ಹೊಸಪೇಟೆ:ಹಿಂದು ಸಾಮ್ರಾಜ್ಯ ಸಂಸ್ಥಾಪಕ ವಿದ್ಯಾರಣ್ಯರು ಬೆನ್ನೆಲುಬಾಗಿ ನಿಂತ ವಿಜಯನಗರ (ಹಂಪಿ)ದ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡ ನೆಲದಲ್ಲಿ ವಿಧಾನಸಭೆ 2023ರ ವಿಧಾನಸಭೆ ಚುನಾವಣೆಗೆ ಆಡಳಿತ ಬಿಜೆಪಿ ರಣಕಹಳೆ ಮೊಳಗಿಸಿದೆ. ಭಟ್ರಹಳ್ಳಿ ಆಂಜನೇಯ ಮೈದಾನದಲ್ಲಿ ಆಯೋಜಿಸಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ಎರಡು ದಿನಗಳ ಸಭೆಯ ಮೊದಲ ದಿನವಾದ ಶನಿವಾರವೇ ವರಿಷ್ಠರ ನಿರ್ದೇಶನ, ಜವಾಬ್ದಾರಿ ಮತ್ತು ಸಂಕಲ್ಪವು ಅನಾವರಣವಾಯಿತು. ರಾಜ್ಯದ ಗೆಲುವು 2024ರ ಲೋಕಸಭೆ ಚುನಾವಣೆಗೆ ಸೋಪಾನವಾಗಲಿದೆ. ಕಳೆದ ಬಾರಿ ಒಂದು ಓಟಿಗೆ ಎರಡು ಸರ್ಕಾರ ಬರಲಿದೆ ಎಂದು ಪ್ರಚಾರ ಮಾಡಲಾಗಿತ್ತು. ಈ ಬಾರಿ ಮಿಷನ್ 150 ಜತೆಗೆ ಡಬಲ್ ಇಂಜಿನ್ ಸರ್ಕಾರ ಮರುಸ್ಥಾಪನೆ ಲಕ್ಷ್ಯದೊಂದಿಗೆ ರಣರಂಗಕ್ಕೆ ಇಳಿಯಲಿರುವುದನ್ನು ಈ ಸಭೆ ಮೂಲಕ ಸಾರಿದೆ.
ವಿಜಯನಗರ ಯಾತ್ರೆ:ಹಿಂದು ಸಮಾಜದ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ವಿಜಯನಗರ ಸಾಮ್ರಾಜ್ಯದಿಂದಲೇ ಪಕ್ಷದ ವಿಜಯಯಾತ್ರೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಿಸುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗಾಗಿ ಪ್ರತಿಸ್ಪರ್ಧಿಗಳಿಗೆ ರಣವೀಳ್ಯ ನೀಡಿದರು. ಕಾರ್ಯಕಾರಿಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿಯ ಆಧಾರದಲ್ಲಿ ಮುಂದಿನ ಚುನಾವಣೆ ಎದುರಿಸಲಿದ್ದೇವೆ. ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟು, ವೋಟು ಕೇಳುತ್ತೇವೆ ಎಂದರು.
ಗುಟುರು:ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಲು ಕಾಂಗ್ರೆಸ್ ಹವಣಿಸುತ್ತಿದ್ದು, ಪೊಲೀಸ್ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಕನಿಷ್ಠ ಎಫ್​ಐಆರ್ ದಾಖಲು ಮಾಡದ ಆ ಪಕ್ಷಕ್ಕೆ ನೈತಿಕತೆ ಎಲ್ಲಿದೆ ಎಂದು ಕುಟುಕಿದರು. ದೇಶದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಹುಲ್ಲುಕಡ್ಡಿ ಸಹಾಯವಾಗಿರುವ ಕರ್ನಾಟಕದಿಂದ ಮೇಲೇಳಲು ಪ್ರಯತ್ನಿಸಿದ್ದು, ಇಲ್ಲಿಯೂ ಮುಳು ಗಲಿದೆ ಎಂದು ವಾಗ್ದಾಳಿ ನಡೆಸಿದರು. ಹಾಸಿಗೆ-ದಿಂಬು, ಅರ್ಕಾವತಿ ಬಡಾವಣೆ, ಸ್ಟೀಲ್ ಬ್ರಿಜ್ ಹೀಗೆ ಹಗರಣಗಳ ಸರಮಾಲೆಯೇ ಕಾಂಗ್ರೆಸ್ ಅನ್ನು ಸುತ್ತಿಕೊಂಡಿದೆ. ಇವೆಲ್ಲವನ್ನು ದಾಖಲೆ ಸಹಿತ ಬಯಲಿಗೆಳೆದು ಮುಖವಾಡ ಕಳಚಲಿದ್ದು, ಸತ್ಯ ಎದುರಿಸಲು ತಯಾರಾಗಿರಿ ಎಂದು ಕೈನಾಯಕರ ವಿರುದ್ಧ ಗುಟುರು ಹಾಕಿದರು.
ಅರ್ಧದಾರಿಗೆ ವಾಪಸ್:ಕಂಪ್ಲಿಯಲ್ಲಿ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಸಿಎಂ ಬೊಮ್ಮಾಯಿ ಪ್ರಯಾಣ ಬೆಳೆಸಿದ್ದರು. ಆದರೆ ಕಾರ್ಯಕಾರಿಣಿ ಅಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಷಣ ಆರಂಭಿಸಿದ್ದಾರೆಂದು ತಿಳಿದ ತಕ್ಷಣ ಮುಂದಿನ ಪ್ರಯಾಣ ಮೊಟುಕುಗೊಳಿಸಿ ಮರಳಿದರು.
ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ಸ್ಪಷ್ಟವಾಗಿದೆ. ಗುತ್ತಿಗೆದಾರ ಸಂತೋಷ್ ಸಾವಿನ ಕುರಿತು ಎಲ್ಲ ಆಯಾಮಗಳಿಂದ ತನಿಖೆ ನಡೆಯಬೇಕಿದ್ದು, ನಂತರ ನಾಡಿಗೆ ಸತ್ಯಾಂಶ ಗೊತ್ತಾಗಲಿದೆ.
|ಅರುಣ್ ಸಿಂಗ್ಬಿಜೆಪಿ ರಾಜ್ಯ ಉಸ್ತುವಾರಿ
ಮಿಷನ್ 150 ವಿಚಾರದ ಮೇಲೆ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಎರಡು ದಿನಗಳ ಕಾಲ ಚರ್ಚೆಯಾಗಲಿದೆ. ಕೇಂದ್ರ, ರಾಜ್ಯ ಸರ್ಕಾರದ ಪ್ರಗತಿ ಕಾರ್ಯಕ್ರಮಗಳು, ಸಾಧನೆಗಳನ್ನು ಜನರ ಮುಂದಿಡುತ್ತೇವೆ.
|ಬಿ.ಎಸ್.ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
ಮುಂದಿನ ಚುನಾವಣೆಗೆ ಆಂಜನೇಯನ ಆಶೀರ್ವಾದ ಪಡೆಯಲೆಂದು ಕಿಷ್ಕಿಂದೆ ನಾಡಿನಲ್ಲಿ ಹನುಮ ಜಯಂತಿ ದಿನವೇ ಮಹತ್ವದ ಸಭೆಗೆ ಚಾಲನೆ ನೀಡಿದ್ದೇವೆ. ವಿಜಯನಗರದಿಂದ ಪಕ್ಷದ ವಿಜಯಯಾತ್ರೆ ಶುರುವಾಗಲಿದ್ದು, ಲಂಕೇಶನ ಅಹಂಕಾರಕ್ಕೆ ಬೆಂಕಿಯಿಡಲಿದೆ. 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಜಯಭೇರಿ ಬಾರಿಸಿ ದಕ್ಷಿಣ ಭಾರತಕ್ಕೆ ಉತ್ತಮ ಸಂದೇಶ ನೀಡಲಿದೆ.
|ಬಿಜೆಪಿ ರಾಜ್ಯಾಧ್ಯಕ್ಷ
ಜೆ.ಪಿ.ನಡ್ಡಾ ಇಂದು ಭಾಗಿ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾನುವಾರ ಮಧ್ಯಾಹ್ನ 12.30ಕ್ಕೆ ಸಮಾರೋಪ ಭಾಷಣ ಮಾಡಲಿದ್ದು, ಸಂಜೆ 5ಕ್ಕೆ ಏರ್ಪಡಿಸಿರುವ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊಸಪೇಟೆಯಲ್ಲಿ ತಂಗಲಿದ್ದು, ಸೋಮವಾರ ಬೆಳಗ್ಗೆ 6.30ರಿಂದ ಸಂಜೆವರೆಗೆ ಹಂಪಿ, ಅಂಜನಾದ್ರಿ ಸುತ್ತಮುತ್ತಲ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ರಾಜ್ಯ ಬಿಜೆಪಿ ನಾಯಕರಿಗೆ ಪಾಠ:ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಮೋದಿ ಸರ್ಕಾರದ ವಿಕಾಸ ಮಂತ್ರ ಕರ್ನಾಟಕದ ಜಯಕ್ಕೂ ಮಾರ್ಗಸೂಚಿ ಎಂಬುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರತಿಪಾದಿಸಿದರು. ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಸ್ವಚ್ಚ, ದಕ್ಷ, ಪ್ರಾಮಾಣಿಕ, ಪಾರದರ್ಶಕ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾದರಿ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವರ ಕಾರ್ಯಕ್ಷಮತೆ, ಅರ್ಪಣಾ ಮನೋಭಾವ ಪಾರ್ಟಿ ವಿತ್ ಡಿಫರೆಂಟ್ ಎಂಬುದಕ್ಕೆ ನಿದರ್ಶನ ಎಂದು ಹೇಳುತ್ತಲೇ, ಅವರ ಅನುಸರಣೆ ಆಗಬೇಕೆಂಬುದನ್ನು ಪರೋಕ್ಷವಾಗಿ ರಾಜ್ಯ ನಾಯಕರಿಗೆ ತಿಳಿಹೇಳಿದರು. ಭ್ರಷ್ಟಾಚಾರಮುಕ್ತ ಆಡಳಿತ ಮಾತನ್ನು ಕೃತಿಗೂ ತಂದ ಮೋದಿ ಆದರ್ಶ ಪಾಲನೆ ಪ್ರತಿಯೊಬ್ಬರ ಕರ್ತವ್ಯ ಎಂದರಲ್ಲದೆ, ಕಾರ್ಯಕರ್ತರ ನಡವಳಿಕೆಯನ್ನೇ ಪಕ್ಷದ ವಿಶ್ವಾರ್ಸಾಹತೆ ಅವಲಂಬಿಸಿದೆ ಎಂದು ಹೇಳಿದರು. ಈಶ್ವರಪ್ಪ ಅವರನ್ನು ಸಿಕ್ಕಿಹಾಕಿಸಲು ಹೂಡಿದ ಷಡ್ಯಂತ್ರ ಬೇಧಿಸಲು ಎಲ್ಲ ಆಯಾಮದಿಂದಲೂ ತನಿಖೆ ನಡೆಯಲಿ, ಕಾಮಗಾರಿ ನಿರ್ವಹಿಸಿದ 108 ಗುತ್ತಿಗೆದಾರರು ಒಂದಾಗಿ 40 ಪರ್ಸೆಂಟ್ ಬಗ್ಗೆ ಆರೋಪಿ ಸುವುದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರ ನಿಲ್ಲುವುದು ಏನನ್ನು ತೋರಿಸುತ್ತದೆ ಎಂದು ಪ್ರಶ್ನಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + ten =
Remember me
