“ಪ್ರಾಣವನ್ನು ಬೇಕಾದರೂ ಕೊಟ್ಟೇವು, ಹಿಜಾಬ್​ ಬಿಡೆವು’, “ಓದು ಬೇಕಾದರೂ ಬಿಟ್ಟೇವು, ಹಿಜಾಬ್​ ಬಿಡೆವು’, “ಅಡ್ಡ ಬಂದವರ ಕತ್ತರಿಸಿ ಹಾಕುವೆವು, ಹಿಜಾಬ್​ ಬಿಡೆವು…’ ಇವೆಲ್ಲ ಸಿನಿಮಾದ ಡೈಲಾಗುಗಳಲ್ಲ. ಹಿಜಾಬ್​ ಪರವಾದ ಹೋರಾಟಗಾರರು ಮಾತನಾಡುತ್ತಿರುವ ಶೈಲಿ. ತ್ರಿವಳಿ ತಲಾಕ್​ ನಿಷೇಧದ ನಂತರ ಮುಸ್ಲಿಂ ಹೆಣ್ಣುಮಕ್ಕಳು ಬದಲಾಗಿದ್ದಾರೆ, ಭಾಜಪದ ಕಡೆಗೆ ವಾಲಿದ್ದಾರೆ ಎಂದು ತಮಗೆ ತಾವೇ ಬೆನ್ನು ತಟ್ಟಿಕೊಳ್ಳುವ ಈ ಮಂದಿ ಕೇವಲ ಹಿಜಾಬ್​ ಕುರಿತ ಚರ್ಚೆ ಆರಂಭವಾದದ್ದಕ್ಕೆ ಪ್ರಧಾನಮಂತ್ರಿಯನ್ನೇ ಕೊಲ್ಲುವವರೆಗೂ ಮಾತನಾಡುತ್ತಾರೆಂದರೆ ಡೊಂಕುಬಾಲದ ಕಲ್ಪನೆ ಮರುಚಿಂತನೆಗೆ ಒಳಪಡಬೇಕು ಎಂದೇ ಅರ್ಥ! ಕೆಲವರಿಗೆ ಸುಖದ ಸುಪ್ಪತ್ತಿಗೆಯನ್ನೇ ಒದಗಿಸಿದರೂ ಅವರಿಗೆ ಬೇಕಾಗಿರುವುದು ಸಹಜ ವೃತ್ತಿಯೇ ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ಉದಾಹರಣೆ ಮತ್ತೊಂದು ಬೇಕಿಲ್ಲ. ಆದರೆ ಈ ಒಟ್ಟಾರೆ ಪ್ರಕರಣದಲ್ಲಿ ಅಚ್ಚರಿಯಾಗುವ ವಿಷಯವೇನು ಗೊತ್ತೇ? ಎಡಪಂಥೀಯರು, ಚೀನಾವಾದಿಗಳ ಮೌನ. ಅವರು ಹಿಜಾಬ್​ ವಿರೋಧಕ್ಕೆ ನಿಂತು ಮೋದಿ ಪರವಾಗಿ ಮಾತನಾಡಲಂತೂ ಮುಂದಾಗುತ್ತಿಲ್ಲ. ಆದರೆ ಹಿಜಾಬ್​ ಪರವಾಗಿ ಮಾತನಾಡುವ ಧೈರ್ಯವನ್ನೂ ತೋರುತ್ತಿಲ್ಲ. ಸಿಎಎ ಕಾನೂನು ಮುಸಲ್ಮಾನರಿಗೆ ತೊಂದರೆ ಕೊಡುವಂಥದ್ದಲ್ಲ ಎಂಬ ಸತ್ಯ ಗೊತ್ತಿದ್ದಾಗಲೂ ಮುಂದೆ ನಿಂತು ಸುಳ್ಳುಗಳನ್ನೇ ಹಬ್ಬಿಸಿ ಸಿಎಎ ವಿರುದ್ಧ ಹಿಂದೂಗಳನ್ನೂ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದ ಈ ಮಂದಿ ಈ ಹೊತ್ತಲ್ಲಿ ಬೇಳೆ ಬೇಯಿಸಿಕೊಳ್ಳಲು ಮುಂದೆ ಬರುತ್ತಿಲ್ಲವೇಕೆ?
ಮೊತ್ತಮೊದಲಿಗೆ ಈ ಚಿಂತಕರೆಲ್ಲ ಹಿಂದೂವಿರೋಧಕ್ಕೆ ಗುರಾಣಿಯಂತೆ ಬಳಸುವ ಡಾ. ಬಾಬಾಸಾಹೇಬ್​ ಅಂಬೇಡ್ಕರರು ಸ್ಪಷ್ಟವಾದ ದನಿಯಲ್ಲಿ ಬುರ್ಕಾ ಆದಿಯಾಗಿ ಈ ಎಲ್ಲ ಮುಸಲ್ಮಾನ ಆಚರಣೆಗಳನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಅವರ ಬರಹ ಮತ್ತು ಭಾಷಣಗಳ ಒಟ್ಟಾರೆ ಸಂಪುಟವನ್ನು ಒಮ್ಮೆ ಕಣ್ಣಾಡಿಸಿದರೆ ಹಿಂದೂಧರ್ಮವನ್ನು ಬಾಬಾಸಾಹೇಬರು ಎಷ್ಟು ಬಲವಾಗಿ ಟೀಕಿಸಿ ಆಂತರಿಕ ಸುಧಾರಣೆಗೆ ಬೇಕಾದ ಸಂಪನ್ಮೂಲವನ್ನು ಒದಗಿಸಿಕೊಟ್ಟರೋ ಅಷ್ಟೇ ತೀವ್ರವಾಗಿ ಮುಸಲ್ಮಾನರ ಈ ಆಚರಣೆಗಳನ್ನೂ ವಿರೋಧಿಸಿದ್ದಾರೆ ಎಂಬುದು ಎಂಥವನ ಗಮನಕ್ಕೂ ಬರುತ್ತದೆ. ಹೆಣ್ಣುಮಕ್ಕಳಿಗಾಗಿ ಇಸ್ಲಾಂನಲ್ಲಿ ವಿವಾಹದ ಸಂದರ್ಭದ ವಧುಶುಲ್ಕ, ವಿಚ್ಛೇದನ ಸಂದರ್ಭದ ತಗಾದೆ ಹಣ, ಆಸ್ತಿಯಲ್ಲಿ ಪಾಲು ಇವೆಲ್ಲ ಕಾನೂನುಗಳಿದ್ದರೂ “ಪ್ರಪಂಚದಲ್ಲಿಯೇ ಅತ್ಯಂತ ಅಭಾಗಿನಿ (ನತದೃಷ್ಟ) ಎಂದರೆ ಮುಸ್ಲಿಂ ಮಹಿಳೆ’ ಎನ್ನುತ್ತಾರೆ. ಈಜಿಪ್ಟಿನ ಮುಸ್ಲಿಂ ನಾಯಕರೊಬ್ಬರ ಉಲ್ಲೇಖ ಮಾಡುತ್ತ, “ಧರ್ಮದ ಹೆಸರಿನಲ್ಲಿ ಇಸ್ಲಾಂ ಸಾಮಾಜಿಕ ಕಟ್ಟುಪಾಡುಗಳನ್ನು ಹೆಣ್ಣಿನ ಮೇಲೆ ಹೇರಿ ಆಕೆಯ ಸ್ವಂತ ಅಭಿವ್ಯಕ್ತಿಯನ್ನೂ, ವ್ಯಕ್ತಿತ್ವ ವಿಕಸನವನ್ನೂ ಹರಣ ಮಾಡಿಬಿಟ್ಟಿದೆ’ ಎಂದಿದ್ದಾರೆ. ಇಸ್ಲಾಂ ಕಾನೂನಿನ ಪ್ರಕಾರ ಮದುವೆಯ ಕುರಿತಂತೆಯೂ ನಿರ್ಬಂಧನೆಗಳು ತೀರಾ ಕಡಿಮೆ ಇರುವುದರಿಂದ ಹೆಣ್ಣಿನ ಪರಿಸ್ಥಿತಿ ಬಲುಕಷ್ಟದಾಯಕ ಎಂಬುದನ್ನು ಅವರು ಹೇಳಲು ಮರೆಯುವುದಿಲ್ಲ. ಅಧಿಕೃತವಾದ ನಾಲ್ಕು ಪತ್ನಿಯರಲ್ಲದೆ “ಮಹಿಳಾ ಗುಲಾಮರೊಡನೆ ಇಟ್ಟುಕೊಳ್ಳುವ ಸಂಬಂಧಕ್ಕೆ ಯಾವುದೇ ನಿರ್ಬಂಧವಿಲ್ಲ’ ಎಂಬುದನ್ನು ಗಮನಿಸುವ ಅವರು ತಲಾಕ್​ ಎಂದು ಹೇಳಿ ಮೂರು ವಾರಗಳ ಕಾಲ ಸಂಯಮವನ್ನಾಚರಿಸಿ ಹೆಂಡತಿಯನ್ನು ಬಿಟ್ಟೇಬಿಡಬಹುದು ಎಂಬ ಆಚರಣೆಯನ್ನು ತೀವ್ರವಾಗಿ ಖಂಡಿಸುತ್ತಾರೆ. “ಇವುಗಳಿಂದ ಮುಸ್ಲಿಂ ಮಹಿಳೆ ಅಪಮಾನ, ಅನ್ಯಾಯ, ದೌರ್ಜನ್ಯ, ಅಸಂತೋಷಕ್ಕೆ ತುತ್ತಾಗಿದ್ದಾಳೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ’ ಎನ್ನುತ್ತಾರೆ.
ಬಾಬಾಸಾಹೇಬರು ಹಿಂದೂಧರ್ಮದ ಬಗ್ಗೆ ಆಡಿರುವ ಮಾತುಗಳನ್ನಷ್ಟೇ ಸುದೀರ್ವಾಗಿ ಚರ್ಚೆಗೆತ್ತಿಕೊಂಡು ಅದನ್ನು ಹಿಂದೂಗಳ ಆತ್ಮಸ್ಥೆ$ರ್ಯ ಕುಗ್ಗಿಸಲೆಂದೇ ಬಳಸಿದ ಎಡಪಂಥೀಯರು, ಬಾಬಾಸಾಹೇಬರ ಈ ವಿಚಾರಧಾರೆಯನ್ನು ಅದೇಕೆ ಮುಚ್ಚಿಟ್ಟಿದ್ದಾರೋ ದೇವರೇ ಬಲ್ಲ. ಹಿಂದೂಗಳ ವಿಚಾರದಲ್ಲಂತೂ ಅವರೀಗ ಕಕ್ಕಾಬಿಕ್ಕಿ. ಏಕೆಂದರೆ ಯಾವುದನ್ನು ಬಾಬಾಸಾಹೇಬರು ಅನಿಷ್ಟ ಪದ್ಧತಿ ಎಂದು ಜರಿದಿದ್ದರೋ ಅವುಗಳನ್ನು ಹಿಂದೂಗಳು ಮುಲಾಜಿಲ್ಲದೆ ಕೊಡವಿಕೊಂಡು ಮೇಲೇಳುವ ಪ್ರಯತ್ನ ನಡೆಸಿದ್ದಾರೆ. ನಮ್ಮ ಸಾಮಾಜಿಕ ಜಡತೆಗೆ ಕಾರಣವಾಗಿದ್ದ ಅಸ್ಪ ೃಶ್ಯತೆಯಂತೂ ಹೆಚ್ಚು-ಕಡಿಮೆ ಕಾಣೆಯಾಗಿದೆ. ಅಲ್ಲಲ್ಲಿ ಉಳಿದುಕೊಂಡಿದ್ದರೂ ತೀವ್ರ ಪ್ರತಿರೋಧ ಮೇಲ್ವರ್ಗದ ಸಮಾಜದಿಂದಲೇ ಬರುತ್ತಿರುವುದರಿಂದ ಬದಲಾವಣೆ ನಿಚ್ಚಳವಾಗಿ ಗೋಚರವಾಗುತ್ತಿದೆ. ಜಾತಿ ಪದ್ಧತಿಯಂತೂ ರಾಜಕಾರಣದ ಪಡಸಾಲೆಗೆ ಸೀಮಿತವಾಗಿದೆಯೇ ಹೊರತು ಅದರ ಪರಿಧಿಯ ಆಚೆಗೆ ಪ್ರಭೆ ಕಳೆದುಕೊಳ್ಳುತ್ತಿದೆ. ಮುಸ್ಲಿಂ ಸಮಾಜ ಹಾಗಲ್ಲ. ಬಾಬಾಸಾಹೇಬರೇ ಇದನ್ನು ಗುರುತಿಸುತ್ತಾರೆ, “ಮುಸ್ಲಿಂರಲ್ಲಿ ಅಸ್ತಿತ್ವದಲ್ಲಿರುವ ಈ ಕೆಡುಕುಗಳು ತುಂಬ ವ್ಯಥೆಪಡುವಂಥವು. ಆದರೆ ಅದಕ್ಕಿಂತ ವಿಷಾದದ ಸಂಗತಿ ಎಂದರೆ ಇವುಗಳನ್ನು ನಿರ್ನಾಮಗೊಳಿಸಲು ಭಾರತೀಯ ಮುಸ್ಲಿಂರು ಸಾಮಾಜಿಕ ಬದಲಾವಣೆಯನ್ನು ತರುವಂಥ ಯಾವುದೇ ಸಂಟನಾತ್ಮಕ ಚಳವಳಿಯನ್ನು ನಡೆಸದಿರುವಂಥದ್ದು’ ಎಂದು ನೊಂದುಕೊಂಡಿದ್ದರು. ಯಾವುದೇ ಸಮಾಜವಾಗಲೀ ಸುಧಾರಣೆಗೆ ಆಂತರಿಕ ಪ್ರಯತ್ನವೇ ನಡೆಯಬೇಕು. ಆ ದಿಸೆಯಲ್ಲಿ ಆಯಾ ಸಮಾಜಗಳು ಮನಸ್ಸು ಮಾಡಲಿಲ್ಲವೆಂದರೆ ಸುಧಾರಣೆ ಅರಬ್​ ಮರಳುಗಾಡಿನ ಮರೀಚಿಕೆಯಷ್ಟೇ.
ಹಿಂದೂ ಸಮಾಜದಲ್ಲಿ ಸ್ತ್ರೀಯರ ಏಳಿಗೆಗೆ, ಸಾಮಾಜಿಕ ಜಡತೆಯ ನಿವಾರಣೆಗೆ ನಡೆದ ಪ್ರಯತ್ನಗಳು ಒಂದೆರಡಲ್ಲ. ಬಾಬಾಸಾಹೇಬರೇ ಹೇಳುತ್ತಾರಲ್ಲ, “ಹಿಂದೂಗಳಲ್ಲಿಯೂ ಸಾಮಾಜಿಕ ಕೆಡುಕುಗಳಿವೆ. ಆದರೆ ಅವರಿಗೆ ಈ ಅನಿಷ್ಟಗಳ ಅಸ್ತಿತ್ವದ ಅರಿವಿರುವುದು ಮತ್ತು ಅದನ್ನು ತೊಡೆದು ಹಾಕಲು ಕೆಲವರಾದರೂ ಕ್ರಿಯಾತ್ಮಕವಾಗಿ ಹೋರಾಡುತ್ತಿರುವುದು ಸಮಾಧಾನಕರ ಸಂಗತಿ’ ಎನ್ನುತ್ತಾರೆ. ಮುಸಲ್ಮಾನರದ್ದು ಇದಕ್ಕೆ ವಿಪರೀತವಾದ ಪ್ರಕ್ರಿಯೆ. ಅವರು ಒಪ್ಪುವುದಿರಲಿ ಇಂಥ ಪ್ರಯತ್ನಗಳನ್ನು ಧಿಕ್ಕರಿಸುತ್ತಾರೆ ಮತ್ತು ಹಿಂಸಾತ್ಮಕ ರೂಪದಲ್ಲಿ ವಿರೋಧಿಸುತ್ತಾರೆ. 1930ರಲ್ಲಿ ಕೇಂದ್ರ ವಿಧಾನಸಭೆ ಜಾರಿಗೆ ತಂದ ಬಾಲ್ಯವಿವಾಹದ ಮಸೂದೆ ಪ್ರಕಾರ ಹೆಣ್ಣಿನ ವಿವಾಹ ವಯಸ್ಸು 14 ಎಂದು, ಗಂಡಿನದ್ದು 18 ಎಂದು ಮಾಡಲಾಗಿತ್ತು. ಮುಸಲ್ಮಾನರು ಇದು ಕಾಯ್ದೆಯಾಗುವ ಪ್ರತಿ ಹಂತದಲ್ಲೂ ವಿರೋಧಿಸಿದರಲ್ಲದೆ ಕೊನೆಗೆ ಅದು ನಿಯಮವಾದಾಗ ನಾಗರಿಕ ಅಸಹಕಾರ ಚಳವಳಿಯಾಗಿ ರೂಪಿಸಿದರು. ಅಂಬೇಡ್ಕರರು ಈ ಟನೆಯನ್ನೂ ಸ್ಮರಿಸಿ ಇದು ಕಾಲಕ್ರಮದಲ್ಲಿ ಕಾಂಗ್ರೆಸ್ಸಿನ ಅಸಹಕಾರ ಚಳವಳಿಯದ್ದೇ ಒಂದು ಭಾಗವಾಗಿಬಿಟ್ಟಿದ್ದರಿಂದ ತೀವ್ರವಾಗಿ ಹಬ್ಬದೇ ಮುರುಟಿಹೋಗಿದ್ದು “ಅದೃಷ್ಟಕರ ಸಂಗತಿ’ ಎಂದು ನಿಟ್ಟುಸಿರುಬಿಡುತ್ತಾರೆ. ಅಂದರೆ ನಾಗರಿಕ ಸಮಾಜವನ್ನು ಪ್ರತಿನಿಧಿಸುವ ದಿಕ್ಕಿನಲ್ಲಿ ಮುಸಲ್ಮಾನರು ಎಂದಿದ್ದರೂ ಸೋಲುತ್ತಾರೆ. ಇದಕ್ಕೆ ಪರಿಹಾರ ಎಲ್ಲಿಂದ ಬರಬೇಕು ಹೇಳಿ? ಸಮಾಜದೊಳಗಿಂದಲೇ ಅಲ್ಲವೇ! ಸ್ವಲ್ಪಮಟ್ಟಿಗೆ ನಾಗರಿಕ ಪ್ರೆಯನ್ನಿರಿಸಿಕೊಂಡು ಮಾತನಾಡಲು ಕಲಿತವರೆಲ್ಲ ರಾಜಕಾರಣದ ಪಡಸಾಲೆಗಳಲ್ಲಿ ಅದೃಷ್ಟವನ್ನು ನಿರೀಸುತ್ತ ಕುಳಿತುಬಿಟ್ಟರೆ ವೋಟ್​ಬ್ಯಾಂಕಿನ ಗದ್ದಲದ ನಡುವೆ ಸತ್ಯ ಹೇಳಲು ಹಿಂಜರಿಯುವುದು ಸಹಜವೇ. ಆಗಲೇ ಕಾನೂನನ್ನು ಹೇರಿ ಅದನ್ನು ಆಚರಿಸುವಂತೆ ದಂಡಹಿಡಿದು ಕೂರುವ ಅನಿವಾರ್ಯತೆ ಸೃಷ್ಟಿಯಾಗೋದು.
ಹಿಜಾಬ್​ನ ಕಥೆಬಿಡಿ, ಜಗತ್ತಿನ ಅನೇಕ ರಾಷ್ಟ್ರಗಳು ಬುರ್ಕಾಗಳನ್ನೇ ನಿಷೇಧಿಸಿವೆ. 2011ರಲ್ಲಿ ಫ್ರಾನ್ಸ್​ ಬುರ್ಕಾದ ಬಗೆಯಲ್ಲಿ ಮುಖವನ್ನು ಮರೆಮಾಚುವ ಎಲ್ಲ ಬಗೆಯ ಬಟ್ಟೆಯನ್ನೂ ನಿಷೇಧಿಸಿತಲ್ಲದೆ ಈ ರೀತಿ ಬಟ್ಟೆ ಧರಿಸುವವರಿಗೆ 150 ಯುರೋಗಳಷ್ಟು ದಂಡ ಹಾಕುವ ನಿರ್ಧಾರ ಮಾಡಲಾಯ್ತು. ಮತ್ತು ಈ ರೀತಿಯ ಬಟ್ಟೆ ಹಾಕಲು ಪ್ರೇರಣೆ ಕೊಡುವವರಿಗೆ, ಒತ್ತಡ ಹೇರುವವರಿಗೆ 30 ಸಾವಿರ ಯೂರೋಗಳಷ್ಟು ಭರ್ಜರಿ ದಂಡ ಹಾಕುವ ಯೋಜನೆ ರೂಪಿಸಲಾಯ್ತು. ಅದರ ಹಿಂದು-ಹಿಂದೆಯೇ ಬೆಲ್ಜಿಯಂ ಬುರ್ಕಾದ ಬಗೆಯ ಮುಖಮುಚ್ಚುವ ಎಲ್ಲ ಬಟ್ಟೆಗಳನ್ನೂ ನಿಷೇಧಿಸಿತು. 2017ರಲ್ಲಿ ಮಾನವ ಹಕ್ಕುಗಳ ಯುರೋಪಿಯನ್​ ನ್ಯಾಯಾಲಯ ಈ ನಿರ್ಣಯವನ್ನು ಎತ್ತಿಹಿಡಿಯಿತಲ್ಲದೆ ಬುರ್ಕಾಧಾರಿಗಳಿಗೆ ಏಳು ದಿನಗಳ ಶಿೆಗೂ ಒಪ್ಪಿಗೆ ನೀಡಿತು. ಚೀನಾ 2017ರಲ್ಲೇ ಬುರ್ಕಾ ಮತ್ತು ಎಲ್ಲ ಬಗೆಯ ತಲೆಗೆ ಏರಿಸುವ ಬಟ್ಟೆಗಳನ್ನು ನಿಷೇಧಿಸಿಬಿಟ್ಟಿತು. ಡೆನ್ಮಾರ್ಕ್​ನಲ್ಲಿ 2018ರ ಆಗಸ್ಟ್​ ತಿಂಗಳಲ್ಲಿ ಬುರ್ಕಾ ನಿಷೇಧದ ವಿರುದ್ಧ ಬಲುದೊಡ್ಡ ಪ್ರತಿಭಟನೆ ನಡೆಯಿತಾದರೂ ಸರ್ಕಾರ ಕ್ಯಾರೆ ಎನ್ನಲಿಲ್ಲ. ಜರ್ಮನಿ, ಆಸ್ಟ್ರಿಯಾಗಳು ಈ ನಿಷೇಧಕ್ಕೆ ಬಹಳ ಹಿಂದೆಯೇ ಮನಸ್ಸು ಮಾಡಿದ್ದವು. ಬಲ್ಗೇರಿಯಾದಲ್ಲಂತೂ ಬುರ್ಕಾ ಧರಿಸಿದರೆ ಕಟ್ಟಬೇಕಾದ ದಂಡ 750 ಯೂರೋಗಳಷ್ಟು; ಭಾರತದ ಲೆಕ್ಕಾಚಾರದಲ್ಲಿ ಹೇಳುವುದಾದರೆ – ಹೆಚ್ಚು-ಕಡಿಮೆ 65 ಸಾವಿರ ರೂಪಾಯಿ!
ಮಲಾಲಾ ಪಾಕಿಸ್ತಾನದಲ್ಲಿ ಏಟುತಿಂದು ಅಧ್ಯಯನಕ್ಕೆಂದು ನಾರ್ವೆಗೆ ಹೋದಳಲ್ಲ, ಆ ರಾಷ್ಟ್ರ 2018ರಲ್ಲೇ ಬುರ್ಕಾ ಆದಿಯಾಗಿ ಸಮವಸ್ತ್ರ ಬಿಟ್ಟು ಇತರೆಲ್ಲ ಬಟ್ಟೆಗಳನ್ನು ಶಾಲೆಗಳಲ್ಲಿ ಮುಲಾಜಿಲ್ಲದೆ ನಿಷೇಧಿಸಿತು. ಆಗ ತುಟಿಬಿಚ್ಚದ ಮಲಾಲಾ ಈಗ ಕರ್ನಾಟಕದ ಉಡುಪಿಯ ಗಲಾಟೆಗೆ ಪ್ರತಿಕ್ರಿಯಿಸುತ್ತಿದ್ದಾಳೆಂದರೆ ಟೂಲ್​ಕಿಟ್​ನ ಪ್ರಭಾವ ಎಷ್ಟಿರಬಹುದೆಂದು ಆಲೋಚಿಸಿ! ಕಳೆದ ವರ್ಷ ಸ್ವಿಟ್ಜರ್​ಲ್ಯಾಂಡ್​ ಬುರ್ಕಾ ನಿಷೇಧಕ್ಕೆ ಸಹಮತಿ ವ್ಯಕ್ತಪಡಿಸಿದ್ದರೆ ಶ್ರೀಲಂಕಾದಲ್ಲಿ ಭಯೋತ್ಪಾದಕ ದಾಳಿ ನಡೆದ ಮೇಲೆ ರಾಷ್ಟ್ರದ ಹಿತಾಸಕ್ತಿಗಾಗಿ ಬುರ್ಕಾ ನಿಷೇಧ ಅಗತ್ಯವೆಂದು ಅವರು ಏಳೆಂಟು ತಿಂಗಳ ಹಿಂದೆ ನಿರ್ಣಯ ಕೈಗೊಂಡಿದ್ದಾರೆ.
ಭಾರತದಲ್ಲಿ ಇಸ್ಲಾಂ ಸಂಕಟದಲ್ಲಿದೆ ಎಂದು ಬೊಬ್ಬೆ ಹಾಕುವ ಮಂದಿ ಯೋಚಿಸಬೇಕಾದ ಪ್ರಮುಖವಾದ ಸಂಗತಿ ಏನು ಗೊತ್ತೇ? ಇಲ್ಲಿ ಬುರ್ಕಾ ನಿಷೇಧವಾಗಿಲ್ಲ, ಹಿಜಾಬ್​ ಕೂಡ. ಮತಹಾಕಲು ಬಂದಾಗ ಬುರ್ಕಾ ತೆಗೆಯುವುದಿಲ್ಲವೆಂದು ಹಠ ಹಿಡಿಯಬಹುದು, ಇವೆಲ್ಲಕ್ಕೂ ಅವಕಾಶವಿದೆ. ಶಾಲೆಗಳಲ್ಲಿ ಮಾತ್ರ ಸಮಾನತೆ ದೃಷ್ಟಿಯಿಂದ ಹಿಜಾಬ್​ ಧರಿಸಬಾರದೆಂಬ ನಿಯಮವಿದೆ ಅಷ್ಟೇ. ಜಾಗತಿಕ ಮಟ್ಟದಲ್ಲಿ ಇದನ್ನೇ ಬಿಂಬಿಸಹೋಗಿ ಭಾರತೀಯ ಮುಸಲ್ಮಾನರು ಕೈಸುಟ್ಟುಕೊಂಡಿದ್ದೇಕೆ ಎಂಬುದು ಈಗ ಅರ್ಥವಾಗಿರಬೇಕು. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲೇ ಈ ಬಟ್ಟೆಗಳು ನಿಷೇಧಿಸಲ್ಪಟ್ಟಿರುವಾಗ ಭಾರತದಲ್ಲಿ ವ್ಯಾಪಕವಾಗಿ ಇದು ಚಾಲ್ತಿಯಲ್ಲಿರುವುದು ಮತ್ತು ಈಗ ಸಮವಸ್ತ್ರದ ಕುರಿತಂತೆ ಚರ್ಚೆಗೆ ಬಂದಿರುವುದು ಜಗತ್ತಿನ ಜನಕ್ಕೆ ಅಚ್ಚರಿಯೇ ಸರಿ! ಇಷ್ಟು ದಿನ, ಭಾರತದಲ್ಲಿ ಮುಸಲ್ಮಾನರು ಸಂಕಟದಲ್ಲಿದ್ದಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದವರೆಲ್ಲ ವಾಸ್ತವವಾಗಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಬಾಬಾಸಾಹೇಬರು ಈ ಕುರಿತಂತೆ ವ್ಯಕ್ತಪಡಿಸುವ ಅಭಿಪ್ರಾಯಗಳಂತೂ ಎಂಥವರನ್ನೂ ಚಿಂತನೆಗೆ ತಳ್ಳುವಂಥದ್ದು. “ಮುಸ್ಲಿಂ ಮಹಿಳೆಯರು ಬುರ್ಕಾ ಧರಿಸಿ ರಸ್ತೆಯಲ್ಲಿ ನಡೆಯುವುದನ್ನು ಯಾವುದೇ ವ್ಯಕ್ತಿ ಭಾರತದಲ್ಲಿ ನೋಡಬಹುದಾದ ಭೀಕರ ದೃಶ್ಯಗಳಲ್ಲೊಂದು’ ಎನ್ನುತ್ತಾರೆ ಅವರು. ಈ ಹೆಣ್ಣುಮಕ್ಕಳ ಆರೋಗ್ಯದಲ್ಲಿ ಏರುಪೇರಾಗಲು, ಅವರ ಮನೋಭಾವ ಸಂಕುಚಿತಗೊಳ್ಳಲು, ಸಣ್ಣ-ಪುಟ್ಟ ಗಲಾಟೆಗಳಲ್ಲೇ ಬದುಕನ್ನು ಅವರು ಕಳೆಯುವಂತಾಗಲೂ ಕಾರಣ ಇದೇ ಬುರ್ಕಾ ಎನ್ನುತ್ತಾರೆ ಬಾಬಾಸಾಹೇಬರು. ಅಷ್ಟೇ ಅಲ್ಲ “ಬುರ್ಕಾದ ಕಾರಣದಿಂದಾಗಿ ತನ್ನ ಮನೆಯ ಸ್ತ್ರೀಯರನ್ನು ಬಿಟ್ಟರೆ ಇತರ ಹೆಂಗಸರೊಡನೆ ಹೊರಗೆ ಸಂಪರ್ಕ ಬೆಳೆಸುವುದು ಪುರುಷನಿಗೆ ಸಾಧ್ಯವಿಲ್ಲ. ಇದ್ದರೂ ಅದು ಸಾಂದಭಿರ್ಕ ಮಾತುಕತೆಗಷ್ಟೇ ಸೀಮಿತ. ಸ್ತ್ರೀಯರಿಂದ ದೂರವಿರುವಂಥ ಪುರುಷರ ಈ ಏಕಾಂಗಿತನ ಆತನ ಶೀಲಸ್ವಭಾವದ ಮೇಲೆ ಖಂಡಿತವಾಗಿ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಸ್ತ್ರೀ-ಪುರುಷರ ನಡುವೆ ಕಂದಕವೇರ್ಪಡಿಸುವ ಇಂತಹ ಯಾವುದೇ ಸಾಮಾಜಿಕ ಪದ್ಧತಿ ಅನಾರೋಗ್ಯಕರ, ಅಸಹಜ ಮತ್ತು ದುರಭ್ಯಾಸಗಳಿಗೆ ದಾರಿ ಮಾಡಿಕೊಡುವಂಥದ್ದು ಎಂದು ಹೇಳಲೂ ಯಾವ ಮನೋವಿಶ್ಲೇಷಕನೂ ಬೇಕಾಗಿಲ್ಲ’ ಎನ್ನುತ್ತಾರೆ.
ಮಾತೆತ್ತಿದರೆ ಬಾಬಾಸಾಹೇಬರು ಹಿಂದೂಗಳ ಬಗ್ಗೆ ಏನು ಹೇಳಿದ್ದಾರೆ ಗೊತ್ತೇ? ಎಂದೇ ಆರಂಭಿಸುವ ಫೇಕ್​ ಐಡಿಯ ಮುಸಲ್ಮಾನರು ಬಾಬಾಸಾಹೇಬರ ಮಾತುಗಳನ್ನು ಹಿಂದೂಗಳು ಕೇಳಿದ್ದಾರೆ, ಸ್ವೀಕರಿಸಿದ್ದಾರೆ, ಹೃದ್ಗತಗೊಳಿಸಿಕೊಂಡು ತಿದ್ದಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬುದನ್ನು ಅರಿತಿಲ್ಲ. ಈಗ ಸವಾಲು ಅವರೆದುರಿಗಿದೆ. ಬಾಬಾಸಾಹೇಬರ ಈ ಮಾತುಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವ ಛಾತಿ ಇದೆಯೇನು? ಹೆಣ್ಣುಮಕ್ಕಳ ಬದುಕಿನ ಮೇಲೆ ಪೌರುಷ ತೋರಿಸುತ್ತ ಅವರನ್ನು ಕೂಡಿಹಾಕಿ ಧಾಷ್ಟ$್ಯರ್ ಮೆರೆಯುವ ಈ ಜನ ಈಗ ಅವರನ್ನು ಮುಖ್ಯವಾಹಿನಿಗೆ ತಂದು ಸಮರ್ಥವಾಗಿ, ಆರೋಗ್ಯಕರವಾಗಿ ಬದುಕುವ ಮಾರ್ಗ ತೋರಬಲ್ಲರೇನು? ಬಾಬಾಸಾಹೇಬರ ಪ್ರತಿಯೊಂದು ನುಡಿಯೂ ಈ ನಿಟ್ಟಿನಲ್ಲಿ ಮಾರ್ಗದರ್ಶಿ.
ಅಂದಹಾಗೆ, ಹಿಜಾಬ್​ ಚರ್ಚೆ ಹೊಸ ಆಯಾಮಗಳನ್ನು ತೆರೆದಿಟ್ಟಿದೆ. ಇದು ಆರೋಗ್ಯಕರವಾದ ಚಿಂತನೆಗಳನ್ನು ಹುಟ್ಟುಹಾಕುವಂತಾಗಬೇಕು. ಮಹಿಳೆಯರನ್ನು ಜಾತಿ&ಮತ-ಪಂಥಗಳನ್ನು ಮೀರಿ ಸಮಾನತೆಯ ಆಧಾರದ ಮೇಲೆ ಕಾಣುವಂತಾಗಬೇಕು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
