|ಸುಭಾಸ ಧೂಪದಹೊಂಡಕಾರವಾರ
ಸೋಮವಾರ ಅಂಕೋಲಾದಲ್ಲಿ ನಡೆದ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ ಅವರ ಕಾರು ಅಪಘಾತ ಉತ್ತರ ಕನ್ನಡ ಜಿಲ್ಲೆಗೆ ತುರ್ತು ಚಿಕಿತ್ಸೆ ಆಸ್ಪತ್ರೆ ತುರ್ತಾಗಿ ಬೇಕು ಎಂಬ ಕೂಗನ್ನು ಮತ್ತಷ್ಟು ಹೆಚ್ಚಿಸಿದೆ. ಅಪಘಾತ ನಡೆದ 30 ರಿಂದ 40 ಕಿಮೀ ವ್ಯಾಪ್ತಿಯಲ್ಲಿ ಸುಸಜ್ಜಿತ ತುರ್ತು ಚಿಕಿತ್ಸೆ ಆಸ್ಪತ್ರೆ ಇದ್ದರೆ ಸಚಿವರ ಪತ್ನಿ ವಿಜಯಾ ಹಾಗೂ ಆಪ್ತ ಕಾರ್ಯದರ್ಶಿ ದೀಪಕ ಅವರ ಜೀವ ಉಳಿಸಬಹುದಿತ್ತೇನೋ ಎಂಬ ಚರ್ಚೆಯೂ ನಡೆದಿದೆ. ಜಾಲತಾಣಗಳಲ್ಲಿ ಹ್ಯಾಷ್ ಟ್ಯಾಗ್​ನೊಂದಿಗೆ ‘ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್’ ಸಂದೇಶ ಮತ್ತೆ ಮುನ್ನೆಲೆಗೆ ಬಂದಿದೆ.
ಉತ್ತರ ಕನ್ನಡವು ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದು. ತಿರುವಿನ ಹೆದ್ದಾರಿಗಳಿರುವ ಕಾರಣ ಪದೇಪದೆ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. 2020ರಲ್ಲೇ 218 ಕ್ಕೂ ಹೆಚ್ಚು ಗಂಭೀರ ಅಪಘಾತಗಳು ಸಂಭವಿಸಿವೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಆರೋಗ್ಯ ಸೌಲಭ್ಯ ವೃದ್ಧಿಯಾಗಿಲ್ಲ. ಟ್ರಾಮಾ ಸೆಂಟರ್, ವೆಂಟಿಲೇಟರ್ ಸೇರಿ ಹಲವು ಅಗತ್ಯ ಸೌಲಭ್ಯಗಳಿಲ್ಲ. ರಸ್ತೆ ಅಪಘಾತಗಳು, ಹೃದಯಾಘಾತದಂಥ ಸಂದರ್ಭಗಳಲ್ಲಿ ಇಲ್ಲಿನ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ದೂರದ ಉಡುಪಿ, ಗೋವಾದ ಬಾಂಬೋಲಿಂ, ಶಿವಮೊಗ್ಗ ಅಥವಾ ಹುಬ್ಬಳ್ಳಿಗೆ ಕೊಂಡೊಯ್ಯಬೇಕಾಗಿದೆ. ಯಾವುದೇ ಆಸ್ಪತ್ರೆಗೆ ತೆರಳುವುದಿದ್ದರೂ ಕನಿಷ್ಠ 100 ಕಿಮೀ ಪ್ರಯಾಣ ಅನಿವಾರ್ಯ ಎಂಬ ಪರಿಸ್ಥಿತಿ ಇದೆ. ತುರ್ತು ಚಿಕಿತ್ಸೆ ಸಿಗದೇ ಎಷ್ಟೋ ಜೀವಗಳು ಬಲಿಯಾದ ಉದಾಹರಣೆ ಇದೆ. ಲಾಕ್​ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗಡಿಯನ್ನು ಬಂದ್ ಮಾಡಲಾಗಿತ್ತು. ಆಗ ಜಿಲ್ಲೆಯ ಜನ ಆರೋಗ್ಯ ಸೌಲಭ್ಯಕ್ಕಾಗಿ ಅಕ್ಷರಶಃ ಅಂಗಲಾಚುವ ಪರಿಸ್ಥಿತಿ ನಿರ್ವಣವಾಗಿತ್ತು.
2016ರಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಕಾರವಾರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಪ್ರಾರಂಭವಾದರೂ ಕೆಲವು ಸಲಕರಣೆ, ಮುಖ್ಯವಾಗಿ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಇದರಿಂದ ಜಿಲ್ಲೆಗೆ ತುರ್ತು ಚಿಕಿತ್ಸೆ ಆಸ್ಪತ್ರೆ ಬೇಕು ಎಂಬ ಕೂಗು 2019ರಲ್ಲಿ ಎದ್ದಿತು. ಜಿಲ್ಲೆಯ ಯುವಕರು ‘ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್’ ಎಂಬ ಅಭಿಯಾನವನ್ನು ಜಾಲತಾಣಗಳಲ್ಲಿ ನಡೆಸಿದ್ದರು. ಪರಿಣಾಮ ಆಗಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹ ಜಿಲ್ಲೆಗೆ ಸೌಲಭ್ಯ ಒದಗಿಸುವುದಾಗಿ ಉತ್ತರ ನೀಡಿದ್ದರು. ಆದರೆ, ಇದುವರೆಗೂ ಸೌಲಭ್ಯ ಮಾತ್ರ ಸಿಕ್ಕಿಲ್ಲ. ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಈಗ ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜ್​ಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದು, 120 ಕೋಟಿ ರೂ.ಗಳ ಸೌಲಭ್ಯ ಒದಗಿಸಲು ಕಡತ ಮಂಡಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.
ಸೂಪರ್ ಸ್ಪೆಷಾಲಿಟಿ ಉಪಕರಣಗಳನ್ನು ಒದಗಿಸಬಹುದು. ಆದರೆ, ಅಷ್ಟೇ ಸೂಪರ್​ಸ್ಪೆಷಲಿಸ್ಟ್ ವೈದ್ಯರ ಅವಶ್ಯಕತೆಯೂ ಇದೆ ಎಂಬುದು ಹಿರಿಯ ವೈದ್ಯರ ಅಭಿಪ್ರಾಯ. ಸಾಕಷ್ಟು ಸೂಪರ್​ಸ್ಪೆಷಲಿಸ್ಟ್ ವೈದ್ಯರಿದ್ದರೂ ಅವರು ಸಣ್ಣ ಪಟ್ಟಣಗಳಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ನರ ರೋಗ, ಹೃದ್ರೋಗ ಮುಂತಾದ ವಿಭಾಗಗಳಲ್ಲಿ ಪರಿಣತ ವೈದ್ಯರನ್ನು ಇಲ್ಲಿಗೆ ಕರೆತಂದಲ್ಲಿ ಜನರಿಗೆ ತುರ್ತು ಚಿಕಿತ್ಸೆ ಸಿಗಬಹುದು ಎನ್ನುತ್ತಾರೆ ಸರ್ಕಾರಿ ಮೆಡಿಕಲ್ ಕಾಲೇಜ್​ನ ನಿರ್ದೇಶಕ ಡಾ.ಗಜಾನನ ನಾಯಕ.
ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯ ವೃದ್ಧಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಐದೈದು ಬಾರಿ ಆಯ್ಕೆಯಾದ ಸಂಸದರು. ಇಬ್ಬರು ಹಿರಿಯ ರಾಜಕಾರಣಿಗಳು ಉನ್ನತ ಹುದ್ದೆ ಅಲಂಕರಿಸಿದ್ದರೂ ಜಿಲ್ಲೆಯ ಜನರ ಜೀವ ರಕ್ಷಣೆಗೆ ಕನಿಷ್ಠ ಸೌಲಭ್ಯ ಕೈಗೊಳ್ಳದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಇನ್ನೆಷ್ಟು ಜೀವಗಳು ಬಲಿಯಾಗಬೇಕು…? ಸೂಪರ್ ಸ್ಪೆಷಾಲಿಟಿ ಎಮರ್ಜೆನ್ಸಿ ಹಾಸ್ಪಿಟಲ್ ಸೌಲಭ್ಯ ಒದಗಿಸುವಂತೆ ಶಾಸಕಿ ರೂಪಾಲಿ ನಾಯ್ಕ ಅವರು ಮಾಡಿದ ಪ್ರಯತ್ನಕ್ಕೆ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ, ಶೀಘ್ರದಲ್ಲಿ ಈ ಸೌಲಭ್ಯಗಳನ್ನು ಜಿಲ್ಲೆಗೆ ಒದಗಿಸಲು ಕ್ರಮ ವಹಿಸಬೇಕು.
|ಶುಭಂ ಕಳಸಸಾಮಾಜಿಕ ಕಾರ್ಯಕರ್ತ ಕಾರವಾರ
ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ; ಸಚಿವರ ಪತ್ನಿ ಸೇರಿ ಇಬ್ಬರ ಸಾವು!

ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fifteen =
Remember me
