|ಕೀರ್ತಿನಾರಾಯಣ ಸಿ.ಬೆಂಗಳೂರು
ಎನ್​ಪಿಎಸ್ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆಯಡಿ ನಿವೃತ್ತಿ ಮತ್ತು ಮರಣ (ಡಿಸಿಆರ್​ಜಿ) ಉಪಧನ ಸೌಲಭ್ಯ ವಿಸ್ತರಿಸುವ ಕುರಿತು ರಾಜ್ಯ ಸರ್ಕಾರ ಮತ್ತು ಎನ್​ಪಿಎಸ್ ನೌಕರರ ನಡುವಿನ ಗುದ್ದಾಟ ಮುಂದುವರಿದಿದೆ. 2018ರ ಏ.1ರಂದು ಅಥವಾ ನಂತರ ನಿವೃತ್ತಿ/ಮರಣ ಹೊಂದಿದವರಿಗಷ್ಟೇ ಡಿಸಿಆರ್​ಜಿ ಸೌಲಭ್ಯ ಸಿಗಲಿದೆ ಎಂದು ಸರ್ಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ. ಇದನ್ನೊಪ್ಪದ ನೌಕರರು 2006ರಿಂದಲೇ ಅನ್ವಯಿಸುವಂತೆ ಆದೇಶಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಕೇಂದ್ರ ಸರ್ಕಾರ 2004ರಿಂದಲೇ ಎನ್​ಪಿಎಸ್ ನೌಕರರಿಗೆ ಡಿಸಿಆರ್​ಜಿ ಉಪಧನ ಅನ್ವಯಿಸಿ ಆದೇಶ ಹೊರಡಿಸಿದೆ. ಆ ಆದೇಶವನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವ ಬದಲು ರಾಜ್ಯ ಸರ್ಕಾರ 2018 ಏ.1ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಆದರೆ, ರಾಜ್ಯದಲ್ಲಿ ಎನ್​ಪಿಎಸ್ ಜಾರಿಯಾದ 2006ರಿಂದ ಅನ್ವಯಿಸಿ ಆದೇಶ ಹೊರಡಿಸಬೇಕೆಂದು ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್​ಗೆ ಮತ್ತೆ ಮನವಿ ಸಲ್ಲಿಸಿದೆ. ಸರ್ಕಾರ ಮತ್ತು ಸಂಘದ ಹಗ್ಗಜಗ್ಗಾಟದಿಂದ 50ರಿಂದ 60 ಸಾವಿರ ನೌಕರರಿಗೆ ನಿವೃತ್ತಿ ಉಪಧನ ಸಿಗದೆ ಸ್ಥಗಿತಗೊಂಡಿದೆ.
ಸರ್ಕಾರದಿಂದ ಸ್ಪಷ್ಟ ಆದೇಶವಾಗದ ಹಿನ್ನೆಲೆಯಲ್ಲಿ ನಿವೃತ್ತಿ ಮತ್ತು ಮರಣ ಉಪಧನ ನೀಡುವಂತೆ ಕೋರಿ ಸಲ್ಲಿಸಲಾಗುತ್ತಿರುವ ಸಾವಿರಾರು ಪ್ರಸ್ತಾವನೆಗಳು ಮಹಾಲೇಖಪಾಲರ (ಅಕೌಂಟ್ ಜನರಲ್) ಕಚೇರಿಯಿಂದ ವಾಪಸ್ ಬರುತ್ತಿವೆ. ಇದೇ ಕಾರಣಕ್ಕೆ ಗೊಂದಲದ ಬಗ್ಗೆ ಸ್ಪಷ್ಟತೆ ನೀಡುವಂತೆ ಮಹಾಲೇಖಪಾಲರು ಕಳುಹಿಸಿದ್ದ ಅಂಶಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, 2018ರ ಏ.1ರಂದು ಅಥವಾ ನಂತರ ನಿವೃತ್ತಿ/ಮರಣ ಹೊಂದಿದವರಿಗಷ್ಟೇ ಡಿಸಿಆರ್​ಜಿ ಸೌಲಭ್ಯ ಸಿಗಲಿದೆ ಎಂದು ಎಂದಿರುವುದು ಸಮಸ್ಯೆಯನ್ನು ಜೀವಂತವಾಗಿರಿಸಿ ಮುಂದುವರಿಸಿದೆ.
ರಾಜ್ಯದಲ್ಲಿ ಮೃತಪಟ್ಟಿರುವ 300 ರಿಂದ 400 ಸರ್ಕಾರಿ ನೌಕರರ ಕುಟುಂಬಗಳಿಗೆ ಸರ್ಕಾರದ ಯಾವ ಸೌಲಭ್ಯವೂ ಸಿಕ್ಕಿಲ್ಲ. ಮೃತ ಉದ್ಯೋಗಿಯ ಕುಟುಂಬದ ಒಬ್ಬರಿಗೆ ಅನುಕಂಪದ ಹುದ್ದೆ ನೀಡಲಾಗುತ್ತದೆ. ಆದರೆ, ಡಿಸಿಆರ್​ಜಿ ಸೇರಿ ಇನ್ನಿತರ ವಿಚಾರಗಳು ಇನ್ನೂ ಬಗೆಹರಿಯದ ಕಾರಣ ಅನುಕಂಪದ ಹುದ್ದೆಯೂ ಸಿಗದೆ ಅವಲಂಬಿತ ಕುಟುಂಬಗಳು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ವಣವಾಗಿದೆ.
2018ರ ನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದಲ್ಲಿ ಅಂಥಹ ನೌಕರರ ಅವಲಂಬಿತರು ಆಯ್ಕೆ ಮಾಡಿಕೊಂಡಲ್ಲಿ ಮೃತನ ನೌಕರನ ಪಿಂಚಣಿ ನಿಧಿಯಲ್ಲಿ ಕ್ರೋಢೀಕೃತವಾದ ಮೊತ್ತವನ್ನು ಸರ್ಕಾರಿ ಹಿಂಪಡೆಯುವ ಷರತ್ತಿಗೊಳಪಟ್ಟು ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಆದರೆ, ಒಮ್ಮೆ ಆಯ್ಕೆ ಮಾಡಿಕೊಂಡ ನಂತರ ಪುನಃ ಬದಲಾವಣೆಗೆ ಅವಕಾಶವಿಲ್ಲ ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಳೆಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರು ನಿವೃತ್ತಿಯಾದಾಗ ಅಥವಾ ಮರಣ ಹೊಂದಿದಾಗ ಸಿಗುವ ಸೌಲಭ್ಯವನ್ನು ಎನ್​ಪಿಎಸ್ ನೌಕರರಿಗೆ ವಿಸ್ತರಿಸಿದ್ದ ಸರ್ಕಾರ 2018 ಏ.1ರ ನಂತರ ಅನ್ವಯವಗುವಂತೆ ಆದೇಶಿಸಿದೆ. ನಿವೃತ್ತಿ ಉಪಧನ ಅಥವಾ ಮರಣ ಉಪಧನದ ಗರಿಷ್ಠ ಮೊತ್ತ 20 ಲಕ್ಷ ರೂ. ನಿಗದಿಪಡಿಸಿದೆ. 2018ರ ಏ.1ರ ಪೂರ್ವದಲ್ಲೇ ಸೇವೆಯಲ್ಲಿರುವಾಗಲೇ ಮರಣ ಹೊಂದಿದಲ್ಲಿ ಇಡುಗಂಟಿನ ಪರಿಹಾರದ ಸೌಲಭ್ಯ ಮಾತ್ರ ಸಿಗಲಿದೆ. ಪುನರ್ ಪರಿಷ್ಕರಣೆಗೆ ಸರ್ಕಾರ ಒಪ್ಪಿಲ್ಲ.
2006ರಿಂದ ನಿವೃತ್ತಿಯಾಗಿರುವ ಅಥವಾ ಮರಣ ಹೊಂದಿದ ಸಾವಿರಾರು ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬಗಳಿಗೆ ಈವರೆಗೂ ಕಾನೂನುಬದ್ಧವಾಗಿ ಬರಬೇಕಾದ ಸೌಲಭ್ಯ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತೆ 2006ಕ್ಕೆ ಡಿಸಿಆರ್​ಜಿ ಅನ್ವಯಿಸುವಂತೆ ಆದೇಶ ಹೊರಡಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ.
|ಶಾಂತಾರಾಮಅಧ್ಯಕ್ಷರು, ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
