ಮೈಸೂರು:ಮುಂದೆ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಛಲ ಇದ್ದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲು ಸಾಧ್ಯ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್​ವೈಎಫ್)ಯ 2023ನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಾರ್ಷಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಹಳಷ್ಟು ಜನರು ಕನಸು ಕಾಣುತ್ತಾರೆ. ಆದರೆ ಅದನ್ನು ನನಸು ಮಾಡಿಕೊಳ್ಳುವ ದಿಟ್ಟತನ ತೋರಿಸುವುದಿಲ್ಲ. ಏನೇ ಸಾಧನೆ ಮಾಡಬೇಕಾದರೂ ಮೊದಲು ಗುರಿ ಇಟ್ಟುಕೊಳ್ಳಬೇಕು. ಜತೆಗೆ ಅದನ್ನು ಸಾಧಿಸುವ ಛಲ, ಸಮಯ ಪ್ರಜ್ಞೆ, ಯೋಜನೆ, ಆರ್ಥಿಕ ಶಿಸ್ತು, ನಂಬಿಕೆ, ವಿಶ್ವಾಸ ಉಳಿಕೊಳ್ಳಬೇಕು ಎಂದರು.
ಹೊರಗಿನಿಂದ ಬಂದ ಮಾರ್ವಾಡಿಗಳು, ಗುಜರಾತಿಗಳು, ಜೈನರು ವ್ಯಾಪಾರ ಮಾಡುತ್ತಾರೆ. ನಮ್ಮಿಂದ ಏನೂ ಅಗುವುದಿಲ್ಲ ಎನ್ನುವ ಮನೋಭಾವ ಮೊದಲು ಬಿಡಬೇಕು. ಎಲ್ಲಿ ಬೇಕಾದರೂ ಹೋಗಿ ದುಡಿಯುತ್ತೇನೆ, ವ್ಯಾಪಾರ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ನಾವು ಹೊರಗೆ ಪ್ರವಾಸಕ್ಕೆ ಮಾತ್ರ ಹೋಗುತ್ತೇವೆ. ಆದರೆ ಬೇರೆಯವರು ವ್ಯಾಪಾರ, ಉದ್ಯೋಗಕ್ಕಾಗಿ ಹೋಗಿ, ಬದುಕುತ್ತಾರೆ. ಅಂತಹ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸ್ಪೂರ್ತಿದಾಯಕ ಮಾತನ್ನಾಡಿದರು.
ನಾವು ಇಂತಹದ್ದೇ ಕೆಲಸ ಮಾಡಬೇಕು, ಶ್ರಮ ವಹಿಸುವ ಕೆಲಸಗಳು ನಮಗೆ ಬೇಡ. ಆ ಕೆಲಸಗಳನ್ನು ಯಾವುದೋ ಒಂದು ಜಾತಿ, ಧರ್ಮದವರೇ ಮಾಡಬೇಕು ಎನ್ನುವ ಮನಸ್ಥಿತಿಯಿಂದ ಮೊದಲು ನಮ್ಮ ಯುವ ಜನಾಂಗ ಹೊರಬರಬೇಕು. ಯಾವುದೇ ಕೆಲಸವಾದರೂ ಮಾಡುತ್ತೇನೆ ಎನ್ನುವ ಗಟ್ಟಿತನ ಬೆಳೆಸಿಕೊಳ್ಳಬೇಕು ಎಂದು ವಿಶ್ವಾಸ ತುಂಬಿದರು.
ವ್ಯಾಪಾರ, ವ್ಯವಹಾರ ಮಾಡುವಾಗ ಯಾವುದೋ ಒಂದು ಧರ್ಮ, ಜಾತಿಯನ್ನು ಮಾತ್ರ ನೆಚ್ಚಿಕೊಳ್ಳಬಾರದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಸಂಪರ್ಕಗಳನ್ನು ವಿಸ್ತರಿಸಿಕೊಳ್ಳುತ್ತಾ ಹೋದಾಗ ಮಾತ್ರ ವ್ಯಾಪಾರ ವೃದ್ಧಿಯಾಗಿ ಯಶಸ್ಸು ಸಾಧ್ಯ ಎಂದರು.
ಯಾವುದೇ ಕೆಲಸ ಮಾಡುವಾಗ ಅಪಾಯವಾಗುತ್ತದೆ, ನಷ್ಟವಾಗುತ್ತದೆ ಎನ್ನುವ ಅಂಜಿಕೆಯಿಂದ ಸಾಕಷ್ಟು ಜನರು ಹಿಂದೆ ಸರಿಯುವವರೇ ಹೆಚ್ಚು. ಆದರೆ ಅಂತಹ ಸವಾಲುಗಳನ್ನು ಸ್ವೀಕರಿಸಿ ಎದುರಾಗುವ ಸನ್ನಿವೇಶಗಳನ್ನು ಎದುರಿಸುವ ಧೈರ್ಯ ತೋರಬೇಕು. ವ್ಯವಹಾರ ಮಾಡುವಾಗ ಸ್ನೇಹ, ಸಂಬಂಧಗಳನ್ನು ಒಟ್ಟಿಗೆ ಬೆಸೆಯಬಾರದು ಎಂದು ಕಿವಿಮಾತು ಹೇಳಿದರು.
ಎಸ್​ಎಸ್​ಎಲ್​ಸಿ ಅನುತ್ತೀರ್ಣನಾಗಿ ನನ್ನ ತಂದೆ ನಡೆಸುತ್ತಿದ್ದ ಪ್ರಿಂಟಿಂಗ್ ಪ್ರೆಸ್ ಜವಾಬ್ದಾರಿ ವಹಿಸಿಕೊಂಡೆ. ಕಾಲಿನಲ್ಲಿ ತುಳಿದು ಪ್ರಿಂಟ್ ಮಾಡುತ್ತಿದ್ದ ಜಾಗಕ್ಕೆ ಸಾಲ ಮಾಡಿ ಆಧುನಿಕ ಪ್ರಿಂಟಿಂಗ್ ಪ್ರೆಸ್ ಹಾಕಿ ಮೂರು ಜನರಿದ್ದ ಕೆಲಸಗಾರರ ಸಂಖ್ಯೆಯನ್ನು 80ರ ವರೆಗೆ ಹೆಚ್ಚಿಸಿದೆ. ಅಲ್ಲದೆ ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ಬದ್ಧತೆಯಿಂದ ಡಿ.ಕೆ.ಭಾರದ್ವಾಜ್ ಡಿಕ್ಷನರಿ ಸೇರಿದಂತೆ 500ಕ್ಕೂ ಹೆಚ್ಚು ಪಬ್ಲಿಕೇಷನ್​ಗಳನ್ನು ಹೊರತಂದೆ. ನಮ್ಮ ಮಕ್ಕಳಿಗೂ ಚಿಕ್ಕ ವಯಸ್ಸಿನಲ್ಲಿಯೇ ವ್ಯವಹಾರ ಜ್ಞಾನ ಕಲಿಸಬೇಕು ಎಂದು ವಿವರಿಸಿದರು.
ದೇಶಾದ್ಯಂತ 1,200 ಕಚೇರಿಗಳು:ಒಂದು ಲಾರಿಯಿಂದ ಆರಂಭವಾದ ವಿಆರ್​ಎಲ್ ಟ್ರಾವೆಲ್ಸ್ ಜರ್ವಿು ಈಗ 6 ಸಾವಿರ ವಾಹನಗಳನ್ನು ಹೊಂದಿರುವ ದೇಶದ ದೊಡ್ಡ ಟ್ರಾವೆಲ್ಸ್ ಕಂಪನಿಯಾಗಿ ಬೆಳೆದಿದೆ. 24 ಸಾವಿರ ಜನರು ದುಡಿಯುತ್ತಿದ್ದು, ಜನರ ವಿಶ್ವಾಸ ಗಳಿಸಿದೆ. ಕನ್ಯಾಕುಮಾರಿಯಿಂದ ಹಿಡಿದು ಜಮ್ಮು ಕಾಶ್ಮೀರದವರೆವಿಗೂ 1,200 ಕಚೇರಿಗಳನ್ನು ಹೊಂದಿದೆ. ಪ್ರಧಾನಿ ನರೇಂದ್ರಮೋದಿ ಅವರು ನಮ್ಮ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಹೆಮ್ಮೆ ಎನಿಸುತ್ತದೆ ಎಂದರು.
ಟೈರ್ ಖರೀದಿಸಲು ಹಣವಿರಲಿಲ್ಲ:ಟ್ರಾವೆಲ್ಸ್ ಆರಂಭವಾದಾಗ ಅನೇಕ ನಿಂದನೆ, ಕಷ್ಟಗಳನ್ನು ಅನುಭವಿಸಿದ್ದೇನೆ. ಟೈರ್ ಖರೀದಿಸಲು ಹಣವಿಲ್ಲದಿದ್ದಾಗ ಸ್ಕೂಟರ್, ಕಾರನ್ನು ಮಾರಾಟ ಮಾಡಿ ವ್ಯವಹಾರ ಮಾಡಿದ್ದೇನೆ. ಅಂದು ನಿಂದನೆ ಮಾಡಿದವರು ಇಂದು ನನ್ನ ಬಳಿ ವ್ಯವಹಾರ ಮಾಡುತ್ತಿರುವುದಲ್ಲದೇ ನಾನಿಲ್ಲದೆ ಯಾವುದೇ ಕಾರ್ಯಕ್ರಮ ಮಾಡದಿರುವ ಮಟ್ಟಕ್ಕೆ ಸ್ನೇಹ ಸಂಬಂಧ ವೃದ್ಧಿಸಿಕೊಂಡಿದ್ದಾರೆ. ವಿಜಯ ಕರ್ನಾಟಕ ಮಾರಾಟ ಮಾಡಿದ ಬಳಿಕ ವಿಜಯವಾಣಿ ಆರಂಭಿಸಿ ಒಂದೇ ವರ್ಷದಲ್ಲಿ ನಂಬರ್ ಒನ್ ಮಾಡಲಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ನಟ, ನಿರ್ಮಾಪಕ ಡಾಲಿ ಧನಂಜಯ ಮಾತನಾಡಿ, ಮನುಷ್ಯನಿಗೆ ಅಪಮಾನ, ನಿಂದನೆಗಳು ಆತನಿಗೆ ಛಲ ಗಟ್ಟಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಕಲಿಸುತ್ತದೆ. ಅದಕ್ಕೆ ವಿಜಯ ಸಂಕೇಶ್ವರ ಅವರೇ ಉದಾಹರಣೆ ಎಂದರು.
ಇಂಜಿನಿಯರಿಂಗ್ ಮಾಡಿದರೂ ನನ್ನೊಳಗಿನ ಕಲಾವಿದ ಸದಾ ಜಾಗೃತನಾಗಿದ್ದರಿಂದ ಕೆಲಸ ಬಿಟ್ಟು ರಂಗಭೂಮಿಯತ್ತ ತೆರಳಿದೆ. ಬೆಂಗಳೂರು ನನಗೆ ಇನ್ನೊಂದು ಪ್ರಪಂಚವನ್ನು ನೋಡುವಂತೆ ಮಾಡಿತು. ಜನ ಹೇಗೆಲ್ಲ ಇರುತ್ತಾರೆ ಎಂದು ತೋರಿಸಿಕೊಟ್ಟಿತ್ತು. ಇದು ಇಷ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ತಮ್ಮ ಬದುಕಿನ ವೃತ್ತಾಂತ ತಿಳಿಸಿದರು.
ಐಎಲ್​ವೈಎಫ್ ಮೈಸೂರು ಶಾಖೆ ಅಧ್ಯಕ್ಷ ಎಚ್.ಎಸ್.ವೀರೇಶ್, ಕಾರ್ಯದರ್ಶಿ ಎಂ.ಜೆ.ಸುಭಾಸ್ ಇತರರು ಇದ್ದರು.

ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
