ಸಾರ್ವತ್ರಿಕ ಮೂಲ ಆದಾಯ (ಯುಬಿಐ) ಯೋಜನೆಯು ಎಲ್ಲರಿಗೂ ಕನಿಷ್ಠ ಆದಾಯ ಒದಗಿಸಬೇಕೆಂಬ ಪರಿಕಲ್ಪನೆಯನ್ನು ಹೊಂದಿದೆ. ಈವರೆಗೆ ಯಾವುದೇ ದೇಶದಲ್ಲಿ ಇಂತಹ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಕೆಲವೆಡೆ ಪ್ರಾಯೋಗಿಕವಾಗಿ ಅಲ್ಪ ಪ್ರಮಾಣದಲ್ಲಿ ಜಾರಿಗೆ ತರಲಾಗಿದೆ. ಭಾರತದಲ್ಲಿ ಸಹ ಹಲವಾರು ವರ್ಷಗಳಿಂದ ಇದು ಚಿಂತನೆ ರೂಪದಲ್ಲೇ ಉಳಿದುಕೊಂಡಿದೆ.
ಪ್ರತಿ ನಾಗರಿಕನಿಗೂ ಕನಿಷ್ಠ ಆದಾಯ ಇರುವಂತೆ ನೋಡಿಕೊಳ್ಳಬೇಕು. ಈ ಮೂಲಕ ಆದಾಯ ಅಸಮಾನತೆ ಕಡಿಮೆಗೊಳಿಸಬೇಕೆಂಬುದು ಸಾರ್ವತ್ರಿಕ ಮೂಲ ಆದಾಯ (ಯುಬಿಐ) ಯೋಜನೆಯ ಒಟ್ಟಾರೆ ತಿರುಳು. ಆದರೆ, ವಾಸ್ತವದಲ್ಲಿ ಇದನ್ನು ಕಾರ್ಯರೂಪಕ್ಕೆ ತರುವುದು ಮಾತ್ರ ಸವಾಲಿನ ಸಂಗತಿಯೇ ಸರಿ. ಕೇಂದ್ರ ಸರ್ಕಾರವು ಬಜೆಟ್ ಮಂಡಿಸುವ ಮುನ್ನಾದಿನ ಆರ್ಥಿಕ ಸಮೀಕ್ಷೆ ಪ್ರಕಟಿಸುತ್ತದೆ. 2016-17ನೇ ಆರ್ಥಿಕ ಸಮೀಕ್ಷೆಯಲ್ಲಿ ಸಾರ್ವತ್ರಿಕ ಮೂಲ ಆದಾಯ ಯೋಜನೆ ಬಗೆಗೆ ಅಧಿಕೃತವಾಗಿ ಪ್ರಸ್ತಾಪಿಸಲಾಗಿತ್ತು. ಇದಲ್ಲದೆ, ಅನೇಕ ತಜ್ಞರು ಕೂಡ ಇಂತಹ ಯೋಜನೆ ಜಾರಿಗೆ ಒಲವು ತೋರಿದ್ದಾರೆ. ಆದರೆ, ಯುಬಿಐ ಜಾರಿಗೊಳಿಸುವಲ್ಲಿ ಪಾಯೋಗಿಕ ಸವಾಲುಗಳಿವೆ ಎಂಬ ವಾಸ್ತವವನ್ನು ಸರ್ಕಾರದ ಹಿರಿಯ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಆದಾಯ ಅಸಮಾನತೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಯುಬಿಐ ಯೋಜನೆ ಜಾರಿ ಸುಲಭದ ಕೆಲಸವಲ್ಲ. ಫಲಾನುಭವಿಗಳನ್ನು ಗುರುತಿಸುವುದರಿಂದ ಹಿಡಿದು, ಅವರನ್ನು ಯೋಜನೆಗೆ ಸೇರಿಸುವುದು ಮತ್ತು ಅನುಷ್ಠಾನದ ಮೇಲ್ವಿಚಾರಣೆ ಮಾಡುವುದು ಅತ್ಯಂತ ಕಠಿಣ ಕಾರ್ಯ ಎಂಬುದು ಅಧಿಕಾರಿಗಳ ಸ್ಪಷ್ಟ ಅಭಿಮತ.
ಉತ್ತರ ಸಿಗದ ಪ್ರಶ್ನೆ:ಯುಬಿಐ ಜಾರಿಗೊಳಿಸಲು ಸಾಂಸ್ಥಿಕ ಕಾರ್ಯವಿಧಾನ ರೂಪಿಸಬೇಕು. ಸರ್ಕಾರದ ಯಾವ ಸಂಸ್ಥೆ ಅಥವಾ ಇಲಾಖೆ ಇದನ್ನು ಮಾಡಬಹುದು? ಅರ್ಹ ಫಲಾನುಭವಿಗಳು ಯಾರು? ಬೃಹತ್ ಪ್ರಮಾಣದಲ್ಲಿ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಯೋಜನೆಯ ಲಾಭಗಳ ಹಂಚಿಕೆಯನ್ನು ಅನುಸರಿಸುವುದು ಹಾಗೂ ಪರಿಶೀಲಿಸುವುದು ಹೇಗೆ?- ಯುಬಿಐ ಕುರಿತು ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರವು ಇಂತಹ ಮಹತ್ವದ ಸಂಗತಿಗಳ ಬಗೆಗೆ ಕೂಲಂಕಷವಾಗಿ ಗಮನ ನೀಡಬೇಕಾಗುತ್ತದೆ. ಈ ಯೋಜನೆ ಜಾರಿ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆದಾಗೆಲ್ಲ ಇಂಥ ಪ್ರಶ್ನೆಗಳು ಉದ್ಭವಿಸುತ್ತಲೇ ಇವೆ. ಆದರೆ, ಉತ್ತರಗಳು ಮಾತ್ರ ಗೋಚರಿಸಿಲ್ಲ. ಪ್ರಸ್ತುತ ಅಸ್ತಿತ್ವದಲ್ಲಿರುವ ಎಲ್ಲ ಸರ್ಕಾರಿ ಬೆಂಬಲಿತ ಮತ್ತು ಸಬ್ಸಿಡಿ ಯೋಜನೆಗಳನ್ನು ಬದಲಿಸುವ ಯುಬಿಐ ಯೋಜನೆಯ ಜಾರಿಗೆ ಸಮಯ ಬಂದಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಸರ್ಕಾರವು ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಆರ್ಥಿಕವಾಗಿ ಕೆಳಸ್ತರದಲ್ಲಿರುವ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲ ನೀತಿ ನಿರೂಪಕರ ಮುಂದೆ ಯುಬಿಐ ಯೋಜನೆ ಸುಳಿಯುತ್ತಲೇ ಇದೆ. ಆರ್ಥಿಕ ಅಸಮಾನತೆ ಕುರಿತು ಆರ್ಥಿಕ ಸಲಹಾ ಮಂಡಳಿ ಕೂಡ ಈ ತಿಂಗಳ ಆರಂಭದಲ್ಲಿ ಪ್ರಧಾನಿಯವರಿಗೆ ಮಂಡಿಸಿರುವ ವರದಿಯಲ್ಲಿ ಇಂತಹ ಯೋಜನೆಗೆ ಶಿಫಾರಸು ಮಾಡಿದೆ. ಆದರೆ, ಯೋಜನೆಯನ್ನು ವಿನ್ಯಾಸಗೊಳಿಸುವುದು ಹೇಗೆ? ಅದರ ರೂಪರೇಷೆ ಹೇಗಿರಬೇಕು? ಎಂಬುದೇ ಸವಾಲಿನ ಸಂಗತಿ.
ಪರ – ವಿರೋಧ:ಅನೇಕ ಸರ್ಕಾರಿ ಯೋಜನೆಗಳ ರೀತಿಯಲ್ಲೇ ಯುಬಿಐ ಕೂಡ ಅನುಕೂಲ ಹಾಗೂ ಅನನುಕೂಲಗಳನ್ನು ಹೊಂದಿದೆ. ಅನೇಕ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಗಮನಿಸಿದಾಗ, ಶಾಲಾ ಹಾಜರಾತಿ, ಉದ್ಯೋಗ, ಸಮುದಾಯ ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಗೆ ಈ ಯೋಜನೆ ಕಾರಣವಾಗಿದೆ. ಇದರಿಂದ, ನಿರುದ್ಯೋಗ ಹೆಚ್ಚಳವಾಗಿಲ್ಲ ಮತ್ತು ಮದ್ಯ ಸೇವನೆ ಹೆಚ್ಚಳದಂತಹ ನಕಾರಾತ್ಮಕ ಅಂಶಗಳು ಕಂಡುಬಂದಿಲ್ಲ ಎಂದು ಇದರ ಬೆಂಬಲಿಗರು ಗಮನಸೆಳೆಯುತ್ತಾರೆ. ಪ್ರತಿಯೊಬ್ಬರಿಗೂ ತೆರಿಗೆಗಳನ್ನು ಹೆಚ್ಚಿಸದೆ ರಾಷ್ಟ್ರ್ಯಾಪಿ ಪ್ರಮಾಣದಲ್ಲಿ ವ್ಯವಸ್ಥೆಗೆ ಹಣವನ್ನು ನೀಡಲಾಗುವುದಿಲ್ಲ. ಇದರಿಂದಾಗಿ ಕೆಲವರು ಉದ್ಯೋಗ ಮಾಡಲು ನಿರಾಕರಿಸಬಹುದಾಗಿದೆ. ಉಚಿತ ಆದಾಯವು ಹಣದುಬ್ಬರವನ್ನು ಪ್ರಚೋದಿಸಬಹುದು. ಒಟ್ಟಾರೆ ಜೀವನ ಮಟ್ಟವನ್ನು ಹೆಚ್ಚಿಸುವ ಉದ್ದೇಶಕ್ಕೆ ಹಿನ್ನಡೆ ತರಬಹುದಾಗಿದೆ- ಎಂಬುದು ಈ ಯೋಜನೆಯ ವಿರೋಧಿಗಳ ವಾದ.
ಎಲ್ಲೂ ಜಾರಿಗೆ ಬಂದಿಲ್ಲ:ಪ್ರಸ್ತುತ, ಯಾವುದೇ ದೇಶವು ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿಲ್ಲ. ಆದರೂ ಹಲವಾರು ಸಣ್ಣ ಪ್ರಮಾಣದ ಯೋಜನೆಗಳನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದೆ. ಮಂಗೋಲಿಯಾ ಮತ್ತು ಇರಾನ್​ನಲ್ಲಿ ಅಲ್ಪಾವಧಿಗೆ ಯುಬಿಐ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
ಏನಿದು ಯುಬಿಐ?:ಒಂದು ದೇಶದ ಅಥವಾ ಒಂದು ಭೌಗೋಳಿಕ ಪ್ರದೇಶಕ್ಕೆ ಸೇರಿದ ಎಲ್ಲ ನಾಗರಿಕರಿಗೆ ಅವರ ಆದಾಯ ಸಂಪನ್ಮೂಲ ಅಥವಾ ಉದ್ಯೋಗದ ಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆಯೇ ನಿರ್ದಿಷ್ಟ ಮೊತ್ತದ ಹಣಕಾಸಿನ ನೆರವನ್ನು ಒದಗಿಸುವುದೇ ಸಾರ್ವತ್ರಿಕ ಮೂಲ ಆದಾಯ (ಯುನಿವರ್ಸಲ್ ಬೇಸಿಕ್ ಇನ್​ಕಂ- ಯುಬಿಐ) ಯೋಜನೆ. ಬಡತನ ನಿವಾರಣೆ ಮಾಡುವುದು ಮತ್ತು ನಾಗರಿಕರಲ್ಲಿ ಸಮಾನತೆ ವೃದ್ಧಿಸುವುದು ಈ ಯೋಜನೆಯ ಆಶಯ. ಸರ್ಕಾರವೇ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಪ್ರತಿ ತಿಂಗಳು ನೇರ ನಗದು ವರ್ಗಾವಣೆ ಮಾಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಹಾಗೂ ಆರ್ಥಿಕ ಅಸಮಾನತೆ ನಿವಾರಿಸುವುದು ಈ ಪರಿಕಲ್ಪನೆಯ ಒಟ್ಟಾರೆ ಸಾರ.
2016-17ರಲ್ಲೇ ಪ್ರಸ್ತಾಪ:ಸಾರ್ವತ್ರಿಕ ಮೂಲ ಆದಾಯ ಕಲ್ಪನೆಯು 2016-17ರ ಆರ್ಥಿಕ ಸಮೀಕ್ಷೆಯಲ್ಲಿ ಒಡಮೂಡಿತ್ತು. ಅಂದಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯನ್ ಅವರು ಈ ವರದಿ ಸಿದ್ಧಪಡಿಸಿದ್ದರು. ವೈಯಕ್ತಿಕ ಸಾಮಾಜಿಕ ಭದ್ರತಾ ಯೋಜನೆಗಳ ಹಂಚಿಕೆಯನ್ನು ಕೊನೆಯ ಹಂತದವರೆಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಪ್ರಯತ್ನಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರ್ವತ್ರಿಕ ಮೂಲ ಆದಾಯ ಯೋಜನೆ ಜಾರಿಗೊಳಿಸಬೇಕೆಂದು ಪ್ರಸ್ತಾಪಿಸಲಾಗಿತ್ತು. ಆರೋಗ್ಯ ಸೌಲಭ್ಯಗಳು, ರಸಗೊಬ್ಬರ, ಇಂಧನ, ಆಹಾರ ಸಬ್ಸಿಡಿಗಳು ಮುಂತಾದ ಅನೇಕ ಪ್ರಯೋಜನಗಳ ಬದಲಾಗಿ ಈ ಯೋಜನೆಯ ಮೂಲಕ ಎಲ್ಲ ನಾಗರಿಕರಿಗೆ ಬೇಷರತ್ತಾಗಿ ನಗದು ವರ್ಗಾವಣೆ ಮಾಡಬೇಕೆಂಬ ಸಲಹೆ ಇದರಲ್ಲಿತ್ತು. ವಿವಿಧ ಯೋಜನೆಗಳ ಫಲವು ಸರಿಯಾದ ವ್ಯಕ್ತಿಗೆ ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಶ್ರಮವನ್ನು ಯುಬಿಐನಂತಹ ಯೋಜನೆಯಿಂದ ಕಡಿಮೆಗೊಳಿಸ ಬಹುದು ಎಂಬ ಅಂಶವನ್ನು ಇಲ್ಲಿ ಎತ್ತಿ ತೋರಿಸಲಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಈ ಕಲ್ಪನೆಯು ಸಾರ್ವತ್ರಿಕ ಯೋಜನೆಯ ಬದಲಾಗಿ, ನಿಗದಿತ ವ್ಯಕ್ತಿಗಳನ್ನು ಗುರಿಯಾಗಿಸುವ ಉದ್ದೇಶದ ಯೋಜನೆಯಾಗಿ ರೂಪಿಸಲು ಆಲೋಚಿಸಲಾಯಿತು. ಹೀಗಾಗಿ, ಅನುಷ್ಠಾನದ ಸವಾಲುಗಳು ಹಾಗೂ ಸೂಕ್ತ ಫಲಾನುಭವಿಗಳನ್ನು ಗುರುತಿಸುವಲ್ಲಿ ಸಮಸ್ಯೆಗಳು ಉದ್ಭವಿಸಿದವು. ಲಾಭದ ಮಿತಿಯನ್ನು ನಿಗದಿಪಡಿಸಿದಾಗ ಮತ್ತು ಯೋಜನೆಯ ಲಾಭವನ್ನು ನಿರ್ದಿಷ್ಟ ಗುಂಪುಗಳಿಗೆ ಸೀಮಿತಗೊಳಿಸಿದಾಗ ಸಮಸ್ಯೆಗಳು ಕಾಣಿಸಿಕೊಂಡವು. ಎಲ್ಲ ನಾಗರಿಕರನ್ನು ಒಳಗೊಂಡಿರುವ ಯೋಜನೆಗಳಿಗೆ ನಿರ್ದಿಷ್ಟ ಬಜೆಟ್ ನಿಗದಿಪಡಿಸುವ ಬದಲಾಗಿ, ವಿವಿಧ ವಿಭಾಗಗಳಿಗೆ ಮಿತಿಯನ್ನು ನಿಗದಿಪಡಿಸಬೇಕಾದಾಗ, ಹಣಕಾಸಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿರ್ದಿಷ್ಟ ಫಲಾನುಭವಿಗಳಿಗೆ ರೂಪಿಸಿದರೆ ಇಂತಹ ಯೋಜನೆ ಯನ್ನು ಸಾರ್ವತ್ರಿಕ ಎಂದು ಕರೆಯಲಾಗದು. ಇನ್ನು ಯುಬಿಐ ಜಾರಿಗೊಳಿಸಬೇಕಾದರೆ, ಮತ್ತೊಂದು ಸುತ್ತಿನ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಅಗತ್ಯವಿದೆ.
ಜುಕರ್​ಬರ್ಗ್, ಮಸ್ಕ್ ಬೆಂಬಲ:ಕ್ಷೀಣಿಸುತ್ತಿರುವ ಉದ್ಯೋಗಾವಕಾಶಗಳಿಂದ ಉಂಟಾದ ಬಿಕ್ಕಟ್ಟು ತಗ್ಗಿಸಲು ಈ ಕಾರ್ಯಕ್ರಮ ಪರಿಹಾರವಾಗಿದೆ ಎಂದು ಹಲವರು ಪರಿಗಣಿಸುತ್ತಾರೆ. ಬಡತನ ನಿಮೂಲನೆಗೆ ಪರಿಣಾಮಕಾರಿ ಸಾಧನ ಇದಾಗಿದೆ ಎಂಬ ಅಭಿಪ್ರಾಯವೂ ಇದೆ. ಈ ಯೋಜನೆಯ ಬೆಂಬಲಿಗರಲ್ಲಿ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಪೀಟ್ ಡೈಮಂಡ್, ಕ್ರಿಸ್ಟೋಫರ್ ಪಿಸ್ಸಾರಿಡ್ಸ್್ಸ ಟೆಕ್ ದಿಗ್ಗಜರಾದ ಮಾರ್ಕ್ ಜುಕರ್​ಬರ್ಗ್ ಮತ್ತು ಎಲನ್ ಮಸ್ಕ್ ಮುಂತಾದವರು ಸೇರಿದ್ದಾರೆ.
ವಾರ್ಷಿಕ 15.6 ಲಕ್ಷ ಕೋಟಿ ರೂ. ಅಗತ್ಯ:ಮೂಲ ಸ್ವರೂಪದಲ್ಲಿ ಪರಿಗಣಿಸುವುದಾದರೆ ಯುಬಿಐ ಎಲ್ಲ ಭಾರತೀಯ ನಾಗರಿಕರಿಗೆ ಅನ್ವಯವಾಗುವ ಯೋಜನೆಯಾಗಿದೆ. ಹೀಗಾಗಿ, ಬೃಹತ್ ಗಾತ್ರದ ಈ ಯೋಜನೆ ಕಾಲಾನುಕ್ರಮದಲ್ಲಿ ಅಸ್ಥಿರಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ದೇಶದ ಹಣಕಾಸು ಪರಿಸ್ಥಿತಿಯನ್ನು ಹದಗೆಡಿಸಬಹುದಾಗಿದೆ. ದಶಕಗಳಷ್ಟು ಹಳೆಯದಾದ ನಗರ ಬಡತನ ರೇಖೆಯ ಮಾನದಂಡವಾದ ಪ್ರತಿ ತಿಂಗಳಿಗೆ 1000 ರೂಪಾಯಿ ಆದಾಯವನ್ನೇ ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿದರೂ, 130 ಕೋಟಿ ನಾಗರಿಕರಿಗೆ ಈ ಯೋಜನೆ ಜಾರಿಗೊಳಿಸಲು ಪ್ರತಿ ವರ್ಷ ಸರ್ಕಾರಕ್ಕೆ 15.6 ಟ್ರಿಲಿಯನ್ (ಅಂದರೆ, 15.6 ಲಕ್ಷ ಕೋಟಿ) ರೂಪಾಯಿ ಹಣ ಬೇಕಾಗುತ್ತದೆ. ‘ಭಾರತವು ಇಷ್ಟೊಂದು ಅಗಾಧ ಪ್ರಮಾಣದ ಸಂಪನ್ಮೂಲಗಳನ್ನು ಹೊಂದಿಲ್ಲ. ಆದ್ದರಿಂದ ಇಂತಹ ಕಲ್ಪನೆಯನ್ನು ಕಾರ್ಯಗತಗೊಳಿಸಬಹುದು ಎಂಬುದನ್ನು ಪರಿಗಣಿಸುವ ಮೊದಲು ಸರ್ಕಾರದ ಹಣಕಾಸು ಪರಿಸ್ಥಿತಿ ಸಾಕಷ್ಟು ಸುಧಾರಿಸಬೇಕಾಗುತ್ತದೆ’ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − thirteen =
Remember me
