ಸಂತ ಜ್ಞಾನೇಶ್ವರ ಮಹಾರಾಜರ ತಂದೆ ವಿಠೋಬಾಪಂತ್ ಕಾಲದಿಂದಲೂ (11ನೇ ಶತಮಾನ) ವಾರಿ ಪರಂಪರೆ ಚಾಲ್ತಿಯಲ್ಲಿದೆ. ಆದರೆ, ಲೋಕಕಲ್ಯಾಣದ ಆಶಯದಿಂದ ಸಂತ ಜ್ಞಾನೇಶ್ವರರು ವಾರಿಯನ್ನು ಮಾನವೀಯತೆಯ ಯಾತ್ರೆಯನ್ನಾಗಿಸಿದರು. ಮುಂದೆ ಸಂತ ತುಕಾರಾಮ್ ಮಹಾರಾಜ್ ಸೇರಿದಂತೆ ಹಲವು ಸಂತರು ಈ ಪರಂಪರೆ ಮುಂದುವರಿಸಿಕೊಂಡು ಬಂದರು.
ಎದ್ದರೂ, ಕೂತರೂ ಬಹುತೇಕರಿಗೆ ಕಾಡುವುದು ಪ್ರಶ್ನೆ ಮತ್ತು ಪ್ರಶ್ನೆ!
ಈ ಹುಟ್ಟು-ಸಾವುಗಳ ಅರ್ಥವೇನು? ಇವುಗಳ ನಡುವಿನ ನಾಲ್ಕು ದಿನದಲ್ಲಿ ಬಾಳಿ ಬದುಕಬೇಕಿರುವುದು ಹೇಗೆ? ಜೀವನವೆಂಬ ಪುಟ್ಟ ಅಧ್ಯಾಯದಲ್ಲಿ ಇಷ್ಟು ಗೋಳುಗಳು ಏಕೆ? ನೆಮ್ಮದಿ, ಸಾರ್ಥಕತೆಯ ಮಾರ್ಗ ಸಿಗದಷ್ಟೂ ದೂರವೇ? ಸಾಗರದಷ್ಟು ದುಃಖವಿರುವ ಈ ಸಂಸಾರದಲ್ಲಿ ಸಾಸಿವೆಯಷ್ಟು ಸುಖಕ್ಕಾಗಿ ಇಷ್ಟೊಂದು ಹೋರಾಡಬೇಕೆ? ನಮ್ಮ ಹಿಂದಿನವರೆಲ್ಲ ಎಷ್ಟೊಂದು ಆನಂದವಾಗಿ ಬದುಕು ಸಾಗಿಸಿದರಲ್ಲ, ಇಂದಿನವರ ಬದುಕೇಕೆ ಗೋಳು? ನಮಗೆ ಆತ್ಮಸಂತೋಷ ಅಷ್ಟೊಂದು ದುಬಾರಿಯೆ? ಬದುಕಿನಲ್ಲಿ ನಿಜವಾಗಿ ಬೇಕಾಗಿರುವುದು ಏನು? ಪ್ರೀತಿ, ಮಮತೆ, ಅಂತಃಕರಣ, ವಾತ್ಸಲ್ಯವೇ ಅಥವಾ ಭೌತಿಕ ಸಂಪತ್ತು, ಅಧಿಕಾರವೇ?… ಊಹುಂ. ಈ ಪ್ರಶ್ನೆಗಳ ಸರಣಿ ಮುಗಿಯುವುದಿಲ್ಲ. ಇನ್ನೂ ಕೆಲವರು ಲೌಕಿಕ ಜಂಜಾಟದ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ತೊಡಗಿರುತ್ತಾರೆ.
ಈ ಎಲ್ಲ ಪ್ರಶ್ನೆ, ಸಂದೇಹಗಳಿಗೆ ಉತ್ತರ ಕೊಡಲೆಂದೇ ಅವನೊಬ್ಬ ಇಟ್ಟಿಗೆಯ ಮೇಲೆ ನಿಂತಿದ್ದಾನೆ. ಹಾಗೇ ನಿಂತು ಶತಮಾನಗಳು ಉರುಳಿವೆ. ಶತಮಾನಗಳಿಂದಲೂ ಉತ್ತರಿಸುತ್ತಿದ್ದಾನೆ. ಅಷ್ಟೇ ಅಲ್ಲ, ಜೀವನದರ್ಶನ ಮಾಡಿಸುತ್ತಿದ್ದಾನೆ. ರೈತನಿಂದ ಹಿಡಿದು ತತ್ವಜ್ಞಾನಿಯವರೆಗೆ, ಕಾರ್ವಿುಕನಿಂದ ಹಿಡಿದು ಕೋಟ್ಯಧಿಪತಿಯವರೆಗೆ ಎಲ್ಲರೂ ಅವನ ಸಾನಿಧ್ಯದಲ್ಲಿ ಬದುಕಿನ ಧನ್ಯತೆಯನ್ನು ಅನುಭವಿಸುತ್ತಾರೆ. ಹೌದು, ಆತನೇ ಪಾಂಡುರಂಗ ವಿಠ್ಠಲ. ಅಬ್ಬಾ, ಈ ಹೆಸರು ಕೇಳುತ್ತಿದ್ದಂತೆಯೇ ಭಕ್ತಿಚೈತನ್ಯದ ಒಂದು ದೊಡ್ಡ ಪ್ರವಾಹವೇ ಕಣ್ಮುಂದೆ ಬಂದುಹೋಗುತ್ತದೆ. ಸಂತ ಪರಂಪರೆ, ಭಕ್ತಿ ಆಂದೋಲನ, ಮಾನವೀಯತೆಯ ಅಗಾಧ ಶಕ್ತಿ ಎಲ್ಲವೂ ರೋಮಾಂಚನಗೊಳಿಸುತ್ತವೆ. ಈ ಪಾಂಡುರಂಗ ವಿಠ್ಠಲನು ವೈಕುಂಠ ನಗರಿ ಪಂಢರಪುರದಲ್ಲಿ ಭಕ್ತ ಪುಂಡಲೀಕ ನೀಡಿದ ಇಟ್ಟಿಗೆಯ ಮೇಲೆ ನಿಂತು ಮನುಕುಲವನ್ನು ಉದ್ಧರಿಸುತ್ತಿದ್ದಾನೆ. ಮಾನವನ ಹೃದಯದಲ್ಲಿ ದೈವತ್ವವನ್ನು ಬಿತ್ತುತ್ತಿದ್ದಾನೆ. ಅಧ್ಯಾತ್ಮ, ತತ್ತ ್ವಜ್ಞಾನ ಗೊತ್ತಿಲ್ಲದವರಿಗೂ, ತನ್ನ ದರ್ಶನ ಮಾತ್ರದಿಂದಲೇ ಆತ್ಮಾನಂದದ ಅನುಭೂತಿ ಒದಗಿಸುತ್ತಿದ್ದಾನೆ.
ನಮ್ಮ ದೇಶದಲ್ಲಿ ಸಿರಿವಂತರು ಹೋಗಬಹುದಾದ ಮಂದಿರಗಳಿಗೆ ಕೊರತೆಯಿಲ್ಲ. ಆದರೆ, ನಮ್ಮ ಪಾಂಡುರಂಗ ಬಡವರ ದೇವರು! ಆತನಿಗೆ ಆಭರಣ, ವಜ್ರದ ಕಿರೀಟ, ಬಂಗಾರದ ಪದಕ ಯಾವುದೂ ಬೇಕಿಲ್ಲ. ತುಳಸಿಯ ಒಂದು ದಳ ಮತ್ತು ಹೃದಯದಲ್ಲಿ ಎಂದೂ ಬತ್ತದ ಭಕ್ತಿ! ಇದೆರಡು ಸಾಕು ಜಗದೊಡೆಯ ಪಾಂಡುರಂಗನಿಗೆ. ಭಕ್ತರು ಭಗವಂತನ ದರ್ಶನಕ್ಕೆ ಹಾತೊರೆಯುವುದು ಸಹಜವೇ. ಆದರೆ, ಭಕ್ತರನ್ನು ಬರಮಾಡಿಕೊಳ್ಳಲು ವಿಠ್ಠಲ ಕೂಡ ಅಷ್ಟೇ ಕಾತರನಾಗಿರುತ್ತಾನೆ. ಆತ ನಿಜಕ್ಕೂ ಆಮ್​ದಿ್ಮಳ ಭಗವಂತ, ಅಷ್ಟೇ ಅಲ್ಲ ಆತ್ಮಬಂಧು, ತಂದೆ-ತಾಯಿ, ಸಹೋದರ ಕೂಡ. ಅದಕ್ಕೆಂದೆ, ವರ್ಷವಿಡೀ ಮನೆಯಲ್ಲಿ, ಗದ್ದೆಯಲ್ಲಿ ದುಡಿದು ಹೃದಯ ಭಾರವಾದ ಮಹಿಳೆ ಪಾಂಡುರಂಗನ ಬಳಿ ಎಲ್ಲ ತಾಪತ್ರಯಗಳನ್ನು ಹೇಳಿಕೊಂಡು, ‘ನನಗೆ ನೀನು ಬಿಟ್ಟು ಬೇರೆ ಯಾರಿದ್ದಾರೆ ವಿಠ್ಠಲ?’ ಎಂದು ಬಿನ್ನವಿಸಿ, ತಡೆಯಲಾಗದ ಕಣ್ಣೀರನ್ನು ಸೆರಗಿನಂಚಿನಿಂದ ಒರೆಸಿಕೊಳ್ಳುತ್ತ, ವಿಠ್ಠಲನ ರೂಪವನ್ನು ಕಣ್ತುಂಬಿಕೊಳ್ಳುವಾಗ ಅವಳ ಹೃದಯದ ಭಾರವೆಲ್ಲ ಕರಗಿರುತ್ತದೆ. ಊರಿನ ಕಡೆ ಹೆಜ್ಜೆ ಹಾಕುವಾಗ, ‘ಮುಂದಿನದೆಲ್ಲ ನಮ್ಮ ಪಾಂಡುರಂಗ ನೋಡಿಕೊಳ್ಳುತ್ತಾನೆ’ ಎಂಬ ಗೆಲುವು ಮುಖದಲ್ಲಿ ಅರಳಿರುತ್ತದೆ.
ರೈತನಾದರೂ ಅಷ್ಟೇ;ಭಾವನೆಗಳೆಲ್ಲ ಸಲೀಸಾಗಿ ಹಂಚಿಕೊಳ್ಳುತ್ತಾನೆ. ವಿಠ್ಠಲನ ಮೇಲೆ ಹುಸಿ ಮುನಿಸನ್ನೂ ತೋರುತ್ತಾನೆ. ‘ಒಂದು ವರ್ಷ ಅತಿವೃಷ್ಟಿ, ಮತ್ತೊಂದು ವರ್ಷ ಅನಾವೃಷ್ಟಿ. ಹೀಗಾದರೆ ನಾವೇನು ಮಣ್ಣು ತಿನ್ನೋದಾ’ ಅಂತ ಕೋಪಿಸಿಕೊಂಡು, ಮರುಕ್ಷಣವೇ, ‘ಈ ಮಣ್ಣಿನಲ್ಲಿ ಸಮೃದ್ಧ ಬೆಳೆ ಸಿಗುವಂತೆ ಮಾಡೋನು ನೀನೇ ಅಪ್ಪಾ’ ಅಂತ ಕೈಮುಗಿದು ಹೆಗಲಭಾರ, ಜವಾಬ್ದಾರಿಗಳ ಭಾರವೆಲ್ಲ ಆ ಭಗವಂತನಿಗೆ ಒಪ್ಪಿಸಿ ನಿರಾಳನಾಗುತ್ತಾನೆ. ಹೆಂಗೆಳೆಯರ ಗುಂಪು, ‘ಮುಂದಿನ ವರ್ಷ ಮತ್ತೆ ನಿನ್ನ ದರ್ಶನಕ್ಕೆ ಬರುವಂತೆ ಮಾಡು’ ಎಂದು ಬಿನ್ನವಿಸಿಕೊಂಡರೆ, ಸಾಧು-ಸಂತರು ವಿಠ್ಠಲನ ರೂಪದ ವರ್ಣನೆಯಲ್ಲಿ ಮೈಮರೆಯುತ್ತಾರೆ. ಎಷ್ಟೊಂದು ವಿಚಿತ್ರ ಮತ್ತು ವಿಶಿಷ್ಟ ಅಲ್ವಾ ಈ ಭಗವಂತ ಮತ್ತು ಭಕ್ತನ ಸಂಬಂಧ. ಭಾರತವನ್ನು ಅದ್ಭುತ ಅಂತ ಸುಮ್ಮನೇ ಕರೆದಿಲ್ಲ. ಕಲ್ಲು, ಮಣ್ಣು, ಬೆಟ್ಟಗಳನ್ನು ಹೊತ್ತ ಭೌಗೋಳಿಕ ಪ್ರದೇಶವಷ್ಟೇ ಅಲ್ಲ ಭಾರತ. ಇದು ಅಧ್ಯಾತ್ಮದ ಚೈತನ್ಯಭೂಮಿ.
ಸುಮ್ಮನೇ ಒಮ್ಮೆ ಯೋಚಿಸಿ. ಮನೆಯಲ್ಲೋ, ಸಂಸ್ಥೆಯಲ್ಲೋ ಒಂದು ಪುಟ್ಟ ಸಮಾರಂಭ ಮಾಡಲು ನಾವೆಲ್ಲ ಎಷ್ಟು ತಯಾರಿ ಮಾಡಬೇಕಾಗುತ್ತದೆ. ಆಮಂತ್ರಣ ನೀಡುವುದರಿಂದ ಹಿಡಿದು, ಅಗತ್ಯ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವ ತನಕ. ಆದರೆ, ಪಂಢರಪುರದ ವಾರಿಗೆ (21 ದಿನಗಳ ಕಾಲ್ನಡಿಗೆ ಯಾತ್ರೆ) ಯಾರೂ ಆಮಂತ್ರಣ ನೀಡುವುದಿಲ್ಲ. ಆದರೇನಂತೆ, ಲಕ್ಷಾಂತರ ಜನರು ಕಳೆದ ಒಂದು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಒಟ್ಟಿಗೇ ಸಾಗುತ್ತಿದ್ದಾರಲ್ಲ… ಈ ವರ್ಷದ ವಾರಿಯು ಜೂನ್ ಕೊನೆಯ ವಾರದಲ್ಲಿ ಆರಂಭವಾಗಿದೆ. ಸಂತ ಜ್ಞಾನೇಶ್ವರ ಮಹಾರಾಜ್ ಸಮಾಧಿ ಸ್ಥಳ ಆಳಂದಿ, ಸಂತ ತುಕಾರಾಮ ಮಹಾರಾಜರ ಸಮಾಧಿ ಸ್ಥಳ ದೇಹು, ಸಂತ ಏಕನಾಥ ಮಹಾರಾಜರ ಸಮಾಧಿ ಸ್ಥಳ ಪೈಠಣ್​ದಿಂದ ಈ ಸಂತರ ಪಾದುಕೆಯನ್ನು ಹೊತ್ತ ಪಲ್ಲಕ್ಕಿಗಳೊಂದಿಗೆ ಲಕ್ಷಾಂತರ ಜನರು ಮಳೆಯನ್ನು ಲೆಕ್ಕಿಸದೆ ಪಂಢರಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದೇ ಜುಲೈ 17ರಂದು ಸರ್ವೆಷಾ (ಶಯನೀ) ಏಕಾದಶಿ ಇದ್ದು, ಅದರ ಹಿಂದಿನ ದಿನ ಜುಲೈ 16ರಂದು ಭಕ್ತಿಯ ಈ ಮಹಾಶಕ್ತಿ ಪಂಢರಪುರವನ್ನು ಪ್ರವೇಶಿಸಲಿದೆ.
ನಮ್ಮಲ್ಲಿ ರಾಜಕೀಯ ಪಕ್ಷಗಳು ಯಾವುದ್ಯಾವುದಕ್ಕೋ ‘ಸೋಶಿಯಲ್ ಇಂಜಿನಿಯರಿಂಗ್’ ಅಂತ ಕರೆದು ಬೀಗುತ್ತವೆ. ಆದರೆ, ನಿಜವಾದ ಸೋಶಿಯಲ್ ಇಂಜಿನಿಯರಿಂಗ್​ಗೆ ಸಾಕ್ಷಿ ಪಂಢರಪುರದ ವಾರಿ. ಏಕೆಂದರೆ, ಲಕ್ಷಾಂತರ ಭಕ್ತರಲ್ಲಿ ಎಲ್ಲ ವರ್ಗದವರೂ ಇರುತ್ತಾರೆ. ಇಲ್ಲಿ ಜಾತಿ, ಮತ, ಪಂಥವನ್ನಂತೂ ಬಿಡಿ, ಒಬ್ಬರಿಗೊಬ್ಬರು ಹೆಸರನ್ನೂ ಕೇಳುವುದಿಲ್ಲ. ಏಕೆಂದರೆ, ಅವರು ಪರಸ್ಪರ ಸಂಬೋಧಿಸುವುದು ‘ಮಾವುಲಿ’ (ತಾಯಿ) ಎಂದೇ. ಪಾಂಡರಂಗನನ್ನು ತಂದೆ ಮತ್ತು ತಾಯಿಯ ರೂಪದಲ್ಲಿ ಕಾಣುವ ಭಕ್ತಾದಿಗಳು, ಆತನ ದರ್ಶನಕ್ಕೆ ಸಾಗುವ ಎಲ್ಲರಲ್ಲೂ ಮಾತೃಭಾವವನ್ನು ಕಾಣುತ್ತಾರೆ. ಈ ಯಾತ್ರಾರ್ಥಿಗಳು ನಡೆದುಕೊಂಡು ಹೋಗುವಾಗ ದಾರಿಯ ಮಧ್ಯೆ ಅವರಿಗೆ ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಸಿಗುವ ಸ್ವಾಗತ ನೋಡಬೇಕು. ಜನರು ಪಾಂಡುರಂಗನ ಪ್ರತಿನಿಧಿಗಳ ಸೇವೆ ಮಾಡಲು ಅವರನ್ನು ಧನ್ಯತೆಯಿಂದ ಬರಮಾಡಿಕೊಳ್ಳುತ್ತಾರೆ. ನಡೆದು ದಣಿದಿರುವ ಪಾದಗಳಿಗೆ ಬಿಸಿನೀರು ಕೊಟ್ಟು, ಬಳಿಕ ಬಿಸಿಊಟ ಅಥವಾ ತಿಂಡಿ, ಹಣ್ಣುಹಂಪಲು ನೀಡುತ್ತಾರೆ. ವೈದ್ಯರು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ, ಔಷಧ ಕೊಡುತ್ತಾರೆ. ವ್ಯಾಪಾರಿಗಳು ಬೆಚ್ಚಗಿನ ಬಟ್ಟೆ, ಹೊದಿಕೆ ಕೊಟ್ಟು, ಧನ್ಯತೆ ಅನುಭವಿಸುತ್ತಾರೆ. ಬೀದಿಬದಿ ವ್ಯಾಪಾರ ಮಾಡುವವನು ಕೂಡ ವಾರಿ ಸಮೀಪಿಸುತ್ತಿದ್ದಂತೆ ಹತ್ತೋ, ಇಪ್ಪತ್ತೋ ರೂಪಾಯಿ ತೆಗೆದಿಟ್ಟು, ಯಾತ್ರಾರ್ಥಿಗಳ ಸೇವೆಗೆ ವಿನಿಯೋಗಿಸುತ್ತಾನೆ. ಮಾನವೀಯತೆಯ ದೊಡ್ಡ ಪಾಠಶಾಲೆಯೆಂದರೆ ವಾರಿ.
ಅದಕ್ಕೆಂದೆ, ಯುವಕರು ಭಕ್ತಿಯ ಜೊತೆಗೆ ಕುತೂಹಲಕ್ಕಾಗಿಯೂ ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿನ ಶಿಸ್ತು, ಭಕ್ತಿ, ಪ್ರೇಮ, ಕಾಳಜಿ, ಅಂತಃಕರಣವನ್ನು ನೋಡಿ ಬೆರಗಾಗುತ್ತಾರೆ. ಮಧ್ಯವಯಸ್ಸಿನವರೆಗೆ ವಾರಿ ಮಾಡಿ ಬಂದರೆ ವರ್ಷದ ದೈಹಿಕ, ಮಾನಸಿಕ ದಣಿವನ್ನು ಕಳೆದುಕೊಂಡಂತೆ. ಇನ್ನು ವಯಸ್ಸಾದ ಅಜ್ಜ-ಅಜ್ಜಿಯಂದಿರ ವಿಠ್ಠಲ ಭಕ್ತಿಯಂತೂ ಅನನ್ಯ, ಅಸಾಧಾರಣ. ಆಷಾಢ ಏಕಾದಶಿಯಂದು ಮುಖ್ಯಮಂತ್ರಿ ದಂಪತಿಯ ಜತೆ, ವಾರಿಯಲ್ಲಿ ನಡೆದು ಬಂದ ದಂಪತಿ ಕೂಡ ಪಾಂಡುರಂಗನಿಗೆ ಮಹಾಪೂಜೆ ಸಲ್ಲಿಸುತ್ತಾರೆ. ಪಾಂಡುರಂಗನಿಗೆ ಭಾವಪೂಜೆ ಸಲ್ಲಿಸುವ ಭಕ್ತರಂತೂ ಅಸಂಖ್ಯ. ವಾರಿಗೆ ಹೋಗಲಾಗದವರು, ವಾರಿ ಮುಗಿಸಿಕೊಂಡು ಗ್ರಾಮಗಳಿಗೆ ಮರಳಿದ ಭಕ್ತರ ದರ್ಶನ ಪಡೆದು, ನಮಿಸುತ್ತಾರೆ.
ಒಂದು ಆಧ್ಯಾತ್ಮಿಕ ಯಾತ್ರೆ- ನಮ್ಮ ಬದುಕು ಹೇಗಿರಬೇಕು ಎಂಬ ಸಂದೇಶವನ್ನು ನೀಡುತ್ತದೆ. ಮಾನವೀಯತೆಯ ಪಾಠವನ್ನು ಕಲಿಸುತ್ತದೆ, ದಿವ್ಯತೆಯ ಅನುಭೂತಿ ನೀಡುತ್ತದೆ. ನಿಷ್ಕಲ್ಮಶವಾಗಿ ಪ್ರೀತಿಸುವುದನ್ನು ಕಲಿಸುತ್ತದೆ. ಮನಸುಗಳನ್ನು ಬೆಸೆಯುತ್ತದೆ, ಹೃದಯದಲ್ಲಿ ಭಕ್ತಿ ಮತ್ತು ಆನಂದದ ಅಮೃತಕಲಶವನ್ನು ಪ್ರತಿಷ್ಠಾಪಿಸುತ್ತದೆ. ಭಗವಂತನನ್ನು ಇನ್ನೂ ಆಪ್ತವಾಗಿಸುತ್ತದೆ. ಮಾನಸಿಕ ತೊಳಲಾಟವನ್ನು ನಿವಾರಿಸಿ, ನವಚೈತನ್ಯವನ್ನು ಪ್ರದಾನಿಸುತ್ತದೆ. ಅದಕ್ಕೆಂದೆ, ವರ್ಷದಿಂದ ವರ್ಷಕ್ಕೆ ವಾರಿಯ ಪ್ರಭಾವಳಿ ಹೆಚ್ಚುತ್ತಲೇ ಸಾಗುತ್ತಿದೆ. ವಾರಿ ಎಂದರೆ ಸಮಾಜದರ್ಶನ ಹಾಗೂ ಆತ್ಮದರ್ಶನದ ಸಂಗಮ. ಸಂತರು ಇದೇ ಕಾರಣಕ್ಕಾಗಿ ‘ಏಕ್ದಾ ತರೀ ವಾರಿ ಅನುಭವಾವಿ’ (ಒಮ್ಮೆಯಾದರೂ ವಾರಿ ಅನುಭವಿಸಬೇಕು) ಎಂದಿದ್ದಾರೆ. ವಾರಿಯಲ್ಲಿ ಸಂತಸ, ನೆಮ್ಮದಿ, ಆತ್ಮಸಂತೃಪ್ತಿ, ಪ್ರೀತಿ, ವಾತ್ಸಲ್ಯ ಇದೆಲ್ಲದರ ಹದವಾದ ಮಿಶ್ರಣವಿದೆ. ಆ ಪಾಂಡುರಂಗ ಬಯಸೋದು ಇದನ್ನೇ.
ಹೀಗೆ ಇಡೀ ಸಮಾಜವನ್ನು ಒಟ್ಟಿಗೆ ತರುವ ಕೆಲಸ ಸುಲಭದಲ್ಲ. ಸಂತರು ವಾರಿಯ ಮಾಧ್ಯಮದಿಂದ ‘ಪಾಂಡುರಂಗ’ನ ಧ್ವಜದ ಅಡಿ ಇದನ್ನು ಸಾಕಾರಗೊಳಿಸಿದರು. ತನ್ಮೂಲಕ ಜಾತಿ, ಮೇಲು-ಕೀಳು, ಬಡವ-ಬಲ್ಲವ ಎಂಬ ಗೋಡೆಗಳನ್ನು ಶಾಶ್ವತವಾಗಿ ಕೆಡವಿ ಹಾಕಿದರು. ಮಾನವ ಇದೇ ಜಾತಿ, ಮಾನವಿಯತೆ ಇದೇ ಧರ್ಮ ಎಂಬುದನ್ನು ಮನದಟ್ಟು ಮಾಡಿದರು. ರಾಷ್ಟ್ರೀಯ ಏಕತೆಯ ಕಲ್ಪನೆಯಿಂದ ಮುಂದೆ ಹೋಗಿ ವೈಶ್ವಿಕ ಏಕತೆಯ ಕಲ್ಪನೆಯನ್ನು ಪರಿಚಯಿಸಿದರು. ಇದಕ್ಕೆ ಸಾಕ್ಷಿಯಾಗಿ ಇಂದು ಕೇವಲ ಮಹಾರಾಷ್ಟ್ರವಲ್ಲ ಹೊರರಾಜ್ಯ ಮತ್ತು ಹೊರದೇಶಗಳ ಆಸ್ತಿಕರು ಕೂಡ ಪ್ರತೀ ವರ್ಷ ವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರೆಲ್ಲರ ಅನುಭವಗಳನ್ನು ಕೇಳುತ್ತಿದ್ದರೆ ಆ ಮಾತುಗಳಲ್ಲಿ ಅನುರಣನಗೊಳ್ಳುವುದು ಭಾರತದ ಶಕ್ತಿಯೇ.
ಪ್ರತಿ ಮನುಷ್ಯನಲ್ಲೂ ದೈವೀ ಅಂಶವಿದೆ:ಆದರೆ ಅದನ್ನು ಸ್ವಾರ್ಥ, ಅಹಂಕಾರ, ಲೋಭ ಎಂಬ ಅಪಸವ್ಯದ ಪೊರೆಗಳು ಮುಚ್ಚಿಹಾಕಿವೆ. ಮನುಷ್ಯ ಮನುಷ್ಯನನ್ನು ಅರಿಯಬೇಕು, ತನ್ನ ಅಂತರಾತ್ಮದಲ್ಲಿಯೂ ಶೋಧ ನಡೆಸಬೇಕು. ಇಂಥ ಪ್ರಯತ್ನಗಳಿಗೆ ಈ ಬಗೆಯ ಆಧ್ಯಾತ್ಮಿಕ ಯಾತ್ರೆಗಳು ವೇದಿಕೆಯಾಗುತ್ತವೆ. ಆರಂಭದಲ್ಲಿ ಪ್ರಸ್ತಾಪಿಸಿರುವಂತೆ ಜೀವನದಲ್ಲಿನ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತವೆ. ಮುಖ್ಯವೆಂದರೆ, ಇಲ್ಲಿ ಕಲಿತ ಆದರ್ಶ, ಮೌಲ್ಯ, ಜೀವನಪಾಠಗಳು ಎಂದೂ ಮಸುಕಾಗುವುದಿಲ್ಲ. ಬದಲಾಗಿ, ಪೀಳಿಗೆಯಿಂದ ಪೀಳಿಗೆಗೆ, ಸಂಸ್ಕೃತಿಯಿಂದ ಸಂಸ್ಕೃತಿಗೆ ವರ್ಗವಾಗುತ್ತ ಹೋಗುತ್ತವೆ. ವ್ಯಕ್ತಿನಿರ್ವಣ, ಸಮಾಜ ನಿರ್ವಣದ ಮಹೋನ್ನತ ಪ್ರಕ್ರಿಯೆಯೊಂದು ಹೇಗೆ ಸದ್ದಿಲ್ಲದೆ ಸಾಕಾರಗೊಳ್ಳುತ್ತದೆ ಎಂಬುದಕ್ಕೂ ವಾರಿ ಸಾಕ್ಷಿ.
ಮನುಜನಲ್ಲಿ ಸಹಜವಾಗಿ ಇರಬೇಕಾದ ಮಾನವೀಯ ಸಂವೇದನೆಯೇ ಕ್ಷೀಣಿಸುತ್ತಿರುವ ಇಂದಿನ ದಿನಮಾನಗಳಲ್ಲಿ, ‘ಸಮಾಜದಲ್ಲಿ ಬಹಳಷ್ಟು ಒಳ್ಳೆಯದಿದೆ ಮತ್ತು ಅದನ್ನು ಸರಳವಾಗಿ ಪಡೆದುಕೊಳ್ಳಬಹುದು, ಕೊಡಲೂ ಬಹುದು’ ಎಂಬ ಆಶಾವಾದದ ಮಹತ್ವದ ಸಂಗತಿಯೊಂದನ್ನು ವಾರಿಯಂಥ ಆಧ್ಯಾತ್ಮಿಕ ಯಾತ್ರೆಗಳು ನೀಡುತ್ತಿವೆ. ಏಕೆಂದರೆ, ಇಲ್ಲಿ ಶ್ರೇಷ್ಠ ಪರಂಪರೆಯ ನಂಟಿದೆ. ಒಳಿತನ್ನು ಸಾಧಿಸಬೇಕೆಂಬ ಲಕ್ಷಾಂತರ ಮನಸುಗಳ ತುಡಿತವಿದೆ. ಆದರ್ಶದ ಹಾದಿಯಲ್ಲಿ ಸಾಗುತ್ತಿರುವ ದೊಡ್ಡ ಪಡೆಯೇ ಇದೆ. ನಮ್ಮ ಮನಸುಗಳ ದ್ವಾರವನ್ನು ತೆರೆದು ಇಂಥ ಭಕ್ತಿ ಪರಂಪರೆ ಪ್ರತಿಷ್ಠಾಪನೆಗೊಳ್ಳಬೇಕಿದೆ. ಆ ಮೂಲಕ ಸುಧಾರಣೆಯ ಕ್ರಾಂತಿ ಸಾಕಾರಗೊಳ್ಳಬೇಕಿದೆ.
ಪಾಂಡುರಂಗ ವಿಠ್ಠಲನೇ ನಿನ್ನ ಅದಮ್ಯ ಶಕ್ತಿಗೆ, ನಿನ್ನನ್ನು ಬೆಸೆದುಕೊಂಡಿರುವ ಲಕ್ಷಾಂತರ ಮನಸುಗಳಿಗೆ ಶರಣು! ಜಗತ್ತಿನಲ್ಲಿ ದುಃಖದ ಕಣ್ಣೀರು ಕಡಿಮೆಯಾಗಲಿ, ಖುಷಿಯ ಕಣ್ಣೀರು ಹೆಚ್ಚಾಗಲಿ, ಎಲ್ಲರ ಹೃದಯಗಳಲ್ಲಿ ನಿನ್ನ ಭಕ್ತಿ, ಪ್ರೇಮ ಆವರಿಸಿಕೊಳ್ಳಲಿ ಸಾಕು!
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)
IND vs ZIM T20: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ; ಸರಣಿಯಲ್ಲಿ 1-2 ಮುನ್ನಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eight =
Remember me
