2019ರ ಜುಲೈ 26ರಂದು ಅಧಿಕಾರಕ್ಕೆ ಬಂದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಇಂದಿಗೆ ಎರಡು ವರ್ಷ ಪೂರೈಸಿದೆ. ಸಾಧನೆಯ ವಿಮರ್ಶೆಯ ದೃಷ್ಟಿಯಲ್ಲಿ ಸಿಹಿ-ಕಹಿ ಎರಡೂ ಇವೆ. ಕೆಲ ಬದಲಾವಣೆಗಳು ಆಗಿದ್ದರೆ, ಇನ್ನೂ ಎಷ್ಟೋ ಆಶಯಗಳು ಈಡೇರಬೇಕಿವೆ, ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ. ಸರ್ಕಾರ ಆರಂಭಿಕ ಅವಧಿಯಲ್ಲೇ ಹಲವು ಸವಾಲುಗಳನ್ನು ಎದುರಿಸಬೇಕಾಯಿತು.
ಪ್ರವಾಹ ಸೃಷ್ಟಿಸಿದ ಭಾರಿ ಹಾನಿ, ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳುವ ಅಗತ್ಯ ಸೇರಿ ಅನಿರೀಕ್ಷಿತ ಸಂದರ್ಭಗಳೇ ಎದುರಾದವು. ಅದರ ಬೆನ್ನಲ್ಲೇ 2020ರಲ್ಲಿ ಆರಂಭವಾದ ಕರೊನಾ ಸೋಂಕಿನ ಹಾವಳಿ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಆಡಳಿತವನ್ನೇ ಸ್ತಬ್ಧಗೊಳಿಸಿತು. ಈ ವರ್ಷ ಸೋಂಕಿನ ಎರಡನೇ ಅಲೆ ಎದುರಿಸಲು ಮತ್ತೆ ಲಾಕ್​ಡೌನ್ ಹೇರಬೇಕಾಯಿತು. ಹಲವು ವಲಯಗಳಿಗೆ ನೆರವಿನ ಪ್ಯಾಕೇಜ್ ಘೋಷಿಸಲಾಯಿತು. ಆರ್ಥಿಕತೆಗೆ ಹೊಡೆತ ಬಿದ್ದಿದ್ದರಿಂದ, ಪ್ರಮುಖ ಇಲಾಖೆಗಳಿಗೂ ಅನುದಾನ ಕಡಿತವಾಗಿ ಅಭಿವೃದ್ಧಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಅನ್​ಲಾಕ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದರೂ ಪರಿಸ್ಥಿತಿ ಸಹಜತೆಗೆ ಬರಲು, ಆರ್ಥಿಕ ಚಟುವಟಿಕೆಗಳು ಗರಿಗೆದರಲು ಇನ್ನಷ್ಟು ಕಾಲಾವಕಾಶ ಬೇಕು.
ನಾಯಕತ್ವ ಬದಲಾವಣೆಯ ವಿಚಾರ ಮತ್ತು ಸರ್ಕಾರದ ಒಳಗಿನ ಅಸಮಾಧಾನ, ಭಿನ್ನಾಭಿಪ್ರಾಯ ಕಳೆದ ಎರಡು ವರ್ಷಗಳಲ್ಲಿ ಮತ್ತೆ ಮತ್ತೆ ಮುನ್ನೆಲೆಗೆ ಬಂದ ಕಾರಣ ಆಡಳಿತದ ಮೇಲೆ ಪರಿಣಾಮ ಆಯಿತು. ಈ ಹಿಂದಿನ ಪ್ರಮಾದಗಳಿಂದ ಬಿಜೆಪಿ ಪಾಠ ಕಲಿತು, ಒಳ್ಳೆಯ ಆಡಳಿತ ನೀಡುತ್ತದೆ ಎಂಬ ಆಶಾವಾದ ಇಟ್ಟುಕೊಂಡಿದ್ದ ಜನರಿಗೆ ಎದುರಾಗಿದ್ದು ನಿರಾಸೆಯೇ. ಸಚಿವ ಸ್ಥಾನ ಪಡೆಯಲು ನಡೆದ ಪೈಪೋಟಿ, ಖಾತೆ ಕಿತ್ತಾಟ, ಶಾಸಕರ ಅಸಮಾಧಾನ, ಕ್ಷೇತ್ರಾಭಿವೃದ್ಧಿ ಅನುದಾನ ಬಳಕೆಯಲ್ಲಿ ನಿರ್ಲಕ್ಷ್ಯ ಹೀಗೆ ಸಾಲು-ಸಾಲು ಅಪಸವ್ಯಗಳು ಕಂಡುಬಂದವು.
ಮುಖ್ಯಮಂತ್ರಿ ಬದಲಾವಣೆ ವಿಷಯ ಹಲವು ಬಾರಿ ಚಾಲ್ತಿಗೆ ಬಂದು ಸಚಿವರು, ಶಾಸಕರು ರಾಜಕೀಯ ಬೆಳವಣಿಗೆಗಳಲ್ಲೇ ಮಗ್ನರಾದರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅವರವರ ಜಿಲ್ಲೆ, ಕ್ಷೇತ್ರಗಳಲ್ಲಿ ಇದ್ದು, ಜನರ ಸಮಸ್ಯೆ ಪರಿಹರಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರೂ ಹೇಳಿಕೊಳ್ಳುವಂಥ ಪರಿಣಾಮವಾಗಿಲ್ಲ. ರಾಜಕೀಯ ಗೊಂದಲವೇ ದೀರ್ಘಾವಧಿ ಕಾಡಿದ್ದರಿಂದ ಸರ್ಕಾರದ ವರ್ಚಸ್ಸು ಹೆಚ್ಚಿಲ್ಲ. ಕರೊನಾ ಅವಧಿಯಲ್ಲೂ ರಾಜ್ಯಕ್ಕೆ ಒಂದಿಷ್ಟು ಬಂಡವಾಳ ಹರಿದು ಬಂದಿರುವುದು ಸ್ವಲ್ಪ ಸಮಾಧಾನಕರ. ಹೀಗಿದ್ದರೂ, ಕೃಷಿ, ಕೈಗಾರಿಕೆ, ಇತರ ವಲಯಗಳ ಬೆಳವಣಿಗೆ ಮತ್ತು ಉದ್ಯೋಗಸೃಷ್ಟಿ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳಾಗಬೇಕಿವೆ. ಮುಂದಿನ ವಿಧಾನಸಭೆ ಚುನಾವಣೆಗೆ ಉಳಿದಿರುವುದು 22 ತಿಂಗಳು ಮಾತ್ರ. ಅದರಲ್ಲೂ ಕೊನೆಯ ಹತ್ತು ಹನ್ನೆರಡು ತಿಂಗಳಿರುವಾಗಲೇ ಎಲ್ಲ ಪಕ್ಷಗಳು ಚುನಾವಣಾ ಮೂಡ್​ಗೆ ಹೋಗುತ್ತವೆ. ಹೀಗಾಗಿ, ಅಭಿವೃದ್ಧಿ ಪ್ರಕ್ರಿಯೆಗೆ ವೇಗ ನೀಡುವುದು ಸರ್ಕಾರದ ಗುರಿಯಾಗಬೇಕು. ಅಧಿಕಾರ-ಸ್ಥಾನಮಾನಕ್ಕಾಗಿ ಕಚ್ಚಾಟ, ಇತರ ಗೊಂದಲಗಳೇ ಮೇಳೈಸಿದರೆ ಜನಸಾಮಾನ್ಯರು ಭ್ರಮನಿರಸನಗೊಳ್ಳುತ್ತಾರೆ; ಚುನಾವಣೆಯಲ್ಲೂ ಇದು ಪ್ರತಿಫಲಿಸುತ್ತದೆ ಎಂಬ ಎಚ್ಚರ ಆಳುಗರಿಗೆ ಅಗತ್ಯ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
