ಹುಬ್ಬಳ್ಳಿ:ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸುದ್ದಿವಾಹಿನಿ ಹಬ್ಬದ ದಿನಗಳಲ್ಲಿ ನಡೆಸಿದ ‘ವಿಜಯೋತ್ಸವ-2020’ ಶಾಪಿಂಗ್ ಉತ್ಸವದ ಅದೃಷ್ಟಶಾಲಿಗಳ ಆಯ್ಕೆಯು ಶುಕ್ರವಾರ ಇಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರ ಸಮ್ಮುಖದಲ್ಲಿ ನೆರವೇರಿತು.
ನಗರದ ಖಾಸಗಿ ಹೋಟೆಲ್​ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಬ್ಯೂರೋಗೆ (ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳು) ಸೀಮಿತವಾಗಿ 550 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು. ಒಂದೊಂದು ಕಾರ್, ಬೈಕ್, ವಾಷಿಂಗ್ ಮಷಿನ್, ಫ್ರಿಜ್, 3 ಗ್ರಾಂ ಚಿನ್ನದ ನಾಣ್ಯ ಹಾಗೂ ಆರು ವಾಚ್​ಗಳು, 1 ಗ್ರಾಂ ತೂಕದ 29 ಚಿನ್ನದ ನಾಣ್ಯ ಸೇರಿ ಹಲವು ಬಹುಮಾನಗಳು ಅದೃಷ್ಟಶಾಲಿಗಳ ಪಾಲಾದವು.
ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವರ್ಲ್ಡ್ ಸ್ಕೆ್ವೕರ್ ಗ್ರುಪ್​ನ ವ್ಯವಸ್ಥಾಪಕ ನಿರ್ದೇಶಕ ಯೋಗೇಶ ಹಬೀಬ, ಪತಂಜಲಿ ಯೋಗಪೀಠದ ದಕ್ಷಿಣ ಭಾರತ ಪ್ರಭಾರಿ ಭವರಲಾಲ ಆರ್ಯ ಅವರು ಕೂಪನ್ ಎತ್ತುವ ಮೂಲಕ ಅದೃಷ್ಟಶಾಲಿಗಳ ಹೆಸರನ್ನು ಘೊಷಿಸಿದರು. ವಿಜಯೋತ್ಸವ-ಶಾಪಿಂಗ್ ಉತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲ ವಾಣಿಜ್ಯ ಮಳಿಗೆಗಳಿಂದ ಬಂದಿದ್ದ ಲಕ್ಷಾಂತರ ಕೂಪನ್​ಗಳನ್ನು ಒಂದೆಡೆ ಸೇರಿಸಿ ಲಕ್ಕಿ ಡಿಪ್ ನಡೆಸಲಾಯಿತು. ಸತತ 7ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ ಇದಾಗಿತ್ತು.
ವ್ಯಾಪಾರ-ವಹಿವಾಟಿಗೆ ಉತ್ತೇಜನ: ಅದೃಷ್ಟಶಾಲಿಗಳ ಆಯ್ಕೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ವಿಜಯೋತ್ಸವ-2020 ಶಾಪಿಂಗ್ ಉತ್ಸವ ವ್ಯಾಪಾರ-ವಹಿವಾಟಿಗೆ ಉತ್ತೇಜನಕಾರಿಯಾಗಿದೆ. ಬಹುಮಾನ ವಿಜೇತರಾದ ಕುಟುಂಬಗಳ ಜನರ ಮುಖದಲ್ಲಿ ಸಂತಸ ಮೂಡಿಸಿದೆ. ಕೋವಿಡ್ ಸಂದರ್ಭದಲ್ಲೂ ಇಂಥದೊಂದು ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಡಾ. ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಅವರು ವಿಆರ್​ಎಲ್ ಸಂಸ್ಥೆಯನ್ನು ಉನ್ನತ ಸ್ಥಾನದತ್ತ ಕೊಂಡೊಯ್ಯುವ ಮೂಲಕ ಜಾಗತಿಕ ಮಟ್ಟದಲ್ಲಿ ಹುಬ್ಬಳ್ಳಿಯನ್ನು ಗುರುತಿಸುವಂತೆ ಮಾಡಿದ್ದಾರೆ. ಹುಬ್ಬಳ್ಳಿ -ಧಾರವಾಡ ಅವಳಿ ನಗರವು ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ವಿಆರ್​ಎಲ್ ಪಾತ್ರ ಮಹತ್ವದ್ದಾಗಿದೆ. ಯುವ ಉದ್ಯಮಿಗಳು ವಿಜಯ ಸಂಕೇಶ್ವರ ಅವರಂತೆ ಬೆಳೆಯಬೇಕೆಂದು ಬಯಸುತ್ತಾರೆ. ಅವರ ಆದರ್ಶ, ಶಿಸ್ತುಬದ್ಧ ಬದುಕು ಅನುಕರಣೀಯ ಎಂದರು.
ಜನರ ಬೆಂಬಲವೇ ಕಾರಣ:ವಿಆರ್​ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಮಾತನಾಡಿ, ವಿಜಯವಾಣಿ ದಿನಪತ್ರಿಕೆ ಹಾಗೂ ದಿಗ್ವಿಜಯ ಸುದ್ದಿವಾಹಿನಿಯು ಕಡಿಮೆ ಅವಧಿಯಲ್ಲಿ ಇಷ್ಟೊಂದು ಬೆಳವಣಿಗೆ ಕಾಣಲು ಜನರ ಬೆಂಬಲವೇ ಕಾರಣ ಎಂದು ಹೇಳಿದರು.
2012ರಲ್ಲಿ ಆರಂಭಗೊಂಡ ವಿಜಯವಾಣಿಯು ಜನರ ಸಹಕಾರ ದಿಂದಲೇ ನಂ.1 ಕನ್ನಡ ದಿನಪತ್ರಿಕೆಯಾಗಿ ಬೆಳೆದಿದೆ. ದಿಗ್ವಿಜಯ ಸುದ್ದಿವಾಹಿನಿಯು ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ 3ಡಿ ತಂತ್ರಜ್ಞಾನ ಅಳವಡಿಸಿಕೊಂಡ ಮೊದಲ ಸುದ್ದಿವಾಹಿನಿಯಾಗಿದೆ. ನವೆಂಬರ್​ನಲ್ಲಿ ವಿವಿಧ ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟದ 7 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದು ದಿಗ್ವಿಜಯ ವಾಹಿನಿಯ ಬದ್ಧತೆ, ಸ್ಪಷ್ಟತೆ ಹಾಗೂ ಗುಣಮಟ್ಟಕ್ಕೆ ಸಾಕ್ಷಿ ಎಂದರು.
ಈ ಮೊದಲು 68-70 ಲಕ್ಷ ಇದ್ದ ವಿಜಯವಾಣಿ ಇಂಟರ್​ನೆಟ್ ಪೇಜ್​ನ ವೀಕ್ಷಣೆಯು ಲಾಕ್​ಡೌನ್ ಅವಧಿಯಲ್ಲಿ 2.43 ಕೋಟಿಗೆ ತಲುಪಿದೆ. ಅಮೆರಿಕ, ಲಂಡನ್, ಸಿಂಗಾಪುರ, ಆಸ್ಟ್ರೇಲಿಯಾ ಸೇರಿ ವಿಶ್ವದಾದ್ಯಂತ ಪತ್ರಿಕೆಯ ಇಂಟರ್​ನೆಟ್ ಪೇಜ್ ವೀಕ್ಷಣೆ ಹೆಚ್ಚಾಗಿದೆ. ಫೇಸ್​ಬುಕ್ ಇನ್​ಸೈಟ್ಸ್ ಡೇಟಾ ಪ್ರಕಾರ ಡಿಸೆಂಬರ್ ಮೊದಲ ವಾರದ ಫೇಸ್​ಬುಕ್ ಎಂಗೇಜ್​ವೆುಂಟ್​ನಲ್ಲಿ ದಿಗ್ವಿಜಯ ಸುದ್ದಿ ವಾಹಿನಿ ಮೊದಲ ಸ್ಥಾನದಲ್ಲಿತ್ತು ಎಂದು ತಿಳಿಸಿದರು.
ಈ ಬಾರಿಯ 7ನೇ ವಿಜಯೋತ್ಸವದಲ್ಲಿ ರಾಜ್ಯಾದ್ಯಂತ 2,468 ಬಹುಮಾನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ವ್ಯಾಪಾರಸ್ಥರು ಮತ್ತು ಗ್ರಾಹಕರ ಮಧ್ಯೆ ವಹಿವಾಟಿನ ವೇದಿಕೆಯಾಗಿ ‘ವಿಜಯೋತ್ಸವ’ ಗುರುತಿಸಿಕೊಂಡಿದೆ ಎಂದು ಹೇಳಿದರು. ವರ್ಲ್ಡ್ ಸ್ಕೆ್ವೕರ್ ಗ್ರುಪ್​ನ ಕಾರ್ಯನಿರ್ವಾಹಕ ನಿರ್ದೇಶಕ ಹರ್ಷವರ್ಧನ ಶ್ರೀಧರ ಮಾತನಾಡಿ, 2018ರಲ್ಲಿ ಆರಂಭಗೊಂಡ ವರ್ಲ್ಡ್ ಸ್ಕೆ್ವೕರ್​ನ ಚಟುವಟಿಕೆಗಳು ವೇಗವಾಗಿ ಸಾಗಿದ್ದು ವಸತಿ ಕ್ಷೇತ್ರದಲ್ಲಿ ಮುಂಚೂಣಿಗೆ ಬರುತ್ತಿದ್ದೇವೆ. ಸ್ಪರ್ಧಾತ್ಮಕ ಬೆಲೆಯಲ್ಲಿ ವಸತಿ ಯೋಗ್ಯ ಪರಿಸರ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿದೆ. ಹುಬ್ಬಳ್ಳಿಯನ್ನು ಮಿನಿ ಮುಂಬೈ ಎಂದು ಗುರುತಿಸಲಾಗುತ್ತಿದೆ. ದೇಶದಲ್ಲಿಯೇ ಹುಬ್ಬಳ್ಳಿ ಪ್ರಮುಖ ಸ್ಥಾನ ಪಡೆಯಲಿದೆ ಎಂದರು.
ಪತಂಜಲಿ ಯೋಗ ಪೀಠದ ದಕ್ಷಿಣ ಭಾರತ ಪ್ರಭಾರಿ ಭವರಲಾಲ ಆರ್ಯ ಮಾತನಾಡಿ, ಡಾ. ವಿಜಯ ಸಂಕೇಶ್ವರ ಅವರ ದೂರದೃಷ್ಟಿ ಹಾಗೂ ಆನಂದ ಸಂಕೇಶ್ವರರ ಬದ್ಧತೆಯಿಂದ ವಿಆರ್​ಎಲ್ ಒಂದು ಆದರ್ಶ ಸಂಸ್ಥೆಯಾಗಿದೆ. ಅವರು ನುಡಿದಂತೆ ಬದುಕುತ್ತಾರೆ. ಕರೊನಾ ಕಾಲದಲ್ಲಿ ಭಯದ ವಾತಾವರಣವನ್ನು ಕೆಲವರು ದುರುಪಯೋಗ ಪಡಿಸಿಕೊಂಡರೆ ಮಾಧ್ಯಮಗಳು ಜನರಲ್ಲಿ ಧೈರ್ಯ ತುಂಬಿ ವಿಶ್ವಾಸ ಮೂಡಿಸುವ ಕೆಲಸ ಮಾಡಿವೆ ಎಂದು ಪ್ರಶಂಸಿಸಿದರು.
ವಿಜಯವಾಣಿ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಸ್ವಾಗತಿಸಿದರು. ವಿಆರ್​ಎಲ್ ಮೀಡಿಯಾ ಪ್ರಧಾನ ವ್ಯವಸ್ಥಾಪಕ ಶಿವಾಜಿ ಭಿಸೆ ‘ವಿಜಯೋತ್ಸವ’ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾನವೀಯತೆಗೆ ಮಾಡಿದ ಸೇವೆ
ಲಾಕ್​ಡೌನ್ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿ ಇದ್ದಾಗ ಮಾಧ್ಯಮದವರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಕೋವಿಡ್ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ತುಂಬಾ ಶ್ಲಾಘನೀಯ ಕೆಲಸ ಮಾಡಿವೆ. ಇದು ಮಾನವೀಯತೆಗೆ ಮಾಡಿದ ಸೇವೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಶಂಸಿಸಿದರು. ಪತ್ರಿಕೆಯಿಂದ ಕರೊನಾ ಹರಡುತ್ತದೆಂಬ ವದಂತಿಯನ್ನು ನಂಬಿ ಬಹಳಷ್ಟು ಜನ ಪತ್ರಿಕೆ ಓದುವುದನ್ನೇ ಬಿಟ್ಟಿದ್ದರು. ಇಂಥ ಸಂದರ್ಭದಲ್ಲಿ ವಿಜಯವಾಣಿ ಜಾಗೃತಿ ಮೂಡಿಸಿತು. ಇ-ಪೇಪರ್ ಮೂಲಕ ಜನರಲ್ಲಿ ಕೋವಿಡ್ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಹಿಂದೆ ಬೀಳಲಿಲ್ಲ. ಧಾರವಾಡ ಜಿಲ್ಲೆಯಲ್ಲಿ ಇಂದು ನೂರಕ್ಕಿಂತ ಕಡಿಮೆ ಕರೊನಾ ಸಕ್ರಿಯ ಪ್ರಕರಣಗಳಿವೆ. ನಿತ್ಯ 2500-3000ದಷ್ಟು ಕೋವಿಡ್ ಪರೀಕ್ಷೆಗಳು ನಡೆಯುತ್ತಿದ್ದರೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ 8-10ಕ್ಕೆ ಇಳಿದಿದೆ. ಇಷ್ಟರ ಮಟ್ಟಿಗೆ ನಿಯಂತ್ರಣ ಸಾಧಿಸಲು ಮಾಧ್ಯಮಗಳ ಸಹಕಾರವೇ ಕಾರಣ ಎಂದರು.
ಗಣ್ಯರ ಎದುರಲ್ಲೇ ಕೂಪನ್​ಗಳ ಮಿಶ್ರಣ
‘ವಿಜಯೋತ್ಸವ-20’ರಲ್ಲಿ ಪಾಲ್ಗೊಂಡಿದ್ದ ಗ್ರಾಹಕರು ಬಾಕ್ಸ್​ಗಳಲ್ಲಿ ಹಾಕಿದ್ದ ಕೂಪನ್​ಗಳನ್ನು ಅತಿಥಿಗಳು ಹಾಗೂ ಗಣ್ಯರ ಸಮ್ಮುಖದಲ್ಲೇ ಮಿಶ್ರಣ ಮಾಡಿ ಅದೃಷ್ಟ ಶಾಲಿಗಳನ್ನು ಆಯ್ಕೆ ಮಾಡಲಾಯಿತು. ಎಲ್ಲ ಗ್ರಾಹಕರು ಹಾಕಿದ ಕೂಪನ್​ಗಳಿದ್ದ ಪೆಟ್ಟಿಗೆಗಳನ್ನು ಸೀಲ್ ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಎಲ್ಲ ಬಾಕ್ಸ್ ಗಳನ್ನು ಒಡೆದು ಒಂದೇ ಕಡೆ ರಾಶಿ ಹಾಕಿದ ಲಕ್ಕಿ ಕೂಪನ್​ಗಳ ಸಂಖ್ಯೆ ಹಲವು ಸಾವಿರ ಇದ್ದಿದ್ದೇ, ಗ್ರಾಹಕರು ಉತ್ಸಾಹದಿಂದ ಪಾಲ್ಗೊಂಡಿದ್ದಕ್ಕೆ ನಿದರ್ಶನವಾಗಿತ್ತು. ಕೂಪನ್​ಗಳನ್ನು ಚೆನ್ನಾಗಿ ಮಿಶ್ರಣ ಮಾಡುವ ಮೂಲಕ ನಿಜವಾದ ಅದೃಷ್ಟಶಾಲಿಗಳ ಆಯ್ಕೆಗೆ ಅನುವು ಮಾಡಿಕೊಡಲಾಯಿತು. ಸಂಪೂರ್ಣ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ಜರುಗಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
