| ಮಂಜುನಾಥ ಟಿ.ಭೋವಿ ಮೈಸೂರು
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಸ್ಥಾನದ ನೇಮಕಾತಿಯೇ ಒಂದು ರೀತಿ ಗಜಪ್ರಸವ ಎನಿಸಿದೆ..!
ಕಳೆದ ಎರಡೂವರೆ ವರ್ಷದಿಂದಲೂ ಈ ಪ್ರಕ್ರಿಯೆಗೆ ಗ್ರಹಣ ಹಿಡಿದಿದ್ದು, ಪೂರ್ಣಾವಧಿ ಕುಲಪತಿ ನೇಮಕ ಯಾವಾಗ ಎಂಬ ಯಕ್ಷಪ್ರಶ್ನೆಗೂ ಉತ್ತರ ಸಿಗುತ್ತಿಲ್ಲ. ಮತ್ತೊಂದೆಡೆ, ಈ ಕುರ್ಚಿಯನ್ನು ಗಿಟ್ಟಿಸಿಕೊಳ್ಳಲು ನಡೆದಿರುವ ಲಾಬಿಯ ಕರಿನೆರಳಿನಲ್ಲಿ ‘ಅನರ್ಹರು’ ಮತ್ತೆ ಶಿಫಾರಸುಗೊಂಡಿರುವುದು ಅಚ್ಚರಿಯೇ ಸರಿ!
2018ರ ಮೇ 5ರಿಂದಲೇ ಈ ಹುದ್ದೆ ಖಾಲಿ ಹೊಡೆಯುತ್ತಿದ್ದು, ಅಲ್ಲಿಂದ ಹಂಗಾಮಿ ಕುಲಪತಿಯ ಕಾರುಬಾರು ಮುಂದುವರಿದಿದೆ. ಆದರೆ, 4 ವರ್ಷದ ಪೂರ್ಣಾವಧಿ ವಿಸಿ ನಿಯೋಜನೆ ಕುರಿತು ರಾಜ್ಯ ಸರ್ಕಾರ ಮಾತ್ರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಮೂರು ಸರ್ಕಾರಗಳು ಬದಲಾದರೂ ಏನು ಪ್ರಗತಿಯಾಗಿಲ್ಲ. ಮೈಸೂರಿನವರಾದ ಜಿ.ಟಿ.ದೇವೇಗೌಡರು ಉನ್ನತಶಿಕ್ಷಣ ಸಚಿವರಾದರೂ ಕಾಳಜಿ ತೋರದೆ ಹಾಗೇ ನಿರ್ಗಮಿಸಿದರು. ಈ ರೀತಿಯ ನಿರ್ಲಕ್ಷ್ಯದಿಂದ  ವಿವಿ ಸೊರಗಿ ಕಳೆಗುಂದಿರುವುದು ಆಳುವವರಿಗೆ ಕಾಣುತ್ತಿಲ್ಲ ಎನ್ನುವುದು ವಿಪರ್ಯಾಸ.
ಈ ನಡುವೆ, ವಿಸಿ ನೇಮಕಾತಿಯೇ ಗೋಜಲಾಗಿದೆ. ಪರಿಣಾಮ ನೇಮಕಾತಿ ಮತ್ತಷ್ಟು ವಿಳಂಬವಾಗುತ್ತಲೇ ಸಾಗಿದೆ. ಈ ಹಿಂದಿನ ಶೋಧನಾ ಸಮಿತಿಯು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಪ್ರೊ.ಕೆ.ಬಿ. ಸುನಿತಾ ಹೆಸರನ್ನು ಒಂದಲ್ಲ, ಎರಡು ಬಾರಿ ಈ ಹುದ್ದೆಗೆ ಶಿಫಾರಸು ಮಾಡಿತ್ತು. ಆದರೆ, ಯುಜಿಸಿ, ವಿವಿ ಕಾಯ್ದೆಯ ಮಾನದಂಡ ಪ್ರಕಾರ ಇವರು ಅನರ್ಹಗೊಂಡ ಕಾರಣಕ್ಕೆ ರಾಜ್ಯಪಾಲರು ಎರಡು ಸಲವೂ ತಿರಸ್ಕರಿಸಿ ಕಡತವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಮಾಡಿದ್ದರು. ಬಳಿಕ ಮತ್ತೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಶುರು ಮಾಡಲಾಯಿತು.ಇದನ್ನೂ ಓದಿ:Web Exclusive: ಈ ಮನೆಯ ಸಂಪತ್ತು ಮಲೆನಾಡ ಗಿಡ್ಡ ಗೋವು; ಲಾಭಕ್ಕಲ್ಲ, ಪ್ರೀತಿಗಾಗಿ ಸಾಕುತ್ತಿದ್ದಾರೆ..
ನಿವೃತ್ತ ಪ್ರಾಧ್ಯಾಪಕಿ ಡಾ.ಟಿ.ಎಸ್. ಸತ್ಯವತಿ (ರಾಜ್ಯ ಸರ್ಕಾರದ ನಾಮ ನಿರ್ದೇಶಿತ), ಗ್ವಾಲಿಯರ್​ನ ವಿಶ್ರಾಂತ ಕುಲಪತಿ ಪ್ರೊ.ಸ್ವತಂತ್ರ್ಯ ಶರ್ಮಾ (ಯುಜಿಸಿ ನಾಮನಿರ್ದೇಶಿತ) ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ(ರಾಜ್ಯಪಾಲರ ನಾಮನಿರ್ದೇಶಿತ) ಅವರನ್ನು ಒಳಗೊಂಡ ಶೋಧನಾ ಸಮಿತಿಯನ್ನು ಹೊಸದಾಗಿ ರಚಿಸಲಾಯಿತು. ಇದಕ್ಕೆ ಕೇವಲ 10 ಅರ್ಜಿಗಳು ಬಂದವು. ಅದರಲ್ಲಿ ಒಂದು ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಈ ಸಮಿತಿ ಸಭೆ ಸೇರಿ ಅರ್ಜಿ ಪರಿಶೀಲನೆ ಮಾಡಿ ಮೂವರ ಹೆಸರನ್ನು ಅಂತಿಮಗೊಳಿಸಿತ್ತು.
ಈ ನಡುವೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರೊ.ಎ. ರಂಗಸ್ವಾಮಿ ಹೆಸರನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಸಮಿತಿಗೆ ಆದೇಶಿಸಿತ್ತು. ಇದರಿಂದಾಗಿ ಮತ್ತೆ ಸಭೆ ಸೇರಿದ ಸಮಿತಿಯು ಚರ್ಚೆ ನಡೆಸಿ ಮೂವರ ಹೆಸರನ್ನು ಅಂತಿಮಗೊಳಿಸಿದೆ. ಆದರೆ, ಈ ಹಿಂದೆ ಶಿಫಾರಸುಗೊಂಡ ಹೆಸರಿನಲ್ಲಿ ಅದಲು-ಬದಲಾಗಿವೆ. ಕೆಲ ಹೆಸರನ್ನು ಕೈಬಿಟ್ಟು ಹೊಸ ಹೆಸರು ಸೇರಿಸಲಾಗಿದೆ. ಇಷ್ಟಾದರೂ ಅರ್ಹರ ಹೆಸರನ್ನು ಶಿಫಾರಸು ಮಾಡುವಲ್ಲಿ ಶೋಧನಾ ಸಮಿತಿ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.
ಕುಲಪತಿ ಸ್ಥಾನಕ್ಕೆ ಧಾರವಾಡದ ಕರ್ನಾಟಕ ವಿವಿ ಸಂಗೀತ ಪ್ರಾಧ್ಯಾಪಕ ಮೃತ್ಯುಂಜಯಪ್ಪ ಅಗಡಿ, ಹಂಪಿ ವಿವಿ ಪರೀಕ್ಷಾಂಗ ಕುಲಸಚಿವರಾಗಿದ್ದ, ಜಾನಪದ ಪ್ರಾಧ್ಯಾಪಕ ಎಚ್.ಕೆ. ನಾಗೇಶ್ ಮತ್ತು ಕನ್ನಡ ಪ್ರಾಧ್ಯಾಪಕ ಗಂಗನಾಯ್ಕ್​​ ಹೆಸರನ್ನು ಶೋಧನಾ ಸಮಿತಿ ಶಿಫಾರಸು ಮಾಡಿದೆ. ಆದರೆ, ಈ ಮೂವರು ಅರ್ಹರಲ್ಲ ಎಂಬ ಆರೋಪ ಕೇಳಿಬಂದಿದೆ.ಹೆಚ್ಚಿನ ಎಕ್ಸ್​​ಕ್ಲ್ಯೂಸಿವ್​ ಸ್ಟೋರಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕುಲಪತಿ ಹುದ್ದೆಗೆ ಕನಿಷ್ಠ 10 ವರ್ಷ ಪ್ರಾಧ್ಯಾಪಕರಾಗಿ ಅನುಭವ ಹೊಂದಿರಬೇಕು ಮತ್ತು 65 ವರ್ಷ ವಯೋಮಿತಿ ಮೀರಿರಬಾರದು ಎಂಬುದು ಯುಜಿಸಿ (ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ) ನಿಯಮ. ಅಲ್ಲದೆ, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರನ್ನು ಈ ಹುದ್ದೆಗೆ ನೇಮಿಸಬೇಕು ಎಂಬುದು ಸಂಗೀತ ವಿವಿ ಕಾಯ್ದೆ ಹೇಳುತ್ತದೆ.
ಆದರೆ, 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಗಂಗನಾಯ್ಕ್​​ ಸಂಗೀತ ಮತ್ತು ಪ್ರದರ್ಶಕ ಕಲೆ ಪ್ರಾಧ್ಯಾಪಕರಲ್ಲ. ಎಚ್.ಕೆ.ನಾಗೇಶ್​ರಿಗೆ ಪ್ರಾಧ್ಯಾಪಕರಾಗಿ ಎಂಟೂವರೆ ವರ್ಷದ ಅನುಭವ ಮಾತ್ರ ಇದ್ದು, 10 ವರ್ಷ ಪೂರೈಸಿಲ್ಲ. ಜತೆಗೆ, ಸಂಗೀತ, ಪ್ರದರ್ಶಕ ಕಲೆಗಳಿಗೆ ಸಂಬಂಧಿಸಿದವರಲ್ಲ. ಅಂತೆಯೇ ಹಿಂದುಸ್ತಾನಿ ಸಂಗೀತ ಹಿನ್ನೆಲೆಯ ಪ್ರೊ.ಮೃತ್ಯುಂಜಯ ಅಗಡಿ ಅವರಿಗೂ ಬೋಧನಾ ಅನುಭವ ಏಳೂವರೆ ವರ್ಷ ಮಾತ್ರವಿದ್ದು, 10 ವರ್ಷ ಪೂರೈಸಿಲ್ಲ. ಈ ಅಂಶಗಳು ಶೋಧನಾ ಸಮಿತಿಯ ಸಭೆಯಲ್ಲಿ ಚರ್ಚೆಯಾಗಿ, ಆಗಲೇ ಅರ್ಜಿಗಳನ್ನು ಪರಿಷ್ಕರಿಸಿ ಪರಿಗಣನೆಯಿಂದ ಹೊರಗಿಡಬೇಕಿತ್ತು.
ಆದರೆ, ಈ ಸಮಿತಿಯು ಹೇಗೆ ಅನರ್ಹರನ್ನು ಶಿಫಾರಸು ಮಾಡಿದೆ? ಈ ಹಿಂದೆ ಎರಡು ಬಾರಿಯೂ ಶೋಧನಾ ಸಮಿತಿಯ ಶಿಫಾರಸನ್ನು ರಾಜ್ಯಪಾಲರು ಇದೇ ಕಾರಣಕ್ಕೆ ತಿರಸ್ಕರಿಸಿದ್ದರು. ಈಗಲೂ ಅದೇ ತಪ್ಪು ಮಾಡಲಾಗಿದೆ. ಈ ಹೆಸರುಗಳನ್ನೂ ರಾಜ್ಯಭವನ ಈಗಲೂ ಪರಿಗಣಿಸದಿದ್ದರೆ ಏನು ಮಾಡುವುದು? ಇದರಿಂದ ಮತ್ತೆ ಕುಲಪತಿ ನೇಮಕಾತಿ ವಿಳಂಬವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಖಾಲಿ ಇರುವ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿದ್ದು, ದಕ್ಷಿಣ ಭಾರತದಲ್ಲಿರುವ ಏಕೈಕ ಸಂಗೀತ ಮತ್ತು ಪ್ರದರ್ಶಕ ಕಲೆಗೆ ಸೀಮಿತವಾಗಿರುವ ಈ ವಿವಿಗೆ ಮಾತ್ರ ಕುಲಪತಿ ನೇಮಿಸಲಾಗುತ್ತಿಲ್ಲ ಎಂಬುದು ವಿಪರ್ಯಾಸ. ಈ ರೀತಿಯ ನಿರ್ಲಕ್ಷ್ಯ ಧೋರಣೆಯಿಂದಲೇ ಇದು ಇನ್ನೂ ವಿಶ್ವವಿದ್ಯಾಲಯ ಸ್ವರೂಪವನ್ನೇ ಪಡೆದಿಲ್ಲ.
ಕುಲಪತಿ ನೇಮಕಾತಿಯನ್ನು ವಿಳಂಬ ಮಾಡಲಾಗುತ್ತಿದೆ. ಇದರಿಂದ ವಿವಿ ಆಡಳಿತ ಕುಸಿದು ಹಳಿ ತಪ್ಪಿದೆ. ಅಭಿರುಚಿ, ಆಸಕ್ತಿ, ದೂರದೃಷ್ಟಿ ಇರುವ ಅರ್ಹ ವ್ಯಕ್ತಿಯನ್ನು ಈ ಹುದ್ದೆಗೆ ನಿಯೋಜಿಸಬೇಕು. ಅನರ್ಹರು ಬಂದರೆ ಈ ಹಿಂದಿನ 10 ವರ್ಷದಲ್ಲೂ ಏನು ಆಗಿಲ್ಲ, ಮುಂದೆಯೂ ಏನು ಆಗಲ್ಲ. ಆದ್ದರಿಂದ ಸಂಗೀತ ವಿವಿ ಕುರಿತು ಸರ್ಕಾರ ವಿಶೇಷ ಗಮನ ನೀಡಿ ಕ್ರಮ ವಹಿಸಬೇಕು.
| ಸಿ.ಆರ್.ಹಿಮಾಂಶುಮಾಜಿ ಸದಸ್ಯ ಸಂಗೀತ ವಿವಿ ಸಿಂಡಿಕೇಟ್
Web Exclusive: 21ರಿಂದ ಕಿಚ್ಚುಗುತ್ತಿ ಮಾರಮ್ಮನ ದರ್ಶನ; ವಿಷ ಪ್ರಸಾದ ಕೇಸ್​​ನಿಂದ ಬಂದ್ ಆಗಿದ್ದ ದೇಗುಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seven =
Remember me
