ಬೆಂಗಳೂರು:ಜನರಿಗೆ ಹತ್ತಿರವಾಗಿ ಅವರ ಸಮಸ್ಯೆಗಳಿಗೆ ಕಿವಿಯಾಗುವ ಉದ್ದೇಶದಿಂದ ಸಿಎಂ, ಸಚಿವರು, ಶಾಸಕರು ನಡೆಸುವ ಗ್ರಾಮವಾಸ್ತವ್ಯ ಇನ್ಮುಂದೆ ಪೊಲೀಸರಿಗೂ ಕಡ್ಡಾಯವಾಗಲಿದೆ! ಹತ್ತಾರು ವರ್ಷಗಳಿಂದ ಕಾಡುತ್ತಿರುವ ವೈಯಕ್ತಿಕ ಗಲಾಟೆ ಹಾಗೂ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಕಾರಣಕ್ಕೆ ಈಗಿರುವ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿರುವುದು ಹೊಸ ಬೆಳವಣಿಗೆ. ಜತೆಗೇ, ಪೊಲೀಸರ ‘ಗ್ರಾಮ ವಾಸ್ತವ್ಯ’ ಕಡ್ಡಾಯ ಜಾರಿ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.
ಪೊಲೀಸ್ ಇಲಾಖೆಯ ಪಶ್ಚಿಮ ವಿಭಾಗದ ಮಂಗಳೂರು, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸದ್ಯ ಪೊಲೀಸರ ಗ್ರಾಮ ವಾಸ್ತವ್ಯ ನಡೆಯುತ್ತಿದೆ. ಈ ಪದ್ಧತಿಯನ್ನು ರಾಜ್ಯದ ಎಲ್ಲ ಠಾಣೆಗಳಿಗೂ ಕಡ್ಡಾಯಗೊಳಿಸಿ ಮರುಆದೇಶ ಹೊರಡಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆದಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಈಗಾಗಲೇ ಕೆಲಸದ ಒತ್ತಡ ಹೆಚ್ಚಿದೆ. ಗ್ರಾಮ ವಾಸ್ತವ್ಯದ ನಿಯಮ ಕಡ್ಡಾಯ ಪಾಲನೆ ಆದೇಶ ಪೊಲೀಸರನ್ನು ಇನ್ನಷ್ಟು ಹೈರಾಣಾಗಿಸುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಅನುಕೂಲವೇನು?
* ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು. ಪೊಲೀಸರ ಬಗ್ಗೆ ಉತ್ತಮ ಅಭಿಪ್ರಾಯ
* ಹಲವು ವರ್ಷಗಳಿಂದ ಬಗೆಹರಿಯದ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ
* ಪೊಲೀಸರೇ ರಾತ್ರಿ ಕಳೆಯುವುದರಿಂದ ಸರಗಳ್ಳತನದಂತಹ ಕೇಸ್​ಗಳಿಗೆ ಕಡಿವಾಣ
* ರಸ್ತೆ, ಕಟ್ಟಡ ಕಾಮಗಾರಿ ಸೇರಿ ಗ್ರಾಮದ ಅಭಿವೃದ್ಧಿ ಬಗ್ಗೆ ಗಮನ ಸೆಳೆಯಬಹುದು
* ಮಹಿಳೆಯರು ಲೈಂಗಿಕ ಕಿರುಕುಳ ಬಗ್ಗೆ ನೇರ ದೂರು ನೀಡಬಹುದು
* ಬೇರೆ ಇಲಾಖೆಗಳ ಜತೆ ಸಮನ್ವಯ ಸಾಧಿಸಿ ಸಮಸ್ಯೆಗೆ ಪರಿಹಾರ ಕೊಡಿಸುವುದು
ಖಾಕಿ ಹೇಳೋದೇನು?
* ಇಲಾಖೆಯಲ್ಲಿ 25 ಸಾವಿರ ಹುದ್ದೆ ಖಾಲಿ ಇರುವುದರಿಂದ ಕೆಲಸದ ಒತ್ತಡ ಹೆಚ್ಚಳ
* ಬೀಟ್​ನಲ್ಲಿ ಒಬ್ಬರೇ ಪೇದೆಯಿದ್ದು, ಗ್ರಾಮ ವಾಸ್ತವ್ಯದ ಹೊಣೆ ಅವರ ಹೆಗಲಿಗೆ
* ಬೀಟ್ ಸಿಬ್ಬಂದಿ ಬದಲು ಹಿರಿಯ ಅಧಿಕಾರಿಗಳ ಜತೆಗೆ ಗ್ರಾಮ ವಾಸ್ತವ್ಯ ಆಗಲಿ
* ಈಗಲೇ ರಜೆ ಸಿಗುತ್ತಿಲ್ಲ. ಹೊಸ ಜವಾಬ್ದಾರಿಯಿಂದ ಕುಟುಂಬದಿಂದ ಮತ್ತಷ್ಟು ದೂರ
* ಈಗಿರುವ ಕರ್ತವ್ಯ ಸರಿಯಾಗಿ ನಿರ್ವಹಿಸಿದರೆ ಕಾನೂನು-ಸುವ್ಯವಸ್ಥೆ ರಕ್ಷಣೆ
* ವೇತನ ಹೆಚ್ಚಿಸಿಲ್ಲ, ಕ್ವಾರ್ಟರ್ಸ್ ಸೇರಿ ಪೊಲೀಸರದ್ದೇ ಹಲವು ಸಮಸ್ಯೆಗಳಿವೆ
ಹೊಸ ನಿಯಮವೇನಲ್ಲ
ಜಿಲ್ಲಾ ಎಸ್ಪಿ ಸೇರಿ ಎಲ್ಲ ಹಿರಿಯ ಅಧಿಕಾರಿಗಳು ತಿಂಗಳಲ್ಲಿ 2 ದಿನ ಗ್ರಾಮ ವಾಸ್ತವ್ಯ ಹೂಡಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂಬ ನಿಯಮ ಮೊದಲಿನಿಂದಲೂ ಇದೆ. ಆದರೆ, ಠಾಣಾ ಕರ್ತವ್ಯಗಳೇ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಯಾವ ಅಧಿಕಾರಿಯೂ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ.
ಗ್ರಾಮ ವಾಸ್ತವ್ಯದ ನಿಯಮ ಪೊಲೀಸ್ ಕಾಯ್ದೆಯಲ್ಲೇ ಇದೆ. ಈ ಹಿಂದೆ ಹಾಸನ, ಶಿವಮೊಗ್ಗ ಎಸ್ಪಿಯಾಗಿದ್ದಾಗ ಅಲ್ಲಿ ಜಾರಿಗೆ ತಂದಿದ್ದೆ. ಈಗ ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ನಡೆದುಕೊಂಡು ಬರುತ್ತಿದೆ. ಪೊಲೀಸರು ಜನರ ಬಳಿ ಹೋದಾಗ ಅರ್ಧ ಸಮಸ್ಯೆಗಳು ಬಗೆಹರಿಯುತ್ತವೆ. ಗ್ರಾಮ ವಾಸ್ತವ್ಯದ ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತಂದರೆ ಉತ್ತಮ.
| ರವಿ ಡಿ.ಚೆನ್ನಣ್ಣವರ್ ಎಸ್ಪಿ, ಬೆಂಗಳೂರು ಗ್ರಾಮಾಂತರ
ಹೇಗಿರುತ್ತೆ ವಾಸ್ತವ್ಯ?
ಗ್ರಾಮ ವಾಸ್ತವ್ಯ ಜವಾಬ್ದಾರಿಯನ್ನು ಈಗಾಗಲೇ ಜಾರಿಯಲ್ಲಿರುವ ಆಯಾ ಬೀಟ್ ಸಿಬ್ಬಂದಿ ನಿಭಾಯಿಸಬೇಕಾಗುತ್ತದೆ. ಠಾಣಾ ಸರಹದ್ದಿನಲ್ಲಿರುವ ಹಳ್ಳಿಗಳನ್ನು ಗುರುತಿಸಿ ಪ್ರತಿ ಹಳ್ಳಿಯಲ್ಲಿ ಪ್ರತಿ 15 ದಿನಕ್ಕೊಮ್ಮೆ (ತಿಂಗಳಿಗೆ 2 ಬಾರಿ) ವಾಸ್ತವ್ಯ ಹೂಡಬೇಕು. ಇದಕ್ಕೂ ಮುನ್ನ ಗ್ರಾಮದ ಮುಖಂಡರನ್ನು ಸಂರ್ಪಸಿ ಮಾಹಿತಿ ನೀಡಬೇಕು. ನಂತರ ಸಭೆ ನಡೆಸಲು ನಿರ್ದಿಷ್ಟ ಸಮಯ ನಿಗದಿಪಡಿಸಬೇಕು. ಸರ್ಕಾರಿ ಶಾಲೆ, ಸಮುದಾಯ ಭವನ ಇತ್ಯಾದಿ ಸರ್ಕಾರಿ ಕಟ್ಟಡಗಳಲ್ಲಿ ವಾಸ್ತವ್ಯ ಹೂಡಬೇಕು. ಹಲವು ವರ್ಷಗಳಿಂದ ಇರುವ ಸಮಸ್ಯೆಗಳ ಕುರಿತು ವಿವರ ಸಂಗ್ರಹಿಸಿ ಪರಿಹಾರದ ಬಗ್ಗೆ ರ್ಚಚಿಸಬೇಕು. ಗಂಭೀರ ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಮೂಲಕ ಪರಿಹಾರಕ್ಕೆ ಯತ್ನಿಸಬೇಕು.
| ಕೀರ್ತಿನಾರಾಯಣ ಸಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
