ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಯೋಗ ಕುರಿತು ‘ಸಮತ್ವಂ ಯೋಗ ಉಚ್ಯತೇ’ ಎಂದಿರುವನು. ನಮ್ಮ ದಿನಚರಿಯಲ್ಲಿ ವ್ಯಕ್ತಿತ್ವ, ಸ್ವಭಾವ, ಗುಣ- ನಡತೆಯಲ್ಲಿ ದ್ವಂದ್ವತೆಯಿಂದ ಸಮತ್ವವನ್ನು ಸಂತುಲನವನ್ನು ಕಂಡುಕೊಳ್ಳುವ ಉಪಾಯವನ್ನು ಯೋಗದಿಂದ ಪಡೆಯಬಹುದೆಂಬ ರಹಸ್ಯವನ್ನು ತಿಳಿಸಿರುವನು.
ಸೃಷ್ಟಿಯ ಅದ್ಭುತದಲ್ಲೊಂದಾದ ಮಾನವ ಮಿದುಳಿನ ಎಡ-ಬಲ ಗೋಳಾರ್ಧದ ಸಾಮರ್ಥ್ಯವನ್ನು ಸಂತುಲನಗೊಳಿಸುವ ಸರಳ-ಸಾಂಪ್ರದಾಯಿಕ ಸನಾತನ ನೆಲಕಲೆ ರಂಗೋಲಿ. ಇದನ್ನು ರಂಗವಲ್ಲಿ, ಮುಗುವು, ರಂಗ ಎಂದು ಕರೆಯಲಾಗುತ್ತದೆ. ರಂಗ ಎಂದರೆ ಬಣ್ಣ, ಆವಳ್ಳಿ ಎಂದರೆ ಬಳ್ಳಿಗಳು. ರಂಗ ಆವಳಿ ಎಂದರೆ ಬಣ್ಣಗಳ ಸಾಲು. ಕೇರಳದಲ್ಲಿ ಕೊಲ್ಲಂ, ಉತ್ತರಭಾರತದಲ್ಲಿ ಚೌಕಪೂರ್ಣ, ರಾಜಸ್ಥಾನದಲ್ಲಿ ಮದನ, ಬಿಹಾರದಲ್ಲಿ ಅರಿಪಾನ, ಬಂಗಾಳದಲ್ಲಿ ಅಲ್ಪಿನ ಎನ್ನುವರು.
ರಂಗೋಲಿಯಲ್ಲಿ ಅಕ್ಕಿಹಿಟ್ಟು, ಕಲ್ಲಿನ ಪುಡಿ, ಗುಲಾಲ್, ಹೂವಿನ ಎಸಳು, ಹಳದಿ ಕುಂಕುಮ, ಕಾಳುಗಳನ್ನು ಬಳಸಿ ತ್ರೀಡಿ, ಶೇಡಿಂಗ್, ಫ್ರೀ ಹ್ಯಾಂಡ್ ಶೈಲಿಯಲ್ಲಿ ರಚನಾತ್ಮಕವಾಗಿ ಬಿಡಿಸುತ್ತಾರೆ. ಗೋಕುಲಾಷ್ಟಮಿ, ಪೊಂಗಲ್, ದೀಪಾವಳಿ, ಲಕ್ಷ್ಮೀ ಪೂಜೆ ಯಂತಹ ಹರಿದಿನಗಳಲ್ಲಿ ಶ್ರೀಲಕ್ಷ್ಮೀಯಾಗಲಿ, ಶ್ರೀಕೃಷ್ಣನಾಗಲೀ ಮನೆಯೊಳಗೆ ಸ್ವಾಗತಿಸುವ, ಬರುವ ಪುಟ್ಟ ಪಾದಗಳ ರಂಗವಲ್ಲಿ ಮನಮೋಹಕವಾಗಿದೆ. ಜತೆಗೆ ಬಯಲಲ್ಲಿ ವೈಭವದ ರಂಗೋಲಿ ಮಧ್ಯೆ ಗೋವುಗಳನ್ನು ಕಟ್ಟಿ ನೃತ್ಯ ಮಾಡುವ ಸಂಪ್ರದಾಯವಿದೆ. ಅತಿಥಿ-ಅಭ್ಯಾಗತರನ್ನು ಸ್ವಾಗತಿಸುವ, ಲವಲವಿಕೆ ಸಂತೋಷ ಸಂಭ್ರಮಿಸುವ ಕುರುಹಾಗಿದೆ ರಂಗೋಲಿ. ಈಗಂತೂ ರಂಗೋಲಿಯ ಮುದ್ರಿತ ಪ್ಲಾಸ್ಟಿಕ್ ಹಾಳೆಗಳು ಬಂದುಬಿಟ್ಟಿವೆ. ಅದನ್ನು ಅಂಟಿಸಿಬಿಟ್ಟರೆ ಆಯಿತು. ಸೌಕರ್ಯ, ಸಮಯ, ಉಳಿತಾಯ ದೃಷ್ಟಿಯಿಂದ ಸರಿ ಎನಿಸಿದರೂ ರಂಗವಲ್ಲಿ ಪುಡಿಯಿಂದ ಬರೆದ ಚಿತ್ರಗಳ ಮೆರಗು ಇವಕ್ಕಿಲ್ಲ. ಅಲ್ಲಿ ಜೀವಂತಿಕೆ, ಚಿಂತನೆ ಎರಡೂ ಇದೆ. ತಾಯಿ ಅಜ್ಜಿ, ಅಕ್ಕಂದಿರು ಹಾಕುವ ರಂಗೋಲಿ ಕಂಡು ಮನೆಯಲ್ಲಿ ಪುಟ್ಟ ಮಕ್ಕಳು ಸಹಜವಾಗಿ ತಾವೂ ಕಲಿಯತೊಡಗುತ್ತಾರೆ. ಸಂಪ್ರದಾಯ ಮುಂದುವರಿಯುತ್ತದೆ.
ಅದ್ಭುತ ಮಿದುಳು:ಜೀವ ಜಗತ್ತಿನಲ್ಲಿ ಮನುಷ್ಯನಿಗೆ ಅಗ್ರಪಟ್ಟ. ಕಾರಣ ಉತ್ಕೃಷ್ಟ- ಸಂಕೀರ್ಣ ಮಿದುಳನ್ನು ಹೊಂದಿರುವುದು. ಮಾನವ ಮಿದುಳು ಭಗವಂತನ ಅದ್ಭುತ ಸೃಷ್ಟಿಯಲ್ಲೊಂದು. ಇದೊಂದು ಜೀವ ಜಗತ್ತಿನ ಅಚ್ಚರಿ. ದೇಹದ ಎಲ್ಲ ಚಟುವಟಿಕೆಗಳನ್ನು ಸದಾ ನಿರ್ದೇಶಿಸುವ – ನಿಯಂತ್ರಿಸುವ ಮಹಾ ನಿರ್ದೇಶಕ. ಸುಮಾರು 100 ಮಿಲಿಯನ್ ನರಕೋಶಗಳನ್ನು, ಇನ್ನೆಷ್ಟೋ ಅಧಿಕ ಪಟ್ಟು ನ್ಯೂರೋಗ್ಲಿಯಾ ಎನ್ನುವ ಅಂಟುಕೋಶಗಳನ್ನು, ಅಸಂಖ್ಯಾತ ನರತಂತುಗಳನ್ನು ತನ್ನ ಸಾಮ್ರಾಜ್ಯದಲ್ಲಿ ಹೊಂದಿರುವ ಮಿದುಳಿನ ಬಗ್ಗೆ ಅರಿತುಕೊಳ್ಳಲು ನಮಗೆ ನಮ್ಮ ಮಿದುಳೇ ಸಹಕಾರಿ. ಹತ್ತು ಸಾವಿರ ಕೋಟಿ ನರಕೋಶಗಳನ್ನು ಹೊಂದಿರುವ ಮಾನವ ಮಿದುಳು ಶಿರಭಾಗದಲ್ಲಿ ಆಸಿನವಾಗಿರುವ ದೊರೆಯಾಗಿದೆ. ನಾವು ಸೂಸುವ ಮಂದಹಾಸದಿಂದ ಹಿಡಿದು ನಮ್ಮ ಭಂಗಿ, ನಡೆನುಡಿ, ಚಲನೆ, ಆಲೋಚನೆ, ವರ್ತನೆ ಎಲ್ಲವೂ ನಮ್ಮ ಮಿದುಳಿನ ಅಧೀನ. ಮಿದುಳು ಕೇಂದ್ರೀಯ, ಪರಿಧಿಯ, ಮಿದುಳು ಬಳ್ಳಿ, ಅನುವೇದನಾ ಹಾಗೂ ಉಪಾನುವೇದನಾ ಎಂಬ ವ್ಯವಸ್ಥಿತ ಸ್ವಾಯತ್ತ ನರಮಂಡಲವನ್ನು ಹೊಂದಿದೆ. ಮುಖ್ಯವಾಗಿ ಮುಮ್ಮಿದುಳು, ನಡು ಮತ್ತು ಹಿಮ್ಮಿದುಳು ಎಂಬ ಭಾಗಗಳಿವೆ. ಇವುಗಳಲ್ಲಿ ಮಿದುಳನ್ನು ಎರಡು ಗೋಳಾರ್ಧವಾಗಿ ಎಡ ಮಿದುಳು ಹಾಗೂ ಬಲಮಿದುಳಾಗಿ ವಿಂಗಡಿಸಲಾಗಿದೆ.
ಎಡ-ಬಲ ಮಿದುಳು:ಎಡ ಮಿದುಳು ತರ್ಕ, ವಿಶ್ಲೇಷಣೆ, ಗಣಿತ- ಲೆಕ್ಕಾಚಾರ, ಅನುಕ್ರಮ ಜೋಡಣೆ, ಭಾಷೆ, ಸತ್ಯಾಂಶಗಳು, ಶಬ್ದಗಳ ಮುಖೇನ ಯೋಚನೆ, ಹಾಡುಗಳ ಶಬ್ದಗಳ, ಎಣಿಕೆಗಳ ಸಾಮರ್ಥ್ಯವನ್ನು ಪಡೆದಿದೆ. ಬಲ ಮಿದುಳು ಸೃಜನಶೀಲತೆ, ಕಲ್ಪನೆ, ಸಮಗ್ರ ಚಿಂತನೆ, ಅಂತಃಸ್ಪುರಣ ಕಲಾ ಚಾತುರ್ಯ, ತಾಳ ಜ್ಞಾನ, ಲಯ ಬದ್ಧ ಬಾರಿಸುವಿಕೆ, ಕ್ರಿಯಾಶೀಲತೆ ಮೊದಲಾದವುಗಳನ್ನು ಹೊಂದಿದೆ. ಪ್ರತಿಯೊಬ್ಬರಲ್ಲಿ ಎಡ-ಬಲ ಮಿದುಳಿನ ಸಾಮರ್ಥ್ಯದಲ್ಲಿ ಸಾಮ್ಯತೆ, ಸಮನ್ವಯ, ಸಾಮರಸ್ಯ, ಸಂತುಲನ ಸರಿಯಾಗಿದ್ದಾಗ ಸರ್ವಾಂಗೀಣ ವ್ಯಕ್ತಿತ್ವ ವಿಕಾಸ ಸಾಧ್ಯ. ಇಂತಹ ಸಮವಿಕಾಸವನ್ನು ಹೊಂದಲು ರಂಗೋಲಿ ಕಲೆಯ ಅಭ್ಯಾಸ ಪರಿಣಾಮಕಾರಿ ಸಾಧನ.
ರಂಗೋಲಿ ಗಣಿತ:ಪ್ರತಿಯೊಂದು ರಂಗೋಲಿಯಲ್ಲಿ ಗಣಿತದ ಲೆಕ್ಕಾಚಾರವಾದ ಸಮ್ಮಿತಿ-ಜ್ಯಾಮಿತಿ, ನೇರ ರೇಖೆ ಅಥವಾ ಅಲೆಯಂತೆ, ಅಂಚುಗಳಲ್ಲಿ ದುಂಡಾದ ವೃತ್ತಗಳಿಂದ ಚಿತ್ರಿಸಲಾಗುತ್ತದೆ. ತ್ರಿಕೋನ, ಚೌಕ, ಆಯತಗಳು, ವೃತ್ತಗಳು ಮತ್ತು ಅರ್ಧವೃತ್ತಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇವೆಲ್ಲವನ್ನೂ ಅಂದಾಜಿಸುವ ಲೆಕ್ಕಾಚಾರ ಮಾಡುವ ಕೆಲಸ ಎಡಮಿದುಳಿನದು. ಎಡ ಮಿದುಳಿನಲ್ಲಿ ಕಲ್ಪಿಸಿದ, ಚಿಂತಿಸಿದ, ಲೆಕ್ಕಾಚಾರ ಹಾಕಿದ ಚಿತ್ರವು ಬಲಮಿದುಳಿನಲ್ಲಿ ಕಲಾತ್ಮಕ- ಸೃಜನಾತ್ಮಕ ಭಾವನಾತ್ಮಕ ಧನಾತ್ಮಕ ದೈವೀ ಚಿಂತನೆಯೊಂದಿಗೆ ಪ್ರಕಟಗೊಂಡು ರಂಗೋಲಿ ರೂಪದಲ್ಲಿ ಸಾಕಾರಗೊಳ್ಳುವುದು. ರಂಗೋಲಿಯು ಮಾನವನ ಅದ್ಭುತ ಎಡ-ಬಲ ಮಿದುಳನ್ನು ಸಂತುಲನಗೊಳಿಸುವ ಜ್ಞಾನ-ವಿಜ್ಞಾನವಾಗಿದೆ.
(ಪ್ರತಿಕ್ರಿಯಿಸಿ:[email protected])
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:six + fifteen =
Remember me
