|ಮಂಜುನಾಥ ಕೋಳಿಗುಡ್ಡಬೆಳಗಾವಿ
‘ಏಲಕ್ಕಿ ಕಂಪಿನ ನಗರಿ’ ಹಾವೇರಿಯಲ್ಲಿ ಇದೇ ತಿಂಗಳು ಜರುಗಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆಯಾದ ಬೆನ್ನಲ್ಲೇ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್​ನ ಚುನಾವಣೆ ಕಾವು ಏರುತ್ತಿದೆ. ನೆರೆಯ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಂತೂ ಪರಿಷತ್ ಜಿಲ್ಲಾಧ್ಯಕ್ಷ ಚುನಾವಣೆ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ. ಸಾಹಿತಿಗಳು, ಕನ್ನಡ ಹೋರಾಟಗಾರರು ಮತ್ತು ಪ್ರಭಾವಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಡುವ ಲಕ್ಷಣ ಗೋಚರಿಸುತ್ತಿವೆ.
ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವ ಮೂಲ ಆಶಯದೊಂದಿಗೆ ಸ್ಥಾಪಿಸಲಾದ ಕನ್ನಡ ಸಾಹಿತ್ಯ ಪರಿಷತ್​ನಲ್ಲಿ ಇದೀಗ ಸಾಹಿತಿಗಳು, ರಾಜಕೀಯ ಪ್ರಮುಖರು, ಉದ್ಯಮಿಗಳು, ಮಠಾಧೀಶರು ಹಾಗೂ ಕನ್ನಡಪರ ಹೋರಾಟಗಾರರು ಅತ್ಯಂತ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಹೀಗಾಗಿ ರಾಜ್ಯ ಘಟಕದ ಅಧ್ಯಕ್ಷ , 30 ಜಿಲ್ಲಾಧ್ಯಕ್ಷ ಸ್ಥಾನ ಹಾಗೂ 5 ಗಡಿನಾಡು ಘಟಕ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಾರ್ವತ್ರಿಕ ಚುನಾವಣೆಯಷ್ಟೇ ಮಹತ್ವ ಬಂದಿದೆ.
ಮತದಾರರ ಓಲೈಕೆ ಕಸರತ್ತು:ರಾಜ್ಯಾದ್ಯಂತ ಕಸಾಪ ಹಾಲಿ ಅಧ್ಯಕ್ಷರ ಅಧಿಕಾರವಧಿ ಫೆ. 28ಕ್ಕೆ ಪೂರ್ಣಗೊಳ್ಳಲಿದೆ. ಅಲ್ಲದೆ, ಮೇ 9ರಂದು ಅಧ್ಯಕ್ಷ ಸ್ಥಾನಗಳಿಗೆ ಮತದಾನ ಜರುಗಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆಯೇರಲು ಆಕಾಂಕ್ಷಿಗಳು 3 ತಿಂಗಳ ಮುಂಚೆಯೇ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿತರು ಜಿಲ್ಲೆಗಳಿಗೆ ತೆರಳಿ ಮತಯಾಚನೆ ಆರಂಭಿಸಿದ್ದಾರೆ. ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮಂಡ್ಯ, ಮೈಸೂರು, ಬೆಳಗಾವಿ, ಕಲಬುರ್ಗಿ, ಬಳ್ಳಾರಿ, ಹಾಸನ ಜಿಲ್ಲೆಗಳಲ್ಲಿ ಠಿಕಾಣಿ ಹೂಡಿದ್ದಾರೆ. ಬೇರೆ ಜಿಲ್ಲೆ ಅಥವಾ ರಾಜ್ಯಗಳಲ್ಲಿರುವ ಸದಸ್ಯರಿಗೆ ಮತದಾನ ದಿನದಂದು ಬರಲು ವಾಹನ, ವಸತಿ ಹಾಗೂ ಊಟೋಪಹಾರ ಹಾಗೂ ಪ್ರಚಾರ ವಾಹನಕ್ಕಾಗಿ ಲಕ್ಷ ಲಕ್ಷ ರೂ. ಹಣ ವೆಚ್ಚ ಮಾಡುತ್ತಿದ್ದಾರೆ.
ಪ್ರಭಾವಿಗಳ ಪೈಪೋಟಿ:ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಗಾಗ ಕ್ಯಾತೆ ತೆಗೆಯುವ ಮೂಲಕ ಗಡಿ ಕನ್ನಡಿಗರನ್ನು ಕೆರಳಿಸುತ್ತಿದ್ದಾರೆ. ಹೀಗಾಗಿ ಠಾಕ್ರೆಗೆ ಠಕ್ಕರ್ ನೀಡುವ ನಿಟ್ಟಿನಲ್ಲಿ ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾದ್ಯಂತ ಸಾಲು ಸಾಲಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿದೆ. ಅದರಲ್ಲೂ ಗಡಿಭಾಗದ ಹಳ್ಳಿಗಳಲ್ಲಿ ಜರುಗುತ್ತಿರುವ ಅಕ್ಷರ ಜಾತ್ರೆಗಳು ನಾಡವಿರೋಧಿಗಳಿಗೆ ಕಟ್ಟೆಚ್ಚರ ನೀಡುತ್ತಿರುವುದರ ಜತೆಗೆ ಕನ್ನಡದ ಅಸ್ಮಿತೆ ಸಾರುತ್ತಿವೆ. ಈ ಮಧ್ಯೆ, ಜಿಲ್ಲೆಯಲ್ಲಿನ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಪ್ರಭಾವಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಪ್ರಥಮ ಬಾರಿ 1.21 ಲಕ್ಷ ಸದಸ್ಯರಿಂದ ಮತದಾನ:ಶತಮಾನೋತ್ಸವ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ 3,36,395 ಸದಸ್ಯರನ್ನು ಹೊಂದಿದೆ. ಈ ಪೈಕಿ 3.10 ಲಕ್ಷ ಮತದಾರರು ಮತ ಚಲಾವಣೆಗೆ ಅರ್ಹತೆ ಪಡೆದಿದ್ದಾರೆ. ರಾಜ್ಯಾದ್ಯಂತ 1.21 ಲಕ್ಷ ಮತದಾರರು ಪ್ರಥಮ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 2016ರ ಅಧ್ಯಕ್ಷರ ಚುನಾವಣೆಯಲ್ಲಿ 1,89,355 ಸದಸ್ಯರು ಮತದಾನದ ಹಕ್ಕು ಹೊಂದಿದ್ದರು. 2021ರಲ್ಲಿ 3,10,520 ಸದಸ್ಯರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ರಾಜ್ಯದಲ್ಲಿ ಉಡುಪಿ ಜಿಲ್ಲೆಯು 1,984 ಅತಿ ಕಡಿಮೆ ಮತದಾರರನ್ನು ಹೊಂದಿದೆ.
ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿ ಸ್ಪರ್ಧಿಸುವ ಕುರಿತು ಹಿರಿಯರು, ಸ್ವಾಮೀಜಿಗಳು, ಸಾಹಿತಿಗಳು ಅವರೊಂದಿಗೆ ರ್ಚಚಿಸಿ ನಿರ್ಧಾರ ಪ್ರಕಟಿಸಲಾಗುವುದು. ಫೆ. 28ಕ್ಕೆ ನಮ್ಮ ಅಧಿಕಾರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ತಾಲೂಕು ಸಮ್ಮೇಳನಗಳನ್ನು ನನ್ನ ಅವಧಿಯಲ್ಲಿಯೇ ಪೂರ್ಣಗೊಳಿಸಬೇಕಿದೆ.
|ಮಂಗಳಾ ಮೆಟಗುಡ್ಡಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
