| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ಸ್ಯಾಂಡಲ್​ವುಡ್ ಡ್ರಗ್ಸ್ ಜಾಲ, ಡಿ.ಜೆ.ಹಳ್ಳಿ-ಕೆ.ಜಿ ಹಳ್ಳಿ ಗಲಭೆ ಪ್ರಕರಣದಂಥ ಗಂಭೀರ ಅಪರಾಧ ಕೇಸ್​ಗಳ ರಹಸ್ಯ ಭೇದಿಸುವ ಹೊಣೆ ಹೊರುವ ಕೇಂದ್ರ ಹಾಗೂ ರಾಜ್ಯದ ತನಿಖಾ ತಂಡಗಳು ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ನೂರೆಂಟು ಕಷ್ಟಗಳ ಹೊರೆ ಹೊತ್ತು ಕರ್ತವ್ಯ ನಿರ್ವಹಿಸುವ ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಇವುಗಳ ಕೈ ಬಲಪಡಿಸದಿದ್ದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ತಲುಪುವುದು ನಿಶ್ಚಿತ.
ರಾಜ್ಯದ ಸಿಐಡಿ, ಸಿಸಿಬಿ, ಐಎಸ್​ಡಿ, ಸೈಬರ್ ಕ್ರೖೆಂ ತಂಡಗಳು ಹಾಗೂ ಕೇಂದ್ರದ ಸಿಬಿಐ, ಇಡಿ ಹಾಗೂ ಎನ್​ಐಎಗಳ ರಾಜ್ಯ ಘಟಕಗಳಿಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ನುರಿತ ಅಧಿಕಾರಿ, ಸಿಬ್ಬಂದಿ ಕೊರತೆ, ಕಚೇರಿ ವ್ಯವಸ್ಥೆ, ವಾಹನ ಸೌಲಭ್ಯ, ಅತ್ಯಾಧುನಿಕ ತಾಂತ್ರಿಕ ಉಪಕರಣ ವ್ಯವಸ್ಥೆಯ ಕೊರತೆಯಿಂದಾಗಿ ಪರಿಣಾಮಕಾರಿಯಾಗಿ ತನಿಖಾ ಕೆಲಸಗಳಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳೇ ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.
ಸಿಐಡಿಗೆ ಗಂಭೀರ ಸಂಕಷ್ಟ:ರಾಜ್ಯ ಸರ್ಕಾರದ ಅಧೀನದ ಸಿಐಡಿ ವಿಭಾಗಕ್ಕೆ ಬಹುಕೋಟಿ ರೂಪಾಯಿ ವಂಚನೆ, ಅತ್ಯಾಚಾರ, ಗಲಭೆ ಸೇರಿ ಇನ್ನಿತರ ಕೇಸ್​ಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಆದರೆ ಇಲ್ಲಿ ಅಗತ್ಯ ಸಿಬ್ಬಂದಿಯೇ ಇಲ್ಲ. ವಾಹನ, ಚಾಲಕರ ಕೊರತೆಯಿಂದಾಗಿ ಇನ್​ಸ್ಪೆಕ್ಟರ್ ಮತ್ತು ಎಸಿಪಿಗಳೇ ತನಿಖೆ ವೇಳೆ ಖುದ್ದು ಜೀಪ್ ಚಲಾಯಿಸಬೇಕಾದ ಪರಿಸ್ಥಿತಿ ಇದೆ. ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲೂ ಸಿಬ್ಬಂದಿ ಕೊರತೆ ಸವಾಲಾಗಿದೆ. ಇಲ್ಲಿಗೆ ವರ್ಗಾವಣೆ ಆಗುವ ಇನ್​ಸ್ಪೆಕ್ಟರ್, ಎಸಿಪಿ ದರ್ಜೆ ಅಧಿಕಾರಿಗಳು ಶಿಕ್ಷೆ ಎಂದು ಭಾವಿಸಿ ಕಚೇರಿಗೆ ಕಾಲಿಡುತ್ತಾರೆ. ಎಷ್ಟೇ ಗಂಭೀರ ಕೇಸ್ ಇದ್ದರೂ ತನಿಖೆಗೆ ಆಸಕ್ತಿ ತೋರಿಸುವುದಿಲ್ಲ. ಎಷ್ಟು ಬೇಗ ವರ್ಗಾವಣೆ ಆಗುತ್ತೇವೆ ಎಂಬ ಮನೋಭಾವದಲ್ಲಿಯೇ ಕಾಲ ಕಳೆಯುತ್ತಾರೆ. ಡಿಜಿಪಿ ಮುಖ್ಯಸ್ಥರಾಗಿದ್ದು, ಎಡಿಜಿಪಿ, ಡಿವೈಎಸ್​ಪಿ, ಎಸಿಪಿ ಮಟ್ಟದ ಅಧಿಕಾರಿಗಳಿದ್ದಾರೆ.
ಸೈಬರ್​ಗಿಲ್ಲ ತಾಂತ್ರಿಕ ಶಕ್ತಿ:ಸೈಬರ್, ಡ್ರಗ್ಸ್ ಅಪರಾಧ ತಡೆಗಟ್ಟುವ ಸಲುವಾಗಿ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿ ಮತ್ತು ಕಮಿಷನರೇಟ್​ನಲ್ಲಿ ಡಿಸಿಪಿ ವಿಭಾಗದಲ್ಲಿ ಸಿಇಎನ್ ಠಾಣೆ ತೆರೆಯಲಾಗಿದೆ. ಪ್ರತಿ ಠಾಣೆಗೆ ಇನ್​ಸ್ಪೆಕ್ಟರ್ ಮತ್ತು ಸಬ್ ಇನ್​ಸ್ಪೆಕ್ಟರ್​ಗಳ ನೇಮಕ ಮಾಡಿದ್ದು, ಅವರಿಗೆ ಸೈಬರ್ ಕ್ರೖೆಂ ತನಿಖೆಗೆ ಸೂಕ್ತ ತರಬೇತಿ ನೀಡಿಲ್ಲ. ಕೇವಲ ದೂರು ಪಡೆದು ಎಫ್​ಐಆರ್ ದಾಖಲಿಸುವುದಕ್ಕೆ ಸೀಮಿತವಾಗಿದ್ದಾರೆ. ಅಲ್ಲದೆ, ಸಿಇಎನ್ ಠಾಣೆಯಲ್ಲಿ ಕೇವಲ ಸೈಬರ್ ಕ್ರೖೆಂಗಳ ದೂರುಗಳನ್ನಷ್ಟೇ ದಾಖಲಿಸಿ ಕೊಳ್ಳಲಾಗುತ್ತಿದೆ. ಡ್ರಗ್ಸ್ ಕೇಸ್​ಗಳ ಸ್ವೀಕರಿಸುತ್ತಿಲ್ಲ. ಡ್ರಗ್ಸ್ ಪರೀಕ್ಷೆಗಾಗಿ ಈವರೆಗೂ ವಿಶೇಷ ಕಿಟ್ ಪೂರೈಕೆ ಮಾಡಿಲ್ಲ. ಕೇವಲ ಹೆಸರಿಗಷ್ಟೇ ಸಿಇಎನ್ ಠಾಣೆ ಇದೆ.
ಒತ್ತಡದಲ್ಲಿ ಸಿಸಿಬಿ ಸೇವೆ:ಗಲಭೆ, ಉಗ್ರ ಚಟುವಟಿಕೆ, ಫೋನ್ ಟ್ಯಾಪಿಂಗ್, ಡ್ರಗ್ಸ್ ನಂತಹ ಗಂಭೀರ ಪ್ರಕರಣಗಳನ್ನು ಸಿಸಿಬಿ ಹೆಗಲಿಗೆ ವಹಿಸಲಾಗಿದೆ.ಇದನ್ನೂ ಓದಿ:ಕನ್ನಡಿಗ ಕೆ.ಎಲ್​. ರಾಹುಲ್​ ಐಪಿಎಲ್-2020ಯ​ ಮೊದಲ ಶತಕದ ಹಿಂದಿದೆ ಕೊಹ್ಲಿಯ ಕಾಣಿಕೆ..!
ಆದರೆ, ಅದಕ್ಕೆ ತಕ್ಕಂತೆ ಸಿಬ್ಬಂದಿ ಒದಗಿಸುತ್ತಿಲ್ಲ. ರಾಜಕೀಯ ಪ್ರಭಾವ ಬಳಸಿ ಸಿಸಿಬಿಗೆ ಬರುವ ಅಧಿಕಾರಿಗಳು ಒಂದಲ್ಲೊಂದು ಆರೋಪದಡಿ ಅಮಾನತು ಆಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿ ಬಳಿ ಕೆಲಸ ತೆಗೆಸುವುದು ಹಿರಿಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಭಯೋತ್ಪಾದಕ ನಿಗ್ರಹ ದಳಕ್ಕೆ (ಎನ್​ಐಎ) ಬಲ ಇಲ್ಲದಂತಾಗಿದೆ. ಹೈದರಾಬಾದ್​ನಲ್ಲಿ ಪ್ರಾದೇಶಿಕ ಕಚೇರಿ ಹೊಂದಿದ್ದು, ಬೆಂಗಳೂರಿನ ದೊಮ್ಮಲೂರಿನಲ್ಲಿ ಕ್ಯಾಂಪ್ ಆಫೀಸ್ ಮಾತ್ರ ಇದೆ. ಉಗ್ರ ಚಟುವಟಿಕೆ ಪ್ರಕರಣಗಳ ತನಿಖೆ ಇದ್ದಾಗಲಷ್ಟೇ ಬೆಂಗಳೂರಿನ ಕಚೇರಿಗೆ ಎಸ್​ಪಿ ದರ್ಜೆ ಅಧಿಕಾರಿ ಬಂದು ಸ್ಥಳೀಯ ಪೊಲೀಸರ ಸಹಾಯದಿಂದ ತನಿಖೆ ನಡೆಸಿ ವಾಪಸಾಗುತ್ತಾರೆ. ಉಗ್ರ ಚಟುವಟಿಕೆಗಳ ಮೇಲೆ ನಿಗಾವಹಿಸಲು ಕಷ್ಟಸಾಧ್ಯವಾಗಿದೆ. ಬೆಂಗಳೂರು ಮತ್ತು ಬೆಂಗಳೂರು ಹೊರವಲಯ ಉಗ್ರರ ಅಡಗುತಾಣ ಆಗಲು ಇದೂ ಒಂದು ಕಾರಣವಾಗಿದೆ. ಈ ವಿಚಾರವನ್ನು ಕೇಂದ್ರ ಗೃಹ ಇಲಾಖೆ ಗಮನಕ್ಕೆ ತಂದು ರಾಜ್ಯದಲ್ಲಿಯೇ ಶಾಶ್ವತ ಎನ್​ಐಎ ಕಚೇರಿ ತೆರೆಸಬೇಕೆಂದು ಹಿರಿಯ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ರಾಜ್ಯ ವ್ಯಾಪಿ ಅಧಿಕಾರ ಹೊಂದಿರುವ ಆಂತರಿಕ ಭದ್ರತಾ ಪಡೆ (ಐಎಸ್​ಡಿ) ಇದ್ದರೂ ಇಲ್ಲದಾಗಿದೆ. ಅಕ್ರಮ ಸಶಸ್ತ್ರ ಕಾಯ್ದೆ, ಎನ್​ಡಿಪಿಎಸ್ ಕಾಯ್ದೆ, ಸ್ಪೋಟಕ ವಸ್ತುಗಳ ಸಂಗ್ರಹ, ಸ್ಪೋಟಕ ಸಾಮಗ್ರಿಗಳ ಸಾಗಾಟ, ಆಟೋಮೆಷನ್ ಕಾಯ್ದೆ, ದೇಶದ ಭದ್ರತೆಗೆ ಧಕ್ಕೆ ಮತ್ತು ದೇಶದ್ರೋಹ ಸೇರಿದಂತೆ 10 ವಿಶೇಷ ಕಾಯ್ದೆಯಡಿ ಎಫ್​ಐಆರ್ ಮಾಡಿ ಕ್ರಮ ತೆಗೆದುಕೊಳ್ಳಲು ಐಎಸ್​ಡಿಗೆ ಅಧಿಕಾರ ನೀಡಲಾಗಿದೆ. ಆದರೆ, ಇಲ್ಲಿಯವರೆಗೂ ವರ್ಷಕ್ಕೆ ಒಂದೆರಡು ಎಫ್​ಐಆರ್ ದಾಖಲಿಸಿ ಸುಮ್ಮನಾಗುತ್ತಿದ್ದಾರೆ. ಸಿಬ್ಬಂದಿ ಕೊರತೆ, ಮೂಲ ಸೌಕರ್ಯ ಸೇರಿ ಹಲವು ಸಮಸ್ಯೆ ಕಾಡಿವೆ. ಇತ್ತೀಚೆಗೆ ಭಾಸ್ಕರ್ ರಾವ್ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡು ಡ್ರಗ್ಸ್ ಕೇಸ್ ಮತ್ತು ಗಡಿ ಭದ್ರತೆಗೆ ಹೆಚ್ಚಿನ ಗಮನ ಕೊಡುತ್ತಿರುವುದು ಹೊಸ ಆಶಾಕಿರಣ ಮೂಡಿಸಿದೆ.ಇದನ್ನೂ ಓದಿ:‘ಭಾರತ-ಚೀನಾ ಗಡಿ ಸಂಘರ್ಷ ಹೊಸ ಸ್ವರೂಪದ್ದು…’
ಕೇಂದ್ರ ತನಿಖಾ ತಂಡಗಳಾದ ಸಿಬಿಐ, ಇಡಿ ಕಚೇರಿಗಳು ಬೆಂಗಳೂರಿನಲ್ಲಿವೆ. ದಕ್ಷಿಣ ಭಾರತಕ್ಕೆ ಸೀಮಿತವಾಗಿ ಸಿಬಿಐ ಪ್ರಾದೇಶಿಕ ಕಚೇರಿಯನ್ನು ಬಳ್ಳಾರಿ ರಸ್ತೆಯಲ್ಲಿ ತೆರೆದಿದೆ. ಇದು ಆರ್ಥಿಕ ಅಪರಾಧಕ್ಕೆ ಸೀಮಿತವಾಗಿದೆ. ಇಲ್ಲಿ ಸಿಬ್ಬಂದಿ ಮತ್ತು ಮೂಲಸೌಕರ್ಯಗಳ ಕೊರತೆ ಹೆಚ್ಚಿಲ್ಲ. ಜಾರಿ ನಿರ್ದೇಶನಾಲಯ(ಇಡಿ) ಕಚೇರಿ ಶಾಂತಿನಗರದಲ್ಲಿದೆ. ಎಸ್​ಪಿ ದರ್ಜೆ ಅಧಿಕಾರಿಯನ್ನು ನೇಮಕ ಮಾಡಿದೆ. ದೆಹಲಿ ಮುಖ್ಯ ಕಚೇರಿಯಲ್ಲಿ ನೀಡುವ ನಿರ್ದೇಶನದ ಮೇರೆಗೆ ಇಲ್ಲಿನ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಾರೆ. ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಕಾಡುತ್ತಿದ್ದು, ಸ್ಥಳೀಯ ಕಚೇರಿಗಳಿಗೂ ಪೂರ್ಣಪ್ರಮಾಣದ ಸಾಮರ್ಥ್ಯ ಕೊಟ್ಟರೆ ಗುಣಮಟ್ಟದ ಮತ್ತು ಪರಿಣಾಮಕಾರಿ ತನಿಖೆ ಸಾಧ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳ ವಿಭಾಗಗಳೂ ಸಂಕಷ್ಟದಲ್ಲಿವೆ. ಇಲ್ಲಿಗೆ ಬರುವ ಪ್ರತಿ ಅಧಿಕಾರಿ ಠಾಣೆಯಲ್ಲಿ ಕುಳಿತೇ ಕೆಲಸ ಮಾಡಬೇಕೆಂದು ನಿರ್ಧರಿಸುತ್ತಾರೆ. ಎಲ್ಲಿಯೂ ಯಾವುದೇ ಸ್ಥಳ ಸಿಗದೆ ಇದ್ದಾಗ ಅನಿವಾರ್ಯ ಪರಿಸ್ಥಿತಿಯಲ್ಲಿ ಲೋಕಾಯುಕ್ತ ಮತ್ತು ಎಸಿಬಿಗೆ ವರ್ಗಾವಣೆ ಮಾಡಿಕೊಂಡು ಕಾಲ ದೂಡುತ್ತಿದ್ದಾರೆ. ಇಲ್ಲಿಯೂ ಮೂಲಭೂತ ಸೌಕರ್ಯ ಮತ್ತು ಕೆಳ ಹಂತದ ಸಿಬ್ಬಂದಿ ಕೊರತೆಯಿಂದಾಗಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣ ತನಿಖೆ ಆಮೆಗತಿಯಲ್ಲಿ ಸಾಗುತ್ತಿವೆ.
ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾ ಇಡಲು ಮತ್ತು ತಡೆಗಟ್ಟಲು ರಾಜ್ಯ ಮಟ್ಟದಲ್ಲಿ ಮತ್ತು ಬೆಂಗಳೂರು ನಗರ ಕಮಿಷನರೇಟ್​ನಲ್ಲಿ ಉಗ್ರ ನಿಗ್ರಹ ಪಡೆ (ಎಟಿಎಸ್) ತೆರೆಯಲಾಗಿದೆ. ಎಸ್​ಪಿ ದರ್ಜೆ ಅಧಿಕಾರಿಯನ್ನೇ ನೇಮಕ ಮಾಡುವುದಾಗಿ ಗೃಹ ಇಲಾಖೆ ಹೇಳಿತ್ತಾದರೂ ಎಸಿಪಿ/ಡಿವೈಎಸ್​ಪಿ ದರ್ಜೆ ಅಧಿಕಾರಿಯೇ ಮುನ್ನಡೆಸುತ್ತಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲಿ ಉಗ್ರರನ್ನು ಬಂಧಿಸುವ ಸವಾಲು ಎಟಿಎಸ್​ಗೆ ಎದುರಾಗುತ್ತದೆ. ಅಂತಹ ವೇಳೆ ಬೇರೆ ರಾಜ್ಯದ ಪೊಲೀಸರ ಜತೆ ಸಂಪರ್ಕ ಸಾಧಿಸಲು ಎಸ್​ಪಿ ದರ್ಜೆ ಅಧಿಕಾರಿ ಇರಬೇಕು. ಎಟಿಎಸ್​ಗೆ
ಭಾಷೆ, ತನಿಖೆ, ಉತ್ತಮ ಸೇವೆ ಸಲ್ಲಿಸಿರುವ ಮತ್ತು ಆಸಕ್ತಿ ಇರುವ ಅಧಿಕಾರಿ, ಸಿಬ್ಬಂದಿ ನೇಮಕ ಮಾಡಬೇಕು. ಮನೆ ತೊರೆದು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುವ ಕಾರಣಕ್ಕೆ ಹೆಚ್ಚುವರಿ ವೇತನ, ಸವಲತ್ತು ನೀಡಬೇಕು. ಇದ್ಯಾವುದಕ್ಕೂ ಸರ್ಕಾರ ಗಮನ ಹರಿಸಿಲ್ಲ.ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆ: ತಲೆ ಮರೆಸಿಕೊಂಡಿದ್ದ ಆರೋಪಿ ಸೈಯದ್​ನನ್ನು ಬಂಧಿಸಿದ ಎನ್ಐಎ
ನನ್ನ ವೈಯಕ್ತಿಕ ವಿಚಾರಗಳನ್ನು ಮೂರನೇ ವ್ಯಕ್ತಿಗೆ ತಿಳಿಸಬೇಡಿ ಎಂದ ಶಶಿಕಲಾ ನಟರಾಜನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
