| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ವೇತನ ಪರಿಷ್ಕರಣೆಗಾಗಿ ರಾಜ್ಯದ ಐದು ಲಕ್ಷ ಸರ್ಕಾರಿ ನೌಕರರು, ಅಷ್ಟೇ ಸಂಖ್ಯೆಯ ಪಿಂಚಣಿದಾರರು ಸುದೀರ್ಘ ಅವಧಿಯಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮತಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಏಳನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿ ಮಾಡುವ ಒತ್ತಡ ರಾಜ್ಯ ಸರ್ಕಾರದ ಬೆನ್ನೇರಿದೆ. ಮೇ 7ರಂದು ರಾಜ್ಯದಲ್ಲಿ 2ನೇ ಹಂತದ ಮತದಾನ ಮುಗಿದ ಬಳಿಕ ಚುನಾವಣೆ ನೀತಿಸಂಹಿತೆ ಸಡಿಲಗೊಳ್ಳಲಿದ್ದು, ಸರ್ಕಾರಿ ನೌಕರರು ಆಯೋಗದ ವರದಿ ಅನುಷ್ಠಾನಕ್ಕೆ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಹೀಗಾಗಿ ತಕ್ಷಣವೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸಬೇಕೆಂಬ ಬೇಡಿಕೆ ಬಲವಾಗತೊಡಗಿದೆ.
2022ರ ಜುಲೈನಲ್ಲೇ ಆರನೇ ವೇತನ ಆಯೋಗದ ಅವಧಿ ಮುಕ್ತಾಯವಾಗಿದೆ. 2022ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕರಣೆ ಆಗಬೇಕೆಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿತ್ತು. ಹಾಗೂ ಹೀಗೂ 2024ರ ಮೇವರೆಗೂ ಎಳೆದಾಡಲಾಗಿದೆ. 2023ರ ಜನವರಿಯಿಂದ ಅನ್ವಯ ವಾಗುವಂತೆ ಆರ್ಥಿಕ ಅನುಕೂಲ ಆಗಬೇಕೆಂಬುದು ಸರ್ಕಾರಿ ನೌಕರರ ಸಂಘದ ಒತ್ತಾಯವಾಗಿತ್ತು. ಈ ನಡುವೆ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಒಂದು ದಿನ ಮೊದಲು ವೇತನ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆದ್ದರಿಂದ ಅನುಷ್ಠಾನಕ್ಕೆ ಅಂತಿಮ ಆದೇಶ ಹೊರಡಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.
ಈ ಮುನ್ನ ಬೊಮ್ಮಾಯಿ ಸರ್ಕಾರ ನೌಕರರ ವೇತನ ಪರಿಷ್ಕರಣೆಗಾಗಿ ಆಯೋಗ ರಚಿಸಿತ್ತು. ಆದರೆ ಬಜೆಟ್​ನಲ್ಲಿ ಅನುದಾನ ಮೀಸಲಿಟ್ಟಿರಲಿಲ್ಲ. 2023ರ ಏಪ್ರಿಲ್​ನಿಂದ ಜಾರಿಯಾಗುವಂತೆ ಶೇ.17ರ ಮಧ್ಯಂತರ (ತಾತ್ಕಾಲಿಕ) ಪರಿಹಾರ ಘೋಷಿಸಲಾಗಿತ್ತು. ಈ ತೀರ್ವನಕ್ಕೆ 2023-24ನೇ ಸಾಲಿನ ಆಯವ್ಯಯದಲ್ಲಿ ತಾತ್ಕಾಲಿಕ ಪರಿಹಾರ ನೀಡಲು ಯಾವುದೇ ಅನುದಾನ ಒದಗಿಸಿರಲಿಲ್ಲ. ಹೀಗಾಗಿ ವೇತನ ಶೀರ್ಷಿಕೆಯಡಿ ಒದಗಿಸುವ ಇತರೆ ಭತ್ಯೆಗೆ ಒದಗಿಸಲಾದ ಅನುದಾನದಿಂದ ತಾತ್ಕಾಲಿಕ ಪರಿಹಾರ ಮೊತ್ತ ಭರಿಸುವಂತೆ ತಿಳಿಸಲಾಗಿತ್ತು. ಫೆಬ್ರವರಿಯಲ್ಲಿ ಮಂಡಿಸಿದ 2024-25ನೇ ಸಾಲಿನ ಬಜೆಟ್​ನಲ್ಲಿ ವೇತನ ಆಯೋಗ ರಚಿಸಿ ವರದಿ ಬಂದ ನಂತರ ಜಾರಿ ಮಾಡಲಾಗುವುದೆಂದು ಎರಡು ಸಾಲಿನಲ್ಲಿ ತಿಳಿಸಲಾಗಿತ್ತು. ಇದೀಗ ವರದಿ ಸ್ವೀಕರಿಸಿದ್ದು, ಅದನ್ನು ಅನುಷ್ಠಾನ ಮಾಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ.
ಆಯೋಗ ಹೇಳಿದ್ದೇನು?:ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯ 7ನೇ ವೇತನ ಆಯೋಗವು ಸರ್ಕಾರಿ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ವೇತನ ಹಾಗೂ ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಿದೆ. ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯ ನಿಗದಿ ಪಡಿಸಲು ಹಾಗೂ ಸುಧಾರಣೆ, ನಿವೃತ್ತಿ ವೇತನ ಮತ್ತು ಸಂಬಂಧಿತ ಸೌಲಭ್ಯಗಳ ಪರಿಷ್ಕರಣೆ ಮೊದಲಾದ ಅಂಶಗಳ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಸರ್ಕಾರ ಅದನ್ನೊಪ್ಪಿತ್ತು. ನೌಕರರಿಗೆ ಮೂಲ ವೇತನ (ಬೇಸಿಕ್ ಪೇ)ದಲ್ಲಿ ಶೇಕಡ 27.50ರಷ್ಟು ಹೆಚ್ಚಳ ಹಾಗೂ ಅಸ್ತಿತ್ವದಲ್ಲಿರುವ ಮೂಲ ವೇತನವನ್ನು 17 ಸಾವಿರ ರೂ.ಗಳಿಂದ 27 ಸಾವಿರ ರೂ.ಗಳಿಗೆ ಏರಿಸಬೇಕು ಎಂಬ ಶಿಫಾರಸು ಮಾಡಲಾಗಿತ್ತು.
ಸಂಕಟದಲ್ಲಿ ನಿವೃತ್ತರು:ಮಾಹಿತಿಗಳ ಪ್ರಕಾರ ಏಪ್ರಿಲ್ ಅಂತ್ಯಕ್ಕೆ 3900 ಸರ್ಕಾರಿ ನೌಕರರು ಸೇವಾ ನಿವೃತ್ತಿ ಹೊಂದಿದ್ದಾರೆ. ಕಳೆದ 2 ತಿಂಗಳಲ್ಲಿ ಒಟ್ಟಾರೆ ಐದು ಸಾವಿರ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಇವರೆಲ್ಲರಿಗೂ ಸರ್ಕಾರದ ನಿಧಾನಗತಿ ಆರ್ಥಿಕ ನಷ್ಟ ತಂದೊಡ್ಡಿದೆ.
ವರದಿಗೆ ಹಿಂದೇಟು:ಚುನಾವಣೆ ಘೋಷಣೆಗೆ 5 ದಿನದ ಮುಂಚೆಯೇ ವರದಿ ಸಲ್ಲಿಸಲು ಆಯೋಗ ಸಿದ್ಧವಿತ್ತು. ಆದರೆ, ಸರ್ಕಾರವೇ ವರದಿ ಸ್ವೀಕರಿಸಲು ಹಿಂದೇಟು ಹೊಡೆದಿತ್ತು. ತಕ್ಷಣ ವರದಿ ಸ್ವೀಕರಿಸಿದರೆ ಅನುಷ್ಠಾನ ಆದೇಶವನ್ನೂ ಮಾಡಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲೇ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕೊನೆ ಹಂತದಲ್ಲಿ ವರದಿ ಸ್ವೀಕರಿಸಲಾಗಿತ್ತು. ಹೊಸ ವೇತನ ಶ್ರೇಣಿಗಳನ್ನು ದಿನಾಂಕ 1-7-2022 ರಿಂದ ಕಾಲ್ಪನಿಕವಾಗಿ ಅನ್ವಯಿಸುತ್ತದೆ. ಅನುಷ್ಠಾನಗೊಳಿಸುವ ನೈಜ ದಿನಾಂಕವನ್ನು ರಾಜ್ಯ ಸರ್ಕಾರ ನಿರ್ಧರಿಸಬೇಕು. ಈ ದಿನಾಂಕ ಯಾವಾಗಿನಿಂದ ಎಂಬ ಅಳುಕು ಸರ್ಕಾರಿ ನೌಕರರಲ್ಲಿದೆ.
17 ಸಾವಿರ ಕೋಟಿ ರೂ. ಬೇಕು:ಸದ್ಯದ ಮಾಹಿತಿ ಪ್ರಕಾರ ಸರ್ಕಾರದ ಬೊಕ್ಕಸದ ಮೇಲೆ ಮಾಸಿಕ 1.4 ಸಾವಿರ ಕೋಟಿ ರೂ. ಹೊರೆ ಬೀಳಲಿದೆ. ಅಂದರೆ ವರ್ಷಕ್ಕೆ ಸರಾಸರಿ 17 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಬೇಕಾಗುತ್ತದೆ. ಗ್ಯಾರಂಟಿ ಯೋಜನೆಗಳ ಹೊರೆಯ ನಡುವೆ ಇಷ್ಟು ಹಣ ಹೊಂದಿಸುವ ಸವಾಲು ಅಷ್ಟು ಸಲೀಸಲ್ಲ. ಬಜೆಟ್​ನಲ್ಲಿ ಸರ್ಕಾರ ಅಷ್ಟು ಹಣವನ್ನು ತೆಗೆದಿರಿಸುವ ಘೋಷಣೆ ಮಾಡಿದೆ. ಬಸವರಾಜ ಬೊಮ್ಮಾಯಿ ಚುನಾವಣೆಗೆ ಹೋಗುವ ಮುನ್ನ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ಮೂಲ ವೇತನ ಹೆಚ್ಚಿಸಿದ್ದರು. ಇದೀಗ ಇನ್ನೂ ಹೆಚ್ಚುವರಿಯಾಗಿ 10.5ರಷ್ಟು ಹೆಚ್ಚಿಸಬೇಕಾಗುತ್ತದೆ. ಒಂದು ವೇಳೆ ಸರ್ಕಾರಿ ನೌಕರರು ಪಟ್ಟು ಹಿಡಿದರೆ ಮತ್ತೂ ಹೆಚ್ಚುವರಿಯಾಗಿ ಶೇ.2.5ರಷ್ಟು ಮೂಲವೇತನ ಹೆಚ್ಚಿಸಬೇಕಾಗುತ್ತದೆ.
ಜೀವವಿಮೆ ಕಂತು ಕಡಿತ ಬೇಡ:ಬೆಂಗಳೂರು: ಕಡ್ಡಾಯ ಜೀವ ವಿಮಾ ನಿಯಮಾವಳಿ ಅನ್ವಯ ಕರ್ನಾಟಕ ಸರ್ಕಾರಿ ಜೀವ ವಿಮೆ ಇಲಾಖೆಯಲ್ಲಿ (ಕೆಜಿಐಡಿ) ಜೀವವಿಮೆ ಪಡೆಯದ 72,754 ಸರ್ಕಾರಿ ಅಧಿಕಾರಿ ಮತ್ತು ನೌಕರರನ್ನು ಪತ್ತೆಹಚ್ಚಿರುವ ರಾಜ್ಯ ಸರ್ಕಾರ, ಅವರ ಸರಾಸರಿ ವೇತನಶ್ರೇಣಿಯಲ್ಲಿ ಕನಿಷ್ಠ ಶೇ.6.25 ಮಾಸಿಕ ವಿಮಾ ಕಂತು ಕಟಾವಣೆಗೆ ಆದೇಶಿಸಿದೆ. ಆದರೆ, ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನೌಕರರು, ಸದ್ಯಕ್ಕೆ ಕಂತು ಕಡಿತಗೊಳಿಸುವುದು ಬೇಡ. 7ನೇ ವೇತನ ಆಯೋಗ ಜಾರಿಯಾದ ನಂತರ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿ ನಿಯಮ 8ರಂತೆ 50 ವರ್ಷ ವಯಸ್ಸು ಪೂರ್ಣಗೊಂಡಿರುವವರನ್ನು ಹೊರತುಪಡಿಸಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಹಾಗೂ ನೌಕರ ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ.6.25ರಷ್ಟು ಮಾಸಿಕ ವಿಮಾ ಕಂತಿಗೆ ಕಡ್ಡಾಯವಾಗಿ ಜೀವವಿಮೆ ಪಡೆಯಬೇಕು. ಆದರೆ, 2024ರ ಮಾ.31ರ ಅಂತ್ಯಕ್ಕೆ ಅಂದಾಜು 72,754 ಅಧಿಕಾರಿ ಮತ್ತು ನೌಕರರು ಜೀವವಿಮೆ ಪಡೆಯದಿರುವುದು ಪತ್ತೆಯಾಗಿದೆ. ಇವರಿಂದ ಕನಿಷ್ಠ ವಿಮಾ ಕಂತನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
. ಲೋಕ ರಿಸಲ್ಟ್​ನತ್ತ ನೌಕರರ ದೃಷ್ಟಿ
. ಕಾಂಗ್ರೆಸ್​ಗೆ ಹಿನ್ನಡೆ ಆದರೇನೆಂಬ ಚಿಂತೆ
. ಹಿನ್ನಡೆ ಆದರೆ ನಿರ್ಧಾರ ಬದಲಾಗುತ್ತಾ?
. ಚಿಂತೆಗೆ ಬಿದ್ದಿರುವ ರಾಜ್ಯ ಸರ್ಕಾರಿ ನೌಕರರರು
1. ರಾಜ್ಯ ನೌಕರರಿಗೆ ಮೂಲ ವೇತನದಲ್ಲಿ ಶೇ.27.50 ಹೆಚ್ಚಳಕ್ಕೆ ಶಿಫಾರಸು
2. ಅಸ್ತಿತ್ವದಲ್ಲಿರುವ ಮೂಲ ವೇತನ 17 ಸಾವಿರದಿಂದ 27 ಸಾವಿರಕ್ಕೆ ಹೆಚ್ಚಿಸಬೇಕು
3. ಕೇಂದ್ರದ ಮಾದರಿಯಲ್ಲಿ ಹೇಗೆ ರಾಜ್ಯದಲ್ಲೂ ಹೆಚ್ಚಿಸ ಬಹುದೆಂಬ ವಿವರಣೆ
4. 2022 ಜ.7ಕ್ಕೆ ಇದ್ದಂತಹ ಶೇ.31 ತುಟ್ಟಿಭತ್ಯೆ ವಿಲೀನಗೊಳಿಸುವುದು
5.  ಜತೆಗೆ ಮೇಲಿನ ಶೇ.27.50 ಸೇರಿ ಒಟ್ಟು ಶೇ.58.40 ಮೂಲ ವೇತನ ಹೆಚ್ಚಳ
6. ಕನಿಷ್ಠ ಮೂಲ ವೇತನ 17 ಸಾವಿರದಿಂದ 27,000 ರೂ.ಗೆ ಹೆಚ್ಚಳ
7. ಗರಿಷ್ಠ ಮೂಲ ವೇತನ 1,04,600 ರಿಂದ 2,41,200 ರೂ.ಗೆ ಹೆಚ್ಚಳ
ಕಾಂಗ್ರೆಸ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪ್ರಚಾರದಲ್ಲಿ ಭಾಗವಹಿಸದಂತೆ ಮಾಜಿ ಸಿಎಂ ಕೆಸಿಆರ್​ಗೆ ನಿಷೇಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
