿ ಹಾಕುವ ಎಲ್ಲ ವಿದ್ಯಾರ್ಥಿಗಳಗೂ ವಿದ್ಯಾರ್ಥಿ ವೇತನ ಸಿಗುತ್ತದೆ. ಅದಕ್ಕೆ ಅಗತ್ಯವಾದ ಹಣ ಇಲಾಖೆ ಬಳಿ ಇದೆ ಎಂದರು.
ಕಾಶಿ ಯಾತ್ರೆಗೆ ಕಷ್ಟ ಬೇಕಿಲ್ಲ:ಕಾಶಿ-ಗಯಾ ಯಾತ್ರೆಗೆ ಸರ್ಕಾರ ನೀಡುವ ಸಹಾಯಧನ ವಿತರಣಾ ವ್ಯವಸ್ಥೆಯನ್ನೂ ಸರಳಗೊಳಿಸಲಾಗಿದೆ. ಅರ್ಚಕರ ಕಾಶಿ ಯಾತ್ರೆಗೆ 20 ಟ್ರಿಪ್ ವ್ಯವಸ್ಥೆ ಮಾಡಿದ್ದು, ಪ್ರತಿ ಟ್ರಿಪ್​ಗೆ 60 ಜನರಂತೆ 1,200 ಜನ ಪ್ರಯಾಣ ಬೆಳೆಸಬಹುದಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಮಾಂಗಲ್ಯ ಭಾಗ್ಯಸರಳ ವಿವಾಹ ಪ್ರೋತ್ಸಾಹಿಸಲು ಮುಜರಾಯಿ ಇಲಾಖೆ ಸಾಮೂಹಿಕ ವಿವಾಹ ಯೋಜನೆಗೆ ‘ಮಾಂಗಲ್ಯ ಭಾಗ್ಯ’ ಮರುನಾಮಕರಣ ಮಾಡಿದ್ದು, ಇದರನ್ವಯ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ವಿವಾಹವಾಗುವ ಪ್ರತಿ ಜೋಡಿಗೆ 60 ಸಾವಿರ ರೂ. ನಿಗದಿ ಪಡಿಸಿದೆ. 8 ಗ್ರಾಂ ಚಿನ್ನದ ಮಾಂಗಲ್ಯ, ಕಾಲುಂಗುರ, ವಸ್ತ್ರ ಖರೀದಿಗಾಗಿ ವಧುವಿಗೆ 10 ಸಾವಿರ ರೂ. ಹಾಗೂ ವರನಿಗೆ 5 ಸಾವಿರ ರೂ. ನೀಡಲಾಗುತ್ತದೆ. ಬಂಧುಗಳಿಗೆ ಊಟದ ವ್ಯವಸ್ಥೆಯೂ ಇರಲಿದೆ. ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಲ್ಲಿ ವಿವಾಹ ಮಾಡಿಕೊಳ್ಳಬಹುದಾಗಿದ್ದು, ಇತರ ದೇವಾಲಯಗಳಲ್ಲಿ ವಿವಾಹವಾಗುವ ಜೋಡಿಗೆ ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಹಣ ಒದಗಿಸಲಾಗುವುದು. ಸಾಮಾನ್ಯ ಸಂಗ್ರಹಣಾ ನಿಧಿಗಾಗಿ ಎ ವರ್ಗದ ದೇವಾಲಯಗಳ ನಿವ್ವಳ ಆದಾಯದಲ್ಲಿ ಶೇ.10 ಸಂಗ್ರಹಿಸಲಾಗುವುದು. ಶೀಘ್ರದಲ್ಲೇ ವಿವಾಹ ನೋಂದಣಿಗೆ ಸೂಚಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಂವಾದದಲ್ಲಿ ತಿಳಿಸಿದರು.
ಸೆಲ್ಪಿ ಕ್ಲಿಕಿಸಿ ಸಹಾಯಧನ ಪಡೆಯಿರಿವೈಯಕ್ತಿಕವಾಗಿ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಮುಜರಾಯಿ ಇಲಾಖೆ ಸಿದ್ಧಪಡಿಸಿರುವ ವಿಶೇಷ ಆಪ್ ಅನ್ನು ಡೌನ್​ಲೋಡ್ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳಬೇಕು. ಕಾಶಿ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಕ್ಷೇತ್ರ 5 ಕಿ.ಮೀ. ವ್ಯಾಪ್ತಿಯಲ್ಲಿ ಸೆಲ್ಪಿ ಕ್ಲಿಕ್ಕಿಸಿ ಆಪ್​ನಲ್ಲಿ ಫೋಟೋ ಅಪ್​ಲೋಡ್ ಮಾಡಿದರೆ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ. ಈ ಮೊದಲು ಕಾಶಿ ಯಾತ್ರೆ ಕೈಗೊಂಡವರು ಸಂಬಂಧಪಟ್ಟ ಅಧಿಕಾರಿಗಳಿಂದ ಹಾಜರಾತಿ ಪ್ರಮಾಣಪತ್ರ ತಂದು ಕೊಡಬೇಕಿತ್ತು. ಆದರೆ, ಈಗ ಅದರ ಅಗತ್ಯವಿಲ್ಲ. ಇದಲ್ಲದೆ, ಮಾನಸ ಸರೋವರ ಹಾಗೂ ಚಾರ್​ಧಾಮ್ ಯಾತ್ರೆ ಕೈಗೊಳ್ಳುವವರು ಸಹ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್ ಅಥವಾ ಇಲಾಖೆ ಕಚೇರಿಗೆ ಅಲೆಯಬೇಕಿಲ್ಲ. ಬದಲಿಗೆ ಇಲಾಖೆಯ ಆಪ್ ಡೌನ್ ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ತಿರುಪತಿಯಲ್ಲಿ ವಸತಿಗೃಹ:ತಿರುಪತಿಯಲ್ಲಿ ಭಕ್ತರಿಗಾಗಿ ಮುಜರಾಯಿ ಇಲಾಖೆ ವತಿಯಿಂದ ನಿರ್ವಣವಾಗುತ್ತಿರುವ 350 ಕೊಠಡಿಗಳ ವಸತಿಗೃಹ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಜನವರಿಯಲ್ಲಿ 150 ಕೊಠಡಿಗಳು ಲೋಕಾರ್ಪಣೆಗೊಳ್ಳಲಿವೆ. ಇವುಗಳಲ್ಲಿ ಶೇ.50 ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ್ದು, ಆನ್​ಲೈನ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಇವುಗಳಲ್ಲಿ ಶೇ.60 ರಾಜ್ಯದ ಯಾತ್ರಿಕರು ಮುಂಗಡವಾಗಿ ಕೊಠಡಿ ಕಾಯ್ದಿರಿಸಬಹುದಾಗಿದ್ದು, ಶೇ.40 ತಿರುಪತಿಗೆ ಹೋದ ವರು ಅಲ್ಲಿಯೇ ಕೊಠಡಿ ಪಡೆಯಬಹುದು.
ಆಸ್ತಿ ರಕ್ಷಣೆಗೆ ಕಣ್ಗಾವಲು
ದೇವಸ್ಥಾನಗಳ ಆಸ್ತಿ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಆಸ್ತಿ ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಅನೇಕ ಕಡೆ ಆಸ್ತಿ ಒತ್ತುವರಿಯಾಗಿವೆ. ಅವೆಲ್ಲವನ್ನು ಸರ್ವೆ ಮಾಡಿಸಿ ಬೇಲಿ ಹಾಕಿ ಸಂರಕ್ಷಣೆ ಮಾಡಲು ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ. ಇದರಿಂದ ದೇವಸ್ಥಾನಗಳ ಒತ್ತುವರಿ ತೆರವುಗೊಂಡು ಆಸ್ತಿ ಸರ್ಕಾರದ ಸುಪರ್ದಿಗೆ ಬರಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ದೇವಸ್ಥಾನಗಳಲ್ಲಿ ಫ್ರೀ ಫ್ರೀ ಫ್ರೀ…
ದೇವಸ್ಥಾನಕ್ಕೆ ಹೋದರೆ ರ್ಪಾಂಗ್, ಚಪ್ಪಲಿ ಬಿಡಲು, ಕುಡಿಯುವ ನೀರು… ಹೀಗೆ ಎಲ್ಲಕ್ಕೂ ಶುಲ್ಕ ಪಾವತಿ ಮಾಡಬೇಕಿತ್ತು. ಇದರಿಂದ ಅನೇಕ ಭಕ್ತರು ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ, ಇನ್ನು ಮುಂದೆ ಅಂತಹ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಇನ್ನು ಮುಂದೆ ಚಪ್ಪಲಿ ಬಿಡಲು, ರ್ಪಾಂಗ್​ನಲ್ಲಿ ವಾಹನ ನಿಲುಗಡೆ ಮಾಡಲು, ಶುದ್ಧ ಕುಡಿಯುವ ನೀರಿಗೆ ದುಡ್ಡು ಕೊಡಬೇಕಿಲ್ಲ. ಈ ಎಲ್ಲ ಸೇವೆಗಳೂ ಉಚಿತವಾಗಿ ದೊರೆಯಲಿವೆ. ದೇವಸ್ಥಾನ ಆಡಳಿತ ಮಂಡಳಿ ಸಿಬ್ಬಂದಿಯೇ ಈ ಎಲ್ಲ ಸೇವಾ ವ್ಯವಸ್ಥೆಯನ್ನು ನಿರ್ವಹಿಸುತ್ತಾರೆ. ಅದಕ್ಕೆ ತಗಲುವ ವೆಚ್ಚವನ್ನೂ ಆಯಾ ದೇವಸ್ಥಾನಗಳೇ ಭರಿಸುತ್ತವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
10 ರಾಜ್ಯ, 55 ಸ್ಥಳಗಳಲ್ಲಿ ಎನ್‌ಐಎ ಶೋಧ, ಬೆಂಗಳೂರಿನಲ್ಲಿ 10 ಮಂದಿ ಸೇರಿ 44 ಬಾಂಗ್ಲಾ ಪ್ರಜೆಗಳು ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
