| ಮೃತ್ಯುಂಜಯ ಕಪಗಲ್ ಬೆಂಗಳೂರು
ನೆರೆ, ಕರೊನಾ ಮತ್ತೆ ಪ್ರವಾಹ ತಿರುಗುಣಿ ಮಡುವಿಗೆ ಲೋಕೋಪಯೋಗಿ ಇಲಾಖೆ ಸಿಲುಕಿದ್ದು, ಹಾಳಾದ ರಸ್ತೆ ಹಾಗೂ ಸೇತುವೆಗಳ ತುರ್ತು ದುರಸ್ತಿ ಕಾಮಗಾರಿಗೆ ಸರ್ಕಾರವನ್ನು ಒಪ್ಪಿಸುವುದಕ್ಕೆ ಏದುಸಿರುಬಿಟ್ಟಿದೆ.
ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಲೋಕೋಪಯೋಗಿ ಇಲಾಖೆಗೆ 11,463 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಪಿಡಬ್ಲ್ಯೂಡಿ ಹೆಚ್ಚು ನಷ್ಟ ಅನುಭವಿಸಿದೆ ಎಂದು ಆರ್ಥಿಕ ಇಲಾಖೆ ಏನೂ ಕರುಣೆ ತೋರಿಸಿಲ್ಲ. ಕರೊನಾ ತಂದೊಡ್ಡಿದ ಬಿಕ್ಕಟ್ಟು ಸರಿದೂಗಿಸಲೆಂದು ಕಾದಿರಿಸಿದ್ದ ಅನುದಾನವನ್ನು ಕಡಿತಗೊಳಿಸಿದೆ.
ಅಲ್ಪ ವೆಚ್ಚದ ತುರ್ತು ರಿಪೇರಿ ಕಾಮಗಾರಿಯನ್ನು ಕೈಬಿಟ್ಟರೆ ಪುನರ್ ನಿರ್ವಣಕ್ಕೆ ನಾಲ್ಕೈದು ಪಟ್ಟು ಹೆಚ್ಚಿಗೆ ವ್ಯಯಿಸಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೂ ಅನಗತ್ಯ ಖರ್ಚು, ಜನರಿಗೂ ತಾಪತ್ರಯ ಉಂಟಾಗಲಿದೆ ಎಂದು ಇಲಾಖೆ ಮನವರಿಕೆ ಮಾಡಿಕೊಟ್ಟು, 400 ಕೋಟಿ ರೂ. ವೆಚ್ಚದ ತುರ್ತು ರಿಪೇರಿ ಪ್ರಸ್ತಾವನೆಗೆ ಮಂಜೂರಾತಿ ಪಡೆದಿದೆ.ಇದನ್ನೂ ಓದಿ:Web Exclusive ಸಮರ್ಥತೆ ಪರೀಕ್ಷೆಗೆ ಅರಣ್ಯ ಅಭಿವೃದ್ಧಿ ನಿಗಮ ಮೀನ-ಮೇಷ; ಕಾರಣ ತಿಳಿಸದೆ ಪರೀಕ್ಷೆ ಮುಂದೂಡಿಕೆ
ಜನ-ವಾಹನಗಳ ಸಂಚಾರ, ಸರಕು ಸಾಗಣೆಗೆ ರಸ್ತೆ ಸಂಪರ್ಕ ಜಾಲ ತುರ್ತಾಗಿ ಸುಧಾರಿಸಬೇಕಾದದ್ದು ಅನಿವಾರ್ಯ. ಆದರೂ ಕಳೆದ ವರ್ಷದ ಅತಿವೃಷ್ಟಿ ಮತ್ತು ಮಹಾಪೂರಕ್ಕೆ ಹಾನಿಗೀಡಾದ ರಸ್ತೆ ಹಾಗೂ ಸೇತುವೆಗಳ ದುರಸ್ತಿಯಲ್ಲಿ ಇನ್ನೂ ಅಲ್ಪಸ್ವಲ್ಪ ಉಳಿದಿದೆ.
ಹಾಗೂ ಹೀಗೂ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿಕೊಂಡು ಬಹುಪಾಲು ಕೆಲಸ ಮುಗಿಸಿದ್ದೇವೆ ಎಂದು ನಿರಾಳವಾಗುವ ಹೊತ್ತಿನಲ್ಲಿ ಕರೊನಾ ವಕ್ಕರಿಸಿತು. ಇದೀಗ ಮತ್ತೆ ಭಾರಿ ಮಳೆ, ನೆರೆ ಅಪ್ಪಳಿಸಿ ಹೈರಾಣಾಗಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಲಭ್ಯ ಮಾಹಿತಿ ಪ್ರಕಾರ ದಕ್ಷಿಣ ವಲಯದಲ್ಲಿ ಕಳೆದ ವರ್ಷ ಹಾನಿಗೀಡಾದ 164 ರಸ್ತೆ ದುರಸ್ತಿ ಕಾಮಗಾರಿಗಳ ಪೈಕಿ 30, ಉತ್ತರ ವಲಯದ 505 ಕಾಮಗಾರಿಗಳಲ್ಲಿ 14 ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಕೇಂದ್ರ ವಲಯದ 483ರಲ್ಲಿ 32 ರಸ್ತೆ ದುರಸ್ತಿ ಕಾಮಗಾರಿ ಬಾಕಿಯಿದ್ದರೆ, ಈಶಾನ್ಯ ವಲಯದ ಎಲ್ಲ 34 ಕಾಮಗಾರಿಗಳು ಪೂರ್ಣಗೊಂಡಿವೆ. ಹಾಗೆಯೇ 669 ಸೇತುವೆಗಳ ಪೈಕಿ 19 ಸೇತುವೆಗಳ ದುರಸ್ತಿ ಬಾಕಿಯಿದೆ.
ವಿವಿಧ ಯೋಜನೆಗಳಡಿ ವೆಚ್ಚಗಳಿಗೆ ಅನುದಾನದ ಮುಗ್ಗಟ್ಟಿದೆ. ಇದು ಸಾಲದೆಂಬಂತೆ ಪದೇ ಪದೆ ಪ್ರಕೃತಿ ವಿಕೋಪ ವಕ್ಕರಿಸಿ ಪರಿಸ್ಥಿತಿ ಬಿಗಡಾಯಿಸಿದ್ದು, ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ ಭಾರವೇ 5,000 ಕೋಟಿ ರೂ.ಗಳಿಗೆ ಏರಿದೆ.
ಪ್ರತಿ ವರ್ಷ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಲ್ಲಿ ಒಂದಿಷ್ಟು ಬಾಕಿಯಿರುತ್ತದೆ. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗದಿತ ಅನುದಾನಕ್ಕಿಂತಲೂ ಹೆಚ್ಚಿನ ಪ್ರಮಾಣದ ರಸ್ತೆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದು, ಬಾಕಿ ಮೊತ್ತ ಬೆಟ್ಟದಷ್ಟಾಗಲು ಕಾರಣವೆಂದು ಇಲಾಖೆ ಮೂಲಗಳು ತಿಳಿಸಿವೆ.
ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಕಳೆದ ವರ್ಷ 2091 ಕಿ.ಮೀ. ರಸ್ತೆ ಹಾಳಾಗಿ 388.14 ಕೋಟಿ ರೂ. ನಷ್ಟ, 669 ಸೇತುವೆಗಳು ಕೊಚ್ಚಿ ಹೋಗಿ 139.06 ಕೋಟಿ ರೂ. ಹಾನಿ ಅಂದಾಜಿಸಲಾಗಿತ್ತು.
ಈ ವರ್ಷ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಪ್ರಮುಖ ರಸ್ತೆ ಸೇರಿದಂತೆ 2,509 ಕಿ.ಮೀ. ರಸ್ತೆ ಹದಗೆಟ್ಟು 1168.27 ಕೋಟಿ ರೂ. ಹಾಗೂ 1268 ಸೇತುವೆಗಳು ಹಾನಿಗೀಡಾಗಿ 319.25 ಕೋಟಿ ರೂ ಲುಕ್ಸಾನಾಗಿದೆ ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷ ಪ್ರವಾಹ ಬಾಧಿತ ರಸ್ತೆ ಹಾಗೂ ಸೇತುವೆಗಳ ದುರಸ್ತಿಗೆ 302.19 ಕೋಟಿ ರೂ. ವ್ಯಯಿಸಲಾಗಿದ್ದು, ಇದರಲ್ಲಿ 123.80 ಕೋಟಿ ರೂ. ಬಿಲ್ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಬೇಕಾಗಿದೆ. ದಕ್ಷಿಣ ವಲಯದ ರಸ್ತೆ ರಿಪೇರಿ ಕಾಮಗಾರಿಗೆ 60.18 ಕೋಟಿ ರೂ. ವೆಚ್ಚವಾಗಿದ್ದರೆ, 41.36 ಕೋಟಿ ರೂ. ಬಾಕಿಯಿದೆ. ಉತ್ತರ ವಲಯದ 104.74 ಕೋಟಿ ರೂ.ಗಳಲ್ಲಿ 51.89 ಕೋಟಿ ರೂ., ಈಶಾನ್ಯ ವಲಯದ 12 ಕೋಟಿ ರೂ.ಗಳಲ್ಲಿ 3.91 ಕೋಟಿ ರೂ., ಕೇಂದ್ರ ವಲಯದ 110.13 ಕೋಟಿ ರೂ.ಗಳ ಪೈಕಿ 26.64 ಕೋಟಿ ರೂ. ಬಿಲ್ ಬಾಕಿ ಚುಕ್ತಾ ಮಾಡಬೇಕಾಗಿದೆ. ಅಲ್ಲದೆ, ಸೇತುವೆಗಳ ರಿಪೇರಿಗಾಗಿ ಈವರೆಗೆ 121 ಕೋಟಿ ರೂ. ಖರ್ಚಾಗಿದ್ದು, ಇದರಲ್ಲಿ 55.70 ಕೋಟಿ ರೂ. ಬಿಲ್ ಬಾಕಿಯಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ವಸ್ತುಸ್ಥಿತಿ ವಿವರಿಸಿದ ಬಳಿಕ ತುರ್ತು ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು 400 ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದೆ. ಆಯಾ ಶಾಸಕರ ಜತೆ ರ್ಚಚಿಸಿ ಆದ್ಯತೆ ಆಧರಿಸಿ ಕಾಮಗಾರಿ ಪಟ್ಟಿ ಸಿದ್ಧಪಡಿಸುವಂತೆ ಇಲಾಖೆಯ ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಗುರುಪ್ರಸಾದ್ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 3 =
Remember me
