ಅಲ್ಲಮನ ವಚನಗಳ ಅಂಕಿತ ‘ಗುಹೇಶ್ವರ’. ಕೆಲವು ಪ್ರತಿಗಳಲ್ಲಿ ಗೊಹೇಶ್ವರನೆಂದೂ ಗೊಗ್ಗೇಶ್ವರನೆಂದೂ ಇರುವುದುಂಟು. ಆದರೆ, ನಿಜ ಅಂಕಿತ ‘ಗುಹೇಶ್ವರ’ ಎಂಬುದೇ ಸರಿ. ಅಲ್ಲಮನೇ ಇದರ ಅರ್ಥವನ್ನು ಗೋರಕ್ಷಸಿದ್ಧನಿಗೆ ಪರೋಕ್ಷವಾಗಿ ಹೇಳುತ್ತಾನೆ. ಇದು ಚಾಮರಸನ ‘ಪ್ರಭುಲಿಂಗಲೀಲೆ’ಯಲ್ಲಿಯೂ ಬರುತ್ತದೆ.
‘ಆತ್ಮವೆ ಗುಹೆ, ಆ ಗುಹೆಗೆ ಒಡೆಯ ನಾನು.
ನಾನು ಭೂಲೋಕದಲ್ಲಿ ಗುಹೇಶ್ವರನೆಂಬ ಸಹಜವಾದ
ಹೆಸರಿನಿಂದ ಲೀಲೆ ನಡೆಸುತ್ತಿರುವೆ.
ಆ ನಿಮಿತ್ತ ಅಖಿಳ ಜೀವನ ಹೃದಯ
ವಲ್ಲಭನು ಗುಹೇಶ್ವರ’
ಉಪನಿಷತ್ತುಗಳಲ್ಲಿ ‘ಗುಹೆ’ ಎಂಬ ಪದವೇನೊ ಸಿಗುತ್ತದೆ. ಈ ಪದಕ್ಕೆ ‘ರಹಸ್ಯ’ ಎಂಬುದೇ ಅರ್ಥ. ಇದು ಗುಹೆ ಎಂಬುದಕ್ಕೆ ಪರ್ಯಾಯವೂ ಹೌದು. ‘ಗುಹಾಹಿತಂ ಗಹ್ವರೇಷ್ಟಂ ಗೂಢಂ’ ಮುಂತಾದ ವರ್ಣನೆಗಳನ್ನು ಆತ್ಮವನ್ನು ಕುರಿತದ್ದೇ ಎಂಬುದು ನಿಶ್ಚಿತ. ನಮ್ಮದು ಕಾಯಸಂಬಂಧ, ಇದರೊಳಗೆ ಜೀವಸಂಬಂಧ ಉಂಟು. ಆ ಜೀವ ಸಂಬಂಧದೊಳಗೆ ಪ್ರಾಣಸಂಬಂಧಕ್ಕೆ ತಾಣ ಇದೆಯಲ್ಲವೆ? ಈ ಪ್ರಾಣದೊಳಗೆ ನಿರಾಳವಾದ ಬಯಲುಂಟು. ಈ ಬಯಲೇ ಉಪನಿಷತ್ತುಗಳಲ್ಲಿ ವರ್ಣಿತವಾಗಿರುವ ದಹರಾಕಾಶ. ಹೃದಯವೆಂದರೆ ಇದೇ ತಾನೆ? ಇದರೊಳಗೆ ಆಳುತ್ತ ಕುಳಿತಿರುವವನೇ ಆತ್ಮ. ದೇಹವೆಂಬ ಊರೊಳಗೆ, ಒಡಲೆಂಬ ಅರಮನೆಯಲ್ಲಿ ಗುಟ್ಟಾಗಿ ಒರಗಿರುವವನೇ ಪುರುಷ. ಗುಹೇಶ್ವರನೆಂದರೂ ಇವನೇ. ಅಲ್ಲಮನು ತನ್ನೊಳಗೆ ಅಡಗಿರುವ ತತ್ತ್ವವನ್ನು ಅರಿತುಕೊಂಡು, ‘ಜ್ಯೋತಿರ್ಲಿಂಗ’ ಎಂಬ ಮಾತಿಗೆ ಪ್ರತೀಕ ಮಾಡಿಕೊಂಡದ್ದು ತಿಳಿದ ಸಂಗತಿ. ಅಲ್ಲಮನು ತನ್ನ ವಚನಗಳಲ್ಲೂ ‘ಆತ್ಮ’ನ ವರ್ಣನೆ ಮಾಡಿರುವುದುಂಟು. ಅದು ‘ಗುಹೇಶ್ವರ’ ಎಂಬ ಅಂಕಿತದ ಪರಮರಹಸ್ಯವನ್ನು ಉದ್ಘಾಟಿಸುತ್ತದೆ. ಅವನು ಹೇಳುವ ಮಾತಿದು: ‘‘ಆತ್ಮ ಸಂಗವಾದವರ್ಗೆ ಬಹಿರ್ಭಾವವಿಲ್ಲ’. ಅಲ್ಲಮ ಎಲ್ಲೆಲ್ಲೂ ಆತ್ಮಪ್ರಕಾಶವನ್ನು ಕಂಡಿದ್ದಾನೆ. ತನ್ನ ಬೆಡಗಿನ ವಚನಗಳಲ್ಲಿ ‘ಆಕಾಶ’ ಎಂಬ ಪದವನ್ನು ಅನೇಕ ಕಡೆ ಬಳಸಿದ್ದಾನೆ. ಇದು ‘ಆತ್ಮ’ ಎಂಬುದಕ್ಕೆ ಪರ್ಯಾಯವೂ ಹೌದು! ಆಕಾಶಗಂಗೆ(878) ಆಕಾಶದ ಬೀಜ (590) ಆಕಾಶವನಡರು(839) ಆಕಾಶವ ನುಂಗಿದ(588) ಆಕಾಶವ ಮೀರು (1240) ಈ ಮಾತುಗಳಲ್ಲಿ ಆತ್ಮವಿಲಾಸವು ಎದ್ದೆದ್ದು ಕಾಣುತ್ತದೆ.
ಆ ಆತ್ಮನು ಚಿದ್​ಬ್ರಹ್ಮಾಂಡವೆಂಬ ಬ್ರಹ್ಮಾಂಶಿಕನೇ ಸರಿ. ಚಿದಂಶಿಕನಾದ ಜ್ಞಾನಾತ್ಮನಿಗೆ ಅಜ್ಞಾನದ ದೇಹಸಂಬಂಧ ವಾದರೆ, ಆ ಆತ್ಮನ ಅರಿವು, ದೇಹದ ಮರವೆ ಈ ಎರಡರ ಕೂಟದಲ್ಲಿ ಮನವೆಂಬ ಪಕ್ಷಿಯು ಹುಟ್ಟಿಕೊಂಡಿದೆ. ಆ ಮನದಿಂದ ಹಲವು ಕರಣೇಂದ್ರಿಯಗಳು ಜನ್ಮತಾಳಿವೆ. ಅಂಥ ಮನ ಉಂಟಾಗಿದ್ದರೂ ಕುರುಹು ತೋರುತ್ತಿಲ್ಲ. ಅಂಥ ಮನವು ವಿಶ್ವಮಯವಾಗಿ ತೋರುತ್ತಿರುವುದು ಆಶ್ಚರ್ಯವಲ್ಲವೆ? ಚಕಿತ ಪಟ್ಟ ಮನಸ್ಸು ಹಲವು ಮಿಥ್ಯಾದೇಹಗಳೆಂಬ ಕಸವನ್ನು ಕಳೆದು ಹಾಕಿ ಬರುತ್ತದೆ. ಅದು ಆತ್ಮನನ್ನು ಆಶ್ರಯಿಸುತ್ತದೆ. ಆ ಮನಸ್ಸು ಶಿವಕೃಪೆಯಿಂದ ಭಕ್ತಿ-ಜ್ಞಾನವೆಂಬ ರೆಕ್ಕೆಗಳಾದವು. ಒಡನೆ ಮನಸ್ಸು ಜ್ಞಾನಕ್ರಿಯೆಯಿಂದ ಆತ್ಮತತ್ತ್ವವಿಚಾರಕ್ಕೆ ಇಳಿಯಿತು. ಹೀಗೆ ಆತ್ಮತತ್ತ್ವವಿಚಾರವು ಅಳವಟ್ಟ ಆತ್ಮನ ನಿಜಸ್ವರೂಪವೇ ಲಿಂಗವೆಂದು ತಿಳಿಯಿತು. ಅಂಗವೆಲ್ಲಾ ಲಿಂಗವಾಗಿ, ಮನವೂ ಲಿಂಗವಾಯಿತು. ಇದು ಆತ್ಮವಿದ್ಯಾ ವಿಲಾಸ!
ನಾವು ಅಲ್ಲಮನ ವಚನಗಳನ್ನು ನಿರುಕಿಸುತ್ತಿದ್ದರೆ, ಗುಹ್ಯಭಾಷೆ ಮತ್ತು ಸಂಧಾಭಾಷೆಯ ಆಶಯಗಳೇ ಎದ್ದೆದ್ದು ಕಾಣುತ್ತವೆ. ಆನುಭಾವಿಕ ಜಗತ್ತು ಮೂರು ಬಗೆಯ ಭಾಷಿಕ ಚರ್ಯುಗಳನ್ನು ಬಳಸುತ್ತದೆ. ಮೊದಲನೆಯದು ದರ್ಶನಭಾಷೆ, ಎರಡನೆಯದು ಗುಹ್ಯಭಾಷೆ, ಮೂರನೆಯದೇ ಸಂಧಾಭಾಷೆ. ತಿಳಿಯದವರಿಗೆ ತಿಳಿಯುವಂತೆ, ವಿಚಾರದ ದಾರಿಯಲ್ಲಿ ನಡೆಸುವುದು ಯಾವುದೋ ಅದು ದರ್ಶನಭಾಷೆ. ಇದು ತತ್ತ್ವದ ಪ್ರಮೇಯಗಳು ತಿಳಿಯಾಗಿ ಹೇಳುವ ಪ್ರಕಾರ! ಇನ್ನು ಒಗಟುಗಳನ್ನು ಇಟ್ಟು, ಮುಂಡಿಗೆಗಳನ್ನು ಬಳಸಿ, ಬೆಡಗಿನ ಮಾತುಗಳನ್ನು ಆಡುವುದೇ ಗುಹ್ಯಭಾಷೆ. ಇಲ್ಲಿ ಮೇಲೆ ತೋರಿಕೊಳ್ಳುವ ಅರ್ಥ ಬೇರೆ; ಅದರಡಿಯಲ್ಲಿರುವ ಅರ್ಥವೇ ಬೇರೆ. ಶರಣರ ವಚನಗಳಲ್ಲೂ ದಾಸರ ಕೀರ್ತನೆಗಳಲ್ಲೂ ಸಿದ್ಧರ ದೋಹಾಗಳಲ್ಲೂ ಈ ಭಾಷಾಪ್ರಕಾರದ ಬಳಕೆ ಹೆಚ್ಚು. ಇದನ್ನು ಸಂಧಾಭಾಷೆ ಎಂದು ಕರೆಯುತ್ತಾರೆ. ಹಗಲು-ಇರುಳು ಸೇರಿಕೊಂಡಾಗ ಈ ರೂಪ. ಇನ್ನು ಈ ಮೂರಕ್ಕೂ ಬೇರೆಯಾಗಿ ಸಮಾಧಿಭಾಷೆ ಒಂದುಂಟು. ಕವಿ, ಯೋಗಿ, ಋಷಿ ಅಪೌರುಷೇಯವಾಗಿ ಪಡೆದುಕೊಂಡ ಭಾವಸಮಾಧಿಯಲ್ಲಿರುವಾಗ ಆಡುವ ಮಾತಿದು. ಇದರ ಇಂಗಿತವನ್ನು ನಾವು ಅರಿಯಲು ಅದರೊಂದಿಗೆ ತನ್ಮಯವಾಗುವುದೇ ನಿಜವಾದ ಉಪಾಯ. ಅಲ್ಲಮನ ವಚನಗಳಲ್ಲಿಯೂ ‘ಸಮಾಧಿಭಾಷೆ’ಯನ್ನೇ ಅಡಿಗಡಿಗೂ ನಾವು ಕಾಣುತ್ತೇವೆ. ಹಾಗೆಂದಾಗಲೇ ಅವನು ಹೇಳುವ ‘ಜ್ಯೋತಿರ್ಲಿಂಗ’ ಎಂಬ ಪರಿಕಲ್ಪನೆ ನಮಗೆ ಅರಿಕೆಯಾಗುವುದು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 2 =
Remember me
